ಸಿಪಿಐ(ಎಂ) ನಾಯಕ ಎಂ.ಎ.ಬೇಬಿ ಅವರಿಂದ ಪ್ರಧಾನಿಗೆ ಪತ್ರ
ಕದನ ವಿರಾಮ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಕಳವಳಗಳನ್ನು ಪರಿಹರಿಸಲು ಸಂಸತ್ತಿನ ವಿಶೇಷ ಅಧಿವೇಶನವನ್ನು ತಕ್ಷಣವೇ ಕರೆಯುವಂತೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮೇ 12ರಂದು ಪತ್ರ ಬರೆದು ಒತ್ತಾಯಿಸಿದ್ದಾರೆ. ಆ ಪತ್ರದ ಪೂರ್ಣ ಪಾಠ ಹೀಗಿದೆ:
ಕದನ ವಿರಾಮದ ಬೆಳವಣಿಗೆಗಳು ಮತ್ತು ಸಂಬಂಧಿತ ರಾಷ್ಟ್ರೀಯ ಕಾಳಜಿಗಳನ್ನು ಪರಿಹರಿಸಲು ವಿಶೇಷ ಸಂಸತ್ತಿನ ಅಧಿವೇಶನಕ್ಕಾಗಿ ವಿನಂತಿ
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕಡಿಮೆಯಾಗಿರುವುದು ಮತ್ತು ಕದನ ವಿರಾಮ ಘೋಷಣೆಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಈ ಘೋಷಣೆಯು ನಮ್ಮ ದೇಶದ ಎಲ್ಲಾ ವರ್ಗದ ಜನರಿಗೆ ಹಾಗೂ ಅಂತರರಾಷ್ಟ್ರೀಯ ಶಾಂತಿಪ್ರಿಯ ಸಮುದಾಯಕ್ಕೆ ಸಮಾಧಾನ ತಂದಿತು. ಆದಾಗ್ಯೂ, ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಹಲವು ತಲ್ಲಣಗಳು ಬಗೆಹರಿಯದೆ ಉಳಿದಿವೆ. ಏಪ್ರಿಲ್ 22 ರಂದು ಮುಗ್ಧ ಪ್ರವಾಸಿಗರ ಮೇಲೆ ನಡೆದ ಘೋರ ದಾಳಿಯು ರಾಷ್ಟ್ರದ ಆತ್ಮಸಾಕ್ಷಿಯನ್ನು ಆಳವಾಗಿ ಕಲಕಿದೆ. ಆದರೂ, ಅದರ ನಂತರ ದೇಶಾದ್ಯಂತ ನಾಗರಿಕರು ಪ್ರದರ್ಶಿಸಿದ ಅಗಾಧವಾದ ಐಕ್ಯತೆಯು ಒಂದು ಪ್ರಬಲ ಮತ್ತು ಅಮೂಲ್ಯವಾದ ಶಕ್ತಿಯಾಗಿ ಸಾಬೀತಾಯಿತು. ಈ ಒಗ್ಗಟ್ಟನ್ನು ದೇಶದೊಳಗಿನ ಮತ್ತು ವಿದೇಶಿ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರನ್ನು ಮೂಲೆಗುಂಪು ಮಾಡಲು ಬಳಸಿಕೊಳ್ಳಬೇಕು.
ವಿಷಾದಕರವೆಂದರೆ, ರಾಷ್ಟ್ರೀಯ ಐಕ್ಯತೆಯ ಈ ಕ್ಷಣವನ್ನು ದ್ವೇಷ ಮತ್ತು ಅಂಧಾಭಿಮಾನದ ವಿಷಕಾರೀ ಅಭಿಯಾನಗಳ ಮೂಲಕ ಹಾಗೂ ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಗಳನ್ನು ಹರಡುತ್ತ ದುರ್ಬಲಗೊಳಿಸಲಾಗುತ್ತಿದೆ. ಈ ಕ್ರಿಯೆಗಳು ಸಾರ್ವಜನಿಕರಲ್ಲಿ ಗಂಭೀರ ಗೊಂದಲ ಮತ್ತು ಅಶಾಂತಿಯನ್ನು ಉಂಟುಮಾಡುತ್ತವೆ.
ಇಷ್ಟೇ ಅಲ್ಲ, ಕದನ ವಿರಾಮದ ಬಗ್ಗೆ ನಮ್ಮ ಪ್ರತಿನಿಧಿಗಳಿಂದ ಯಾವುದೇ ಅಧಿಕೃತ ಹೇಳಿಕೆ ಬರುವ ಮೊದಲೇ ಅಮೆರಿಕ ಅಧ್ಯಕ್ಷರು ಪ್ರಕಟಣೆ ಮಾಡಿರುವುದು ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. ಯಾವುದೇ ಮೂರನೆಯ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ, ನಾವು ನಮ್ಮ ವಿವಾದಗಳನ್ನು ದ್ವಿಪಕ್ಷೀಯವಾಗಿ ಇತ್ಯರ್ಥಪಡಿಸಿಕೊಳ್ಳಬೇಕು ಎಂಬುದು ನಮ್ಮ ದೇಶವು ಅಳವಡಿಸಿಕೊಂಡ ಸ್ಪಷ್ಟ ನೀತಿಯಾಗಿದೆ. ಆದ್ದರಿಂದ, ಈ ಪರಿಸ್ಥಿತಿಯ ಬಗ್ಗೆ ನಮ್ಮ ಸರ್ಕಾರದ ಅತ್ಯುನ್ನತ ಮಟ್ಟಗಳಿಂದ ಸ್ಪಷ್ಟ ಮತ್ತು ಅಧಿಕೃತ ವಿವರಣೆಯ ಅಗತ್ಯವಿದೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಸಂಸತ್ತಿನಲ್ಲಿನ ಸಿಪಿಐ(ಎಂ) ನಾಯಕರು ಈಗಾಗಲೇ ವಿನಂತಿಸಿದಂತೆ, ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಬೇಕೆಂದು ನಾನು ವಿನಂತಿಸುತ್ತೇನೆ. ಸರ್ಕಾರದ ನಿಲುವನ್ನು ಸ್ಪಷ್ಟಪಡಿಸುವಲ್ಲಿ ಪ್ರಧಾನ ಮಂತ್ರಿಯಾಗಿ ತಾವು ವೈಯಕ್ತಿಕವಾಗಿ ಭಾಗವಹಿಸಬೇಕು ಎಂದು ಕೋರುತ್ತೇನೆ.”