ಕಾರ್ಪೊರೇಟ್ ಬಂಡವಾಳಪರ ರೂಪಿಸಿರುವ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ನಿರ್ಣಯ

ಕೇಂದ್ರದಲ್ಲಿ ಮೋದಿ ಸರ್ಕಾರ 2ನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಕಾರ್ಮಿಕ ಹಕ್ಕುಗಳನ್ನು ದಮನ ಮಾಡುವ ತನ್ನ ನೀತಿಯನ್ನು ತೀವ್ರಗೊಳಿಸಿದೆ. ಕಾರ್ಪೊರೇಟ್ ಬಂಡವಾಳಗಾರರ ಲಾಭದ ಪ್ರಮಾಣವನ್ನು ಹೆಚ್ಚಿಸಲು ಕಾರ್ಮಿಕ ವಿರೋಧಿ ನೀತಿಗಳನ್ನು ತೀವ್ರತರವಾಗಿ ಜಾರಿ ಮಾಡುತ್ತಿದೆ. ದುಡಿಯುವ ವರ್ಗವು ದೇಶದಲ್ಲಿ ಸಮರಶೀಲ ಹೋರಾಟಗಳನ್ನು ನಡೆಸಿ ಸ್ವತಂತ್ರ ಪೂರ್ವದಲ್ಲಿ ಮತ್ತು ಸ್ವತಂತ್ರ ನಂತರದಲ್ಲಿ ಪಡೆದ ಕಾರ್ಮಿಕ ಕಾನೂನುಗಳನ್ನು ಸರಳೀಕರಣದ ಹೆಸರಿನಲ್ಲಿ 29 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ನಾಲ್ಕು ಸಂಹಿತೆಗಳಾಗಿ ರೂಪಿಸಿ ಅಂಗೀಕರಿಸಿದೆ.

ಪಾರ್ಲಿಮೆಂಟ್‌ನಲ್ಲಿ ಯಾವುದೇ ಚರ್ಚೆಯಿಲ್ಲದೆ ಕೋವಿಡ್ ಪೂರ್ವದಲ್ಲಿ ವೇತನ ಸಂಹಿತೆ-2019 ನ್ನು, ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಕೈಗಾರಿಕಾ ಸಂಬಂಧಗಳ ಸಂಹಿತೆ-2020, ಸಾಮಾಜಿಕ ಭದ್ರತಾ ಸಂಹಿತೆ-2020 ಹಾಗೂ ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಶರತ್ತುಗಳ ಸಂಹಿತೆ-2020 ಗಳನ್ನು ಕಾರ್ಮಿಕ ವಿರೋಧಿಯಾಗಿ ಕಾರ್ಪೊರೇಟ್ ಬಂಡವಾಳಪರ ರೂಪಿಸಿದೆ. ಈ ಸಂಹಿತೆಗಳನ್ನು ಜಾರಿಗೆ ತರಲು ನಿಯಮಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ. ಅದಕ್ಕೆ ಪೂರಕವಾಗಿ ರಾಜ್ಯ ಬಿಜೆಪಿ ಸರ್ಕಾರ ಸಹ ಕೋವಿಡ್ ಸಂದರ್ಭದಲ್ಲಿ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆಯನ್ನು ಹೊರಡಿಸಿತು. ಅದು ವಿಧಾನಸಭೆಯಲ್ಲಿ ಅಂಗೀಕಾರ ಆದರೂ ವಿಧಾನ ಪರಿಷತ್ತಿನಲ್ಲಿ ಸೋಲಾಯಿತು. ನಂತರದಲ್ಲಿ ಅಸಂವಿಧಾನಿಕವಾಗಿ ಮತ್ತೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿತು. ಪ್ರಸ್ತುತ ಈ ಸಂಹಿತೆಗಳ ಜಾರಿ ಮಾಡುವ ನಿಟ್ಟಿನಲ್ಲಿ ಕರಡು ನಿಯಮಗಳನ್ನು ಪ್ರಕಟಿಸಿದೆ.

ಈ ಸಂಹಿತೆಗಳು ಜಾರಿಯಾದರೆ ಕಾರ್ಮಿಕರು ಸಂಘ ಕಟ್ಟುವ, ಸಾಮೂಹಿಕ ಚೌಕಾಸಿ ನಡೆಸುವ, ಮುಷ್ಕರ ನಡೆಸುವ ಹಕ್ಕುಗಳು ಇದ್ದರೂ ಇಲ್ಲದಂತಾಗಲಿದೆ. ನಿಗದಿತ ಕಾಲಾವಧಿಯ ಕಾರ್ಮಿಕರ (ಎಫ್.ಟಿ.ಇ) ನೇಮಕಕ್ಕೆ ಮುಕ್ತ ಅವಕಾಶ ಕಲ್ಪಿಸಿ ಖಾಯಂ ಕೆಲಸ, ಕಾರ್ಮಿಕರು ಇಲ್ಲದಾಗಲಿದೆ. 300ಕ್ಕಿಂತ ಕಡಿಮೆ ಕಾರ್ಮಿಕರಿದ್ದಲ್ಲಿ ಲೇ-ಆಫ್ ರಿಟ್ರೆಂಚ್‌ಮೆಂಟ್ ಮತ್ತು ಕಾರ್ಖಾನೆ ಮುಚ್ಚಲು ಸರ್ಕಾರದ ಅನುಮತಿ ಅಗತ್ಯ ಇಲ್ಲದಿರುವುದರಿಂದ ಶೇ.90.76 ರಷ್ಟು ಕೈಗಾರಿಕೆಗಳು ರಾಜ್ಯ ಸರ್ಕಾರದ ಪೂರ್ವ ಅನುಮತಿ ಇಲ್ಲದೆ ಯಾವಾಗ ಬೇಕಾದರೂ ಲೇ-ಆಫ್, ರಿಟ್ರೆಂಚ್‌ಮೆಂಟ್ ಮಾಡಲು ಮತ್ತು ಕಾರ್ಖಾನೆ ಮುಚ್ಚಲು ಮುಕ್ತ ಅವಕಾಶ ಕಲ್ಪಿಸಲಿದೆ. ಕಾರ್ಮಿಕರ ಮೇಲೆ ಅಧಿಕ ಉತ್ಪಾದನೆಯ ಒತ್ತಡ ಹೇರಲು ಅದನ್ನು ಒಪ್ಪದಿದ್ದಲ್ಲಿ ಸ್ವಯಂ ನಿವೃತ್ತಿ ಪಡೆಯುವಂತೆ ಮಾಡಿ ಕಾರ್ಮಿಕರನ್ನು ಬೀದಿಪಾಲು ಮಾಡಲಿದೆ. ಈಗಾಗಲೇ 300ಕ್ಕಿಂತ ಕಡಿಮೆ ಕಾರ್ಮಿಕರಿದ್ದಲ್ಲಿ ಲೇ-ಆಫ್ ರಿಟ್ರೆಂಚ್‌ಮೆಂಟ್ ಮತ್ತು ಕಾರ್ಖಾನೆ ಮುಚ್ಚಲು ಸರ್ಕಾರದ ಅನುಮತಿ ಅಗತ್ಯವಿಲ್ಲವೆಂಬಂತೆ ರಾಜ್ಯ ಸರ್ಕಾರವು ಕಾನೂನು ತರಲು ಮುಂದಾಗಿ ಹಿನ್ನಡೆ ಅನುಭವಿಸಿದೆ. ಈ ನಡುವೆ, ಅನೇಕ ಸಂಸ್ಥೆಗಳು ಇದರ ದುರ್ಲಾಭ ಪಡೆದು ತಮ್ಮ ಕಾರ್ಖಾನೆಗಳಲ್ಲಿ ಲೇ-ಆಫ್ ರಿಟ್ರೆಂಚ್‌ಮೆಂಟ್ ಮತ್ತು ಕಾರ್ಖಾನೆ ಮುಚ್ಚಲು ಸರ್ಕಾರದ ಅನುಮತಿಯಿಲ್ಲದೇ ಸಾವಿರಾರೂ ಕಾರ್ಮಿಕರನ್ನು ಬೀದಿ ಹಾಕಿತ್ತು.

Chandrappa hoskeraರಾಜ್ಯದಲ್ಲಿರುವ ವಿದ್ಯುತ್ ಚಾಲಿತ 20 ಕಾರ್ಮಿಕರಿಗಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಶೇ.41.36 ಹಾಗೂ ವಿದ್ಯುತ್ ರಹಿತ 40ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಶೇ.64.24 ರಷ್ಟು ಕೈಗಾರಿಕೆಗಳ ಕಾರ್ಮಿಕರ ಆರೋಗ್ಯ, ಸುರಕ್ಷತೆ ಮತ್ತು ಕೆಲಸದ ಪರಿಸ್ಥಿತಿಗಳ ಮೇಲೆ ರಾಜ್ಯ ಸರ್ಕಾರದ ನಿಯಂತ್ರಣ ಇಲ್ಲದಾಗಲಿದೆ. ಕಾರ್ಖಾನೆ ಮತ್ತು ಬಾಯ್ಲರ್‌ಗಳ ನಿರ್ದೇಶನಾಲಯದ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಮತ್ತು ನಿರೀಕ್ಷಕರ ಶಾಸನಬದ್ಧ ನಿರೀಕ್ಷಣೆಯ ಅಧಿಕಾರವು ಇಲ್ಲದಾಗುವುದರಿಂದ ಕಾರ್ಮಿಕರ ಶೋಷಣೆಗೆ ಮುಕ್ತ ಅವಕಾಶ ಕಲ್ಪಿಸಲಿದೆ.

ರಾಜ್ಯಗಳಲ್ಲಿನ ಕನಿಷ್ಟ ವೇತನ ಕಡೆಗಣಿಸುವ ನಿಟ್ಟಿನಲ್ಲಿ ರಾಷ್ಟಿçÃಯ ನೆಲಮಟ್ಟದ ಕನಿಷ್ಟ ವೇತನ ನಿಗದಿಗೆ ಅವಕಾಶ ಕಲ್ಪಿಸಿ, ನ್ಯಾಯಸಮ್ಮತ ವೇತನ ಜೀವಿತ ವೇತನ ಕಲ್ಪಿಸುವ ಸಂವಿಧಾನ ಆಶಯಗಳಿಗೆ ತಿಲಾಂಜಲಿ ನೀಡಲಿದೆ. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಮತ್ತು ಸೇವಾಷರತ್ತುಗಳು ಇರುವ ಸೌಲಭ್ಯಗಳು ಅಸಂಘಟಿತ ಕಾರ್ಮಿಕರಿಗೆ ಇಲ್ಲದಂತಾಗಲಿದೆ. ನೌಕರರ ಭವಿಷ್ಯ ನಿಧಿ (ಇಪಿಎಫ್) ಮತ್ತು ರಾಜ್ಯ ವಿಮಾ (ಇಎಸ್‌ಐ)ಗೆ ಮಾಲೀಕರ ವಂತಿಗೆ ಪಾಲನ್ನು ಕಡಿಮೆಗೊಳಿಸಲು ಅವಕಾಶ ನೀಡಿ, ಇದರ ನಿಧಿಯನ್ನು ಶೇರುಮಾರುಕಟ್ಟೆಯಲ್ಲಿ ಹೂಡಿ ಜೂಜುಕೋರ ಬಂಡವಾಳಕ್ಕೆ ಲಾಭ ಮಾಡಿಕೊಡಲಿದೆ.

ಹಾಗಾಗಿ ಕಾರ್ಮಿಕ ವಿರೋಧಿಯಾದ ಈ ಸಂಹಿತೆಗಳನ್ನು ಸಿಪಿಐ(ಎಂ) 23ನೇ ರಾಜ್ಯ ಸಮ್ಮೇಳನವು ವಿರೋಧಿಸುತ್ತದೆ. ಈ ಸಂಹಿತೆಗಳಿಗೆ ರೂಪಿಸುವ ನಿಯಮಗಳಲ್ಲಿ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಕೈಬಿಟ್ಟು ಕಾರ್ಮಿಕ ಪರವಾದ ಮತ್ತು ರಾಜ್ಯವ್ಯಾಪಿ ಸಮಾನ ಕನಿಷ್ಟ ವೇತನ, ಕಾರ್ಮಿಕ ಸಂಘ ಮಾನ್ಯತೆಗೆ, ಗುತ್ತಿಗೆ ಮತ್ತಿತರೆ ಖಾಯಂಯೇತರ ಕಾರ್ಮಿಕರ ಖಾಯಂಗೆ ಕಾನೂನುಗಳನ್ನು ರೂಪಿಸಬೇಕೆಂದು ಈ ಸಮ್ಮೇಳನವು ಒತ್ತಾಯಿಸುತ್ತದೆ.

ಮಂಡನೆ: ಕೆ.ಎನ್ ಉಮೇಶ

ಅನುಮೋದನೆ: ಚಂದ್ರಪ್ಪ ಹೊಸ್ಕೆರಾ

Leave a Reply

Your email address will not be published. Required fields are marked *