ಚೀನಾ ಕಮ್ಯುನಿಸ್ಟ್ ಪಕ್ಷದ ಸಾಧನೆಗಳು ಸಮಾಜವಾದದ ಹಿರಿಮೆಯನ್ನು ಸಾಬೀತುಗೊಳಿಸಿವೆ

ಶತಮಾನೋತ್ಸವ ಸಂದರ್ಭದಲ್ಲಿ ಸಿ.ಪಿ.ಸಿ.ಗೆ ಯೆಚುರಿ ಶುಭಾಶಯ

ಚೀನಾ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಚೀನಾಕ್ಕೆ 2020ರೊಳಗೆ ಸಂಪೂರ್ಣವಾಗಿ ಬಡತನವನ್ನು ನಿರ್ಮೂಲನೆ ಮಾಡಲು, ಪ್ರತಿ ವರ್ಷವೂ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಠಿ ಮಾಡುವ ಮೂಲಕ ನಿರುದ್ಯೋಗವನ್ನು ತಗ್ಗಿಸಲು. ತನ್ನ ಆರೋಗ್ಯಪಾಲನೆ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ವಿಶ್ವಮಾನ್ಯ ಮೂಲ ಸೌಕರ್ಯಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ಸಾಧ್ಯವಾಗಿದೆ. “ಅಸಮಾನತೆ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲಗೊಳಿಸುವ, ಮತ್ತು ಜೀವನದ ಗುಣಮಟ್ಟವನ್ನು ಎತ್ತರಿಸುವ ನಿಮ್ಮ ಪ್ರಯತ್ನಗಳು ಶ್ಲಾಘನಾರ್ಹ” ಎಂದು ಚೀನಾ ಕಮ್ಯನಿಸ್ಟ್ ಪಕ್ಷದ ಸ್ಥಾಪನೆಯ ಶತಮಾನೋತ್ಸವದ ಸಂದರ್ಭದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)-ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಚೀನಾ ಕಮ್ಯುನಿಸ್ಟ್ ಪಕ್ಷ(ಸಿ.ಪಿ.ಸಿ.)ದ ಪ್ರಧಾನ ಕಾರ್ಯದರ್ಶಿ ಕ್ಸಿ ಜಿನ್ಪಿಂಗ್‌ರವರಿಗೆ ಕಳಿಸಿದ ಸಂದೇಶದಲ್ಲಿ ಹೇಳಿದ್ದಾರೆ.

“ಜಾಗತಿಕ ಆರ್ಥಿಕತೆಯು ನಿಧಾನಗೊಂಡು ಹಿಂಜರಿತದತ್ತ ಸರಿಯುತ್ತಿದ್ದ ಸಂದರ್ಭದಲ್ಲಿ ಕೋವಿಡ್ ಸಾಂಕ್ರಾಮಿಕವು ಬಂದು, ಅದಾಗಲೇ ಕುಂಟುತ್ತಿದ್ದ ಜಾಗತಿಕ ಆರ್ಥಿಕತೆಯನ್ನು ಧ್ವಂಸ ಮಾಡಿದೆ. ಅಂತರರಾಷ್ಟ್ರೀಯ ಹಣಕಾಸು ಬಂಡವಾಳದ ನೇತೃತ್ವದ ವಸಾಹತುಶಾಹಿ ನವ-ಉದಾರವಾದೀ ಜಾಗತೀಕರಣವು ಯಾವುದೇ ಪರಿಹಾರ ಒದಗಿಸುವಲ್ಲಿ ತನ್ನ ಸಂಪೂರ್ಣ ದಿವಾಳಿತನವನ್ನು ತೋರಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ, ಚೀನಾ ಜನತಾ ಗಣತಂತ್ರವು ಕೋವಿಡ್ ಸಾಂಕ್ರಾಮಿಕವನ್ನು ನಿಭಾಯಿಸಿದ ಮತ್ತು ತಡೆದು ನಿಲ್ಲಿಸಿದ ಹಾಗೂ ತನ್ನ ಸಮಾಜ ಮತ್ತು ಆರ್ಥಿಕತೆಯನ್ನು ಎಲ್ಲ ಮುನ್ನೆಚ್ಚರಿಕೆಗಳೊಂದಿಗೆ ಮತ್ತೆ ತೆರೆದು, ಆರ್ಥಿಕತೆಯನ್ನು ಬೆಳವಣಿಗೆಯ ಪಥದಲ್ಲಿ ಪುನಃ ತೆಗೆದುಕೊಂಡು ಹೋಗುತ್ತಿರುವ ಮಾದರಿ ನಡೆಯು ಬಂಡವಾಳಶಾಹಿಗೆ ಹೋಲಿಸಿದರೆ ಸಮಾಜವಾದವು ಒಂದು ವ್ಯವಸ್ಥೆಯಾಗಿ ಹೇಗೆ ಮೇಲ್ಮಟ್ಟದ್ದು ಎಂಬುದನ್ನು ಸಾಬೀತು ಮಾಡುವ, ಜಗತ್ತಿಗೆ ಒಂದು ಪಾಟವಾಗಿದೆ” ಎಂದು ಸಿಪಿಐ(ಎಂ) ತನ್ನ ಸಂದೇಶದಲ್ಲಿ ಹೇಳುತ್ತ “ನಿಮ್ಮ ಯಶಸ್ಸುಗಳನ್ನು ಮತ್ತು ನಿಮ್ಮದೇ ಸ್ವಯಂ ವಿಮರ್ಶಾತ್ಮಕ ಸರಿಪಡಿಕೆಗಳಿಂದ ಕಲಿಯುವುದನ್ನು ಶ್ಲಾಘಿಸತ್ತಲೇ ಒಂದು ‘ಸಮೃದ್ಧಿಶೀಲ, ಬಲಿಷ್ಠ, ಪ್ರಜಾಸತ್ತಾತ್ಮಕ, ಸಾಂಸ್ಕೃತಿಕವಾಗಿ ಮುಂದುವರಿದ ಮತ್ತು ಸಾಮರಸ್ಯದ ಆಧುನಿಕ ಸಮಾಜವಾದಿ ದೇಶ’ವನ್ನು 2049 ರೊಳಗೆ ಕಟ್ಟುವ ನಿಮ್ಮ ಇನ್ನೊಂದು ಶತಮಾನದ ಗುರಿಯು ಈಡೇರಲಿ” ಹಾರೈಸಿದೆ.

“ಚೀನಾ ಕಮ್ಯುನಿಸ್ಟ್ ಪಕ್ಷದ ನಾಯಕತ್ವದಲ್ಲಿ ಚೀನಾ ಜನತಾ ಗಣತಂತ್ರವು ಒಂದು ಶಾಂತಿಯುತ ವಿದೇಶಾಂಗ ನೀತಿಯನ್ನು ಅನುಸರಿಸುತ್ತದೆ, ಉತ್ತಮ ನೆರೆಹೊರೆ ಬಾಂಧವ್ಯಗಳನ್ನು ಗಟ್ಟಿಗೊಳಿಸುತ್ತದೆ ಮತ್ತು ದಕ್ಷಿಣ ಏಷಿಯಾ ಹಾಗೂ ವಿಶ್ವದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡುತ್ತದೆ” ಎಂಬ ಸಿಪಿಐ(ಎಂ)ನ ವಿಶ್ವಾಸವನ್ನು ಯೆಚುರಿಯವರು ತಮ್ಮ ಶುಭಾಶಯ ಸಂದೇಶದಲ್ಲಿ ವ್ಯಕ್ತಮಾಡಿದ್ದಾರೆ.

cpc100-may 27 webinar

ಈ ಶುಭಾಶಯ ಸಂದೇಶವನ್ನು ಮೇ 27ರಂದು ನಡೆದ ವೆಬಿನಾರ್‌ನಲ್ಲಿ ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಅರುಣ್ ಕುಮಾರ್ ಓದಿದರು. ಅದರ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:

ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಪರವಾಗಿ ನಾನು ಚೀನಾ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯ ಶತಮಾನೋತ್ಸವದ ಸಂದರ್ಭದಲ್ಲಿ ಸೋದರ ಕಮ್ಯುನಿಸ್ಟ್  ಶುಭಾಶಯಗಳನ್ನು ತಿಳಿಸುತ್ತಿದ್ದೇನೆ.

ಭಾರತ ಕಮ್ಯುನಿಸ್ಟ್ ಪಕ್ಷವು ಒಂದು ನಿರ್ದಯಿ ವಸಾಹತುಶಾಹಿ ಶಕ್ತಿಯಾಗಿದ್ದ ಬ್ರಿಟಿಷರು ಆಳುತ್ತಿದ್ದ ಭಾರತದ ಭೂಪ್ರದೇಶದ ಹೊರಗಡೆ ಕೆಲವು ತಿಂಗಳುಗಳ ಮುಂಚೆ ಸ್ಥಾಪನೆಗೊಂಡಿತು. ಅಂದಿನಿಂದ ಈ ಶತಮಾನದ ಪಯಣದಲ್ಲಿ ಸೋದರ ಕಮ್ಯುನಿಸ್ಟ್ ಪಕ್ಷಗಳಾಗಿ ನಮ್ಮ ಎರಡೂ ಪಕ್ಷಗಳು, ಏಳು-ಬೀಳುಗಳ ನಡುವೆ, ಸೋದರ ಕಮ್ಯೂನಿಸ್ಟ್ ಸಂಬಂಧಗಳನ್ನು ಕಾಯ್ದುಕೊಂಡು ಬಂದಿವೆ.

ಸಿಪಿಐ(ಎಂ) ಮಾರ್ಕ್ಸ್ ವಾದ-ಲೆನಿನ್‌ವಾದ ಒಂದು ಸೃಜನಾತ್ಮಕ ವಿಜ್ಞಾನ ಎಂಬುದಕ್ಕೆ ಒತ್ತು ಕೊಡುತ್ತಲೇ ಇದೆ. ಇದನ್ನು ಎಂದೆಂದಿಗೂ ಸೂತ್ರಗಳ ಒಂದು ಕಂತೆಯ ಮಟ್ಟಕ್ಕೆ ಇಳಿಸಲು ಸಾಧ್ಯವಿಲ್ಲ. ಒಂದು ಸೃಜನಾತ್ಮಕ ವಿಜ್ಞಾನವಾಗಿ, ಇದು ತನ್ನ ಕ್ರಾಂತಿಕಾರಿ ಧ್ಯೇಯಗಳು ಮತ್ತು ವಿಮೋಚನಾತ್ಮಕ ಗುರಿಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿರುತ್ತಲೇ, ಪ್ರತಿಯೊಂದು ದೇಶದಲ್ಲಿ ಪ್ರತಿಯೊಂದು ಕಾಲದಲ್ಲಿ ಕಾಣಬರುವ ಮೂರ್ತ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕು. ಲೆನಿನ್ ಹೇಳಿರುವಂತೆ, “ಮೂರ್ತ ಪರಿಸ್ಥಿತಿಯ ಮೂರ್ತ ವಿಶ್ಲೇಷಣೆಯು ಗತಿತಾರ್ಕಿಕತೆಯ ಜೀವಂತ ಸಾರ”.

ಚೀನಾ ಕಮ್ಯುನಿಸ್ಟ್ ಪಕ್ಷದ ಕಳೆದ ಶತಮಾನದ ಚರಿತ್ರೆಯು ಮಾರ್ಕ್ಸ್ ವಾದ-ಲೆನಿನ್‌ವಾದದ ಈ ಸೃಜನಾತ್ಮಕ ವಿಜ್ಞಾನವನ್ನು ಚೀನಾದಲ್ಲಿನ ಮೂರ್ತ ಪರಿಸ್ಥಿತಿಗಳಿಗೆ ಅಳವಡಿಸಿಕೊಂಡಿರುವ ವಿಧಾನಕ್ಕೆ ಒಂದು ರುಜುವಾತು. ಚೀನಾ ಕಮ್ಯುನಿಸ್ಟ್ ಪಕ್ಷವು ಇಂತಹ ಒಂದು ಅಳವಡಿಕೆಯಿಂದ, ರಷ್ಯಾ ಕ್ರಾಂತಿಯ ಸ್ಫೂರ್ತಿ ಮತ್ತು ಅನುಭವದಿಂದ ಕಲಿಯುತ್ತಲೇ ಸಿದ್ಧಾಂತದ ಅನ್ವಯ ಮತ್ತು ಪ್ರಯೋಗದಲಿಯ್ಲೂ ಹೊಸತನವಿದ್ದ ಒಂದು ಮಾರ್ಗದಲ್ಲಿ ನಡೆದು ರಾಷ್ಟ್ರೀಯ ವಿಮೋಚನಾ ಚಳುವಳಿಯ ನಾಯಕತ್ವವನ್ನು ಯಶಸ್ವಿಯಾಗಿ ವಹಿಸಿಕೊಂಡಿತು. ಅಂತಿಮವಾಗಿ ಇದು ಸಮಾಜವಾದಿ ಚೀನಾದ-ಚೀನಾ ಜನತಾ ಗಣತಂತ್ರದ ಸ್ಥಾಪನೆಗೆ ಎಡೆ ಮಾಡಿತು.

ಈ ದೀರ್ಘ ಚರಿತ್ರೆಯಲ್ಲಿ ಪ್ರತಿಯೊಂದು ತಿರುವು ಮತ್ತು ತಿರುಗಿನಲ್ಲಿ ಚೀನಾ ಕಮ್ಯೂನಿಸ್ಟ್ ಪಕ್ಷವು ಹಲವು ಪರೀಕ್ಷೆಗಳು ಮತ್ತು ತೊಂದರೆಗಳನ್ನು ಎದುರಿಸಬೇಕಾಯಿತು. ಹಲವು ತಪ್ಪುಗಳನ್ನು ಮಾಡಿತು, ಅವನ್ನು ಗುರುತಿಸಿ, ಪತ್ತೆ ಹಚ್ಚಿ. ಸರಿ ಪಡಿಸಿಕೊಳ್ಳಲಾಯಿತು ಮತ್ತು ಸಮಾಜವಾದಿ ಚೀನಾವನ್ನು ಕ್ರೋಡೀಕರಣದತ್ತ ಮುಂದೊಯ್ಯಲಾಯಿತು. ಹಲವು ಕಠಿಣ ಹೋರಾಟಗಳಿದ್ದವು, ಕೆಲವು ಸಾಮಾಜಿಕ ಪ್ರಕ್ಷಬ್ಧತೆಯನ್ನು ಉಂಟುಮಾಡಿದ ಸಂದರ್ಭಗಳೂ ಬಂದವು. ಆದರೆ ಈ ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತು ಈ ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಂಡು, ಚೀನಾ ಕಮ್ಯುನಿಸ್ಟ್  ಪಕ್ಷವು ವಿಜಯಶಾಲಿಯಾಗಿ ಹೊರ ಹೊಮ್ಮಿತು.

cpc100-webinar

ಚೀನಾ ಕಮ್ಯುನಿಸ್ಟ್ ಪಕ್ಷದ ಅನುಭವವು ತಪ್ಪುಗಳನ್ನು ಗುರುತಿಸುವುದು, ತಿದ್ದಿಕೊಳ್ಳುವುದು ಮತ್ತು ಈ ತಪ್ಪುಗಳ ಪುನರಾವರ್ತನೆಯ ಪರಿಸ್ಥಿತಿಗಳನ್ನು ಅಳಿಸುವುದು, ಭವಿಷ್ಯದಲ್ಲಿ ವಿಮೋಚನೆಯ ಜನತಾ ಚಳುವಳಿಯನ್ನು ಭವಿಷ್ಯದೆಡೆಗೆ ಮುಂದೊಯ್ಯುವುದರ ತಿರುಳು ಎಂಬುದನ್ನು ದೃಢೀಕರಿಸುತ್ತಿದೆ.

ಹೊಸತನ, ಸ್ವಯಂ ವಿಮರ್ಶಾತ್ಮಕ ಮೌಲ್ಯಮಾಪನೆ ಮತ್ತು ಸರಿಪಡಿಕೆಯ ಈ ಪ್ರಕ್ರಿಯೆಯ ಮೂಲಕ ಚೀನಾ ಕಮ್ಯುನಿಸ್ಟ್ ಪಕ್ಷವು 1978 ರಲ್ಲಿ ಒಂದು ದಿಟ್ಟ ಸುಧಾರಣೆಗಳ ಹಾದಿ ಹಿಡಿಯಿತು. ಇದರ ಬೆರಗುಗೊಳಿಸುವ ಫಲಿತಾಂಶಗಳು ಎಲ್ಲರ ಮುಂದಿದೆ, ಮತ್ತು ಇಡೀ ವಿಶ್ವವೇ ಎದ್ದು ನಿಂತು ಗಮನಿಸುವಂತಿದೆ. ಈ ಸುಧಾರಣೆಗಳು ಮತ್ತು ತೆರೆದುಕೊಳ್ಳುವ ಪ್ರಕ್ರಿಯೆ ಮಾರ್ಕ್ಸ್‍ವಾದ-ಲೆನಿನ್‌ವಾದದ ಕ್ರಾಂತಿಕಾರಿ ತತ್ವಗಳ ಮಾರ್ಗದರ್ಶನದಲ್ಲಿ ನಡೆಯುತ್ತವೆ ಮತ್ತು ಸಮಾಜವಾದವನ್ನು ದುರ್ಬಲಗೊಳಿಸುವ ಮತ್ತು ಶಕ್ತಿಗುಂದಿಸುವ ಪ್ರತಿಯೊಂದು ಅವಕಾಶಕ್ಕೆ ಹೊಂಚುಹಾಕುತ್ತಿರುವ ಸಮಾಜವಾದದ ವಿರೋಧಿಗಳಿಗೆ ಯಾವುದೇ ಅವಕಾಶ ನೀಡದಂತೆ ಆಗುತ್ತದೆ ಎಂಬ ಭರವಸೆ ನಮಗಿದೆ. ಈ ಸುಧಾರಣೆಗಳು ಮತ್ತು ತೆರೆದುಕೊಳ್ಳುವ ದಶಕಗಳ ಸಂದರ್ಭದಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷವು, ಸಮಾಜವಾದವನ್ನು ಕಳೆಗುಂದಿಸುವ ಸಾಮ್ರಾಜ್ಯಶಾಹಿಯ ಧ್ಯೇಯಸಾಧನೆಗೆ ಚೀನಾ ಜನತಾ ಗಣತಂತ್ರದ ಮೇಲೆ ಗುರಿಯಿಟ್ಟ ಎಲ್ಲ ಎದುರಾಳಿಗಳನ್ನು ಯಶಸ್ವಿಯಾಗಿ ಎದುರಿಸಿತು. ಈ ವರ್ಗ ಸಮರಗಳು ಕೋವಿಡೋತ್ತರ ಜಗತ್ತನ್ನು ರೂಪಿಸುವ ಸಾಮ್ರಾಜ್ಯಶಾಹಿ ಪ್ರಯತ್ನಗಳಲ್ಲಿ ಮುಂದುವರೆಯುತ್ತವೆ. ಈ ಕುತಂತ್ರಗಳನ್ನು ಚೀನಾ ಕಮ್ಯೂನಿಸ್ಟ್ ಪಕ್ಷವು ಯಶಸ್ವಿಯಾಗಿ ಹಿಮ್ಮೆಟ್ಟಿಸಲಿ ಎಂದು ಸಿಪಿಐ(ಎಂ) ಹಾರೈಸುತ್ತದೆ.

ಇಂದಿನ ಜಗತ್ತು, ಅಮಾನವೀಯತೆ ಅಂತರ್ಗತವಾಗಿರುವ ಬಂಡವಾಳಶಾಹಿ ವ್ಯವಸ್ಥೆಯು ಎಂದಿಗೂ ಸಹ ಮಾನವಶೋಷಣೆ ಮತ್ತು ವ್ಯವಸ್ಥಾಗತ ಬಿಕ್ಕಟ್ಟುಗಳಿಂದ ಮುಕ್ತವಾಗಿರುವ ವ್ಯವಸ್ಥೆಯಾಗಿರಲು ಸಾಧ್ಯವೇ ಇಲ್ಲ ಎಂಬ ಮಾರ್ಕ್ಸ್‍ವಾದಿ-ಲೆನಿನ್‌ವಾದಿ ತಿಳುವಳಿಕೆಯನ್ನು ದೃಢಪಡಿಸಿದೆ. ಲಾಭವನ್ನು ಗರಿಷ್ಟಗೊಳಿಸುವ ಮತ್ತು ಅದಕ್ಕಾಗಿಯೇ ಶೋಷಣೆಯನ್ನು ತೀವ್ರಗೊಳಿಸುವ ತರ್ಕದ ಮೇಲೆಯೇ ಈ ವ್ಯವಸ್ಥೆಯ ಅಸ್ತಿತ್ವ ನಿಂತಿದೆ. 21ನೇ ಶತಮಾನದ ಪ್ರಾರಂಭದ ಎರಡು ದಶಕಗಳು, ಜಾಗತಿಕ ಬಂಡವಾಳಶಾಹಿಯು, ತಾನೇ ಸೃಷ್ಟಿಸಿಕೊಂಡ ಬಿಕ್ಕಟ್ಟಿನಿಂದ ಹೊರಬರಲು, ನಿರ್ದಿಷ್ಟವಾಗಿ 2008 ರಲ್ಲಿ ಜಾಗತಿಕ ಆರ್ಥಿಕ ಕುಸಿತದ ನಂತರದಲ್ಲಿ, ಅಸಮರ್ಥವಾಗಿದೆ ಎಂಬುದನ್ನು ತೋರಿಸಿವೆ.

ಜಾಗತಿಕ ಆರ್ಥಿಕತೆಯು ನಿಧಾನಗೊಂಡು ಹಿಂಜರಿತದತ್ತ ಸರಿಯುತ್ತಿದ್ದ ಸಂದರ್ಭದಲ್ಲಿ ಕೋವಿಡ್ ಸಾಂಕ್ರಾಮಿಕವು ಬಂದು, ಅದಾಗಲೇ ಕುಂಟುತ್ತಿದ್ದ ಜಾಗತಿಕ ಆರ್ಥಿಕತೆಯನ್ನು ಧ್ವಂಸ ಮಾಡಿದೆ. ಅಂತರರಾಷ್ಟ್ರೀಯ ಹಣಕಾಸು ಬಂಡವಾಳದ ನೇತೃತ್ವದ ವಸಾಹತುಶಾಹಿ ನವ-ಉದಾರವಾದೀ ಜಾಗತೀಕರಣವು ಯಾವುದೇ ಪರಿಹಾರ ಒದಗಿಸುವಲ್ಲಿ ತನ್ನ ಸಂಪೂರ್ಣ ದಿವಾಳಿತನವನ್ನು ತೋರಿಸುತ್ತಿದೆ.

ಚೀನಾ ಜನತಾ ಗಣತಂತ್ರವು ಕೋವಿಡ್ ಸಾಂಕ್ರಾಮಿಕವನ್ನು ನಿಭಾಯಿಸಿದ ಮತ್ತು ತಡೆದು ನಿಲ್ಲಿಸಿದ ಹಾಗೂ ತನ್ನ ಸಮಾಜ ಮತ್ತು ಆರ್ಥಿಕತೆಯನ್ನು ಎಲ್ಲ ಮುನ್ನೆಚ್ಚರಿಕೆಗಳೊಂದಿಗೆ ಮತ್ತೆ ತೆರೆದು, ಆರ್ಥಿಕತೆಯನ್ನು ಬೆಳವಣಿಗೆಯ ಪಥದಲ್ಲಿ ಪುನಃ ತೆಗೆದುಕೊಂಡು ಹೋಗುತ್ತಿರುವ ಮಾದರಿ ನಡೆಯು ಬಂಡವಾಳಶಾಹಿಗೆ ಹೋಲಿಸಿದರೆ ಸಮಾಜವಾದವು ಒಂದು ವ್ಯವಸ್ಥೆಯಾಗಿ ಹೇಗೆ ಮೇಲ್ಮಟ್ಟದ್ದು ಎಂಬುದನ್ನು ಸಾಬೀತು ಮಾಡುವ, ಜಗತ್ತಿಗೆ ಒಂದು ಪಾಟವಾಗಿದೆ.

ಚೀನಾ ಕಮ್ಯುನಿಸ್ಟ್ ಪಕ್ಷದ ಈ ಕ್ರಮಗಳ ಮುತುವರ್ಜಿಯಿಂದಾಗಿ ಚೀನಾಕ್ಕೆ 2020 ರೊಳಗೆ ಸಂಪೂರ್ಣವಾಗಿ ಬಡತನವನ್ನು ನಿರ್ಮೂಲನೆ ಮಾಡಲು, ಪ್ರತಿ ವರ್ಷವೂ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಠಿ ಮಾಡುವ ಮೂಲಕ ನಿರುದ್ಯೋಗವನ್ನು ತಗ್ಗಿಸಲು. ತನ್ನ ಆರೋಗ್ಯಪಾಲನೆ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ವಿಶ್ವಮಾನ್ಯ ಮೂಲ ಸೌಕರ್ಯಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ಸಾಧ್ಯವಾಗಿದೆ. ಚೀನಾ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಮಾಡಿದ ಹೂಡಿಕೆಗಳ ಪ್ರಯೋಜನಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯ ಸ್ವರೂಪದಲ್ಲಿ ಅಪಾರವಾಗಿ ಪಡೆಯುತ್ತಿದೆ. ಅಸಮಾನತೆ ಮತ್ತು ಭಷ್ಟಾಚಾರವನ್ನು ನಿರ್ಮೂಲಗೊಳಿಸುವ, ಮತ್ತು ಜೀವನದ ಗುಣಮಟ್ಟವನ್ನು ಎತ್ತರಿಸುವ ನಿಮ್ಮ ಪ್ರಯತ್ನಗಳು ಶ್ಲಾಘನಾರ್ಹ.

ನಿಮ್ಮ ಯಶಸ್ಸುಗಳನ್ನು ಮತ್ತು ನಿಮ್ಮದೇ ಸ್ವಯಂ ವಿಮರ್ಶಾತ್ಮಕ ಸರಿಪಡಿಕೆಗಳಿಂದ ಕಲಿಯುವುದನ್ನು ಶ್ಲಾಘಿಸತ್ತಲೇ ಸಿಪಿಐ(ಎಂ) ತನ್ನ ಕ್ರಾಂತಿಕಾರಿ ಶುಭಾಶಯಗಳನ್ನು ವ್ಯಕ್ತಮಾಡುತ್ತದೆ, ಮತ್ತು ಒಂದು “ಸಮೃದ್ಧಿಶೀಲ, ಬಲಿಷ್ಠ, ಪ್ರಜಾಸತ್ತಾತ್ಮಕ, ಸಾಂಸ್ಕೃತಿಕವಾಗಿ ಮುಂದುವರಿದ ಮತ್ತು ಸಾಮರಸ್ಯದ ಆಧುನಿಕ ಸಮಾಜವಾದಿ ದೇಶ”ವನ್ನು 2049 ರೊಳಗೆ ಕಟ್ಟುವ ನಿಮ್ಮ ಇನ್ನೊಂದು ಶತಮಾನದ ಗುರಿಯು ಈಡೇರಲಿ ಹಾರೈಸುತ್ತದೆ.

ಚೀನಾ ಕಮ್ಯುನಿಸ್ಟ್‍ ಪಕ್ಷದ ನಾಯಕತ್ವದಲ್ಲಿ ಚೀನಾ ಜನತಾ ಗಣತಂತ್ರವು ಒಂದು ಶಾಂತಿಯುತ ವಿದೇಶಾಂಗ ನೀತಿಯನ್ನು ಅನುಸರಿಸುತ್ತದೆ, ಉತ್ತಮ ನೆರೆಹೊರೆ ಬಾಂಧವ್ಯಗಳನ್ನು ಗಟ್ಟಿಗೊಳಿಸುತ್ತದೆ ಮತ್ತು ದಕ್ಷಿಣ ಏಷಿಯಾ ಹಾಗೂ ವಿಶ್ವದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡುತ್ತದೆ ಎಂಬ ವಿಶ್ವಾಸ ಸಿಪಿಐ(ಎಂ) ಗೆ ಇದೆ.

ಮುಂದಿನ ದಿನಗಳಲ್ಲಿ ನಮ್ಮ ಎರಡು ಪಕ್ಷಗಳ ನಡುವೆ ಸೋದರ ಕಮ್ಯುನಿಸ್ಟ್ ಬಾಂಧವ್ಯಗಳು ಬಲಗೊಳ್ಳುತ್ತಾ ಹೋಗುತ್ತವೆ. ಮತ್ತು ನಮ್ಮ ಜನಗಳು ಹಾಗೂ ಸರ್ಕಾರಗಳ ನಡುವಿನ ಸಂಬಂಧಗಳು ಉತ್ತಮಗೊಳ್ಳುವ ಕೊಡುಗೆ ನೀಡುತ್ತದೆ ಎಂಬ ವಿಶ್ವಾಸವನ್ನು ಸಿಪಿಐ(ಎಂ) ಹೊಂದಿದೆ.

ಮಾರ್ಕ್ಸ್ ವಾದ-ಲೆನಿನ್‌ವಾದ ಚಿರಾಯುವಾಗಲಿ
ಚೀನಾ ಕಮ್ಯುನಿಸ್ಟ್ ಪಕ್ಷ ಚಿರಾಯುವಾಗಲಿ
ಸಾಮ್ರಾಜ್ಯಶಾಹಿಗೆ ಧಿಕ್ಕಾರ 

ಅನುವಾದ: ಶೃಂಶನಾ

Leave a Reply

Your email address will not be published. Required fields are marked *