ವೆನೆಝುವೆಲಾದ ಮೇಲೆ ಅಮೆರಿಕನ್ ಸಾಮ್ರಾಜ್ಯಶಾಹಿಯ ಹೊಸ ಆಕ್ರಮಣ

ಅಮೆರಿಕ ಸಂಯುಕ್ತ ಸಂಸ್ಥಾನ ವೆನೆಝುವೆಲಾದ ವಿರೋಧಿ ಗುಂಪುಗಳ ಮುಖಂಡ ಯುವಾನ್ ಗುಯೆಡೊರನ್ನು ವೆನೆಝುವೆಲಾದ ಅಧ್ಯಕ್ಷ ಎಂದು ಮಾನ್ಯ ಮಾಡಿರುವುದು ವೆನೆಝುವೆಲಾ ಬೊಲಿವೇರಿಯನ್ ಗಣತಂತ್ರದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ. ಇದು ಆ ದೇಶದಲ್ಲಿನ ಸಂವಿಧಾನಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ಮತ್ತು ಕ್ಷಿಪ್ರಕ್ರಾಂತಿಗೆ ಉತ್ತೇಜನೆ ನೀಡುವ ಒಂದು ಪ್ರಯತ್ನ ಎಂದು ಅದು ಹೇಳಿದೆ.

ನಿಕೊಲಸ್ ಮಡುರೊ ಮೇ ೨೦, ೨೦೧೮ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ವೆನೆಝುವೆಲಾ ಬೊಲಿವೇರಿಯನ್ ಗಣತಂತ್ರದ ಅಧ್ಯಕ್ಷರಾಗಿ ಕಾನೂನುಬದ್ಧವಾಗಿ ಚುನಾಯಿತರಾಗಿದ್ದಾರೆ. ಅವರ ಚುನಾವಣೆ ವೆನೆಝುವೆಲಾದ ಸಂವಿಧಾನ ಮಂಜೂರು ಮಾಡಿರುವಂತಹ ಜನತೆಯ ಇಚ್ಛೆಯ ಒಂದು ಅಭಿವ್ಯಕ್ತಿ. ಹಲವಾರು ದೇಶಗಳಿಂದ ಬಂದ ಚುನಾವಣಾ ವೀಕ್ಷಕರು ಈ ಚುನಾವಣೆಯ ಉಸ್ತುವಾರಿ ನೋಡಿದ್ದು ಅವರೆಲ್ಲ  ಇದು ಮುಕ್ತ ಮತ್ತು ನ್ಯಾಯಯುತ ಚುನಾವಣೆ ಎಂದು ಅನುಮೋದಿಸಿದ್ದಾರೆ. ಅಮೆರಿಕ ವಿವಿಧ ವಿಧಾನಗಳಿಂದ, ಪ್ರಜಾಸತ್ತಾತ್ಮಕವಾಗಿ ಚುನಾಯಿತವಾಗಿರುವ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಲೇ ಇದೆ. ಅಮಾನವೀಯ ಆರ್ಥಿಕ ನಿರ್ಬಂಧಗಳು, ಮತ್ತು ಮಿಲಿಟರಿ ಹಸ್ತಕ್ಷೇಪದ ಬೆದರಿಕೆಯೂ ಇದರಲ್ಲಿ ಸೇರಿದೆ. ಇವು ವಿಶ್ವಸಂಸ್ಥೆಯ ಸನ್ನದ್ದಿನ ಉಲ್ಲಂಘನೆಯ ಭಂಡ ಕೃತ್ಯಗಳು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

ಅಮರಿಕ ಸಂಯುಕ್ತ ಸಂಸ್ಥಾನವು ವೆನೆಝುವೆಲಾದ ಚುನಾಯಿತ ಸರಕಾರದ ವಿರುದ್ಧ ಬಂಡೇಳುವಂತೆ ಸಶಸ್ತ್ರ ಪಡೆಗಳಿಗೆ ಕರೆ ನೀಡಿದ್ದರೂ ವೆನೆಝುವೆಲಾದ ಜನತೆ ಮತ್ತು ಸಶಸ್ತ್ರ ಪಡೆಗಳು ಮಡುರೊ ಆಡಳಿತದ ಪರವಾಗಿ ನಿಂತಿವೆ.

ವೆನೆಝುವೆಲಾದ ಜನತೆ ತಮ್ಮ ದೇಶವನ್ನು ಅಸ್ಥಿರಗೊಳಿಸುವ ಅಮೆರಿಕಾದ ಎಲ್ಲ ಪ್ರಯತ್ನಗಳನ್ನು ಪ್ರತಿರೋಧಿಸುವುದನ್ನು ಮುಂದುವರೆಸುತ್ತಾರೆ, ಮತ್ತು ಇನ್ನ್ತೊಮ್ಮೆ ಬಲಪಂಥೀಯ ಶಕ್ತಿಗಳ ಕ್ಷಿಪ್ರಕ್ರಾಂತಿ ಪ್ರಯತ್ನವನ್ನು ಸಮಗ್ರವಾಗಿ ಸೋಲಿಸುತ್ತಾರೆ ಎಂಬ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಸಿಪಿಐ(ಎಂ) ವೆನೆಝುವೆಲಾದ ಮೇಲೆ ಅಮೆರಿಕನ್ ಸಾಮ್ರಾಜ್ಯಶಾಹಿಯ ಇತ್ತೀಚಿನ ಈ ಆಕ್ರಮಣದ ಕೃತ್ಯವನ್ನು ಬಲವಾಗಿ ಖಂಡಿಸಿದೆ ಮತ್ತು ಜಗತ್ತಿನಾದ್ಯಂತ ಎಲ್ಲ ಜನತಾಂತ್ರಿಕ ಮತ್ತು ಶಾಂತಿಪ್ರಿಯ ಜನಗಳು ಅಮೆರಿಕನ್ ಹಸ್ತಕ್ಷೇಪದ ವಿರುದ್ಧ ಮತ್ತು ಅವರ ಸಾರ್ವಭೌಮತೆಯ ರಕ್ಷಣೆಯಲ್ಲಿ ವೆನೆಝುವೆಲಾ ಜನತೆಯ ಹೋರಾಟಗಳೊಂದಿಗೆ ಸೌಹಾರ್ದ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದೆ.

ಯಾಂಕಿಗಳೇ ತೊಲಗಿ…..”

ವೆನೆಝುವೆಲಾದ ಕಾನೂನುಬದ್ಧವಾಗಿ ಚುನಾಯಿತರಾಗಿರುವ ಅಧ್ಯಕ್ಷ ನಿಕೊಲಸ್ ಮಡುರೊ ಜನವರಿ ೨೩ರಂದು ತನ್ನ ಅಧ್ಯಕ್ಷೀಯ ನಿವಾಸದ ಮುಂದೆ ನೆರೆದಿದ್ದ ಸಾವಿರಾರು ಬೆಂಬಲಿಗರನ್ನು ಉದ್ದೇಶಿಸ ಮಾತನಾಡುತ್ತ “ಪದಚ್ಯುತಿಯ ಪ್ರಯತ್ನಗಳಿಗೆ ನಮ್ಮ ಧಿಕ್ಕಾರ, ಹಸ್ತಕ್ಷೇಪದ ಕೃತ್ಯಗಳಿಗೆ ಧಿಕ್ಕಾರ, ಸಾಮ್ರಾಜ್ಯಶಾಹಿಗೆ ಧಿಕ್ಕಾರ..ಅಮೆರಿಕ ಸಂಯುಕ್ತ ಸಂಸ್ಥಾನಗಳ ಸಾಮ್ರಾಜ್ಯಶಾಹಿ ಸರಕಾರದೊಂದಿಗೆ ರಾಜತಾಂತ್ರಿಕ ಮತ್ತು ರಾಜಕೀಯ ಸಂಬಂಧಗಳನ್ನು ಮುರಿದುಕೊಳ್ಳಲು ನಿರ್ಧರಿಸಿದ್ದೇವೆ, ಅವರ ಸಿಬ್ಬಂದಿ ೭೨ ಗಂಟೆಗೊಳಗೆ ವೆನೆಝುವೆಲಾ ಬಿಟ್ಟು ಹೊರಡಬೇಕು” ಎಂದು ಸಾರಿದ್ದಾರೆ.

Leave a Reply

Your email address will not be published. Required fields are marked *