ದುರ್ಬಲ ವಿಭಾಗಗಳು ಎಂಬ ಪರಿಕಲ್ಪನೆಯೇ ಹಾಸ್ಯಾಸ್ಪದ: 10% ಮೀಸಲಾತಿ- ಮತ್ತೊಂದು ಪ್ರಜಾಪ್ರಭುತ್ವ ವಿರೋಧಿ ನಡೆ

ಕೇಂದ್ರ ಸರಕಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಮೂಲಕ ಇದುವರೆಗೆ ಮೀಸಲಾತಿ ಇರದ ಪ್ರವರ್ಗಗಳಲ್ಲಿನ ಆರ್ಥಿಕವಾಗಿ ದುರ್ಬಲವಾಗಿರುವ ವಿಭಾಗಗಳಿಗೆ ೧೦% ಮೀಸಲಾತಿಯ ಮಾನದಂಡಗಳ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಆದೇಶದ ಪ್ರಕಾರ ಇದು ಭಾರತ ಸರಕಾರದ ಸಿವಿಲ್ ಹುದ್ದೆಗಳು ಮತ್ತು ಸೇವೆಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಆದ್ಯತೆಯ ಮೇಲೆ ಮೀಸಲಾತಿಯ ಸೌಲಭ್ಯಗಳಿಗಾಗಿ.
ಒಟ್ಟು ಎಂಟು ಲಕ್ಷ ರೂ. ಅಥವ ಅದಕ್ಕಿಂತ ಕಡಿಮೆ ವಾರ್ಷಿಕ ಆದಾಯದ ಕುಟುಂಬಗಳು ಈ ಮೀಸಲಾತಿಗೆ ಅರ್ಹವಾಗುತ್ತವೆ. ಇದಲ್ಲದೆ, ಈ ಕೆಳಗಿನ ಆಸ್ತಿಗಳಿರುವವರನ್ನು ಪರಿಗಣಿಸಲಾಗುವುದಿಲ್ಲ: ೫ ಎಕ್ರೆ ಅಥವ ಹೆಚ್ಚು ಕೃಷಿ ಭೂಮಿ ಹೊಂದಿರುವವರು; ಒಂದು ಅಧಿಸೂಚಿತ ಮುನಿಸಿಪಾಲಿಟಿಯಲ್ಲಿ ೧೦೦ ಚದರ ಗಜ ಅಥವ ಹೆಚ್ಚು, ಇದನ್ನು ಬಿಟ್ಟು ಇತರೆಡೆಗಳಲ್ಲಿ ೨೦೦ ಚದರ ಗಜಕ್ಕಿಂತ ಹೆಚ್ಚಿನ ವಾಸದ ನಿವೇಶನ ಹೊಂದಿರುವವರು ಮೀಸಲಾತಿ ಸೌಲಭ್ಯಗಳಿಗೆ ಅರ್ಹರಾಗಿರುವುದಿಲ್ಲ.
ಈ ಮಾನದಂಡಗಳು ಆರ್ಥಿಕವಾಗಿ ದುರ್ಬಲ ವಿಭಾಗಗಳು ಎಂಬ ಪರಿಕಲ್ಪನೆಯನ್ನೇ ಹಾಸ್ಯಾಸ್ಪದಗೊಳಿಸಿವೆ ಎನ್ನುತ್ತ ಸಿಪಿಐ(ಎಂ) ಪೊಲಿಟ್‌ಬ್ಯುರೊ ಅವನ್ನು ವಿರೋಧಿಸಿದೆ. ಏಕೆಂದರೆ, ಈ ಸರಕಾರ ೧೮,೦೦೦ರೂ. ಕನಿಷ್ಟ ಕೂಲಿಯನ್ನು ಕೂಡ ಒಪ್ಪುತ್ತಿಲ್ಲ. ಆದರೆ ಇಲ್ಲಿ ಸುಮಾರು ೭೦,೦೦೦ ರೂ. ಮಾಸಿಕ ಆದಾಯ ಹೊಂದಿರುವವರನ್ನು ಮೀಸಲಾತಿಗೆ ಅರ್ಹರೆಂದು ಸೇರಿಸಿದೆ.
ಈ ಮಾನದಂಡ ನಿಜವಾದ ದುರ್ಬಲ ವಿಭಾಗಗಳನ್ನು ಯಾವುದೇ ಸೌಲಭ್ಯದಿಂದ ವಂಚಿಸುತ್ತದೆ, ಏಕೆಂದರೆ ಉತ್ತಮ ಆದಾಯ ಹೊಂದಿರುವವರೇ ಇವನ್ನೆಲ್ಲ ಕಬಳಿಸುತ್ತಾರೆ. ಇದಲ್ಲದೆ ಇತರ ಹಿಂದುಳಿದ ವರ್ಗ(ಒಬಿಸಿ)ಗಳ ಕೆನೆಪದರಕ್ಕೆ ನಿರೂಪಿಸಿರುವ ಮಾನದಂಡಗಳನ್ನೇ ಇಲ್ಲಿಯೂ ಬಳಸಿರುವುದು ಸಂಪೂರ್ಣ ತಪ್ಪು. ಏಕೆಂದರೆ ಒಬಿಸಿ ವಿಭಾಗಗಳು ಸಾಮಾಜಿಕವಾಗಿ ವಂಚಿತವೂ ಅಗಿರುವವುಗಳು. ಇದು ಸಾಮಾನ್ಯ ಪ್ರವರ್ಗಕ್ಕೆ ಅನ್ವಯಿಸುವುದಿಲ್ಲ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಅಭಿಪ್ರಾಯ ಪಟ್ಟಿದೆ.
ಸಂಸತ್‌ನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಚರ್ಚಿಸುವಾಗ ಈ ಪ್ರಸ್ತಾವಗಳನ್ನು ಸಂಸತ್ತಿನ ಮುಂದೆ ಇಟ್ಟಿರದಿರುವುದು ಈ ಸರಕಾರದ ಪ್ರಜಾಪ್ರಭುತ್ವ-ವಿರೋಧಿ ನಡೆಗೆ ಅನುಗುಣವಾಗಿಯೇ ಇದೆ. ಅಲ್ಲದೆ ಈಗಾಲೇ ಜನವರಿ ೩೧ ರಂದು ಸಂಸತ್ತಿನ ಅಧಿವೇಶನವನ್ನು ಕರೆಯಲಾಗಿದ್ದು, ಅಲ್ಲಿಯ ವರೆಗೆ ಕಾಯದೆ, ಸ್ವೇಚ್ಛಾಚಾರೀ, ಕಾಯಿದೆಬಾಹಿರ ರೀತಿಯಲ್ಲಿ ಒಂದು ಕಾರ್ಯಾಂಗದ ಆದೇಶದ ಮೂಲಕ ಇದನ್ನು ಮುಂದೊತ್ತಿದೆ ಎಂಬ ಸಂಗತಿಯತ್ತವೂ ಪೊಲಿಟ್‌ ಬ್ಯುರೊ ಗಮನ ಸೆಳೆದಿದೆ.
ಸಂಸತ್ತಿನ ಒಂದು ಸೂಕ್ತ ಶಾಸನವಿಲ್ಲದೆ ಈ ಕಾರ್ಯಾಂಗದ ಆದೇಶವನ್ನು ಕಾರ್ಯಗತಗೊಳಿಸಲು ಬಿಡಬಾರದು ಎಂದು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಸರಕಾರವನ್ನು ಆಗ್ರಹಿಸಿದೆ.

Leave a Reply

Your email address will not be published. Required fields are marked *