ಅಸ್ಸಾಂನಲ್ಲಿ ಎನ್‌ಆರ್‌ಸಿ ನಿಂದ ಯಾವುದೇ ಭಾರತೀಯರನ್ನು ಹೊರಗಿಡಬಾರದು

ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕರಡು ಪಟ್ಟಿ ಜುಲೈ 31ರಂದು ಪ್ರಕಟವಾಗಿದ್ದು ಅದರಲ್ಲಿ ಸುಮಾರು 40 ಲಕ್ಷ ಹೆಸರುಗಳು ಸೇರ್ಪಡೆಯಾಗಿಲ್ಲ ಎಂದು ವರದಿಯಾಗಿದೆ. ಈ ರೀತಿ ಪಟ್ಟಿಯಲ್ಲಿ ತಮ್ಮ ಹೆಸರು ಕಾಣದಿರುವ ಜನಗಳ ನಡುವೆ ವ್ಯಾಪಕ ಸಂದೇಹ ಮತ್ತು ಆತಂಕ ಉಂಟಾಗಿದೆ. ಇಂತವರ ದೂರುಗಳನ್ನು ಆಮೂಲಾಗ್ರವಾಗಿ ಮತ್ತು ಗಂಭೀರವಾಗಿ ಪರೀಕ್ಷಿಸಬೇಕು ಮತ್ತು ಸರಿಪಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹಿಸಿದೆ.

ಎನ್‌ಸಿಆರ್ ಅಸ್ಸಾಂ ಒಪ್ಪಂದದ ಭಾಗ. ಅಸ್ಸಾಂ ನಲ್ಲಿ ನೆಲೆಸಿರುವ ಕಾನೂನುಬಾಹಿರ ವಲಸಿಗರ ಪ್ರಶ್ನೆಯನ್ನು ನಿರ್ಧರಿಸಲು 1971ನ್ನು ಅಂತಿಮ ವರ್ಷವೆಂದು ಅಸ್ಸಾಂ ಒಪ್ಪಂದ ನಿರ್ಧರಿಸಿತ್ತು. ಇಂತಹ ಒಂದು ನೋಂದಣಿಯನ್ನು ಸಿದ್ಧಪಡಿಸುವ ಕೆಲಸ ಸುಪ್ರಿಂ ಕೋರ್ಟ್ ಮಧ್ಯಪ್ರವೇಶಿಸುವ ವರೆಗೆ ನಡೆಯಲಿಲ್ಲ. ಈಗ ಅದರ ನಿರ್ದೇಶನ ಮತ್ತು ಉಸ್ತುವಾರಿಯಲ್ಲಿ ಕರಡು ಎನ್‌ಆರ್‌ಸಿ ಯನ್ನು ಸಿದ್ಧಪಡಿಸಲಾಗಿದೆ.

ಈ ಕರಡಿನ ಸಿದ್ಧತೆಯಲ್ಲಿ ಹಲವಾರು ಅಸಂಗತತೆಗಳು ಕಂಡು ಬಂದಿವೆ. ಸುಪ್ರಿಂ ಕೋರ್ಟ್ ಪಂಚಾಯತಿನ ಪ್ರಮಾಣ ಪತ್ರವನ್ನು ಒಂದು ದಾಖಲೆಯಾಗಿ ಸ್ವೀಕರಿಸಬೇಕು ಎಂದು ಘೋಷಿಸಿತ್ತು. ಆದರೂ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರ ಹೆಸರುಗಳನ್ನು ಬಿಡಲಾಗಿದೆ. ಇನ್ನು ಕೆಲವರು ಸರಿಯಾದ ಕ್ಷೇತ್ರ ಪರಿಶೀಲನೆಗಳನ್ನು ನಡೆಸದೆ ಕೈಬಿಡಲಾಗಿದೆ ಎಂದು ದೂರುತ್ತಿದ್ದಾರೆ.

ಕೆಲವು ಪ್ರಕರಣಗಳಲ್ಲಿ ರೇಶನ್ ಕಾರ್ಡನ್ನು ಬೆಂಬಲ ದಸ್ತಾವೇಜಾಗಿ ಪರಿಗಣಿಸಲು ನಿರಾಕರಿಸಲಾಗಿದೆ ಎಂದು ವರದಿಯಾಗಿದೆ. ವಿಚಿತ್ರವೆಂದರೆ, ಒಂದು ಕುಟುಂಬದಲ್ಲಿ ಕೆಲವರನ್ನು ಸೇರಿಸಲಾಗಿದೆ, ಇನ್ನು ಕೆಲವರನ್ನು ಕೈಬಿಡಲಾಗಿದೆ. ಇದರಿಂದಾಗಿ ಎನ್‌ಆರ್‌ಸಿಯಲ್ಲಿ ತಮ್ಮ ಹೆಸರು ಕಾಣದ ಸುಮಾರು ೪೦ ಲಕ್ಷ ಜನಗಳಲ್ಲಿ ಸಂದೇಹ ಮತ್ತು ಆತಂಕ ಉಂಟಾಗಿದೆ

ಹೆಸರುಗಳನ್ನು ಸೇರಿಸಲು ಇರುವ ಸಮಯ ಮಿತಿಯನ್ನು ವಿಸ್ತರಿಸಿ ಜನಗಳು ತಮ್ಮ ದೂರುಗಳನ್ನು ಸಲ್ಲಿಸಲು ಅನುವು ಮಾಡಿ ಕೊಡಬೇಕು. ಆನಂತರವೇ ಅಂತಿಮ ಎನ್‌ಆರ್‌ಸಿ ಯನ್ನು ಪ್ರಕಟಿಸಬೇಕು. ಯಾವುದೇ ಭಾರತೀಯರನ್ನು  ಇದರಿಂದ ಹೊರಗಿಡಬಾರದು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

ಕರಡು ಎನ್‌ಆರ್‌ಸಿಯಲ್ಲಿ ಹೆಸರು  ಸೇರಿರದ ಎಲ್ಲ ೪೦ ಲಕ್ಷ ಜನರೂ ‘ಕಾನೂನುಬಾಹಿರ ವಲಸಿಗರು’ ಎನ್ನುವ ಬಿಜೆಪಿ ಅಧ್ಯಕ್ಷರ ಮಾತು ವ್ಯಾಪಕ ಭಯವನ್ನು ಹುಟ್ಟಿಸುತ್ತಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಜನತೆ ಶಾಂತಿ ಮತು ನೆಮ್ಮದಿಯನ್ನು ಕಾಯ್ದುಕೊಳ್ಳಬೇಕು, ನಮ್ಮ ದೇಶದ ಮತ್ತು ನಮ್ಮ ಜನತೆಯ ಐಕ್ಯತೆ ಮತ್ತು ಸಮಗ್ರತೆಯನ್ನು ಶಿಥಿಲಗೊಳಿಸುವ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸಬೇಕು ಎಂದು ಮನವಿ ಮಾಡಿದೆ.

Leave a Reply

Your email address will not be published. Required fields are marked *