ಭ್ರಷ್ಟಾಚಾರ ಮತ್ತು ಕಾರ್ಪೊರೇಟ್ ಲೂಟಿಯಿಂದ ಮುಕ್ತವಾದ ಜನತೆಯ ಸಮೃದ್ಧ ಸೌಹಾರ್ದ ನವ ಕರ್ನಾಟಕ ಕಟ್ಟೋಣ: ಯು. ಬಸವರಾಜ

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕಾಮ್ರೇಡ್‌ ಯು. ಬಸವರಾಜ ಅವರು ಜನವರಿ 2ರಂದು ಮಧ್ಯಾಹ್ನ ನಡೆದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ನ 23ನೇ ರಾಜ್ಯ ಸಮ್ಮೇಳನದ ಪ್ರತಿನಿಧಿ ಅಧಿವೇಶನದಲ್ಲಿ 296 ಪುಟಗಳ ದೀರ್ಘವಾದ ವರದಿಯನ್ನು ರಾಜ್ಯ ಸಮಿತಿಯ ಪರವಾಗಿ ಮಂಡಿಸಿದರು.

ಮೊದಲನೆಯದಾಗಿ ಅವರು ವರದಿಯ ರಚನೆಯನ್ನು ವಿವರಿಸಿ, ಯಾವ ಅಧ್ಯಾಯದ ಓದಿಗೆ ಆದ್ಯತೆ ಕೊಡಬೇಕೆಂದು ತಿಳಿಸಿದರು. ವರದಿಯನ್ನು ಎರಡು ಭಾಗಗಳಲ್ಲಿ ಕೊಡಲಾಗಿತ್ತು. ಒಂದು ‘ರಾಜ್ಯದ ಸಾಮಾಜಿಕ-ಆರ್ಥಿಕ ಪರಿಸ್ಥಿತಿ’ 62 ಪುಟಗಳ ವರದಿ. ಇನ್ನೊಂದು ಮುಖ್ಯ ಭಾಗವಾದ ‘ರಾಜಕೀಯ ಸಂಘಟನಾ ವರದಿ’. ಎರಡನೆಯ ಭಾಗದ ವರದಿಯಲ್ಲಿ ರಾಜ್ಯದ ರಾಜಕೀಯ ಪರಿಸ್ಥಿತಿ, ಪಕ್ಷದ ಮಧ್ಯಪ್ರವೇಶ, ಪಕ್ಷದ ಸಂಘಟನೆ-1 (ವಿವಿಧ ಹಂತದ ಘಟಕಗಳ ಕೆಲಸ), ಪಕ್ಷದ ಸಂಘಟನೆ-2 (ವಿವಿಧ ಫ್ರಾಕ್ಷನ್ ಮತ್ತು ಉಪಸಮಿತಿಗಳ ಹಾಗೂ ವಿವಿಧ ರಂಗದ ಸಾಮೂಹಿಕ ಸಂಘಟನೆಗಳ ಕೆಲಸ) – ಹೀಗೆ ನಾಲ್ಕು ಅಧ್ಯಾಯಗಳಿವೆ ಎಂದು ವಿವರಿಸಿದರು.

ವರದಿಯನ್ನು ಮಂಡಿಸುತ್ತಾ, ಕಳೆದ 4 ವರ್ಷಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಕೋವಿಡ್‌ ಲಾಕ್‌ಡೌನ್ ಇವುಗಳಿಂದಾಗಿ ಜನರಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ. ಇವುಗಳಿಗೆ ಈ ಅವಧಿಯಲ್ಲಿದ್ದ ಸರಕಾರಗಳು, ಅದರಲ್ಲೂ  ಪ್ರಧಾನವಾಗಿ ಬಿಜೆಪಿ ಸರಕಾರವು ಪರಿಹಾರ ಕೊಟ್ಟಿಲ್ಲ ಮಾತ್ರವಲ್ಲ, ಜನರ ಆತಂಕವನ್ನು ಕಾರ್ಪೊರೇಟ್ ಲೂಟಿಗೆ, ಭ್ರಷ್ಟಾಚಾರಕ್ಕೆ ಅವಕಾಶ ಹೆಚ್ಚಿಸಲು ಬಳಸಿಕೊಂಡಿದೆ ಎಂದು ಕಾಮ್ರೇಡ್‌ ಯು.ಬಸವರಾಜ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್‌ ಪರಿಹಾರದಲ್ಲೂ ಬಿಜೆಪಿ ಶಾಸಕರು ಲೂಟಿ ಮಾಡಲು ಹೇಸಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ಗಳ ಮೂಲಕ ಜನರ ಗಾಯದ ಮೇಲೆ ಬರೆ ಎಳೆಯಲಾಗಿದೆ. ಪರಿಹಾರದ ಬದಲು ರೇಷನ್, ಸಾಲಮನ್ನಾ, ಅಲ್ಪಸಂಖ್ಯಾತ ಮತ್ತು ದಲಿತರ ಸ್ಕಾಲರ್ ಶಿಪ್, ಮನೆ ಕಟ್ಟಿಸಿ ಕೊಡುವ ಭರವಸೆ ಇತ್ಯಾದಿ – ಇರುವ ಸವಲತ್ತುಗಳಲ್ಲಿ ಕಡಿತ ಮಾಡಿದರು.

ಕಾರ್ಪೊರೇಟ್ ಗಳು ಸಾವಿರಾರು ಎಕರೆ ಜಮೀನು ಖರೀದಿ ಮಾಡಲು ಅನುವು ಮಾಡಿಕೊಡುವ ಭೂಸುಧಾರಣೆ ತಿದ್ದುಪಡಿ; ಜಾನುವಾರು ನಿಷೇಧ ತಿದ್ದುಪಡಿ ತರಲಾಗಿದೆ. ಅಲ್ಪಸಂಖ್ಯಾತರ ಆಹಾರ ಹಕ್ಕು, ನಿವಾಸ ಸ್ಥಾನ, ಹೈನುಗಾರಿಕೆ ಮೇಲೆ ದಾಳಿ ಮಾಡಿ ಹೈನುಗಾರಿಕೆಯನ್ನು ಕಾರ್ಪೊರೇಟ್ ಗಳಿಗೆ ವಹಿಸಿ ಕೊಡುವ ಹುನ್ನಾರ ನಡೆದಿದೆ. ಮತಾಂತರ ನಿಷೇಧದ ಮೂಲಕ ಕೋಮುವಿಷವನ್ನು ಇನ್ನಷ್ಟು ವಿಸ್ತಾರವಾಗಿ ಹರಡುವ ಪ್ರಯತ್ನ ಮಾಡಲಾಗುತ್ತಿದೆ. ಮೀಸಲಾತಿ ಮೇಲೆ ದಾಳಿ, ಭಿನ್ನ ಗಂಪುಗಳ ನಡುವೆ ಮೀಸಲಾತಿಗೆ ಪೈಪೋಟಿ ಹೆಚ್ಚಿಸಿ ಅದನ್ನು ಅರ್ಥಹೀನ ಮಾಡುವ ಪ್ರಯತ್ನ ನಡೆದಿದೆ. ದಲಿತ ಸವರ್ಣೀಯ ನೌಕರರನ್ನು ಪರಸ್ಪರ ಎತ್ತಿಕಟ್ಟುವ ಪ್ರಯತ್ನ ಮಾಡಲಾಗುತ್ತಿದೆ. ಕಾರ್ಮಿಕರ, ಇತರ ದುಡಿಯುವ ಜನರ ಚಳುವಳಿಗಳ ಮುಂಚೂಣಿಯಲ್ಲಿರುವ ಕಾರ್ಯಕರ್ತರನ್ನು ಸೆಳೆಯುವ, ಚಳುವಳಿಗಳನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಜ್ಯದ ರಾಜಕೀಯ ಪರಿಸ್ಥಿತಿಯ ಸ್ಥೂಲ ನೋಟ ನೀಡಿದರು.

ಈ ದುರಾಡಳಿತದಿಂದ ಆಕ್ರೋಶಗೊಂಡ ಹಲವು ರೈತರು, ಕಾರ್ಮಿಕರು ಇತ್ಯಾದಿ ಹಲವು ಜನವಿಭಾಗಗಳು ಹೋರಾಟ ನಡೆಸಿದ್ದಾರೆ, ಇನ್ನಷ್ಟು ತೀವ್ರ ಹೋರಾಟಗಳಿಗೆ ಸಜ್ಜುಗೊಳ್ಳುತ್ತಿದ್ದಾರೆ. ರೈತರ ಹೋರಾಟ ಕರ್ನಾಟಕದಲ್ಲಿ ನಡೆದಿದ್ದು ರೈತ ಮತ್ತು ಇತರ ಸಾಮೂಹಿಕ ಸಂಘಟನೆಗಳ ಐಕ್ಯತೆ ಅಭೂತ ಪೂರ್ವವಾಗಿತ್ತು. ಪಕ್ಷದ ಹಲವು ಘಟಕಗಳಲ್ಲಿ ಮತ್ತು ಸಾಮೂಹಿಕ ಸಂಘಟನೆಗಳ ಸದಸ್ಯತ್ವ ಕಡಿಮೆಯಾಗಲು ಕೋವಿಡ್‌ ಕಾಲದ ನಿಬಂಧನೆಗಳು ಮುಖ್ಯ ಕಾರಣವಾದರೂ, ಹಲವು ಘಟಕಗಳಲ್ಲಿ ಸಂಘಟನೆಗಳಲ್ಲಿ ಸದಸ್ಯತ್ವ ಹೆಚ್ಚೂ ಆಗಿದೆ. 2018ರಲ್ಲಿ ರಾಜ್ಯವ್ಯಾಪಿ ಸೌಹಾರ್ದ ಕರ್ನಾಟಕ ಮಾನವ ಸರಪಣಿ ಮತ್ತು ನಂತರವೂ ಜನವರಿ 30ರಂದು ವ್ಯಾಪಕ ಸೌಹಾರ್ದ ಕಾರ್ಯಕ್ರಮಗಳು, ಸಿಎಎ ಹೋರಾಟದಲ್ಲಿ ಜಂಟಿ ವೇದಿಕೆಗಳ ರಚನೆ, ಏಳು ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳ ಕೂಟ ರಚನೆ ಈ ಅವಧಿಯ ಪ್ರಮುಖ ಹೋರಾಟಗಳಾಗಿದ್ದವು ಎಂದು ಕಾಮ್ರೇಡ್‌ ಯು. ಬಸವರಾಜ ತಿಳಿಸಿದರು.

ಸಂಘಟನಾ ಸಮಸ್ಯೆಗಳಲ್ಲಿ ಶೇಕಡಾ 99 ಸುಧಾರಣೆಯಾಗಿದೆ, ಐಕ್ಯತೆಯನ್ನು ಸಾಧಿಸಲಾಗಿದೆ, ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಯುತ್ತಿದೆ ಎಂದು ಅವರು ತಿಳಿಸಿದರು. ಪಕ್ಷದ ಚಟುವಟಿಕೆಗಳ ಕ್ರೋಢಿಕರಣ ಮತ್ತು ವಿಸ್ತರಣೆಗೆ ಸಾಕಷ್ಟು ನುರಿತ ಬದ್ಧ ಪೂರ್ಣಾವಧಿ ಕಾರ್ಯಕರ್ತರನ್ನು ನೇಮಿಸಿ ಅವರಿಗೆ ಅಗತ್ಯ ವೇತನ ನೀಡಲು ಮತ್ತು ಅದಕ್ಕೆ ಅಗತ್ಯವಾದ ನಿಧಿ ಸಂಗ್ರಹ ಮಾಡಲು ಸಾಧ್ಯವಾಗದಿರುವುದು ಮುಖ್ಯ ಕಾರಣವಾಗಿದೆ ಎಂದು ಸಂಘಟನಾ ಸಮಸ್ಯೆಗಳ ಕುರಿತು ಮಾತನಾಡುತ್ತಾ ಅವರು ತಿಳಿಸಿದರು.

ಕಾರ್ಯದರ್ಶಿಗಳ ವರದಿ ಮಂಡನೆಯ ನಂತರ ಜನವರಿ 2 ರಾತ್ರಿ ಮತ್ತು 3 ರ ಬೆಳಿಗ್ಗೆ ಜಿಲ್ಲಾ/ಘಟಕವಾರು, ಫ್ರಾಕ್ಷನ್ ವಾರು ಗುಂಪು ಚರ್ಚೆ ನಡೆಯಿತು. ಈ ಗುಂಪು ಚರ್ಚೆಯಲ್ಲಿ ಬಂದ ಅಂಶಗಳನ್ನು ಆಯಾ ಗುಂಪಿನಿಂದ ಆರಿಸಿದ ಪ್ರತಿನಿಧಿಗಳು ಜನವರಿ 3 ರಂದು ಇಡೀ ದಿನ ನಡೆದ ಅಧಿವೇಶನದಲ್ಲಿ ಮಂಡಿಸಿದರು. 74 ಪ್ರತಿನಿಧಿಗಳು 480 ನಿಮಿಷಗಳ ಕಾಲ ಚರ್ಚೆ ನಡೆಸಿದರು.

ಚರ್ಚೆಯಲ್ಲಿ ಎದ್ದು ಬಂದ – ವಿದ್ಯಾರ್ಥಿ-ಯುವರಂಗಕ್ಕೆ ಆದ್ಯತೆ, ಬಾಲಸಂಘ ಚಟುವಟಿಕೆ, ಪಕ್ಷದ ರಾಜಕೀಯ ನೆಲೆ ಕುಸಿತಕ್ಕೆ ಕಾರಣಗಳು, ವಿವಿಧ ಘಟಕಗಳ ಸಂಘಟನಾ ಸಮಸ್ಯೆಗಳು, ಸಂಘಟನಾ ಸಮಸ್ಯೆಗಳಲ್ಲಿ ಶೇಕಡಾ 99 ಸುಧಾರಣೆಯಾಗಿದೆಯೆ ಎಂಬಿತ್ಯಾದಿ ಟೀಕೆ-ಟಿಪ್ಪಣಿಗಳಿಗೆ ಕಾಮ್ರೇಡ್‌ ಯು. ಬಸವರಾಜ ಜನವರಿ 4ರ ಬೆಳಗಿನ ಅಧಿವೇಶನದಲ್ಲಿ ಉತ್ತರಿಸಿದರು. ಚರ್ಚೆಗೆ ಉತ್ತರದ ನಂತರ ರಾಜಕೀಯ ವರದಿಯನ್ನು ಪ್ರತಿನಿಧಿ ಅಧಿವೇಶನ ಅಂಗೀಕರಿಸಿತು.

Leave a Reply

Your email address will not be published. Required fields are marked *