ಜನತಾ ಪ್ರಜಾಪ್ರಭುತ್ವ ಕ್ರಾಂತಿಯತ್ತ

ಚೀನಾ ಕಮ್ಯುನಿಸ್ಟ್ ಪಕ್ಷದ ಇತಿಹಾಸ ಹಂತ-2

ಮೂಲ: ಆರ್. ಅರುಣ ಕುಮಾರ್

ಇದೇ ಜುಲೈ 1ರಂದು ಚೀನಾದ ಕಮ್ಯುನಿಸ್ಟ್ ಪಕ್ಷ ಸ್ಥಾಪನೆಯಾಗಿ ನೂರು ವರ್ಷಗಳು ಸಂದಿವೆ. ಚೀನಾದಾದ್ಯಂತ ಇದನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅತ್ಯಂತ ಅವಮಾನಕರ ದುರ್ಭರ ಸ್ಥಿತಿಯಲ್ಲಿ ಜೀವಿಸುತ್ತಿದ್ದ ಚೀನಾದ ಜನತೆಯ ನಾಯಕನಾಗಿ ಈ ನೂರು ವರ್ಷಗಳಲ್ಲಿ, ಕಡು ಬಡತನ ನಿರ್ಮೂಲನ ಮಾಡಿ ಎಲ್ಲರಿಗೂ ಸಾಕಷ್ಟು ನೆಮ್ಮದಿಯ ಜೀವನ ಮಟ್ಟ ಒದಗಿಸಿದ, ಸಮೃದ್ಧವಾದ ಮತ್ತು ಎರಡನೆಯ ಅತಿ ದೊಡ್ಡ ಆರ್ಥಿಕತೆ ಉಳ್ಳ ದೇಶವಾಗಿಸಿದ ಈ ಸಂದರ್ಭದಲ್ಲಿ, ಈ ಪಕ್ಷದ ಇತಿಹಾಸ ಅರಿತುಕೊಳ್ಳುವುದು ಅಗತ್ಯ. ಚೀನಾ ಕಮ್ಯುನಿಸ್ಟ್ ಪಕ್ಷದ ಇತಿಹಾಸವನ್ನು ಸಾಮಾನ್ಯವಾಗಿ ನಾಲ್ಕು ಹಂತಗಳಾಗಿ ವಿಂಗಡಿಸಲಾಗುತ್ತದೆ. 1921-1934ರ ಮೊದಲ ಹಂತ ಪಕ್ಷ ಚೀನಾದ ಜನತೆಯ ನಾಯಕನಾಗಲು ಆಶಾದೀಪವಾಗಲು ನಡೆಸಿದ ಹಲವು ಪ್ರಯೋಗಗಳ ಏಳು-ಬೀಳುಗಳ ದೀರ್ಘ ಪಯಣದ ಹಂತ. ಎರಡನೆಯ ಹಂತ ಚೀನಾದ ಜನತೆಯ ಮನಗಳನ್ನು ಗೆದ್ದ ಪಕ್ಷವು, ಗಂಭೀರವಾಗಿ ಜನತಾ ಪ್ರಜಾಪ್ರಭುತ್ವ ಕ್ರಾಂತಿಯತ್ತ ಸಾಗಿದ 1935-1949ರ ಅವಧಿ. ಕ್ರಾಂತಿಯ ನಂತರ ಸಮಾಜವಾದಿ ಸಮಾಜ ಕಟ್ಟುವತ್ತ ಹಲವು ಪ್ರಯೋಗಗಳಲ್ಲಿ ಕೆಲವು ಬಾರಿ ದಾರಿ ತಪ್ಪಿ ಅದನ್ನು ಸರಿಪಡಿಸಿಕೊಂಡು ಮುನ್ನಡೆದ 1950-1978ರ ಮೂರನೆಯ ಹಂತ. ಹಿಂದಿನ ಪ್ರಮಾದಗಳನ್ನು ಸರಿಪಡಿಸಿಕೊಂಡು ಆಧುನಿಕ ಸಮೃದ್ಧ ಸಮಾಜ ಕಟ್ಟುವುದರಲ್ಲಿ ಗಮನಾರ್ಹ ಯಶಸ್ಸು ಗಳಿಸಿದ 1979-2021ರ ನಾಲ್ಕನೆಯ ಹಂತ. ಈ ನಾಲ್ಕು ಹಂತಗಳಲ್ಲಿ ಪಕ್ಷದ ಇತಿಹಾಸವನ್ನು ಸ್ಥೂಲವಾಗಿ ಈ ಲೇಖನ ಸರಣಿಯಲ್ಲಿ ಕೊಡಲಾಗುವುದು. ಮೊದಲ ಹಂತದ ಇತಿಹಾಸದ ಸ್ಥೂಲ ನಿರೂಪಣೆಯನ್ನು ಕಳೆದ ವಾರ ಕೊಡಲಾಗಿದೆ. ಎರಡನೆಯ ಹಂತದ ನಿರೂಪಣೆ ಇಲ್ಲಿದೆ.

1. anti-japanese-war-scene-sculpture-in-a-museum
ಜಪಾನಿ-ವಿರೋಧಿ ಗೆರಿಲ್ಲಾ ಯುದ್ಧ – ಶಿಲ್ಪ

1932ರಲ್ಲಿ ಜಪಾನ್ ಚೀನಾವನ್ನು ಆಕ್ರಮಿಸಿತು. ಈ ಆಕ್ರಮಣವನ್ನು ವಿರೋಧಿಸಿ (ಕೊಮಿಂಟಾಂಗ್ ಜತೆಗೆ ನಡೆಯುತ್ತಿದ್ದ) ಆಂತರಿಕ ಯುದ್ಧವನ್ನು ಕೊನೆಗೊಳಿಸುವಂತೆ ಚೀನಾ ಕಮ್ಯುನಿಸ್ಟ್ ಪಕ್ಷವು ನೀಡಿದ ಕರೆಯನ್ನು ಎಲ್ಲ ಜನವಿಭಾಗಗಳು ಸರಿಯಾಗಿ ಸ್ವೀಕರಿಸಿದವು. ಕಮ್ಯುನಿಸ್ಟ್ ಪಕ್ಷದ ಕರೆಯನ್ನು ಪರಿಗಣಿಸದೆ, ಜಪಾನಿನ ಅತಿಕ್ರಮಣವನ್ನು ನಂತರದಲ್ಲಿ ಎದುರಿಸಬಹುದು ಎನ್ನುತ್ತ ಕೊಮಿಂಟಾಂಗ್, ಕಮ್ಯುನಿಸ್ಟ್ ಪಕ್ಷದ ಮೇಲೆ ತನ್ನ ದಾಳಿಯನ್ನು ಮುಂದುವರೆಸಿತು. ಇದನ್ನು ಬಳಸಿಕೊಂಡು ಎಲ್ಲ ಕಮ್ಯುನಿಸ್ಟ್ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಿ “ಕಮ್ಯುನಿಸ್ಟರ ವಿರುದ್ಧ ಜಪಾನ್ ಮತ್ತು ಚೀನಾದ ಜಂಟಿ ರಕ್ಷಣಾ ಹೋರಾಟ’’ ನಡೆಸಲು ಜಪಾನ್ ಪ್ರಯತ್ನಿಸಿತು.

ಎಡ ಪಂಥವಾದದ ಪ್ರಭಾವದಲ್ಲಿದ್ದ ಚೀನಾ ಕಮ್ಯುನಿಸ್ಟ್ ಪಕ್ಷವು, ಜಪಾನ್‌ನ ಆಕ್ರಮಣ ಮತ್ತು ಚಿಯಾಂಗ್ ಕೈ ಶೇಖ್ ಎರಡರ ವಿರುದ್ಧವೂ ಐಕ್ಯತೆಯಿಂದ ಹೋರಾಡುವಂತೆ ಜನತೆಗೆ ಕರೆ ನೀಡಿತು. ಚೀನಾ ಕಮ್ಯುನಿಸ್ಟ್ ಪಕ್ಷವು ತ್ವರಿತವಾಗಿ ತನ್ನ ಕಾರ್ಯತಂತ್ರವನ್ನು ತಿದ್ದಿಕೊಂಡು, ಮೂಲಭೂತವಾಗಿ ಜಪಾನಿನ ವಿರುದ್ಧ ಪ್ರತಿರೋಧಧ ಶಕ್ತಿಯು ದುಡಿಯುವ ಜನ, ರೈತರು, ಸಣ್ಣ ಬೂರ್ಜ್ವಾ ಮತ್ತು ಬುದ್ಧಿಜೀವಿಗಳಿಂದ ಬರುತ್ತದೆ. ಆದರೆ ರಾಷ್ಟ್ರೀಯ ಬೂರ್ಜ್ವಾಗಳನ್ನೂ ಒಳಗೊಳ್ಳುವ ‘ಜಪಾನ್ ವಿರೋಧಿ ರಾಷ್ಟ್ರೀಯ ಐಕ್ಯ ವೇದಿಕೆ’ ಸಾಧ್ಯವಿದೆ ಎಂದಿತು. ಅದು ತನ್ನ ಚಿಯಾಂಗ್-ಕೈ-ಶೆಕ್ ವಿರೋಧಿ ನಿಲುವನ್ನು ಕೈ ಬಿಟ್ಟು ಶಾಂತಿ ಸಂಧಾನಕ್ಕೆ ಕೊಮಿಂಟಾಂಗ್ ನ್ನು ಆಹ್ವಾನಿಸಿತು. ವಾಕ್ ಸ್ವಾತಂತ್ರ್ಯ, ಸಭೆ ಮತ್ತು ಸಂಘಟನೆಯ ಸ್ವಾತಂತ್ರ್ಯ, ಎಲ್ಲ ರಾಜಕೀಯ ಖೈದಿಗಳ ಬಿಡುಗಡೆ, ಜನತೆಯ ಜೀವನ ಮಟ್ಟದ ಸುಧಾರಣೆ, ಎಲ್ಲ ಜನ ವಿಭಾಗಗಳನ್ನು ಒಳಗೊಂಡಂತೆ ರಾಷ್ಟ್ರೀಯ ಸಮಾವೇಶ ನಡೆಸುವುದು, ಜಪಾನ್ ವಿರೋಧಿ ಹೋರಾಟಗಳನ್ನು ಬಲಪಡಿಸುವುದು – ಮುಂತಾದ ಕ್ರಮಗಳನ್ನು ಕೈಗೊಂಡರೆ ತಾನು ಕೊಮಿಂಟಾಂಗ್ ಜೊತೆಗೂಡಿ ಕೆಲಸ ಮಾಡುವುದಾಗಿ ಚೀನಾ ಕಮ್ಯುನಿಸ್ಟ್ ಪಕ್ಷವು ವಾಗ್ದಾನ ನೀಡಿತು. ಇದನ್ನು ಪರಿಗಣಿಸದ ಕೊಮಿಂಟಾಂಗ್ ಕಮ್ಯುನಿಸ್ಟ್ ಪಕ್ಷದ ವಿರುದ್ಧ ತನ್ನ ಆಕ್ರಮಣವನ್ನು ಮುಂದುವರೆಸಿತು.

ಆಂತರಿಕ ಯುದ್ಧವನ್ನು ನಿಲ್ಲಿಸುವಲ್ಲಿನ ವೈಫಲ್ಯ ಮತ್ತು ಜಪಾನ್‌ನ ವಿರುದ್ಧದ ಹೋರಾಟಕ್ಕೆ ಕೈಜೋಡಿಸದೇ ಇದ್ದದ್ದನ್ನು ವಿರೋಧಿಸಿ, ಕೊಮಿಂಟಾಂಗ್ ನ ಈಶಾನ್ಯ ಸೈನ್ಯವು ಕ್ಸಿಯಾನ್‌ನಲ್ಲಿ ಚಿಯಾಂಗ್-ಕೈ-ಶೆಖ್‌ನನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಚಿಯಾಂಗ್-ಕೈ-ಶೇಖ್‌ ಕಮ್ಯುನಿಸ್ಟ್ ಪಕ್ಷದೊಡನೆ ಕೈ ಜೋಡಿಸಿ ಜಪಾನ್‌ನ ವಿರುದ್ಧ ಹೋರಾಡಲು ಒಪ್ಪಿಕೊಂಡರೂ, ಆತನ ಪ್ರವೃತ್ತಿಯಲ್ಲಿ ಯಾವುದೇ ಬದಲಾವಣೆ ಉಂಟಾಗಲಿಲ್ಲ. ಜಪಾನಿ ಆಕ್ರಮಣದ ವಿರುದ್ಧ ಕಮ್ಯುನಿಸ್ಟ್ ಪಕ್ಷದ ‘ಸಂಪೂರ್ಣ ಪ್ರತಿರೋಧ’ದ ಧೋರಣೆಗೆ ಪ್ರತಿಯಾಗಿ, ಸಮಸ್ಯೆಗೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಶಾಂತಿಯುತವಾಗಿ ಪರಿಹಾರ ಪಡೆಯುವ ಆಶಯವನ್ನು ಕೊಮಿಂಟಾಂಗ್‌ ಹೊಂದಿತ್ತು.

ಜಪಾನಿ ಆಕ್ರಮಣದ ವಿರುದ್ಧ ಗೆರಿಲ್ಲ ಯುದ್ಧ

ಕಮ್ಯುನಿಸ್ಟ್ ಪಕ್ಷವು ದುಡಿಯುವ ಜನತೆಯ ನೇತೃತ್ವದಲ್ಲಿ ರಾಷ್ಟ್ರೀಯ ಐಕ್ಯರಂಗ ರಚನೆಗೆ ಶ್ರಮಿಸುತ್ತಲೇ, ವೈರಿಯ ನಿಯಂತ್ರಣದ ಪ್ರದೇಶಗಳ ಎಲ್ಲೆಡೆಗಳಲ್ಲಿ ಗೆರಿಲ್ಲ ತಂತ್ರಗಳ ವ್ಯಾಪಕ ಸಮರ ನಡೆಸಿ, ಜಪಾನೀ-ವಿರೋಧಿ ನೆಲೆಗಳನ್ನು ನಿರ್ಮಿಸಲು ನಿರ್ಧರಿಸಿತು. ಜಪಾನ್ ವಿರೋಧಿ ಚಳುವಳಿಗಳ ಮೂಲಕ ಕೊಮಿಂಟಾಂಗ್‌ ಅಧಿಕಾರದಲ್ಲಿರುವ ಪ್ರದೇಶಗಳಲ್ಲಿ ರಾಜಕೀಯ ಮತ್ತು ಆರ್ಥಿಕ ಹಕ್ಕುಗಳನ್ನು ಸಹ ಸ್ಥಾಪಿಸಲು ನಿರ್ಧರಿಸಿತು. ಇದು ಜನರನ್ನು ಅಣಿನೆರೆಸಿ, ಎಲ್ಲ ಜನವಿಭಾಗಗಳಲ್ಲೂ ದೇಶಪ್ರೇಮಿಗಳನ್ನು ಒಗ್ಗೂಡಿಸಿ ಗೆರಿಲ್ಲ ಹೋರಾಟಗಳಿಗೆ ಬೆಂಬಲಗಳಿಸಲು ಸಹಾಯ ಮಾಡಿತು.

ರಾಷ್ಟ್ರೀಯ ಸರ್ಕಾರ ಇಲ್ಲವೇ ಯಾವುದೇ ಆಡಳಿತ ಮಂಡಳಿಯನ್ನು ಸೇರದಿರಲು ಕಮ್ಯುನಿಸ್ಟ್ ಪಕ್ಷವು ನಿರ್ಧರಿಸಿತು. ಒಂದು ವೇಳೆ ಹಾಗೆ ಮಾಡಿದರೆ “ಅದು ಕಮ್ಯುನಿಸ್ಟ್ ಪಕ್ಷದ ಉದ್ದೇಶಗಳನ್ನು ಮಂಕುಗೊಳಿಸಿ, ಕೊಮಿಂಟಾಂಗ್ ನ ನಿರಂಕುಶ ಪ್ರಭುತ್ವ ಮುಂದುವರೆಸಲು ಸಹಾಯಮಾಡಿ, ಒಂದು ಐಕ್ಯ ಪ್ರಜಾಸತ್ತಾತ್ಮಕ ಸರ್ಕಾರವನ್ನು ಅಧಿಕಾರಕ್ಕೆ ತರುವ ಪ್ರಯತ್ನಗಳಿಗೆ ತಡೆಯೊಡ್ಡುತ್ತದೆ.’’ ಎಂಬುದು ಅದಕ್ಕೆ ಕಾರಣವಾಗಿತ್ತು. ಜಪಾನಿಗೆ ಪ್ರತಿರೋಧ ಒಡ್ಡಿ, ದೇಶವುಳಿಸುವ ಕಮ್ಯುನಿಸ್ಟ್ ಪಕ್ಷದ ‘ಹತ್ತು ಅಂಶಗಳ ಕಾರ್ಯಕ್ರಮ’ದ ಜಾರಿಗೆ ಸರ್ಕಾರವು ಆಡಳಿತಾತ್ಮಕ ಆದೇಶಗಳನ್ನು ಜಾರಿ ಮಾಡಿದ ನಂತರವಷ್ಟೇ, ಅದು ಅಂತಹ ಸರ್ಕಾರವನ್ನು ಸೇರಬಹುದು, ಎಂದು ನಿರ್ಧರಿಸಲಾಯಿತು.

ಕಮ್ಯುನಿಸ್ಟ್ ಪಕ್ಷದ ನಿರಂತರ ಪ್ರಯತ್ನ ಮತ್ತು ಜನತೆಯ ಒತ್ತಡದಿಂದಾಗಿ ಕೊಮಿಂಟಾಂಗ್, ಅದರ ಕಾನೂನಾತ್ಮಕ ಸ್ಥಾನಮಾನವನ್ನು ಗುರುತಿಸುವಂತಾಯಿತು ಮತ್ತು ಕೊಮಿಂಟಾಂಗ್-ಕಮ್ಯುನಿಸ್ಟ್ ಸಹಕಾರ ಸಾಕಾರವಾಗಿಸುವ ಘೋಷಣೆ ಮಾಡಲೇಬೇಕಾಯಿತು. ಹಾಗಿದ್ದೂ ಈ ‘ಐಕ್ಯರಂಗವು ನಿಜವಾದ ಅರ್ಥದಲ್ಲಿ ಯಾವತ್ತೂ ಪರಿಣಾಮಕಾರಿಯಾಗಿ ‘ಐಕ್ಯತೆ’ಯನ್ನು ಹೊಂದಿರಲಿಲ್ಲ.

ಈ ಮಧ್ಯೆ ಜಪಾನ್-ವಿರೋಧಿ ವೇದಿಕೆಯನ್ನು ವಿಸ್ತರಿಸುವ ಮತ್ತು ಕ್ರೋಢೀರಿಸುವ ವಿಚಾರದಲ್ಲಿ ಕಮ್ಯುನಿಸ್ಟ್ ಪಕ್ಷದಲ್ಲಿ, ಕೆಲವು ಬಲ ಮಾರ್ಗಚ್ಯುತಿಯಾದ ಶರಣಾಗತಿಯ ವಿಚಾರಗಳು ಮೂಡಿದವು. ಅಂತಹ ಶಕ್ತಿಗಳು ಸ್ವತಂತ್ರ ಉಪಕ್ರಮಗಳು, ಪ್ರಜಾಪ್ರಭುತ್ವ, ಜನತೆಯ ಜೀವನೋಪಾಯ, ಗೆರಿಲ್ಲ ಯುದ್ಧ ತಂತ್ರಗಳ ಕುರಿತು ಕಮ್ಯುನಿಸ್ಟ್ ಪಕ್ಷವು ಒತ್ತು ಕೊಡುವುದರ ವಿರುದ್ಧವಾದಿಸಿದವು. ಅವರು ಪ್ರತಿಯೊಂದನ್ನೂ ಐಕ್ಯರಂಗದಡಿ ಮಾಡುವ, ‘ದುಡಿಯುವ ಜನತೆಯ ನಾಯಕತ್ವ’ವನ್ನು ಕೈಬಿಡುವ, ಮತ್ತು ಯಶಸ್ಸಿಗಾಗಿ ಕೊಮಿಂಟಾಂಗ್ ನ್ನು ಅವಲಂಬಿಸಬೇಕೆಂದು ವಾದಿಸತೊಡಗಿದರು. ಮಾವೊತ್ಸೆ ತುಂಗ್ ಮತ್ತು ಇನ್ನಿತರರು ಇಂತಹ ಶರಣಾಗತಿಯ ವಾದಗಳನ್ನು ವಿರೋಧಿಸುತ್ತಾ, ಐಕ್ಯರಂಗದೊಳಗೆ ಪಕ್ಷದ ಸ್ವತಂತ್ರ ಧೋರಣೆಗಳು ಮತ್ತು ಮುನ್ಹೆಜ್ಜೆಯ ಕ್ರಮಗಳ ನೀತಿಯನ್ನು ಎತ್ತಿ ಹಿಡಿದರು.

2. Heads-from-the-Nanjing-Massacre
ನಾಂಜಿಂಗ್ ಹತ್ಯಾಕಾಂಡ – ರುಂಡಗಳೊಂದಿಗೆ ಜಪಾನೀ ಆಕ್ರಮಣಕಾರ

‘ಐಕ್ಯರಂಗ, ಸಶಸ್ತ್ರ ಹೋರಾಟ ಮತ್ತು ಪಕ್ಷ ಕಟ್ಟುವುದು’ –ಮೂರು ಅಪೂರ್ವ ಅಸ್ತ್ರಗಳು

1937ರಲ್ಲಿ “ನಾಂಜಿಂಗ್ ಹತ್ಯಾಕಾಂಡ’’ ಎಂದು ಕರೆಯುವ ಧಾರುಣ ಹತ್ಯಾಕಾಂಡ ನಡೆಯಿತು. ಜಪಾನ್ ಕೊಮಿಂಟಾಂಗ್ ಸರ್ಕಾರದ ರಾಜಧಾನಿಯಾದ ನಾಂಜಿಂಗ್‍್ನ್ನು ಅತಿಕ್ರಮಿಸಿ 3 ಲಕ್ಷಕ್ಕಿಂತ ಹೆಚ್ಚು ಜನರ ನರಮೇಧ ಮಾಡಿತು. ಜಪಾನ್ ಸೈನ್ಯದ ಹಿಂಸಾಚಾರ ಮತ್ತು ಕ್ರೌರ‍್ಯ ಇಡೀ ದೇಶವನ್ನು ಅಲುಗಾಡಿಸಿತು. ಇದು ಕೊಮಿಂಟಾಂಗ್ ನ ಹೋರಾಟದ ಕಿಚ್ಚನ್ನು ಮತ್ತಷ್ಟು ದುರ್ಬಲಗೊಳಿಸಿ, 1938ರಲ್ಲಿ ಅವರು ತಮ್ಮ ಪ್ರದೇಶದ ಬಹುಭಾಗವನ್ನು ಕಳೆದುಕೊಂಡರು. ಜಪಾನಿ ಸೈನ್ಯದ ದೌರ್ಜನ್ಯಗಳಿಂದ ಶಾಕ್ ಗೆ ಒಳಗಾದ ಬಹು ದೊಡ್ಡ ಸಂಖ್ಯೆಯ ಅಂರ‍್ರಾಷ್ಟ್ರೀಯ ಆರೋಗ್ಯ ತಂಡಗಳು ಸಹಾಯ ನೀಡಲು ಚೀನಾಕ್ಕೆ ಬಂದವು. ಕೆನಡಾದ ಡಾ. ನಾರ್ಮನ್ ಬೆಥೂನ್ ಮತ್ತು ಭಾರತದ ಡಾ. ದ್ವಾರಕಾನಾಥ್ ಕೊಟ್ನಿಸ್ ಇಂತಹ ತಂಡಗಳ ನೇತೃತ್ವ ವಹಿಸಿದ್ದರು.

ಕಮ್ಯುನಿಸ್ಟ್ ಪಕ್ಷವು ತನ್ನ ಗೆರಿಲ್ಲ ಹೋರಾಟಗಳನ್ನು ಮುಂದುವರೆಸಿ, ವೈರಿ ಗಡಿರೇಖೆಯ ಹಿಂದೆ ದಕ್ಷಿಣ ಚೈನ ಯುದ್ಧ ಭೂಮಿಯನ್ನು ತೆರೆಯಿತು. ಜಪಾನನ್ನು ಸಮರ್ಥವಾಗಿ ಎದುರಿಸಿ, ಅವರು ಮುಂದುವರೆಯವುದನ್ನು ತಡೆದು ನಿಲ್ಲಿಸುವ ಮೂಲಕ ಕೇವಲ ಕಮ್ಯುನಿಸ್ಟ್ ಪಕ್ಷ ಮಾತ್ರವೇ ದೇಶವನ್ನು ರಕ್ಷಿಸಬಲ್ಲುವು ಎಂಬುದನ್ನು ಜನತೆ ಮನಗಂಡಿತು. ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಯುವಜನತೆ ಗೆರಿಲ್ಲ ಯುದ್ಧಕ್ಕೆ ಸನ್ನದ್ಧರಾಗಿ, ಪಕ್ಷದ ನೆಲೆಗಳಲ್ಲಿ ಉತ್ವಾದನೆ ಹೆಚ್ಚಿಸಿ ಕೆಂಪು (ಪೀಪಲ್ಸ್ ಲಿಬರೇಶನ್ ಆರ್ಮಿ- ಜನತಾ ವಿಮೋಚನಾ ಸೈನ್ಯ) ಸೈನ್ಯವನ್ನು ಗಟ್ಟಿಗೊಳಿಸಿದರು.

ಅಗಾಧವಾದ ಪ್ರೌಢಿಮೆ ಮತ್ತು ಸಂಯಮ ಪ್ರದರ್ಶಿಸುತ್ತಾ ಕಮ್ಯುನಿಸ್ಟ್ ಪಕ್ಷವು, ಜಪಾನ್‌ನ ವಿರುದ್ಧ ಐಕ್ಯ ಹೋರಾಟವನ್ನು ಪುನರುಚ್ಛರಿಸಿತು. ಬ್ರಿಟಿಷ್ ಮತ್ತು ಅಮೆರಿಕದ ಕುಮ್ಮಕ್ಕಿನಿಂದ ಕೊಮಿಂಟಾಂಗ್, ಈ ಎಲ್ಲ ಪ್ರಸ್ತಾಪಗಳನ್ನೂ ತಿರಸ್ಕರಿಸಿ ಕಮ್ಯುನಿಸ್ಟ್ ಪಕ್ಷ ಮತ್ತು ಕೆಂಪು ಸೈನ್ಯದ ವಿರುದ್ಧ ಹೊಂಚುಹಾಕುವುದನ್ನು ಮುಂದುವರೆಸಿತು. ಇದರ ಲಾಭ ಪಡೆದ ಜಪಾನೀ ಆಕ್ರಮಣಕಾರರು ವಿಮೋಚಿತ ನೆಲೆಗಳ ಮೇಲೆ ತಮ್ಮ ಹಿಡಿತ ಸಾಧಿಸಲು ಅಭಿಯಾನ ಶುರುಮಾಡಿದರು. ಕಮ್ಯುನಿಸ್ಟ್ ಪಕ್ಷವು ಐಕ್ಯರಂಗವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿರ್ಧಾರವನ್ನು ಮುಂದುವರೆಸುತ್ತಲೇ, ಕೊಮಿಂಟಾಂಗ್ ನದಾಳಿಗಳನ್ನುವಿಫಲಗೊಳಿಸುವುದಾಗಿ ನಿರ್ಧರಿಸಿತು. ತಮ್ಮ ಆತ್ಮ ರಕ್ಷಣೆಗಾಗಿ ಕೊಮಿಂಟಾಂಗ್ ನ ಎಲ್ಲ ದಾಳಿಗಳನ್ನೂ ಕಮ್ಯುನಿಸ್ಟ್ ಪಕ್ಷ ಎದುರಿಸಿ ನಿಂತ ಮತ್ತು ಅದನ್ನು ವಿಫಲಗೊಳಿಸಿದ ಸ್ವ-ರಕ್ಷಣೆಯ ನಿಲುವು ಜನತೆಯ ಬೆಂಬಲವನ್ನು ಗೆದ್ದುಕೊಂಡಿತು.

ಉತ್ತರದಲ್ಲಿನ ತನ್ನ ನೆಲೆಗಳನ್ನು ಕ್ರೋಢೀಕರಿಸುವ, ಕೇಂದ್ರದಲ್ಲಿ ತನ್ನ ಸೈನ್ಯದ ಇರುವಿಕೆಯನ್ನು ಹೆಚ್ಚಿಸುವ ಮತ್ತು ದಕ್ಷಿಣ ದಿಕ್ಕಿನಲ್ಲಿ ವಿಸ್ತರಿಸುವ ಮೂಲಕ ತನ್ನ ಪ್ರತಿರೋಧದ ಯುದ್ಧವನ್ನು ಗೆಲ್ಲುವ ನಿರ್ಧಾರವನ್ನು ಕಮ್ಯುನಿಸ್ಟ್ ಪಕ್ಷ ಮಾಡಿತು. ಈ ವ್ಯೂಹಾತ್ಮಕ ಕೆಲಸ ಮಾಡಲು ತಕ್ಕ ವ್ಯಕ್ತಿಗಳನ್ನು ಗುರುತಿಸಿ ಜವಾಬ್ದಾರಿ ನೀಡಲಾಗಿತ್ತು. ಈ ಎಲ್ಲ ಪ್ರಯತ್ನಗಳ ಫಲವಾಗಿ 1940ರ ವೇಳೆಗೆ ಕಮ್ಯುನಿಸ್ಟ್ ಪಕ್ಷದ ಸದಸ್ಯತ್ವವು 40 ಸಾವಿರದಿಂದ 8 ಲಕ್ಷಕ್ಕೇರಿತು.

ತನ್ನ ವೈರಿಗಳನ್ನು ಸೋಲಿಸಿ ಕ್ರಾಂತಿಯತ್ತ ಮುನ್ನಡೆಯಲು ‘ಐಕ್ಯರಂಗ, ಸಶಸ್ತ್ರ ಹೋರಾಟ ಮತ್ತು ಪಕ್ಷ ಕಟ್ಟುವುದು’– ಇವು ಮೂರು ಅಪೂರ್ವ ಅಸ್ತ್ರಗಳೆಂದು ಕಮ್ಯುನಿಸ್ಟ್ ಪಕ್ಷ ಗುರುತಿಸಿತು. ಐಕ್ಯರಂಗದ ತಂತ್ರಗಳ ಕುರಿತು ಅದು ಪಕ್ಷದೊಳಗೆ ನಿರ್ದೇಶನಗಳನ್ನು ಪ್ರಕಟಿಸಿತು. ಇದು ‘ಹೋರಾಟವಿಲ್ಲದ ಎಲ್ಲ ಸಖ್ಯತೆಯೂ ಅಲ್ಲ ಅಥವಾ ಸಖ್ಯತೆಯೇ ಇರದ ಬರಿಯ ಹೋರಾಟವೂ ಅಲ್ಲ. ಬದಲಿಗೆ ಸಖ್ಯತೆ ಮತ್ತು ಹೋರಾಟವನ್ನು ಜೋಡಿಸುವಂಥದ್ದು’ ಎಂದು ವಿವರಿಸಲಾಯಿತು. ಪ್ರಸ್ತುತವಾಗಿದ್ದ ವೈರುಧ್ಯಗಳನ್ನು ಬಳಸಿ ‘ಹಲವರನ್ನು ಗೆಲ್ಲುವ, ಕೆಲವರನ್ನು ವಿರೋಧಿಸುವ, ಒಂದರ ನಂತರ ಒಂದಾಗಿ ವೈರಿಗಳನ್ನು ಚಚ್ಚಿ ಹಾಕುವ’ ತಂತ್ರವಾಗಿತ್ತು. ಕಮ್ಯುನಿಸ್ಟ್ ಪಕ್ಷವು ಪಂಥವಾದಿ ಮಾರ್ಗಚ್ಯುತಿಗಳು ಮತ್ತು ಮಾರ್ಕ್ಸ್‍ವಾದಿ-ಲೆನಿನ್‌ವಾದದ ತಿಳುವಳಿಕೆಯಲ್ಲಿ ತಪ್ಪು ಗ್ರಹಿಕೆಗಳನ್ನು ಸರಿಪಡಿಸಲು ತಿದ್ದುಪಡಿ ಪ್ರಚಾರಾಂದೋಲನವನ್ನು ಕೈಗೆತ್ತಿಕೊಂಡಿತು. ವ್ಯಕ್ತಿನಿಷ್ಠತೆ, ಪಂಥವಾದ ಮತ್ತು ಗೊಡ್ಡುತನಗಳನ್ನು ಹೊಡೆದೋಡಿಸುವುದು ಅದರ ಉದ್ದೇಶವಾಗಿತ್ತು. ಇದರಿಂದ ಗಟ್ಟಿಗೊಂಡ ಕೆಂಪುಸೈನ್ಯ ಮತ್ತು ಜನತೆಯು, ವೈರಿಗಳಲ್ಲಿ ಆಶಾಭಂಗ ಉಂಟುಮಾಡಿ ಹಲವಾರು ಮೂಲನೆಲೆಗಳನ್ನುವಿಮೋಚನೆ ಮಾಡಿ ಪುನಃಗಳಿಸುವುದು ಸಾಧ್ಯವಾಯಿತು.

3. A_statue_of_Dwarkanath_Kotnis
ಚೀನಾ ಕ್ರಾಂತಿಗೆ ಭಾರತದ ಸಂಬಂಧ – ಭಾರತೀಯ ವೈದ್ಯಕೀಯ ತಂಡದ ಡಾ. ದ್ವಾರಕಾನಾಥ ಕೊಟ್ನಿಸ್ ಶಿಲ್ಪ

ವಿದೇಶೀ ಆಕ್ರಮಣದ ವಿರುದ್ಧ ಯುದ್ಧದಲ್ಲಿ ವಿಜಯ – 6 ಲಕ್ಷ ಕಮ್ಯುನಿಸ್ಟರ ಬಲಿದಾನ

ಇನ್ನೊಂದೆಡೆ ಕೊಮಿಂಟಾಂಗ್ ಕೆಲವೇ ಕೆಲವು ಹೋರಾಟಗಳಲ್ಲಿ ಜಪಾನನ್ನು ಎದುರಿಸುವುದು ಸಾಧ್ಯವಾಯಿತು. ಬಹುತೇಕ ಹೋರಾಟಗಳಲ್ಲಿ ಅದು ಮೊದಲ ದಾಳಿಗೆ ಕುಸಿದುಬಿದ್ದಿತು. ಕಮ್ಯುನಿಸ್ಟ್ ದ್ವೇಷಿ ನಿಲುವನ್ನು ಹೊಂದಿದ್ದ ಅದು 1945ರವರೆಗೂ, ಮತ್ತೆ ಮತ್ತೆ ಕಮ್ಯುನಿಸ್ಟ್ ಪಕ್ಷ ಕೊಡುತ್ತಿದ್ದ ಜತೆಯಾಗಿ ಪ್ರಜಾಸತ್ತಾತ್ಮಕ ಸಂಯುಕ್ತ ಸರ್ಕಾರ ರಚಿಸುವ ಪ್ರಸ್ತಾಪವನ್ನು ತಿರಸ್ಕರಿಸುತ್ತಲಿತ್ತು. ರಾಜಕೀವಾಗಿ ಭ್ರಷ್ಟವಾಗಿದ್ದ ಕೊಮಿಂಟಾಂಗ್ ಸರ್ಕಾರವು ತನ್ನ ಸೈನ್ಯಕ್ಕೆ ಸ್ಫೂರ್ತಿ ತುಂಬಿಸುವುದರಲ್ಲಿ ಸೋತಿತ್ತು. ಇದರಿಂದ ಗಾಬರಿಯಾದ ಅಮೆರಿಕವು ಚಿಯಾಂಗ್-ಕೈ-ಶೇಖ್ ಗೆ ಎಲ್ಲ ಸಾಧ್ಯವಿದ್ದಒತ್ತಾಸೆ ನೀಡಿದರೂ ಪ್ರಯೋಜನವಾಗಲಿಲ್ಲ.

1945ರಲ್ಲಿ ಚೀನಾದ ಈಶಾನ್ಯ ಪ್ರದೇಶವನ್ನು ಪ್ರವೇಶಿಸಿದ ಸೋವಿಯತ್ ಯುನಿಯನ್ ಪಡೆಗಳು ಜಪಾನಿ ಪಡೆಗಳ ಮೇಲೆ ಭಾರೀ ದಾಳಿ ಮಾಡಿ ಅವರ ಸೋಲನ್ನು ತ್ವರಿತಗೊಳಿಸಿದವು. ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಕೆಂಪು ಸೈನ್ಯವು ಸಮಗ್ರವಾಗಿ ಜಪಾನೀಯರನ್ನು ಸೋಲಿಸಿ ಅವರನ್ನು ಶರಣಾಗುವಂತೆ ಮಾಡಿತು.

ಶತಮಾನದಲ್ಲೇ ವಿದೇಶೀ ಆಕ್ರಮಣಕಾರರ ವಿರುದ್ಧ ಚೀನಾಗಳಿಸಿದ ಯಶಸ್ಸಿನಲ್ಲಿ, ಜಪಾನ್‌ನ ವಿರುದ್ಧಗಳಿಸಿದ ಯಶಸ್ಸು ಮೊದಲನೆಯದು. ಈ ಸಂಘರ್ಷದಲ್ಲಿ 2.1 ಕೋಟಿ ಚೀನೀಯರು ಕೊಲ್ಲಲ್ಪಟ್ಟರು ಅಥವಾ ಗಾಯಗೊಂಡಿದ್ದರು. ಅದರಲ್ಲಿ 6 ಲಕ್ಷಕ್ಕೂ ಹೆಚ್ಚಿನವರು ಕಮ್ಯುನಿಸ್ಟ್ ಪಕ್ಷದ ಹೋರಾಟಗಾರರಾಗಿದ್ದರು. ಅತ್ಯಂತ ಶಕ್ತಿಯುತವಾಗಿ ಬೆಳೆದು ಒಂದು ಲಕ್ಷ ಚದರ ಕಿ.ಮಿ.ಗಳಲ್ಲಿ ವಾಸಿಸುತ್ತಿದ್ದ 10 ಕೋಟಿ ಜನರನ್ನು ವಿಮುಕ್ತಿಗೊಳಿಸಿತು. ಕೆಂಪುಸೈನ್ಯದ ಪ್ರಮುಖ ಪಡೆಯ ಬಲ 12 ಲಕ್ಷ ಇದ್ದರೆ, ಜನತಾ ಸೈನ್ಯ 26 ಲಕ್ಷ ಇತ್ತು. ಇದು ಹೊಸ ಪ್ರಜಾಸತ್ತಾತ್ಮಕ ಕ್ರಾಂತಿಯ ವಿಜಯಕ್ಕೆ ನೆಲೆ ಒದಗಿಸಿತು.

‘ಐಕ್ಯತೆ ಮತ್ತು ವಿಜಯ’ ಎಂದು ಕರೆಯಲ್ಪಡುವ ಏಳನೆಯ ರಾಷ್ಟ್ರೀಯ ಅಧಿವೇಶನವು ಈ ಸಶಸ್ತ್ರ ಹೋರಾಟದ ಯಶಸ್ಸಿನ ಮೂರು ಆಯುಧಗಳನ್ನು ಗುರುತಿಸಿತು. ಸಿದ್ಧಾಂತ ಮತ್ತು ಆಚರಣೆ ಎರಡನ್ನೂ ಒಟ್ಟಿಗೆ ಒಯ್ಯುವುದು, ಜನತೆಯೊಂದಿಗೆ ನಿಕಟ ಸಂಬಂಧ ಹೊಂದುವುದು ಮತ್ತು ಸ್ವವಿಮರ್ಶೆ ಮಾಡಿಕೊಳ್ಳುವುದು – ಎಂಬ ಈ ಮೂರು ಆಯುಧಗಳನ್ನು ಪ್ರಜಾಸತ್ತಾತ್ಮಕ ಕ್ರಾಂತಿಯ ವಿಕಾಸಕ್ಕಾಗಿ ಬಳಸುವುದನ್ನು ಮುಂದುವರೆಸುವುದು ಅಗತ್ಯ ಎಂದು ಗುರುತಿಸಿತು.

ಜನತೆ ಸಾಮ್ರಾಜ್ಯಶಾಹಿ ಜಪಾನಿನ ಮೇಲೆ ವಿಜಯ ಸಾಧಿಸಿದ ನಂತರದಲ್ಲಿ ಚಿಯಾಂಗ್-ಕೈ-ಶೇಖ್ ಅಮೆರಿಕೆಯೊಂದಿಗೆ ಕೈ ಜೋಡಿಸಿ ಇನ್ನೊಂದು ಅಂತರ್ಯುದ್ಧ ಹೂಡುವರೆಂಬ ಬಗ್ಗೆ ಯಾವುದೇ ಭ್ರಮೆ ಬೇಡವೆಂದು ಪಕ್ಷವು ಹೇಳಿತು. ನಾವು ಶಾಂತಿ ಮತ್ತು ಸ್ಥಿರತೆಗಾಗಿ ಕೆಲಸ ಮಾಡಬೇಕೆಂದು ಅದು ಘೋಷಿಸಿತು. ಕಮ್ಯುನಿಸ್ಟ್ ಪಕ್ಷದ ಬೆಳವಣಿಗೆಯನ್ನು ತಡೆಯಲು ಅಮೆರಿಕವು ಎಲ್ಲ ಭೌತಿಕ ಮತ್ತು ಮೂಲಸೌಕರ್ಯಗಳನ್ನು ನೀಡುವ ಮೂಲಕ ಚಿಯಾಂಗ್-ಕೈ-ಶೇಖ್ ಗೆ ಒತ್ತಾಸೆಯಾಗಿ ನಿಂತಿತು. ಇದರಿಂದ ಪ್ರೇರಿತವಾಗಿ ಕೊಮಿಂಟಾಂಗ್ ಆರು ತಿಂಗಳ ಹಿಂದೆ ತಾನು ಸಹಿ ಮಾಡಿದ್ದ ಒಪ್ಪಂದವನ್ನು ಮುರಿದು ಜೂನ್ 1946ರಲ್ಲಿ ಕಮ್ಯುನಿಸ್ಟ್ ಪಕ್ಷ ಮತ್ತು ಕೆಂಪು ಸೈನ್ಯದ ಮೇಲೆ ಮತ್ತೆ ದಾಳಿಯನ್ನಾರಂಭಿಸಿತು. “ಅಮೆರಿಕ ಮತ್ತು ಚಿಯಾಂಗ್-ಕೈ-ಶೇಖ್ ನನ್ನು ಪ್ರತ್ಯೇಕಿಸಿ’ ಮತ್ತು ಅವರ ‘ಚೀನಾವನ್ನು ವಸಾಹತು ಮಾಡುವ ಪ್ರಯತ್ನ’ವನ್ನು ಸೋಲಿಸುವಂತೆ ಕರೆ ನೀಡುವ ಮೂಲಕ ಕಮ್ಯುನಿಸ್ಟ್ ಪಕ್ಷ ಅದಕ್ಕೆ ಉತ್ತರ ನೀಡಿತು. ಕೆಂಪು ಸೈನ್ಯವು ತನ್ನ ಚಲನಶೀಲ ಯುದ್ಧ ತಂತ್ರಗಳನ್ನು ಬಳಸಿ ಬಲಿಷ್ಠ ವೈರಿಯ ವಿರುದ್ಧ ಸೆಟೆದು ನಿಂತಿತು.

4. PRCFounding
ಮಾವೋ ಚೀನಾ ಜನತಾ ಗಣರಾಜ್ಯ ಘೋಷಿಸುತ್ತಿರುವುದು – ಅಕ್ಟೋಬರ್ 1, 1949

‘ಚೀನಾ ಜನತಾ ಗಣರಾಜ್ಯ’ ಘೋಷಣೆ

ವಿಮೋಚನಾ ಯುದ್ಧದ ಎರಡನೆಯ ವರ್ಷದಲ್ಲಿ ದೇಶದಾದ್ಯಂತ ಪ್ರತಿ-ಆಕ್ರಮಣಗಳನ್ನು ಸಂಘಟಿಸುವಂತೆ ಪಕ್ಷವು ಕರೆ ನೀಡಿತು. ಚೀನಾದಾದ್ಯಂತ ಪಕ್ಷದ ನೇತೃತ್ವದ ಸೈನ್ಯವು ವಿಜಯ ಸಾಧಿಸಿ ಹೊಸ ಐತಿಹಾಸಿಕ ತಿರುವು ನೀಡಿತು. ಪಕ್ಷವು ಇದನ್ನು ಶ್ರಮಜೀವಿಗಳ ನಾಯಕತ್ವದಲ್ಲಿ ವಸಾಹತುಶಾಹಿ, ಪಾಳೆಗಾರಿ ಮತ್ತು ಅಧಿಕಾರಶಾಹಿ ಬಂಡವಾಳಶಾಹಿ ವಿರುದ್ಧದ ಕ್ರಾಂತಿಯ ಕಾಲವೆಂದು ಬಣ್ಣಿಸಿತು.

ತಾನು ವಿಮೋಚನೆಗೊಳಿಸಿದ ಪ್ರದೇಶಗಳಲ್ಲಿ, ಜಮೀನುದಾರರಿಂದ ಶೋಷಣೆಯನ್ನು ತಪ್ಪಿಸಲು ದೊಡ್ಡ ದೊಡ್ಡ ಜಮೀನುದಾರರು ಹೊಂದಿದ್ದ ಕೃಷಿಭೂಮಿಯನ್ನು ಅವರಿಂದ ವಶಪಡಿಸಿಕೊಂಡು ಬಡಜನರಿಗೆ ಹಂಚಲು, 1947ರಲ್ಲಿ ಪಕ್ಷವು “ಭೂ ಕಾಯ್ದೆ’’ಯನ್ನು ಅಂಗೀಕರಿಸಿತು. ಬಡ ಕೃಷಿಕರನ್ನು ಆಧರಿಸಿ, ಮಧ್ಯಮ ರೈತರನ್ನು ಸೇರಿಸಿಕೊಂಡು, ಪಾಳೆಯಗಾರಿ ಶೋಷಣೆಯನ್ನು ನಿಷೇಧಿಸುವುದು ಮತ್ತು ಕೃಷಿ ಉತ್ಪಾದನೆಯನ್ನು ಅಭಿವೃದ್ಧಿ ಪಡಿಸುವುದು ಭೂ ಸುಧಾರಣೆಯ ಜಾರಿಯ ಒಟ್ಟು ಧೋರಣೆಯಾಗಿತ್ತು. ಇದಕ್ಕೆ ಬಹುದೊಡ್ಡ ಜನತೆಯ ಬೆಂಬಲ ದೊರೆತು ಕೊಮಿಂಟಾಂಗ್ ಮೇಲೆ ಕಮ್ಯುನಿಸ್ಟ್ ಪಕ್ಷಕ್ಕೆ ವಿಜಯ ಸಾಧಿಸುವುದು ಸಾಧ್ಯವಾಯಿತು.

ನವೆಂಬರ್ 1948ರ ಹೊತ್ತಿಗೆ, ಚೀನಾ ಕಮ್ಯುನಿಸ್ಟ್ ಪಕ್ಷವು ತನ್ನ ಸೈನ್ಯವು ಸಂಖ್ಯಾತ್ಮಕವಾಗಿ ಮತ್ತು ಗುಣಾತ್ಮಕವಾಗಿ ಶ್ರೇಷ್ಠವಾಗಿರುವುದರಿಂದ ಕ್ರಾಂತಿಯ ವಿಜಯ ಮತ್ತು ಶಾಂತಿಯ ಸ್ಥಾಪನೆ ಸದ್ಯದಲ್ಲೇ ಸಾಧ್ಯವಾಗುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಘೋಷಿಸಿತು. ಫೆಬ್ರವರಿ 1949ರಲ್ಲಿ ಪಕ್ಷವು ತನ್ನ ಮೊದಲಿನ ಘೋಷಣೆಯಾದ “ಹಳ್ಳಿಗಳು ಮೊದಲು, ನಗರಗಳು ನಂತರ’’ ಎಂಬ ಘೋಷಣೆಯನ್ನು “ನಗರಗಳು ಮೊದಲಿಗೆ, ಹಳ್ಳಿಗಳು ನಂತರ’’ ಎಂದು ಬದಲಾಯಿಸಿತು. ಏಪ್ರಿಲ್ 1949ರಲ್ಲಿ ಕೊಮಿಂಟಾಂಗ್ ನ ರಾಜಧಾನಿಯಾಗಿದ್ದ ನಾನ್‌ಜಿಂಗ್ ನ ಪತನದೊಂದಿಗೆ ಅದರ ಸಮಗ್ರ ಸೋಲು ಖಚಿತವಾಯಿತು.

ಅಕ್ಟೋಬರ್ 1, 1949ರಲ್ಲಿ ಮಾವೊತ್ಸೆ ತುಂಗ್ “ಚೀನಾ ಜನತಾ ಗಣರಾಜ್ಯ’’ ರಚನೆಯಾಗಿದೆ ಎಂದು ಘೋಷಿಸಿದರು. ಇದು ‘ಕಾರ್ಮಿಕ ವರ್ಗದ ನಾಯಕತ್ವದಲ್ಲಿ’ ‘ಕಾರ್ಮಿಕರು ಮತ್ತು ರೈತರ ಕೂಟವು ಎಲ್ಲ ಪ್ರಜಾಸತ್ತಾತ್ಮಕ ವರ್ಗ ಮತ್ತು ರಾಷ್ಟ್ರೀಯತೆಗಳನ್ನು ಒಗ್ಗೂಡಿಸುವುದರ’ ಮೇಲೆ ಆಧರಿಸಿರುವ ‘ಹೊಸ ಪ್ರಜಾಸತ್ತಾತ್ಮಕ ಅಥವಾ ಜನತಾ ಪ್ರಜಾಸತ್ತಾತ್ಮಕ ಪ್ರಭುತ್ವ’ವೆಂದು ಅವರು ಘೋಷಿಸಿದರು.

ಹೀಗೆ ಚೀನಾ ಜನತಾ ಗಣರಾಜ್ಯದ ಸ್ಥಾಪನೆಯು, ಅರೆ-ವಸಾಹತುಶಾಹಿ, ಅರೆ-ಪಾಳೆಯಗಾರಿ ದೇಶವೊಂದು ಸಮಾಜವಾದಿ ಸಮಾಜವಾಗಿ ರೂಪಾಂತರಗೊಳ್ಳುವುದಕ್ಕೆ ನಾಂದಿಯಾಯಿತು.

(ಮುಂದಿನ ವಾರ: ಮೂರನೆಯ ಹಂತ – ಸಮಾಜವಾದಿ ಸಮಾಜ ಕಟ್ಟುವತ್ತ)

 

ಅನುವಾದ: ಗೀತಾ ಎಸ್.ಕೆ

Leave a Reply

Your email address will not be published. Required fields are marked *