ಎಂಪಿಎಲ್‌ಎಡಿಎಸ್ ನಿಧಿಯ ಅಮಾನತಿಗೆ ಪಿಣರಾಯಿ ವಿರೋಧ

ಎಂಪಿಎಲ್‌ಎಡಿಎಸ್ ನಿಧಿಗಳು ಕೊವಿಡ್ ಸಂಬಂಧಿತ ಚಟುವಟಿಕೆಗಳಿಗೆ ನೆರವಾಗುತ್ತವೆ ಅವನ್ನು ಅಮಾನತು ಮಾಡುವ ನಿರ್ಧಾರವನ್ನು ಮರು ಪರಿಶೀಲಿಸಬೇಕು- ಕೇರಳ ಮುಖ್ಯಮಂತ್ರಿ

’ಸಂಸತ್ ಸದಸ್ಯರ ಸ್ಥಳೀಯ ಕ್ಷೇತ್ರ ಅಭಿವೃದ್ಧಿ ಪರಿಯೋಜನೆ’(ಎಂಪಿಎಲ್‌ಎಡಿಎಸ್) ಎರಡು ವರ್ಷಗಳ ಕಾಲ ಅಮಾನತುಗೊಳಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಲವಾಗಿ ಖಂಡಿಸಿದ್ದಾರೆ. ಇದು ಸಂಸತ್ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ತೀವ್ರವಾಗಿ ಬಾಧಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕೇರಳಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ಕೇಂದ್ರ ಸರಕಾರ ನೀಡಿರುವ ಹಣಕಾಸು ನೆರವು ಅತ್ಯಲ್ಪವಾಗಿದ್ದು ಏನೇನೂ ಸಾಲದಾಗಿದೆ. ಈ ಸಂದರ್ಭದಲ್ಲಿ ಕೊವಿಡ್ ಸಂಬಂಧಿತ ಚಟುವಟಿಕೆಗಳಿಗೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಎಂಪಿಎಲ್‌ಎಡಿಎಸ್ ನಿಧಿಗಳು ಅನಿವಾರ್ಯವಾಗುತ್ತವೆ. ಕೇರಳದ ಕೆಲವು ಸಂಸತ್ ಸದಸ್ಯರು ತಮ್ಮ ಎಂಪಿಎಲ್‌ಎಡಿಎಸ್ ನಿಧಿಗಳಿಂದ ವೈಯಕ್ತಿಕ ಸುರಕ್ಷತಾ ಪರಿಕರ(ಪಿಪಿಇ)ಗಳನ್ನು, ತಪಾಸಣಾ ಕಿಟ್‌ಗಳನ್ನು ಮತ್ತು ಇತರ ವೈದ್ಯಕೀಯ ಸಾಧನಗಳನ್ನು ಖರೀದಿಸುವ ಆಶಯವನ್ನು ವ್ಯಕ್ತಪಡಿಸಿದ್ದರು. ಈಗ ಅದನ್ನು ಕಳಕೊಳ್ಳುತ್ತಿದ್ದೇವೆ ಎಂದ ಮುಖ್ಯಮಂತ್ರಿಗಳು ಈ ಸ್ಕೀಮಿನ ಹಣ ಇರುವುದು ಆಯಾಯ ಕ್ಷೇತ್ರದ ಜನಗಳಿಗಾಗಿಯೇ ಹೊರತು ಕೇಂದ್ರ ಸರಕಾರದ ನಿಧಿ ಸಂಗ್ರಹಕ್ಕೆ ಅಲ್ಲ ಎಂದು ಹೇಳಿದ್ದಾರೆ.

“ಯಾವುದೇ ಅನಾಹುತ ನಡೆದಾಗ ಮಧ್ಯಪ್ರವೇಶ ಸ್ಥಳೀಯವಾಗಿಯೇ ನಡೆಯಬೇಕು, ಸಂಸತ್ ಸದಸ್ಯರು ಬುಡಮಟ್ಟದಲ್ಲಿ ಹಲವು ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.   ಮಹಾಮಾರಿ ಭುಗಿಲೇಳದಂತೆ ತಡೆಯಲು ರಾಜ್ಯ ಸರಕಾರ ಬದ್ಧವಾಗಿರುವಾಗ ಪ್ರಾದೇಶಿಕ ಚಟುವಟಿಕೆಗಳಿಗೆ ಆದ್ಯತೆ ಕೊಡಬೇಕಾಗುತ್ತದೆ, ಇದಕ್ಕೆ ಸ್ಥಳೀಯವಾಗಿ ಹಣದ ಅಗತ್ಯವಿದೆ” ಎಂದ ಪಿಣರಾಯಿ ವಿಜಯನ್ “ಕೇಂದ್ರ ಸರಕಾರದ ನಿರ್ಧಾರ ಒಕ್ಕೂಟ ರಚನೆಯ ಭಾವನೆಗೆ ವಿರುದ್ಧವಾಗಿರುವಂತದ್ದು. ಈ ನಿರ್ಧಾರವನ್ನು ಮರು ಪರಿಶೀಲಿಸಬೇಕು. ವಾಸ್ತವವಾಗಿ ಕೇಂದ್ರ ಸರಕಾರ ಸಂಸತ್ ಸದಸ್ಯರು ತಮ್ಮ ಎಂಪಿಎಲ್‌ಎಡಿಎಸ್ ನಿಧಿಗಳನ್ನು ಕೊರೊನ ವೈರಸ್ ಶಮನ ಚಟುವಟಿಕೆಗಳಿಗೆ ಬಳಸುವಂತೆ ಸೂಚಿಸಬೇಕಿತ್ತು” ಎಂದು ಟಿಪ್ಪಣಿ ಮಾಡಿದ್ದಾರೆ.

‘ಶಾಸಕರ ಸ್ಥಳೀಯ ಕ್ಷೇತ್ರ ಅಭಿವೃದ್ಧಿ ಪರಿಯೋಜನೆ'(ಎಂಎಲ್ಎಎಲ್ಎಡಿಎಸ್)ಯ ನಿಧಿಗಳನ್ನು ವೈದ್ಯಕೀಯ ಸಾಧನಗಳನ್ನು ಮತ್ತು ಕೊವಿಡ್  ಶುಶ್ರೂಷೆಗೆ ಅಗತ್ಯವಾದ ಇತರ ವಸ್ತುಗಳನ್ನು ಖರೀದಿಸಲು ಉಪಯೋಗಿಸಬಹುದು ಎಂದೂ ಅವರು ತಿಳಿಸಿದರು, ಕೆಲವು ಶಾಸಕರು ಹೀಗೆ ಮಾಡುವುದಾಗಿ ನಿರ್ಧರಿಸಿದ್ದಾರೆ. ಇತರ ಶಾಸಕರೂ ತಮ್ಮ ಈ ನಿಧಿಗಳನ್ನು ಇಂತಹ ಚಟುವಟಿಕೆಗಳಿಗೆ ತಮ್ಮ ಕ್ಷೇತ್ರಗಳಲ್ಲಿ ಬಳಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *