ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ ರೈತರು, ಬಲವಂತದ ಹಾಗೂ ಅನ್ಯಾಯದ ಕೆಐಎಡಿಬಿ ಭೂ ಸ್ವಾಧೀನ ವಿರೋಧಿಸಿ ಸುಮಾರು ಮೂರೂವರೆ ವರ್ಷಗಳಿಂದ ಹೋರಾಡುತ್ತಿದ್ದಾರೆ. ಈ ಸಂಬಂಧ ಜುಲೈ 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಭೆ ಕರೆದಿದ್ದಾರೆ. ಅಂದಿನ ಸಭೆಯಲ್ಲಿ ಸಿದ್ದರಾಮಯ್ಯನವರು ಈ ರೈತರ ಹಕ್ಕೋತ್ತಾಯವಾಗಿರುವ ಚನ್ನರಾಯಪಟ್ಟಣ ಹೋಬಳಿ ಭೂ ಸ್ವಾಧೀನವನ್ನು ಸಂಪೂರ್ಣ ರದ್ದುಪಡಿಸುವ ತೀರ್ಮಾನವನ್ನು ಪ್ರಕಟಿಸಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಷ್ ವಾದಿ) ರಾಜ್ಯ ಸಮಿತಿ ಆಗ್ರಹಿಸಿದೆ.
ಕೈಗಾರಿಕಾ ಬೆಳವಣಿಗೆಯ ಉದ್ದೇಶಕ್ಕಿಂತ, ಭೂಮಿ ವ್ಯಾಪಾರದ ದಂದೆಕೋರರಿಗೆ ಲಾಭ ಮಾಡಿಕೊಡುವ ಕುಖ್ಯಾತಿಯನ್ನು ರಾಜ್ಯದ ‘ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ’ (ಕೆಐಎಡಿಬಿ)ಯ ಇತಿಹಾಸ ತೋರಿಸುತ್ತದೆ. ಇದುವರೆಗೂ ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡಿರುವ ಗಣನೀಯ ಪ್ರಮಾಣದ ಭೂಮಿ ಕೈಗಾರಿಕೆಗಳ ಸ್ಥಾಪನೆಗೆ ಬಳಕೆಯೇ ಆಗಿಲ್ಲ ಎಂಬುದನ್ನು ಗಮನಿಸಬೇಕು. ಕೈಗಾರಿಕೆ ಉದ್ದೇಶಕ್ಕೆ ಸಾಧೀನಪಡಿಸಿಕೊಂಡು ಅನ್ಯ ಉದ್ದೇಶಗಳಿಗೆ ಬಳಸಿರುವುದನ್ನೂ ಗಮನಿಸಬೇಕು. ಭೂಮಿಯನ್ನು ಸ್ವಾಧೀನಪಡಿಸಿಕೊಂಡ ನಂತರ ರೈತರಿಗೆ ಪರಿಹಾರ ನೀಡುವಲ್ಲಿ ಇದು ಮಹಾ ವಂಚನೆಗಳನ್ನೂಮಾಡಿದೆ. ಭೂಸ್ವಾಧೀನ ಮಾಡಿಕೊಳ್ಳುವಾಗ ಅನುಸರಿಸಬೇಕಾದ ಪರಿಸರ ಮಾಲಿನ್ಯ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಅಧ್ಯಯನವೇ ಇಲ್ಲವಾಗಿದೆ. ಕೆಐಎಡಿಬಿಯ ಇಂತಹ ಕರ್ಮಕಾಂಡಗಳ ಬಗ್ಗೆ ಸಿಎಜಿ ಗಂಭೀರವಾದ ಆರೋಪಗಳನ್ನು ಮಾಡಿದೆ.
ಚಾಣಕ್ಯ ವಿಶ್ವವಿದ್ಯಾಲಯದಂತಹ ಕೈಗಾರಿಕೆಯೇತರ ಸಂಸ್ಥೆಗಳಿಗೆ
ಏರೋಸ್ಪೇಸ್ ಹಾಗೂ ಡಿಫೆನ್ಸ್ ಕಾರಿಡಾರ್ ಹೆಸರಿನಲ್ಲಿ ಕೆಐಎಡಿಬಿ ಹಂತ 1-2 ಮತ್ತು ಎಸ್.ಇ.ಜಡ್. ಹೆಸರಿನಲ್ಲಿ ಭೂ ಸ್ವಾಧೀನ ಮಾಡಿಕೊಂಡ ಭೂಮಿಯಲ್ಲಿ ಸಂಬಂಧಿತ ಕೈಗಾರಿಕೆಗಳು ಬರದೇ ಖಾಲಿ ಬಿದ್ದಿವೆ. ಬದಲಿಗೆ, ಕೆಐಎಡಿಬಿಯ ಬೃಹತ್ ಭ್ರಷ್ಟಾಚಾರದ ಕೂಸು ಚಾಣಕ್ಯ ವಿಶ್ವವಿದ್ಯಾಲಯದಂತಹ ಕೈಗಾರಿಕೆಯೇತರ ಸಂಸ್ಥೆಗಳು ಬಂದಿವೆ. ರಿಯಲ್ ಎಸ್ಟೇಟ್ ಕಂಪನಿಗಳಿಗೆ ಭೂಮಿ ಹಂಚಲಾಗಿದೆ.
ಹಿಂದುಳಿದ ಜಿಲ್ಲೆ ಮತ್ತು ಪ್ರದೇಶಗಳಿಗೆ ಆದ್ಯತೆ ನೀಡಿ
ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ಬೆಳವಣಿಗೆ ವಿಚಾರದಲ್ಲಿ ಸರ್ಕಾರಕ್ಕೆ ಸಮತೋಲಿತವಾದ ಕಣ್ಣೋಟವೇ ಇಲ್ಲವಾಗಿದೆ. ರಾಜ್ಯದಲ್ಲಿರುವ ಒಟ್ಟಾರೆ ಕೈಗಾರಿಕೆಗಳ ಪೈಕಿ ಅರ್ಧಕ್ಕಿಂತ ಹೆಚ್ಚಿನ ಕೈಗಾರಿಕೆಗಳು ಬೆಂಗಳೂರು ಮತ್ತು ಬೆಂಗಳೂರಿನ ಹೊರವಲ್ಲದಲ್ಲೇ ಕೇಂದ್ರೀಕೃತವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ವಿವಿಧ ಪ್ರದೇಶಗಳ ನಡುವೆ ವಿಪರೀತವಾದ ಅಸಮತೋಲನ ಉಂಟಾಗಿದೆ. ರಾಜ್ಯ ಸರ್ಕಾರವು ನಿಜವಾಗಿಯೂ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಕೈಗಾರಿಕೆಗಳನ್ನು ಬೆಳೆಸಬೇಕೆಂದಿದ್ದರೆ, ಹಿಂದುಳಿದ ಜಿಲ್ಲೆ ಮತ್ತು ಪ್ರದೇಶಗಳಲ್ಲಿ ಆದ್ಯತೆಯಿಂದ ಸ್ಥಾಪಿಸಲು ಮುತುವರ್ಜಿ ಮಾಡಬೇಕು.
ಬೆಂಗಳೂರಿನ ಹೊರವಲಯದ ಕೃಷಿ ಪ್ರದೇಶಗಳು ಜೀವಧಾತುವಾಗಿವೆ
ಈಗಾಗಲೇ ಬೆಂಗಳೂರು ನಗರ ತನ್ನ ತಾಳಿಕೆಯ ಮಿತಿಯನ್ನು ಮೀರಿಬಿಟ್ಟಿದೆ. ಸಾರಿಗೆ, ನೀರು, ರಸ್ತೆ, ಚರಂಡಿ, ಪರಿಸರ, ನೈರ್ಮಲ್ಯ, ಶಾಲೆ, ಆಸ್ಪತ್ರೆ ಎಲ್ಲವೂ ಬಿಕ್ಕಟ್ಟಿನಲ್ಲಿವೆ. ಬೆಂಗಳೂರಿನ ಜನತೆಯ ಸುಸ್ಥಿರ ಬದುಕಿಗೆ ಆಹಾರ ಪದಾರ್ಥಗಳು, ತರಕಾರಿಗಳು, ಹಣ್ಣು ಹಂಪಲುಗಳು, ಮುಂತಾದುವನ್ನು ಒದಗಿಸುವ ಬೆಂಗಳೂರಿನ ಹೊರವಲಯದ ಕೃಷಿ ಪ್ರದೇಶಗಳು ಜೀವಧಾತುವಾಗಿವೆ. ಈ ಹಿನ್ನೆಲೆಯಲ್ಲಿ ದೇವನಹಳ್ಳಿ ತಾಲೂಕಿನ ಕೃಷಿ ಪ್ರದೇಶಗಳು ಬೆಂಗಳೂರನ್ನು ಮತ್ತು ಅದರ ಜನತೆಯನ್ನು ಕಾಪಾಡಲು ಮತ್ತು ಬೇಸಾಯದ ಬದುಕನ್ನೇ ನಂಬಿರುವ ರೈತರ ಭೂಮಿಗಳನ್ನು ಕೃಷಿ ಪ್ರದೇಶಗಳಾಗಿ ಉಳಿಸುವುದು ಅತ್ಯಗತ್ಯವಾಗಿದೆ.
ಸರ್ಕಾರದ ಅತಾರ್ಕಿಕ ವಾದ
ರಾಜ್ಯದ ಕಾಂಗ್ರೆಸ್ ಸರ್ಕಾರವು ಚನ್ನರಾಯಪಟ್ಟಣ ಭೂಸ್ವಾಧೀನವನ್ನು ತನ್ನದೇ ನೇತೃತ್ವದ ಯುಪಿಎ-2 ಸರ್ಕಾರ ಜಾರಿಗೊಳಿಸಿದ “ಭೂಸ್ವಾಧೀನ, ಪುನಶ್ಚೇತನ ಮತ್ತು ಪುನರ್ವಸತಿ ಕಾಯ್ದೆ, 2013 ರಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು” ಅನ್ನು (The Right to Fair Compensation and Transparency in Land Acquisition, Rehabilitation and Resettlement Act, 2013) ಸಂಪೂರ್ಣವಾಗಿ ಉಲ್ಲಂಘಿಸಿ ಆದೇಶಿಸಿರುವುದು ಅಕ್ರಮವಾಗಿದೆ. ಒಮ್ಮೆ ಅಂತಿಮ ಅಧಿಸೂಚನೆ ಹೊರಡಿಸಿದ ನಂತರ ವಾಪಸ್ ಪಡೆಯಲಾಗದು ಎಂಬ ವಾದವೂ ಅತಾರ್ಕಿಕವಾಗಿದೆ. ಅಂತಿಮ ಅಧಿಸೂಚನೆಗಳನ್ನು ವಾಪಸ್ ಪಡೆದಿರುವುದಕ್ಕೆ ರಾಜ್ಯದಲ್ಲೂ ಮತ್ತೂ ದೇಶದಲ್ಲಿ ಹಲವು ಉದಾಹರಣೆಗಳಿವೆ. ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆ ನಡುವಿನ ಒಂದು ವರ್ಷದ ಮಿತಿಯನ್ನು ಈ ಪ್ರಕರಣವು ಮೀರಿದೆ. ಇವೆರೆಡರ ನಡುವೆ ಮೂರು ವರ್ಷಗಳಿಗೂ ಹೆಚ್ಚಿನ ಸಮಯವಾಗಿದೆ.
ಈ ಹೋರಾಟದಲ್ಲಿ ಸಿಪಿಐ(ಎಂ) ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತದೆ
ಹೀಗಾಗಿ ಕಾನೂನಾತ್ಮಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಯಾವುದೇ ದೃಷ್ಟಿಯಿಂದಲೂ ರಾಜ್ಯ ಸರ್ಕಾರ ಚನ್ನರಾಯಪಟ್ಟಣ ಭೂಸ್ವಾಧೀನವನ್ನು ರದ್ದಪಡಿಸುವುದು ಅತ್ಯಂತ ಸಮಂಜಸವಾಗಿದೆ. ಇವೆಲ್ಲವನ್ನೂ ಮೀರಿ ರಾಜ್ಯದ ಕಾಂಗ್ರೆಸ್ ಸರ್ಕಾರ ಮುಂದುವರಿದಲ್ಲಿ, ರಾಜ್ಯದ ಕಾಂಗ್ರೆಸ್ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳ ನಡುವೆ ವ್ಯತ್ಯಾಸವಿಲ್ಲವೆಂದು ರಾಜ್ಯದ ಜನತೆ ತೀರ್ಮಾನಿಸುತ್ತಾರೆ ಮತ್ತು ಹೋರಾಟಗಳನ್ನು ತೀವ್ರಗೊಳಿಸುತ್ತಾರೆ. ಸಿಪಿಐ(ಎಂ) ಈ ಹೋರಾಟದಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡು ಹೋರಾಟವನ್ನು ವಿಸ್ತರಿಸಲು ಮತ್ತು ತೀವ್ರಗೊಳಿಸಲು ಶ್ರಮಿಸುತ್ತದೆ. ಆದ್ದರಿಂದ ಜುಲೈ 15ರಂದು ಮುಖ್ಯಮಂತ್ರಿಯವರು ಕರೆದಿರುವ ಸಭೆಯಲ್ಲಿ ಚನ್ನರಾಯಪಟ್ಟಣ ಭೂಸ್ವಾಧೀನವನ್ನು ಪೂರ್ಣವಾಗಿ ರದ್ದುಪಡಿಸುವ ತೀರ್ಮಾನವನ್ನು ಪ್ರಕಟಿಸಬೇಕು ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಒತ್ತಾಯಿಸಿದೆ.
