ಪೌರತ್ವ(ತಿದ್ದುಪಡಿ) ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು-ಫೆ.೪: ಅಖಿಲ ಭಾರತ ಪ್ರತಿಭಟನೆ

ಲೋಕಸಭೆ ಅಂಗೀಕರಿಸಿರುವ ಮತ್ತು ರಾಜ್ಯಸಭೆಯ ಅಂಗೀಕಾರಕ್ಕೆ ಕಾಯುತ್ತಿರುವ ಪ್ರಸ್ತಾವಿತ ಪೌರತ್ವ(ತಿದ್ದುಪಡಿ) ಮಸೂದೆಯನ್ನು ಕುರಿತಂತೆ ದೇಶದ ಈಶಾನ್ಯ ಭಾಗದಲ್ಲಿ ಹೆಚ್ಚುತ್ತಿರುವ ಕ್ಷೋಭೆ ಮತ್ತು ತಳಮಳದ ಬಗ್ಗೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಳವಾದ ಆತಂಕವನ್ನು ವ್ಯಕ್ತಪಡಿಸಿದೆ.
ಈ ಮಸೂದೆ ಜಾತಿ, ಪಂಥ, ಲಿಂಗ, ಜನಾಂಗ ಮತ್ತು ಸಂಸ್ಕೃತಿಗಳ ವೈವಿಧ್ಯಗಳನ್ನು ಭೇದ-ಭಾವವಿಲ್ಲದೆ ಎಲ್ಲರಿಗೂ ಪೌರತ್ವ ನೀಡುವ ಸಂವಿಧಾನದ ಮೂಲ ನೆಲೆಯನ್ನು ಭಂಗಗೊಳಿಸಿದೆ. ಈ ಪ್ರಸ್ತಾವ ಪೌರತ್ವಕ್ಕೆ ಧಾರ್ಮಿಕ ಗುರುತನ್ನೇ ಮಾನ್ಯ ಮಾಡಿರುವುದರಿಂದಾಗಿ ವೈವಿಧ್ಯತೆಯಲ್ಲಿ ಏಕತೆಯ ವಿಚಾರಕ್ಕೆ ಬೆದರಿಕೆಯನ್ನು ಒಡ್ಡಿದೆ.
ಈಶಾನ್ಯ ಭಾಗ ದೇಶದಲ್ಲಿ ಎಲ್ಲ ಜನಗಳ ನಡುವೆಯೂ ಶ್ರೀಮಂತ ವೈವಿಧ್ಯತೆಯಿರುವ, ಮತ್ತು ಸಾಂಸ್ಕೃತಿಕ, ಭಾಷಿಕ, ಧಾರ್ಮಿಕ ಮತ್ತು ಜನಾಂಗೀಯ ಬಹುತ್ವ ಆಧಾರಿತ ಸಂವೇದನೆಗಳನ್ನು ಹೊಂದಿರುವ ಒಂದು ಪ್ರದೇಶ. ಈ ಪ್ರದೇಶದಲ್ಲಿ ವಾಸವಾಗಿರುವ ಸಮುದಾಯಗಳ ವಿಶಿಷ್ಟ ಅಸ್ಮಿತೆಗಳನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ  ಒಂದು ಅಭದ್ರತೆಯ ಭಾವವೂ ಇದೆ. ಇತ್ತೀಚಿನ ಸಮಯದಲ್ಲಿ ಈ ಪ್ರದೇಶದಲ್ಲಿ ಹಿಂದಿನ ವರ್ಷಗಳಿಗೆ  ಹೋಲಿಸಿದರೆ ಶಾಂತಿ ನೆಲೆಸುವಂತಾಗಿದೆ. ಆದರೆ ಈ ಪೌರತ್ವ(ತಿದ್ದುಪಡಿ) ಮಸೂದೆ ಈ ಸ್ಥಿರತೆಯನ್ನು ಕದಡಿಸುತ್ತಿದೆ ಎಂದು ಸಿಪಿಐ(ಎಂ) ಕಳವಳ ವ್ಯಕ್ತಪಡಿಸಿದೆ.
ಅಸ್ಸಾಂ ಮತ್ತು ಈಶಾನ್ಯ ಭಾರತದ ಇತರ ಬಹುಪಾಲು ರಾಜ್ಯಗಳಲ್ಲಿ ಈ ಶಾಸಕೀಯ ಪ್ರಸ್ತಾವದ ವಿರುದ್ಧ ಪ್ರತಿಭಟಿಸುತ್ತ ವಿಶಾಲ ಜನವಿಭಾಗಗಳು ಬೀದಿಗಳಿಗೆ ಇಳಿದಿವೆ. ಈ ಜನತೆಯ ಹೆಚ್ಚಿರುವ ಅಭದ್ರತೆಯ ಭಾವ ಮತ್ತು ಕ್ಷೋಭೆಯನ್ನು ಗಣನೆಗೆ ತಗೊಂಡು ಪ್ರಸ್ತಾವಿತ ಸಂವಿಧಾನ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯುವುದು ಅತ್ಯಂತ ತುರ್ತಿನ ವಿಷಯವಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಈ ಪ್ರಸ್ತಾವನೆಯನ್ನು ಮುಂದಕ್ಕೆ ಒಯ್ಯದೆ ಸಂಪೂರ್ಣವಾಗಿ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದೆ.
ಫೆಬ್ರುವರಿ 4ರಂದು ದೇಶಾದ್ಯಂತ ಈ ತಿದ್ದುಪಡಿ ಮಸೂದೆಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಪ್ರತಿಭಟನಾ ಕಾರ್ಯಾಚರಣೆಗಳನ್ನು ನಡೆಸಬೇಕು ಎಂದು ಪೊಲಿಟ್‌ಬ್ಯುರೊ ಪಕ್ಷದ ಎಲ್ಲ ಘಟಕಗಳಿಗೆ ಕರೆ ನೀಡಿದೆ. ದೇಶದ ವೈವಿಧ್ಯತೆಯಲ್ಲಿನ ಏಕತೆಯಲ್ಲಿ ಮತ್ತು ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ನಮ್ಮ ಪೌರತ್ವದ ಸಾಮಾನ್ಯ ಆಧಾರದಲ್ಲಿ ನಂಬಿಕೆಯಿರುವ ಎಲ್ಲ ಪಕ್ಷಗಳು, ಗುಂಪುಗಳು ಮತ್ತು ನಾಗರಿಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದೂ ಸಿಪಿಐ(ಎಂ) ಪೊಲಿಟ್‌ಬ್ಯುರೊ ಮನವಿ ಮಾಡಿದೆ.

Leave a Reply

Your email address will not be published. Required fields are marked *