ನೀಟ್: ಉಕ್ರೇನ್ ಬಿಕ್ಕಟ್ಟು ತೆರೆದಿಟ್ಟ ಸತ್ಯಗಳು

ಡಾ. ಎಸ್‌.ವೈ. ಗುರುಶಾಂತ್‌

ಯುದ್ಧಗ್ರಸ್ತ ಉಕ್ರೇನಿನಲ್ಲಿ ಸಿಲುಕಿದ್ದ ಬಹುತೇಕ ವಿದ್ಯಾರ್ಥಿಗಳನ್ನು ಕರ್ನಾಟಕಕ್ಕೆ ಕರೆದು ತಂದಿರುವ ಸುದ್ದಿಯ ನಡುವೆ ಇನ್ನೂ 18 ಜನ ನಾಪತ್ತೆಯಾಗಿದ್ದಾರೆ ಎನ್ನುವುದು ಆತಂಕವನ್ನು ಉಳಿಸಿದೆ. ಈ ಪ್ರಕ್ರಿಯೆ ಇನ್ನಷ್ಟು ಮೊದಲೇ ಆರಂಭಿಸಿದ್ದರೆ ಎದುರಾದ ಅಪಾಯಗಳು ಕಡಿಮೆಯಾಗುತ್ತಿದ್ದವು ಎನ್ನುವ ಮಾತುಗಳೂ ಇವೆ. ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳ ಸಾವಿನ ಘಟನೆಗಳ ನಡುವೆಯೂ ಉಳಿದವರು ಸುರಕ್ಷಿತವಾಗಿ ಹಿಂದಿರುಗಿದ್ದು, ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಸರ್ಕಾರ ವಹಿಸಬೇಕಾದ ಒಂದು ಮಹತ್ವದ ಹೊಣೆಗಾರಿಕೆಯನ್ನು ಒಂದು ಪಕ್ಷ, ಒಬ್ಬ ವ್ಯಕ್ತಿಯ ಹಾಲಿವುಡ್ ಹನುಮಾನ್ ಸಾಹಸದ ಕಥೆಗೆ ಸಮೀಕರಿಸುವ ಪ್ರಯತ್ನಗಳು ವಿವೇಕದಿಂದಲೂ, ಸದಭಿರುಚಿಯಿಂದಲೂ ಕೂಡಿದ್ದಲ್ಲ. ಯಾರೂ ನಿರ್ವಹಿಸಲೇ ಬೇಕಿದ್ದ ಕರ್ತವ್ಯ ಇದಾಗಿದೆ. ಜಾಗತಿಕವಾಗಿ ಭಾರತಕ್ಕೆ ರಾಜತಾಂತ್ರಿಕವಾಗಿ ಮತ್ತು ತಾಂತ್ರಿಕವಾಗಿಯೂ ಕಾರ್ಯ ನಿರ್ವಹಿಸುಷ್ಟು ಸಾಮರ್ಥ್ಯ ಇದ್ದೇ ಇದೆ. ಆದರೆ ಅಧಿಕಾರದಲ್ಲಿರುವವರಿಗೆ ತಾವು ಮಾಡುವುದೆಲ್ಲವೂ ಚುನಾವಣೆಗಾಗಿ ಎಂದೇ ಭಾವಿಸಿರುವುದು ಮುಂದೊಮ್ಮೆ ಸರ್ಕಾರದ ನಾಗರಿಕ ಕರ್ತವ್ಯಗಳನ್ನು ಅದರ ಹೊಣೆಗಾರಿಕೆಗಳನ್ನು ಗೌಣಗೊಳಿಸಬಹುದು.

ಮುಖ್ಯವಾಗಿ, ಕರೆದು ತಂದ ಸಂಭ್ರಮದಲ್ಲಿ ತೇಲುವಾಗಲೇ  ಸುಮಾರು 18 ಸಾವಿರದಷ್ಟು ವಿದ್ಯಾರ್ಥಿಗಳು ವೈದ್ಯಕೀಯ ವ್ಯಾಸಂಗಕ್ಕೆ ಭಾರತದಂತಹ ದೊಡ್ಡ ದೇಶದಿಂದ ಉಕ್ರೇನ್ ನಂತಹ ಸಣ್ಣ ದೇಶಕ್ಕೆ ಯಾಕೆ ಹೋಗಬೇಕಾಯಿತು? ಎನ್ನುವುದರ ಜೊತೆಗೆ ವೈದ್ಯಕೀಯ ಪ್ರವೇಶಾವಕಾಶಕ್ಕಾಗಿ ನೀಟ್ ನಂತಹ ಪರೀಕ್ಷೆಗಳು ಅಗತ್ಯವೇ? ರಾಜ್ಯಗಳಿಗೆ ಆಗುತ್ತಿರುವ ನಷ್ಟವೇನು? ಅದನ್ನು ರದ್ದುಪಡಿಸ ಬಾರದೇಕೆ? ಭಾರತದೊಳಗೆ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸಿ ಮತ್ತಷ್ಟು ಕಲ್ಪಿಸಬಾರದೇಕೆ? ಎಂಬಂತಹ ಅತಿ ಮಹತ್ವದ ಪ್ರಶ್ನೆಗಳನ್ನು ಮಂಕಾಗಿಸಿ ಮೂಲೆಗೆ ತಳ್ಳುತ್ತಿರುವುದು ವಿಷಾದನೀಯ. ’ಆಪರೇಷನ್ ಗಂಗಾ’ ದಲ್ಲಿ ವಿದ್ಯಾರ್ಥಿಗಳನ್ನು ಕರೆದು ತಂದಿರುವುದನ್ನು ಬಲು ರೋಚಕವಾಗಿ ಬಿಂಬಿಸುತ್ತಾ, ಧಾರವಾಹಿಗಳನ್ನು ಹರಿಸುತ್ತಿರುವ ಮಾಧ್ಯಮಗಳು ಇಂತಹ ಗಹನ ಪ್ರಶ್ನೆಗಳ ಸುತ್ತ ಚರ್ಚೆ ಬೆಳೆಸಿದ್ದರೆ ಆಳುವವರ ಕಣ್ಣು ತೆರೆಯಬಹುದಿತ್ತು, ಚುಚ್ಚಬಹುದಿತ್ತು.

ಹೀಗಿದ್ದಾಗ್ಯೂ ಈ ಸನ್ನಿವೇಶದಲ್ಲಿ ನೀಟ್ ಕುರಿತ ಎತ್ತಲಾದ ಪ್ರಶ್ನೆಗಳಿಂದ ಆಳುವವರು ತಪ್ಪಿಸಿಕೊಳ್ಳುವಂತಿಲ್ಲ. ಯಾಕೆಂದರೆ ವಿದ್ಯಾರ್ಥಿಗಳ ಬಹುದೊಡ್ಡ ವಲಸೆಗೆ ನೀಟ್ ಮತ್ತು ಅದಕ್ಕೆ ಮೂಲವಾಗಿರುವ ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣದ ವ್ಯವಸ್ಥೆಯ ಪ್ರಶ್ನೆಯೂ ಇದೆ. ಈ ಕಾರಣದಿಂದ ಉಕ್ರೇನ್ ಮಾತ್ರವಲ್ಲ, ಚೀನಾ ಒಳಗೊಂಡು ಹಲವಾರು ದೊಡ್ಡ, ಸಣ್ಣ ದೇಶಗಳಿಗೂ ವ್ಯಾಸಂಗದ ವಲಸೆಯ ಮಹಾಪೂರವೇ ಇದೆ.

ಆರೋಗ್ಯ ಕ್ಷೇತ್ರದ ಕನಿಷ್ಠ ಅಗತ್ಯಗಳನ್ನು ಪೂರೈಸಬೇಕಾದರೂ, ಇನ್ನೂ ಲಕ್ಷಾಂತರ ವೈದ್ಯರು ಮತ್ತು ಅದಕ್ಕೂ ಮೀರಿದ ಸಿಬ್ಬಂದಿ, ಮೂಲ ಸೌಕರ್ಯಗಳ ಅಗತ್ಯವಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ರೂಪಿಸಿದ ಮಾನದಂಡದಂತೆ 1: 1000 ವೈದ್ಯ-ರೋಗಿಗಳ ಅನುಪಾತವನ್ನು ಕನಿಷ್ಠ ಅವಶ್ಯಕವೆಂದು ನಿಗದಿಗೊಳಿಸಿದೆ. 2021ರ ನೀಟ್ ಪ್ರವೇಶ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ 15,44,275 ಇದ್ದು ಇದರಲ್ಲಿ 8,70,075 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅರ್ಜಿ ಹಾಕಲು ನೀಟ್ ನಲ್ಲಿ ಅರ್ಹರಾಗಿರುತ್ತಾರೆ. ಆದರೆ ಇವರಲ್ಲಿ ಪ್ರವೇಶ ಅವಕಾಶ ದೊರೆಯುವುದು ಕೇವಲ 88,370 ವಿದ್ಯಾರ್ಥಿಗಳಿಗೆ ಮಾತ್ರ. ಇಂದು ಭಾರತದಲ್ಲಿ ಸರ್ಕಾರಿ 269,  ಖಾಸಗಿ 273 ಕ್ಷೇತ್ರದ ಒಟ್ಟು 542 ಮೆಡಿಕಲ್ ಕಾಲೇಜುಗಳಿವೆ. ಇದರಲ್ಲಿ ಕ್ರಮವಾಗಿ 44,555 – 43,815 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಅವಕಾಶವಿದೆ. ಅಂದರೆ ಶೇ.90 ರಷ್ಟು ಆಕಾಂಕ್ಷೆಗಳು ಅವಕಾಶ ವಂಚಿತ ಆಗುತ್ತಿರುವುದರಿಂದ ವ್ಯಾಸಂಗಕ್ಕೆ ಅನ್ಯ ಹಾದಿಗಳನ್ನು ಹುಡುಕಿಕೊಳ್ಳದೇ ಗತ್ಯಂತರವಿಲ್ಲ. ಮೇಲಾಗಿ, ಮೆಡಿಕಲ್ ಸೀಟು ಪಡೆಯಲು ಅತಿ ದುಬಾರಿ ಶುಲ್ಕ, ಡೊನೇಶನ್ ಭರಿಸಲು ಸಾಮಾನ್ಯ ಪ್ರತಿಭಾನ್ವಿತರಿಗೆ ಅಸಾಧ್ಯವೇ ಸರಿ. ಹೀಗಾಗಿ ಬಹುತೇಕ ಆಕಾಂಕ್ಷೆಗಳು ಚೀನಾ ಉಕ್ರೇನ್ ಮುಂತಾದ ದೇಶಗಳಿಗೆ ಹೋಗದೇ ಗತ್ಯಂತರವಿಲ್ಲ. ಮೇಲಾಗಿ, ಅಲ್ಲಿ ವೆಚ್ಚವೂ ಕಡಿಮೆ. ಇದಾವುದನ್ನು ಗಂಭೀರವಾಗಿ ಗಣಿಸದೆ ’ವಿದೇಶಕ್ಕೆ ಹೋದ ಶೇಕಡ 90ರಷ್ಟು ವಿದ್ಯಾರ್ಥಿಗಳು ಪ್ರತಿಭಾ ಹೀನರು’ ಎಂದು ಸಂಕಷ್ಟದಲ್ಲಿ ವಿದ್ಯಾರ್ಥಿಗಳು ಇರುವಾಗಲೇ ಕರ್ನಾಟಕದ ಸಂಸದ, ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಷಿ ಯವರು ಸಂವೇದನಾಹೀನರಾಗಿ ಮಾತನಾಡಿದ್ದು ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದೆ.

ನೀಟ್ ಪರೀಕ್ಷೆಯ ವ್ಯವಸ್ಥೆಯ ಮೊದಲು ರಾಜ್ಯಗಳಲ್ಲಿ ಸಿಇಟಿ ಯಂತಹ ವ್ಯವಸ್ಥೆಗಳ ಮೂಲಕ ತುಂಬಿ ಕೊಡಲಾಗುತ್ತಿತ್ತು. ಭಾರತ ಸರ್ಕಾರ ನೀಟ್ ವ್ಯವಸ್ಥೆಯನ್ನು ಜಾರಿಗೆ ತಂದ ಬಳಿಕ ಅದು ಅತ್ಯಂತ ಕೇಂದ್ರೀಯ ವ್ಯವಸ್ಥೆಯಾಯಿತು. ಶೇ 15ರಷ್ಟು ಅಖಿಲ ಭಾರತ ಮಟ್ಟದಿಂದ ಉಳಿದ ಶೇ 85 ರಾಜ್ಯಗಳ ವಿದ್ಯಾರ್ಥಿಗಳಿಗೆ ಎಂದಾದರೂ ನೀಟ್ ನಂತಹ ಪರೀಕ್ಷೆಯನ್ನು ಕಠಿಣ ಗೊಳಿಸಿರುವುದರಿಂದ ಸಿಬಿಎಸ್‌ಸಿಯ ಪಠ್ಯಗಳನ್ನು ಓದದ ರಾಜ್ಯಗಳ ಸಾಮಾನ್ಯ ವಿದ್ಯಾರ್ಥಿಗಳು ಹತ್ತಿರ ಸುಳಿಯಲು ಅಸಾಧ್ಯವಾಗುತ್ತದೆ. ವರ್ಷಗಟ್ಟಲೆ ತರಬೇತಿ ತೆಗೆದುಕೊಂಡು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಅದೇ ಒಂದು ಬೃಹತ್ ದಂಧೆಯಾಗಿದೆ. ಅಲ್ಲದೆ ಇದನ್ನು ನಡೆಸುವ ಬೃಹತ್ ಖಾಸಗಿ ಸಂಸ್ಥೆಗಳಿಗೆ ಲಕ್ಷಾಂತರ ಹಣ ವ್ಯಯಿಸುವುದು ಕಷ್ಟ. ಪ್ರವೇಶ ಅರ್ಹತೆ ಪಡೆದರೂ ವೈದ್ಯಕೀಯ ಶಿಕ್ಷಣದ ಶುಲ್ಕಗಳು ನಿಲುಕುವುದು ಅಸಾಧ್ಯ. ಹೀಗಾಗಿ ವೈದ್ಯಕೀಯ ಶಿಕ್ಷಣ ಲಕ್ಷಾಂತರ ಆಕಾಂಕ್ಷೆಗಳ ಪಾಲಿಗೆ ಗಗನಕುಸುಮವಾಗಿ, ಅವಕಾಶ ವಂಚಿತರಾಗಿ, ಹತಾಶರಾಗಿ ಕೆಲ ಮಕ್ಕಳು ಆತ್ಮಹತ್ಯೆ ಹಾದಿ ಹಿಡಿದಿದ್ದು ಘೋರ ಸನ್ನಿವೇಶಕ್ಕೆ ಸಾಕ್ಷಿ. ಹೀಗಾಗಿಯೇ, ನೀಟ್ ವ್ಯವಸ್ಥೆಯ ವಿರುದ್ಧ ವ್ಯಾಪಕ ವಿರೋಧ, ಆಕ್ರೋಶ ವ್ಯಕ್ತಗೊಂಡಿರುವುದು ಸಹಜವಾಗಿದೆ ಮತ್ತು ಸಕಾಲಿಕವಾಗಿದೆ.

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ಸಮವರ್ತಿ ಪಟ್ಟಿಯಲ್ಲಿರುವ ಶಿಕ್ಷಣವನ್ನು, ವೈದ್ಯಕೀಯ ಶಿಕ್ಷಣವನ್ನು ಪೂರ್ಣವಾಗಿ ಕೇಂದ್ರೀಕೃತ ಗೊಳಿಸಿರುವುದು ಅತ್ಯಂತ ಪ್ರಜಾಪ್ರಭುತ್ವ ವಿರೋಧಿಯಾದುದು. ಹಿಂದೆ 2011ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿರುವಾಗ ನೀಟ್ ವ್ಯವಸ್ಥೆಯನ್ನು ವಿರೋಧಿಸಿದ ನರೇಂದ್ರಮೋದಿಯವರು ಇಂದು ಅದರ ಸಮರ್ಥಕರಾಗಿರುವುದು, ಆಕ್ಷೇಪಗಳನ್ನು ಉಪೇಕ್ಷಿಸುತ್ತಿರುವುದರ ಅರ್ಥವೇನು? ವಿದೇಶದಿಂದ ವಾಪಸಾಗಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಪೂರ್ಣಗೊಳಿಸಲು ಅವಕಾಶ ಕಲ್ಪಿಸಿಕೊಡಿ ಎಂದು ಪ್ರಧಾನಿ ಗೋಗರೆಯುವ ದಯನೀಯತೆ ಏಕೆ? ಹಿಂದೆ ಅವರೊಂದಿಗೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಉತ್ತರಪ್ರದೇಶ, ತಮಿಳುನಾಡುಗಳು ಸಹ ವಿರೋಧಿಸಿದ್ದವು ಎನ್ನುವುದನ್ನು ಗಮನಿಸಬೇಕು.

ಇದರೊಟ್ಟಿಗೆ ನೀಟ್ ವ್ಯವಸ್ಥೆ ಅದರ ಜಾರಿ ಹಲವಾರು ಗೊಂದಲ, ವಿವಾದ, ಅವಾಂತರ, ಅವಘಡಗಳಿಗೆ ಕಾರಣವಾಗಿರುವ ಬಹು ದೊಡ್ಡ ಪಟ್ಟಿಯೇ ಇದೆ. ಪರೀಕ್ಷೆಗೆ ದುಬಾರಿ ತರಬೇತಿ ಪಡೆಯಲಾಗದ್ದು ಒಂದಾದರೆ ಪ್ರಾದೇಶಿಕ ಭಾಷೆಯಲ್ಲಿ ಓದಿದ ಮಕ್ಕಳಿಗೆ ಅನಾನುಕೂಲವಾಗುವುದು ಮತ್ತೊಂದು. ಕೇಂದ್ರದ ಪಠ್ಯಕ್ರಮದಲ್ಲಿ ಕಲಿತವರಿಗೆ ಅನುಕೂಲಕರವಿದ್ದರೆ ರಾಜ್ಯಗಳ ಪಠ್ಯಕ್ರಮದಲ್ಲಿ ಓದಿದವರಿಗೆ ವಿಪರೀತ ಅನಾನುಕೂಲ. ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಲ್ಲಿ ತಮಿಳು ಭಾಷೆಯಲ್ಲಿ ತಪ್ಪಾಗಿ ಅನುವಾದಗೊಂಡಿದ್ದು 49 ವಿವಾದಾತ್ಮಕ ಪ್ರಶ್ನೆಗಳಿಗೆ 196 ಅಂಕಗಳನ್ನು ನೀಡಲು 2018ರಲ್ಲಿ ಮದ್ರಾಸ್ ಹೈಕೋರ್ಟ್ ಮಧ್ಯಪ್ರವೇಶಿಸಿ ನಿರ್ದೇಶಿಸಿತು. ಆದರೆ ಅದನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದರಿಂದ 24,000 ವಿದ್ಯಾರ್ಥಿಗಳು ಅತಂತ್ರರಾಗಬೇಕಾಯಿತು. ಹಾಗೆಯೇ, ಆಯುಷ್ ವಿದ್ಯಾರ್ಥಿಗಳು ನೀಟ್ ಮೂಲಕವೇ ಆಯ್ಕೆಯಾಗಬೇಕು ಎಂಬ ಪ್ರಕ್ರಿಯೆ ಸೂಚನೆಯನ್ನು ಕರ್ನಾಟಕ ಹೈಕೋರ್ಟ್ ಬದಲಾಯಿಸಿತು. ಇದರಿಂದ ನೀಟ್ ನಲ್ಲಿ ಅರ್ಹತೆ ಪಡೆಯದಿದ್ದರೂ ಸಹ ಪ್ರವೇಶ ಪಡೆಯಲು ಸಾಧ್ಯವಾಯಿತು. ಐದು ಪ್ರಶ್ನೆಗಳನ್ನು ಬಂಗಾಳಿ ಭಾಷೆಯಲ್ಲಿ ತಪ್ಪಾಗಿ ಅನುವಾದಿಸಲಾಗಿದೆ ಎನ್ನುವ ಪ್ರಶ್ನೆಗೆ 2018ರಲ್ಲಿ ಕೋಲ್ಕತ್ತಾ ಹೈಕೋರ್ಟ್ 20 ಅಂಕಗಳನ್ನು ನೀಡಲು ನಿರ್ದೇಶಿಸಿತು. ಶೇ 15 ಸೀಟುಗಳಿಗೆ ಅಖಿಲ ಭಾರತ ಕೋಟಾದ ಅರ್ಹರಾಗಿದ್ದ ಆಂಧ್ರಪ್ರದೇಶ, ತೆಲಂಗಾಣ  ಮುಂತಾದ ರಾಜ್ಯಗಳ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಪಟ್ಟಿಯಲ್ಲಿ 27 ಸರ್ಕಾರಿ ಮೆಡಿಕಲ್ ಕಾಲೇಜುಗಳ ಹೆಸರು ನಾಪತ್ತೆಯಾಗಿದ್ದು ಬೆಳಕಿಗೆ ಬಂತು. 2019 ಜುಲೈ 3ರಂದು ಕೌನ್ಸಿಲಿಂಗ್ ನಲ್ಲಿ 222 ಕಾಲೇಜುಗಳ ಬದಲಾಗಿ 195 ಕಾಲೇಜುಗಳನ್ನು ಮಾತ್ರವೇ ತೋರಿಸಲಾಗಿತ್ತು. 2018ರ ಮೇನಲ್ಲಿ ಉತ್ತರಗಳ ಕಿ ತಪ್ಪುಗಳಿಂದ ಕೂಡಿದ್ದಕ್ಕೆ ಆಕ್ಷೇಪ ಎದ್ದಿತ್ತು. ಮೇಲಾಗಿ ನೀಟ್ ಗೆ ವಯೋಮಿತಿಯ ಅರ್ಹತೆಯನ್ನು ವಿಧಿಸಲಾಗಿತ್ತು. ಇತ್ತೀಚೆಗೆ ತೆಗೆದು ಹಾಕಲಾಗಿದೆ. ಹನ್ನೆರಡನೇ ತರಗತಿಯಲ್ಲಿ ಅದೆಷ್ಟೇ ಉನ್ನತ ಅಂಕ ಗಳಿಸಿದರೂ ನೀಟ್ ವ್ಯವಸ್ಥೆ ನಿಷ್ಪ್ರಯೋಜಕಗೊಳಿಸುತ್ತದೆ.

ನೀಟ್ ವ್ಯವಸ್ಥೆಯು ಖಾಸಗಿ ಶಿಕ್ಷಣದ ಸಂಸ್ಥೆಗಳು, ಸರಕಾರ, ಆಡಳಿತದ ಮಹಾ ಮಾಫಿಯಾಗಳ ಕೂಟ ಎನ್ನುವುದು ನಿಚ್ಚಳವಾಗಿದೆ. ಆಗಾಗ ಪ್ರಶ್ನೆಪತ್ರಿಕೆಗಳು ಬಯಲಾಗುವುದು, ನಿರ್ದಿಷ್ಟ ಸಂಸ್ಥೆಗಳ ಮೂಲಕ ತರಬೇತಿ ಪಡೆದವರು ಆಯ್ಕೆಯಾಗುವುದು ಎನ್ನುವ ಪ್ರಶ್ನೆಯೂ ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ.

ನೀಟ್ ನಂತಹ ವ್ಯವಸ್ಥೆಗೆ ಹಲವು ರಾಜ್ಯಗಳು ತೀವ್ರ ಆಕ್ಷೇಪಗಳನ್ನು ವ್ಯಕ್ತಪಡಿಸಿ ಅದನ್ನು ಕಿತ್ತು ಹಾಕಲು ಮತ್ತು ಆಯ್ಕೆ ಪ್ರಕ್ರಿಯೆಗಳನ್ನು ರಾಜ್ಯಗಳೇ ಮಾಡಲು ಅವಕಾಶ ನೀಡಲು ಕೋರಿವೆ. ಹಾಗಾಗಿ ತಮಿಳುನಾಡಿನ ವಿಧಾನಸಭೆ 2021 ಸೆಪ್ಟೆಂಬರ್‌ರಲ್ಲಿ ಮಸೂದೆಯನ್ನು ಅಂಗೀಕರಿಸಿ ರಾಜ್ಯಪಾಲರ ಅಂಕಿತಕ್ಕೆ ಕಳಿಸಿತ್ತು. ಇದು ಬಡ ವಿದ್ಯಾರ್ಥಿಗಳ ವಿರೋಧವಾಗಿದೆ ಎಂದು ರಾಜ್ಯಪಾಲರು ವಾಪಸ್ಸು ಕಳಿಸಿದರು. ಆದರೆ ಪಟ್ಟು ಬಿಡದ ಸರ್ಕಾರ ಮತ್ತೆ ಅಂಗೀಕರಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದೆ. ಇದು ಅಂಕಿತವಾದರೆ ತಮಿಳುನಾಡು ವಿದ್ಯಾರ್ಥಿಗಳು 12ನೇ ತರಗತಿಯ ಅಂಕಗಳ ಆಧಾರದಲ್ಲಿ ವೈದ್ಯಕೀಯ ಸೀಟುಗಳನ್ನು ಪಡೆಯಬಹುದು ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ಖಾಸಗಿ ಕಾಲೇಜುಗಳಲ್ಲಿ ರಾಜ್ಯ ಶೇಕಡ 85 ರಷ್ಟು ವಿದ್ಯಾರ್ಥಿಗಳು ಪಡೆಯಬಹುದು.

ಎಲ್ಲಾ ಅವಾಂತರ ಅನಾಹುತಗಳ ಹಿನ್ನೆಲೆಯಲ್ಲಿ ನೀಟ್- ಜೆ.ಇ.ಇ. ಯಂತಹ ಕೇಂದ್ರೀಯ ಪರೀಕ್ಷಾ ವ್ಯವಸ್ಥೆಯನ್ನು ರದ್ದುಗೊಳಿಸಬೇಕು, ಮಾತ್ರವಲ್ಲ ಪ್ರಮುಖವಾಗಿ ವೈದ್ಯಕೀಯ ಶಿಕ್ಷಣ, ವೃತ್ತಿ ಶಿಕ್ಷಣವು ಸೇರಿ ಶಿಕ್ಷಣರಂಗದಲ್ಲಿ ಖಾಸಗೀಕರಣದಿಂದ ತಪ್ಪಿಸಬೇಕು. ಹೆಚ್ಚಾಗಿ ಸರ್ಕಾರವೇ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಎಲ್ಲರಿಗೂ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ವಿದ್ಯಾರ್ಥಿಗಳು ಶಿಕ್ಷಣದ ಆಕಾಂಕ್ಷೆಗಳನ್ನು ಉಳಿಸಿಕೊಳ್ಳುವುದು ಮಾತ್ರವಲ್ಲ ರಾಜ್ಯಗಳ ಸ್ವಾಯತ್ತತೆ, ಒಕ್ಕೂಟದ ಹಕ್ಕುಗಳನ್ನು ರಕ್ಷಿಸಿ, ದಕ್ಕಿಸಿಕೊಳ್ಳುವ ಹೋರಾಟವಾಗಿದೆ ಕೂಡ.

Leave a Reply

Your email address will not be published. Required fields are marked *