ಉಕ್ರೇನ್ ಸಂಘರ್ಷ: ವಿರೋಧಾಭಾಸಗಳ ಆಟಾಟೋಪ

ಪ್ರಕಾಶ್ ಕಾರಟ್

prakash karatಸೋವಿಯತ್ ಒಕ್ಕೂಟದ ಐತಿಹಾಸಿಕ ವಿಘಟನೆ ಮತ್ತು ಪೂರ್ವ ಯುರೋಪ್ ದೇಶಗಳ ಸಮಾಜವಾದಿ ವ್ಯವಸ್ಥೆಯ ಪತನದ ಸಂದರ್ಭದಲ್ಲಿ ಹಾಗೂ ಅದರಿಂದಾಗಿ ಉದ್ಭವಿಸಿದ ಎರಡು ಶಕ್ತಿಗಳನ್ನು ಗಮನಿಸದೆ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ವಿವಿಧ ಬಗೆಯ ಜನಾಂಗೀಯ ರಾಷ್ಟ್ರೀಯವಾದ (ಎಥ್ನಿಕ್ ನ್ಯಾಷನಲಿಸಂ) ಮತ್ತು ಸಮಾಜವಾದಿ ಬಣದಲ್ಲಿದ್ದ ಇಡೀ ಐರೋಪ್ಯ ವಲಯದ ಮೇಲೆ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ಮಿತ್ರಕೂಟದ ಆಕ್ರಮಣಾತ್ಮಕ ದಾಳಿ – ಇವೇ ಆ ಎರಡು ಶಕ್ತಿಗಳು.

`ಬರ್ಬರ ಸರ್ವಾಧಿಕಾರಿ ಪುಟಿನ್’ ಉಕ್ರೇನ್ ವಿರುದ್ಧ ನಡೆಸಿರುವ ಆಕ್ರಮಣಕ್ಕೆ ನೈತಿಕ ಸಮರ್ಥನೆಯನ್ನು ಅಮೆರಿಕ-ನೇತೃತ್ವದ ನ್ಯಾಟೊ ಕೇಳುತ್ತಿರುವುದು ಬೂಟಾಟಿಕೆ ಮತ್ತು ಇಬ್ಬಗೆ ಧೋರಣೆ (ಡಬಲ್ ಸ್ಟ್ಯಾಂಡರ್ಡ್) ಅಲ್ಲದೇ ಬೇರೇನೂ ಅಲ್ಲ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ರ ಘೋಷಣೆಗಳನ್ನು ನೋಡಿದರೆ ಎರಡನೇ ವಿಶ್ವ ಯುದ್ಧದ ನಂತರ ಹಾಗೂ ಶೀತಲ ಸಮರ ಕೊನೆಗೊಂಡ ನಂತರ ಇದೇ ಮೊದಲ ಬಾರಿಗೆ ಯುರೋಪ್‌ನಲ್ಲಿ ಶಾಂತಿ ಭಂಗವಾಗಿದೆಯೇನೋ  ಎಂದು ಭಾವಿಸಬೇಕು. 1991ರಲ್ಲಿ ಸೋವಿಯತ್ ಒಕ್ಕೂಟ ವಿಸರ್ಜನೆಗೊಂಡ ನಂತರ ಯುರೋಪ್‌ನಲ್ಲಿ ಮೊದಲ ಯುದ್ಧ ನಡೆದದ್ದು 1999ರಲ್ಲಿ ಸೆರ್ಬಿಯಾ ಮತ್ತು ಯುಗೋಸ್ಲಾವಿಯಾ ವಿರುದ್ಧ ನ್ಯಾಟೊ ಆಕ್ರಮಣದಿಂದ ಎನ್ನುವುದನ್ನು ಅವರು ಮರೆತೇ ಹೋದಂತೆ ಕಾಣುತ್ತದೆ. ಯುಗೋಸ್ಲಾವಿಯಾವನ್ನು ಛಿದ್ರಗೊಳಿಸುವ ಗುರಿಯನ್ನು ಈಡೇರಿಸಕೊಳ್ಳುವ ಗುರಿ ಸಾಧನೆಗಾಗಿ ನ್ಯಾಟೋ ಪಡೆಗಳು ಬೆಲ್ಗ್ರೇಡ್ ಮತ್ತು ಇತರ ಸ್ಥಳಗಳ ಮೇಲೆ ಸತತ 78 ದಿನ ಕಾಲ ಬಾಂಬ್ ದಾಳಿ ನಡೆಸಿದ್ದವು.

ಶೀತಲ ಸಮರ ಮುಗಿದ ನಂತರ, ತಾನು ಅಮೆರಿಕದ ಜಾಗತಿಕ ಏಕಚಕ್ರಾಧಿಪತ್ಯದ ಸಾಧನ ಎನ್ನುವುದನ್ನು ನ್ಯಾಟೊ ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ಅಮೆರಿಕ ಮತ್ತು ಬ್ರಿಟನ್ ಸಹಿತ ಅದರ ಮಿತ್ರ ಪಕ್ಷಗಳು ಇರಾಕ್ ಮೇಲೆ ಆಕ್ರಮಣ ನಡೆಸಿ ಅದನ್ನು ನಾಶ ಮಾಡಿದವು. ಹತ್ತು ಲಕ್ಷಕ್ಕೂ ಅಧಿಕ ಇರಾಕಿಗಳು ಮೃತಪಟ್ಟರು. ಸದ್ದಾಂ ಹುಸೇನ್ ಆಡಳಿತದಲ್ಲಿ ಸಾಮೂಹಿಕ ವಿನಾಶದ ಅಸ್ತ್ರಗಳಿವೆ ಎಂಬ ನೆಪವೊಡ್ಡಿ ದಾಳಿ ನಡೆಸಲಾಗಿತ್ತು. ಅದಾದ ನಂತರ, ನ್ಯಾಟೊ ಪಡೆಗಳು ಆಫ್ಘಾನಿಸ್ತಾನವನ್ನು ಆಕ್ರಮಿಸಿ 20 ವರ್ಷ ಕಾರುಬಾರು ನಡೆಸಿದವು. ನ್ಯಾಟೊ ಪಾಲುದಾರರು ಸ್ವಾಯತ್ತ ದೇಶಗಳಾದ ಲಿಬ್ಯಾ ಮತ್ತು ಸಿರಿಯಾ ಮೇಲೆ ಆಕ್ರಮಣ ನಡೆಸಿದ್ದು ಅದರ ಘೋರ ಪರಿಣಾಮ ಈಗಲೂ ಕಾಣಿಸುತ್ತಿದೆ.

ಆದ್ದರಿಂದ, ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಆಕ್ರಮಣವನ್ನು ವಿಫಲಗೊಳಿಸಲು ಅಮೆರಿಕ ನಾಯಕತ್ವದ ನ್ಯಾಟೊ ಬದ್ಧವಾಗಿದೆ ಎಂದು ಎಬ್ಬಿಸಿರುವ ಹುಯಿಲನ್ನು ಜಗತ್ತಿನ ಬಹುತೇಕ ಜನರು ನಂಬಲಾರರು. ಅದರಲ್ಲೂ ವಿಶೇಷವಾಗಿ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಅದನ್ನು ನಂಬಲು ಯಾರೂ ತಯಾರಿಲ್ಲ.

ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಆಕ್ರಮಣವು ಗೊಂದಲಮಯ ವಿಶ್ಲೇಷಣಾ ಲೆಕ್ಕಾಚಾರ ಮತ್ತು ಪ್ರತಿಕ್ರಿಯೆಯನ್ನು ಸೃಷ್ಟಿಸಿದೆ. ಇದು ವೈವಿಧ್ಯಮಯ ವಿರೋಧಾಭಾಸಗಳ ಪರಿಣಾಮವಾಗಿದೆ. ಸೋವಿಯತ್ ಒಕ್ಕೂಟದ ಐತಿಹಾಸಿಕ ವಿಘಟನೆ ಮತ್ತು ಪೂರ್ವ ಯುರೋಪ್ ದೇಶಗಳ ಸಮಾಜವಾದಿ ವ್ಯವಸ್ಥೆಯ ಪತನದ ಸಂದರ್ಭದಲ್ಲಿ ಹಾಗೂ ಅದರಿಂದಾಗಿ ಉದ್ಭವಿಸಿದ ಎರಡು ಶಕ್ತಿಗಳನ್ನು ಗಮನಿಸದೆ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ವಿವಿಧ ಬಗೆಯ ಜನಾಂಗೀಯ ರಾಷ್ಟ್ರೀಯವಾದ (ಎಥ್ನಿಕ್ ನ್ಯಾಷನಲಿಸಂ) ಮತ್ತು ಸಮಾಜವಾದಿ ಬಣದಲ್ಲಿದ್ದ ಇಡೀ ಐರೋಪ್ಯ ವಲಯದ ಮೇಲೆ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ಮಿತ್ರಕೂಟದ ಆಕ್ರಮಣಾತ್ಮಕ ದಾಳಿ – ಇವೇ ಆ ಎರಡು ಶಕ್ತಿಗಳು.

1991ರಲ್ಲಿ ಶೀತಲ ಸಮರ ಕೊನೆಗೊಂಡ ಕೆಲವೇ ತಿಂಗಳುಗಳಲ್ಲಿ, ಏಕ ಧ್ರುವೀಯ ಜಗತ್ತಿನಲ್ಲಿ ಅಮೆರಿಕ ಸಾಮ್ರಾಜ್ಯಶಾಹಿಯ ಏಕಚಕ್ರಾಧಿಪತ್ಯ ಸ್ಥಾಪಿಸಲು ಅಮೆರಿಕದ ಆಳುವ ವರ್ಗಗಳ ವಲಯದವರು ನಿರ್ಧರಿಸಿದರು. ‘ಭವಿಷ್ಯದಲ್ಲಿ ಯಾವುದೇ ಜಾಗತಿಕ ಸಂಭಾವ್ಯ ಪ್ರತಿಸ್ಪರ್ಧಿ ಹುಟ್ಟಿಕೊಳ್ಳುವುದನ್ನು ತಡೆಯಲು ಈಗ ನಮ್ಮ ನೀತಿಯು ಗಮನ ಕೇಂದ್ರೀಕರಿಸಬೇಕು’ ಎಂದು ಆಗ ಅಮೆರಿಕದ ರಕ್ಷಣಾ ನೀತಿಯ ಮಾರ್ಗಸೂಚಿ ಹೇಳಿತ್ತು. ಜಗತ್ತಿನ ಮೇಲೆ ಹಿಡಿತ ಸಾಧಿಸಲು ಸಾಮ್ರಾಜ್ಯಶಾಹಿ ಕಾರ್ಯತಂತ್ರವೇ ಆಗಿನಿಂದ ಭೌಗೋಳಿಕ ರಾಜಕೀಯ ಸಿದ್ಧಾಂತವಾಗಿದೆ. ಯುರೋಪ್ ಏಷ್ಯಾದಲ್ಲಿ (ಯುರೋ ಏಷ್ಯಾ) ರಷ್ಯಾ ಹೆಚ್ಚು ಪರಿಣಾಮಕಾರಿಯಲ್ಲದ ದೇಶವಾಗುವಂತೆ ಮಾಡುವ ದಿಸೆಯಲ್ಲಿ ಅದನ್ನು ದುರ್ಬಲಗೊಳಿಸುವುದು ಅದರಲ್ಲಿ ಮೊದಲ ಹೆಜ್ಜೆಯಾಗಿದೆ. ಪೂರ್ವದತ್ತ ನ್ಯಾಟೊ ವಿಸ್ತರಿಸುವುದು ಆ ನಿಟ್ಟಿನಲ್ಲಿ ಮುಖ್ಯ ಸಾಧನವಾಗಿದೆ. ಆಮೇಲೆ, ಚೀನಾದ ಹೆಚ್ಚುತ್ತಿರುವ ಪ್ರಭಾವವನ್ನು ತಡೆಯುವತ್ತ ಗಮನ ಕೇಂದ್ರೀಕರಿಸುವುದು ಮುಂದಿನ ಹೆಜ್ಜೆಯಾಗಿದೆ.

ಜರ್ಮನಿಯ ಏಕೀಕರಣದಿಂದಾಗಿ ಪೂರ್ವದತ್ತ ನ್ಯಾಟೊದ ವಿಸ್ತರಣೆ ಆಗುವುದಿಲ್ಲ ಎಂದು 1990ರಲ್ಲಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಯುಎಸ್‌ಎಸ್‌ಆರ್ ಅಧ್ಯಕ್ಷ ಮಿಖಾಯಿಲ್ ಗೊರ್ಬಚೆವ್‌ಗೆ ಭರವಸೆ ನೀಡಿದಾಗಿನಿಂದ ಈ ಬದ್ಧತೆಯು ಕೇವಲ ಬಾಯುಪಚಾರವಾಗಿಯಷ್ಟೇ ಉಳಿದಿದೆ. ಅಂದಿನಿಂದ ನ್ಯಾಟೊ ಐದು ಅಲೆಗಳನ್ನು ಕಂಡಿದೆ. ಅದರ ಪರಿಣಾಮವಾಗಿ ಇಡೀ ಪೂರ್ವ ಯುರೋಪ್ ಹಾಗೂ ಹಿಂದಿನ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಮೂರು ಬಾಲ್ಟಿಕ್ ದೇಶಗಳು ನ್ಯಾಟೊ ತೆಕ್ಕೆಗೆ ಬಂದಿವೆ.

ಜಾರ್ಜಿಯಾ ಮತ್ತು ಉಕ್ರೇನ್‌ಗೆ ತನ್ನ ಸದಸ್ಯತ್ವ ನೀಡುವುದಾಗಿ 2008ರಲ್ಲಿ ನ್ಯಾಟೊ ಆಶ್ವಾಸನೆ ನೀಡಿತ್ತು. ಇದು ರಷ್ಯಾಕ್ಕೆ ಕೊನೆಯ ಕಂಟಕವಾಗಿತ್ತು. ನ್ಯಾಟೊ ಸದಸ್ಯನಾಗಿ ಉಕ್ರೇನ್ ದೇಶ ರಷ್ಯಾದ ಹೃದಯಕ್ಕೆ ಇರಿಯಲಿರುವ ಈಟಿಯಾಗಿತ್ತು. 2014ರಲ್ಲಿ ಉಕ್ರೇನ್ ಅಧ್ಯಕ್ಷ ವಿಕ್ಟರ್ ಯಾನುಕೊವಿಚ್‌ರನ್ನು ಪದಚ್ಯುತಗೊಳಿಸಲು ತಥಾಕಥಿತ ಮೈದಾನ್ ಕ್ರಾಂತಿಯ ಹುನ್ನಾರ ಹೂಡಲಾಗಿತ್ತು. ರಷ್ಯಾದೊಂದಿಗೆ ಸಂಬಂಧ ಗಟ್ಟಿಗೊಳಿಸಲು ವಿಕ್ಟರ್ ಮುಂದಾಗಿದ್ದೇ ಇದಕ್ಕೆ ಕಾರಣವಾಗಿತ್ತು. ತಥಾಕಥಿತ ಮೈದಾನ್ ಕ್ರಾಂತಿಯಲ್ಲಿ ನವ-ನಾಜಿ ಗುಂಪುಗಳು ಕಾರ್ಯಾಚರಣೆಗೆ ಇಳಿದಿದ್ದನ್ನೂ ನಾವು ಕಂಡಿದ್ದೇವೆ. ಈ ನವ-ನಾಜಿಗಳು ನಂತರದಲ್ಲಿ ಉಕ್ರೇನ್ ಸೇನೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಅಝೋವ್ ಬೆಟಾಲಿಯನ್‌ ಅನ್ನು ರಚಿಸಿದ್ದರು. 2015ರಿಂದಲೂ ಉಕ್ರೇನ್ ಹೋರಾಟಗಾರ ಪಡೆಗಳಿಗೆ ಅಮೆರಿಕ ತರಬೇತಿ ನೀಡುತ್ತಿದೆ ಹಾಗೂ ರಷ್ಯಾದೊಂದಿಗೆ ಭವಿಷ್ಯದಲ್ಲಿ ಯಾವುದೇ ಸಂಘರ್ಷವನ್ನು ಮನಸ್ಸಿನಲ್ಲಿಟ್ಟುಕೊಂಡು ಬಿಲಿಯಗಟ್ಟಲೆ ಹಣವನ್ನು ಒದಗಿಸುತ್ತಿದೆ. ಅಮೆರಿಕ ಪ್ರತಿಷ್ಠಾಪಿಸಿದ ಬಲಪಂಥೀಯ ಆಡಳಿತವು ಡೊನ್ಬಾಸ್ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ರಷ್ಯನ್ ಜನಾಂಗೀಯ ಜನರ ಬಗ್ಗೆ ಅಸಹನೆ ಹೊಂದಿತ್ತು. ಪೂರ್ವ ಉಕ್ರೇನ್‌ನಲ್ಲಿ ಆರಂಭವಾಗಿದ್ದ ನಾಗರಿಕ ಯುದ್ಧವನ್ನು ಮಿನ್ಸ್ಕ್ ಒಡಂಬಡಿಕೆ ಫಲವಾಗಿ ಕದನ ವಿರಾಮ ಘೋಷಿಸಿ ತಾತ್ಕಾಲಿಕವಾಗಿ ಶಮನ ಮಾಡಲಾಗಿತ್ತು.

ದೇಶವು ನ್ಯಾಟೊ ಕೂಟಕ್ಕೆ ಸೇರುವುದನ್ನು ಉಕ್ರೇನ್‌ನ ಹೊಸ ಸರ್ಕಾರ ಸಂವಿಧಾನದಲ್ಲಿ ಸೇರ್ಪಡೆ ಮಾಡಿತು. ರಷ್ಯಾದೊಂದಿಗೆ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಜನಾಂಗೀಯ ಬಾಂಧವ್ಯ ಹೊಂದಿದ್ದ ಉಕ್ರೇನ್, ಶತ್ರು ದೇಶವಾಗಿ ಮಾರ್ಪಟ್ಟಿದ್ದು ರಷ್ಯಾಕ್ಕೆ ಚಿಂತೆಯ ವಿಷಯವಾಗಿತ್ತು. ಉಕ್ರೇನ್‌ನ ಭಾಗವಾಗಿದ್ದು ಹೆಚ್ಚಾಗಿ ರಷ್ಯನ್ನರೇ ಇರುವ ಕ್ರಿಮಿಯಾದಲ್ಲಿ ಅದಕ್ಕೆ ಪ್ರತಿಕ್ರಿಯೆ ಹೊರಹೊಮ್ಮಿತು. 2014ರಲ್ಲಿ ನಡೆದ ಜನಮತಗಣನೆಯಲ್ಲಿ ರಷ್ಯಾ ಸೇರಲು ಕ್ರಿಮಿಯಾ ನಿರ್ಧರಿಸಿತು. ರಷ್ಯಾದ ನೌಕಾ ಪಡೆಯ ಕಪ್ಪು ಸಮುದ್ರ ತುಕಡಿ ಕ್ರಿಮಿಯಾದ ಸೆವಾಸ್ಟೊಪೋಲ್‌ನಲ್ಲಿತ್ತು. ಅದೊಂದೇ ರಷ್ಯಾಕ್ಕೆ ಲಭ್ಯವಿದ್ದ ಉಷ್ಣ ಜಲ ಬಂದರು ಆಗಿದೆ. ಚಳಿಗಾಲದಲ್ಲಿ ಮಂಜುಗಡ್ಡೆ ಕಟ್ಟದ ನೀರನ್ನು ಉಷ್ಣ ಜಲ ಎನ್ನುತ್ತಾರೆ.

ಹೊಸದಾಗಿ ನ್ಯಾಟೊ ಸೇರಿದ ರಷ್ಯಾ ಸುತ್ತಮುತ್ತಲ ದೇಶಗಳಲ್ಲಿ ನ್ಯಾಟೊ ಕೂಟ ಹಾಗೂ ಅಮೆರಿಕವು ಪಡೆಗಳು ಮತ್ತು ಆಕ್ರಮಣಕಾರಿ ಕ್ಷಿಪಣಿಗಳನ್ನು ಜಮಾಯಿಸಿದ್ದರಿಂದ ಉದ್ವಿಗ್ನತೆ ಹೆಚ್ಚಾಯಿತು. ರಷ್ಯನ್ನರು ಉಕ್ರೇನ್ ಗಡಿಯಲ್ಲಿ ಸೇನೆಯನ್ನು ಜಮಾಯಿಸಿದರು. ಯುರೋಪ್‌ನಲ್ಲಿ ಹೊಸ ಭದ್ರತಾ ವಿನ್ಯಾಸಕ್ಕಾಗಿ ಮಾತುಕತೆ ನಡೆಸಲು ಒತ್ತಾಯಿಸಿದರು. ನ್ಯಾಟೊದಲ್ಲಿ ಉಕ್ರೇನ್ ಸೇರಿಸಬಾರದು ಎಂದೂ ರಷ್ಯಾ ಒತ್ತಾಯಿಸಿತು. ಉಕ್ರೇನ್‌ನಲ್ಲಿ ಮಾರಕ ಕ್ಷಿಪಣಿಗಳನ್ನು ನೆಲೆಗೊಳಿಸುವುದಿಲ್ಲ ಎಂದು ಖಾತರಿ ನೀಡಬೇಕೆಂದಿತು. ನ್ಯಾಟೊ ಈ ಬೇಡಿಕೆಯನ್ನು ತಿರಸ್ಕರಿಸಿತು. ಒಂದು ಸಾರ್ವಭೌಮ ದೇಶವಾದ ಉಕ್ರೇನ್‌ಗೆ ನ್ಯಾಟೊ ಸೇರಬೇಕೇ ಬೇಡವೇ ಎಂದು ನಿರ್ಧರಿಸುವ ಹಕ್ಕಿದೆ ಎಂದು ಅದು ಪ್ರತಿಪಾದಿಸಿತು. ಅದಾದ ನಂತರ ಉಕ್ರೇನ್ ಮೇಲೆ ನಡೆದ ಮಿಲಿಟರಿ ಆಕ್ರಮಣದ ಹಿನ್ನೆಲೆಯಲ್ಲಿ ಸರಣಿ ವಿದ್ಯವಮಾನಗಳು ನಡೆದಿವೆ. ಅದು ಯುರೋಪ್‌ನ ಶಾಂತಿ, ಆರ್ಥಿಕ ವ್ಯವಹಾರಗಳು ಮತ್ತು ಭದ್ರತಾ ವ್ಯವಸ್ಥೆಗಳ ಮೇಲೆ ದೂರಗಾಮಿ ಪರಿಣಾಮ ಬೀರಲಿವೆ.

ಸಾಮ್ರಾಜ್ಯಶಾಹಿಗಳು ಮತ್ತು ಪ್ರಮುಖ ಬಂಡವಾಶಾಹಿ ಶಕ್ತಿಗಳು; ಅಂದರೆ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ಶಕ್ತಿಗಳು ಹಾಗೂ ರಷ್ಯಾ ನಡುವಿನ ವ್ಯಾಪಕ ಸಂಘರ್ಷದ ಪ್ರತಿಫಲನಾಗಿದೆ ಉಕ್ರೇನ್ ಯುದ್ಧ.

ಸೋವಿಯತ್ ಒಕ್ಕೂಟ ವಿಸರ್ಜನೆ ನಂತರ ರಷ್ಯಾವು ಒಬ್ಬ ಸರ್ವಾಧಿಕಾರಿ ನಾಯಕನ ನೇತೃತ್ವದಲ್ಲಿ ಬಂಡವಾಳಶಾಹಿ ಅಲ್ಪ ಜನಾಧಿಪತ್ಯವಾಗಿದೆ. ದೇಶದ ಭದ್ರತಾ ಹಿತಗಳನ್ನು ಕಾಪಾಡಲು ಕ್ರಮಗಳನ್ನು ಕೈಗೊಳ್ಳಬೇಕೆನ್ನುವುದು ಒಂದು ವಿಚಾರವಾಗಿದೆ. ಆದರೆ, ಒಂದು ಸಾರ್ವಭೌಮ ದೇಶದ ಮೇಲೆ ಅದರ ಅಂತಾರಾಷ್ಟ್ರೀಯ ಸಮಗ್ರತೆಯನ್ನು ಉಲ್ಲಂಘಿಸಿ ಮಿಲಿಟರಿ ಆಕ್ರಮಣ ನಡೆಸುವುದು ಸ್ಪಷ್ಟವಾಗಿ  ವಿರೋಧಿಸಲೇಬೇಕಾದ ವಿಷಯವಾಗಿದೆ. ಆಕ್ರಮಣದಿಂದ ಆಗಲೇ ಭಾರಿ ಜೀವ ಹಾನಿ ಆಗಿದೆ. ಪುಟಿನ್‌ರ ರಾಷ್ಟ್ರೀಯತಾವಾದವು ಗ್ರೇಟ್ ರಷ್ಯನ್ ಅರಾಜಕವಾದಿಗಳ ರೀತಿಗೆ ಸೇರಿದ್ದಾಗಿದೆ. ಬೊಲ್ಷೆವಿಕ್‌ರನ್ನು ಖಂಡಿಸಿದ ಹಾಗೂ `ಲೆನಿನ್‌ರ ಉಕ್ರೇನ್’ ನಿರ್ಮಿಸಿದ ರೀತಿಯಿಂದ ಅವರ ಧೋರಣೆ ಗೊತ್ತಾಗುತ್ತದೆ. ಆದ್ದರಿಂದ, ಸಂಘರ್ಷ ನಿಲ್ಲಿಸಿ ಮಾತುಕತೆ ನಡೆಯಬೇಕೆಂದು ಭಾರ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಆಗ್ರಹಿಸುತ್ತದೆ.

ಅಟ್ಲಾಂಟಿಕ್ ಮಿತ್ರಕೂಟವನ್ನು ಇನ್ನಷ್ಟು ತನ್ನ ಸಮೀಪಕ್ಕೆ ತರಲು ಹಾಗೂ ಐರೋಪ್ಯ ಒಕ್ಕೂಟದ ಸ್ವಾಯತ್ತೆ ಮೇಲೆದ್ದು ಬರುವ ಸಾಧ್ಯತೆಯನ್ನು ವಿಫಲಗೊಳಿಸಲು ಬೈಡೆನ್ ಆಡಳಿತಕ್ಕೆ ಇದು ಸುವರ್ಣಾವಕಾಶ ಆಗಿದೆ. ಯುರೋಪ್‌ನೊಳಗೇ ಪ್ರಮುಖ ಶಕ್ತಿಯಾದ ಜರ್ಮನಿಯು ನ್ಯಾಟೊದ ಆಕ್ರಮಣಶೀಲ ಕಾರ್ಯಾಚರಣೆಯನ್ನು ಒಲ್ಲದ ಮನಸ್ಸಿನಿಂದ ಒಪ್ಪುತ್ತಿದೆ ಹಾಗೂ ದೊಡ್ಡ ಪ್ರಮಾಣದಲ್ಲಿ ಮಿಲಿಟರಿ ಸಶಸ್ತ್ರೀಕರಣ ಆಗಬೇಕೆಂಬ ಕರೆಯನ್ನು ವಿರೋಧಿಸುತ್ತಿದೆ. ಆದರೆ ಅದು ಈಗ ತನ್ನ ಹಿಂಜರಿಕೆಯನ್ನು ಕೈಬಿಟ್ಟಿದೆ. ಜರ್ಮನಿ ಚಾನ್ಸಲರ್ ಒಲಾಫ್ ಶೋಲ್ಸ್ 2022ನೇ ಸಾಲಿನ ಬಜೆಟ್‌ನಲ್ಲಿ ಸಶಸ್ತ್ರ ಪಡೆಗಳಿಗಾಗಿ 100 ಬಿಲಿಯ ಯೂರೋ (112 ಬಿಲಿಯ ಡಾಲರ್) ಹಣವನ್ನು ಮೀಸಲಿಟ್ಟಿದ್ದಾರೆ. ಜಿಡಿಪಿಯ ಶೇಕಡ ಎರಡನ್ನು ರಕ್ಷಣಾ ವಿಚಾರಕ್ಕೆ ಖರ್ಚು ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಮೆರಿಕ ಮತ್ತು ನ್ಯಾಟೊ ಪಾಲುದಾರರು ಈ ಬಗ್ಗೆ ಜರ್ಮನಿಯನ್ನು ಒತ್ತಾಯಿಸುತ್ತ ಬಂದಿದ್ದು ಇಲ್ಲಿವರೆಗೆ ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಅಮೆರಿಕ ಮತ್ತು ನ್ಯಾಟೊ ಕೂಟದಿಂದ ಪೋಲೆಂಡ್, ಹಂಗೆರಿ, ರೊಮಾನಿಯಾ ಮತ್ತು ಬಾಲ್ಟಿಕ್ ದೇಶಗಳಿಗೆ ಹೆಚ್ಚು ಪಡೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ರವಾನಿಸಲಾಗಿದೆ. ಉಕ್ರೇನ್‌ಗೆ ನ್ಯಾಟೊ ದೇಶಗಳು ಮಾರಕ ಅಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದು ಜರ್ಮನಿ ಕೂಡ ಇದೇ ಮೊದಲ ಬಾರಿಗೆ ಉಕ್ರೇನ್‌ಗೆ ಶಸ್ತ್ರಾಸ್ತ್ರ ನೀಡಿದೆ.

ಉಕ್ರೇನ್‌ನಲ್ಲಿ ನಡೆಯುತ್ತಿರುವ ಮಿಲಿಟರಿ ಸಂಘರ್ಷವನ್ನು ನಾವು ಈ ಹಿನ್ನೆಲೆಯಲ್ಲಿ ನೋಡಬೇಕು. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭವಾಗಿ ಎರಡು ವಾರ ಕಳೆದಿದೆ. ರಷ್ಯಾ ಮುನ್ನಡೆಯುತ್ತಿದ್ದು ಖೆರ್ಸನ್ ನಗರವನ್ನು ವಶಪಡಿಸಿಕೊಂಡಿದೆ. ರಾಜಧಾನಿ ಕಿಯೆವ್, ಖಾರ್ಕಿವ್ ಮತ್ತು ಮಾರಿಯುಪುಲ್‌ಗಳನ್ನು ಸುತ್ತುವರಿದಿದೆ. ಡೊನ್ಬಾಸ್‌ನಲ್ಲಿ ಬಂಡುಕೋರರ ಸಂಪರ್ಕ ಸಾಧಿಸಿದೆ. ಹಲವು ಭಾಗಗಳಲ್ಲಿ ಉಕ್ರೇನ್ ಪ್ರತಿರೋಧ ತೋರುತ್ತಿದ್ದರೂ ರಷ್ಯಾವೇ ಮೇಲುಗೈ ಪಡೆದಿದೆ. ಉತ್ತಮ ಭೂ ಸೇನೆ, ವಾಯು ಪಡೆ ಹಾಗೂ ನೌಕಾ ಪಡೆ ಹೊಂದಿರುವುದರಿಂದ ಇದು ಸಹಜವೇ ಆಗಿದೆ.

ರಷ್ಯಾ ಮತ್ತು ಉಕ್ರೇನ್ ಪ್ರತಿನಿಧಿಗಳ ನಡುವೆ ಬೆಲಾರೂಸ್‌ನಲ್ಲಿ ಮೂರು ಸುತ್ತು ಮಾತುಕತೆ ನಡೆದಿದೆ. ಮಾರ್ಚ್ 7 ರಂದು ನಡೆದ ಮಾತುಕತೆಯಲ್ಲಿ ಪ್ರಗತಿಯಾಗಿ ಕದನ ವಿರಾಮ ಏರ್ಪಡುವ ಆಶಾವಾದ ಕಂಡುಬಂದಿತ್ತು.  ಮೊದಲನೆಯದಾಗಿ, ಸುಮಿಯಂಥ ಸುರಕ್ಷಿತ ಸ್ಥಳಗಳಿಗೆ ನಾಗರಿಕರು ತೆರಳಲು ಕಾರಿಡಾರ್‌ಅನ್ನು ಮುಕ್ತಗೊಳಿಸಲಾಗಿದೆ. ಅಲ್ಲಿಂದ ಸುಮಾರು 700 ಭಾರತೀಯ ವಿದ್ಯಾರ್ಥಿಗಳನ್ನು ತೆರವು ಮಾಡಲಾಗಿದೆ. ತನ್ನ ನ್ಯಾಟೊ ಸೇರ್ಪಡೆ ವಿಚಾರ ದೊಡ್ಡ ವಿಷಯವಾಗಿ ಉಳಿದಿಲ್ಲ ಎಂದು ಉಕ್ರೇನ್ ಸುಳಿವು ನೀಡಿದೆ. ಅಧ್ಯಕ್ಷ ಝೆಲೆನ್ಸ್ಕಿ ಒಂದು ಸಂದರ್ಶನದಲ್ಲಿ ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ. ಪೂರ್ವ ಉಕ್ರೇನ್‌ನ ಎರಡು ಗಣರಾಜ್ಯಗಳಿಗೆ ಮಾನ್ಯತೆ ಹಾಗೂ ಕ್ರಿಮಿಯಾ ರಷ್ಯಾದ ಭಾಗವೆಂಬ ವಿವಾದ ಇನ್ನೂ ಇತ್ಯರ್ಥವಾಗಿಲ್ಲ. ಈ ಲೇಖನ ಸಿದ್ಧಪಡಿಸುತ್ತಿರುವ ವೇಳೆಗೆ, ಮಾರ್ಚ್ 10 ರಂದು ರಷ್ಯಾ ವಿದೇಶಾಂಗ ಸಚಿವ ಲಾವ್ರೋವ್ ಮತ್ತು ಉಕ್ರೇನ್ ವಿದೇಶಾಂಗ ಸಚಿವ ಕುಲೇಬಾ ಟರ್ಕಿಯ ಅಂಟಾಲ್ಯಾದಲ್ಲಿ ಚರ್ಚೆ ನಡೆಸಿದ್ದರು. ಮಾತುಕತೆಯು ವಿದೇಶಾಂಗ ಮಂತ್ರಿಗಳ ಮಟ್ಟಕ್ಕೆ ಏರಿರುವುದು ಶಾಂತಿ ಸಮಾಲೋಚನೆಯತ್ತ ಮುನ್ನಡೆಯಾಗಿದೆ. ತಕ್ಷಣವೇ ಯುದ್ಧ ಅಂತ್ಯಗೊಳ್ಳುವುದು, ಉಕ್ರೇನ್‌ಗೆ ತಟಸ್ಥ ಸ್ಥಾನಮಾನ ಮತ್ತು ಮಿನ್ಸ್ಕ್ ಒಪ್ಪಂದದನ್ವಯ ಡೊನ್ಬಾಸ್ ಗಣರಾಜ್ಯ ವಿವಾದಕ್ಕೆ ಪರಿಹಾರ -ಇವುಗಳು ಸಮಸ್ಯೆಗೆ ಹೆಚ್ಚು ಪ್ರಾಯೋಗಿಕ ಪರಿಹಾರ ಆಗಬಹುದು ಎಂದು ಕಾಣುತ್ತದೆ.

ಅನು: ವಿಶ್ವ

Leave a Reply

Your email address will not be published. Required fields are marked *