ಭಾರತ ಕಮ್ಯುನಿಸ್ಟ್ ಪಾರ್ಟಿ (ಮಾರ್ಕ್ಸಿಸ್ಟ್) ಯ ಪೊಲಿಟ್ ಬ್ಯೂರೋ ಕಮ್ಯುನಿಸ್ಟ್ ಚಳವಳಿಯ ಹಿರಿಯ ನಾಯಕ ಹಾಗೂ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದ ವಿ.ಎಸ್. ಅಚ್ಯುತಾನಂದನ್ ಅವರ ನಿಧನಕ್ಕೆ ಆಳವಾದ ಶೋಕ ವ್ಯಕ್ತಪಡಿಸಿದೆ. ವಿ.ಎಸ್. ಅಚ್ಯುತಾನಂದನ್ ಅವರು ಪೊಲಿಟ್ ಬ್ಯೂರೋನ ಮಾಜಿ ಸದಸ್ಯರಾಗಿದ್ದರು. ಅವರು 101 ವರ್ಷದವರಾಗಿದ್ದರು.
ಪ್ರೀತಿ ಅಭಿಮಾನಿಗಳಿಂದ ‘ವಿ.ಎಸ್’ಎಂದೇ ಕರೆಯಲ್ಪಡುತ್ತಿದ್ದ ಅಚ್ಯುತಾನಂದನ್ ಅವರು ಕೇರಳದಲ್ಲಿ ಹಲವಾರು ಹೋರಾಟಗಳನ್ನು ಮುನ್ನಡೆಸಿದ ಶಕ್ತಿಶಾಲಿ ಸಂಘಟಕರಾಗಿದ್ದರು. ಅವರು ಕೆಲಸವನ್ನು ಆರಂಭಿಸಿದ ಅಸ್ಪಿನ್‌ವಾಲ್ ಕಂಪನಿಯಲ್ಲಿ ಸಹಕಾರಿ ಕಾರ್ಮಿಕರನ್ನು ಸಂಘಟಿಸಿದಾಗಲೇ ವಿ.ಎಸ್. ರವರಿಗೆ ಮೊದಲ ಬಾರಿ ಟ್ರೇಡ್ ಯೂನಿಯನ್ ಚಳವಳಿಯ ಪರಿಚಯವಾಯಿತು.
1940ರಲ್ಲಿ, ಅವರು ಕೇವಲ ಹದಿನೇಳು ವರ್ಷದವರಾಗಿದ್ದಾಗಲೇ, ವಿ.ಎಸ್. ಅವರು ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿದರು. ಕೃಷ್ಣ ಪಿಳ್ಳೈ ಅವರು ಅವರನ್ನು ಕುಟ್ಟನಾಡಿನ ಕೃಷಿಕೂಲಿಕಾರರ ನಡುವೆ ಕೆಲಸ ಮಾಡಲು ನೇಮಿಸಿದರು, ಅಲ್ಲಿ ಕೃಷಿಕೂಲಿಕಾರರು ಭೂಮಾಲಕರುಗಳಿಂದ ಭೀಕರ ಶೋಷಣೆಗೆ ಒಳಗಾಗಿದ್ದವರು. ತ್ರಾವಂಕೋರ್ ನ ದಿವಾನನ ವಿರುದ್ಧ ನಡೆದ ಪುನ್ನಪ್ರ–ವಯಲಾರ್ ಹೋರಾಟದ ಸಮಯದಲ್ಲಿ ವಿ.ಎಸ್. ಭೂಗತರಾಗಬೇಕಾಯಿತು. ಬಂಧಿತರಾದ ನಂತರ ಅವರನ್ನು ಜೈಲಿನಲ್ಲಿ ಭೀಕರ ಚಿತ್ರಹಿಂಸೆಗೆ ಗುರಿ ಮಾಡಲಾಯಿತು.
ವಿ.ಎಸ್. ಅವರು 1956ರಲ್ಲಿ ಅವಿಭಜಿತ ಕಮ್ಯುನಿಸ್ಟ್ ಪಾರ್ಟಿಯ ರಾಜ್ಯ ಸಮಿತಿಗೆ ಹಾಗೂ 1958ರಲ್ಲಿ ರಾಷ್ಟ್ರೀಯ ಪರಿಷತ್ತಿಗೆ ಆಯ್ಕೆಯಾದರು. ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಸ್ಥಾಪಿಸಲು ಹೊರನಡೆದ 32 ರಾಷ್ಟ್ರೀಯ ಪರಿಷತ್ ಸದಸ್ಯರಲ್ಲಿ ಕೊನೆಯ ಜೀವಿತ ಸದಸ್ಯರಾಗಿದ್ದರು. 1980ರಿಂದ 1991ರವರೆಗೆ ಅವರು ಸಿಪಿಐ(ಎಂ) ಕೇರಳ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿದ್ದರು. 1964ರಲ್ಲಿ ಅವರು ಪಕ್ಷದ ಕೇಂದ್ರ ಸಮಿತಿಗೆ ಆಯ್ಕೆಯಾದರು ಮತ್ತು 1985ರಲ್ಲಿ ಪೊಲಿಟ್ ಬ್ಯೂರೋ ಸದಸ್ಯರಾದರು. ವಯೋಮಾನದ ಕಾರಣದಿಂದಾಗಿ 2022ರಲ್ಲಿ ಅವರು ಕೇಂದ್ರ ಸಮಿತಿಯಿಂದ ನಿವೃತ್ತರಾಗಿ ವಿಶೇಷ ಆಮಂತ್ರಿತ ಸದಸ್ಯರಾಗಿದ್ದರು.
ವಿ.ಎಸ್. ಅವರು ಏಳು ಬಾರಿ ಕೇರಳ ವಿಧಾನಸಭೆಗೆ ಆಯ್ಕೆಯಾದರು. ಅವರು ಎರಡು ಅವಧಿಗೆ ವಿರೋಧಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದರು ಮತ್ತು 2006ರಿಂದ 2011ರವರೆಗೆ ಮುಖ್ಯಮಂತ್ರಿ ಆಗಿದ್ದರು. ಅವರ ಮುಖ್ಯಮಂತ್ರಿತ್ವ ಅವಧಿಯಲ್ಲಿ ಕಾರ್ಮಿಕ ವರ್ಗದ ಹಿತಕ್ಕಾಗಿ ಹಲವಾರು ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಯಿತು.
ಅಂತೆಯೇ, ಪಕ್ಷದೊಂದಿಗೆ ಅವರು ತೊಡಗಿದ್ದ ಎಂಟು ದಶಕಗಳ ಕಾಲದ ದೀರ್ಘ ಅವಧಿಯಲ್ಲಿ, ವಿ.ಎಸ್. ಅವರು ಕೇರಳದಲ್ಲಿ ಕಮ್ಯುನಿಸ್ಟ್ ಚಳವಳಿಯ ಸತತ ಸ್ಥಿರವಾದ ಬೆಳವಣಿಗೆಗೆ ಸಾಕ್ಷಿಯಾಗಿದ್ದರು. ಸಾರ್ವಜನಿಕ ಭಾಷಣಕಾರನಾಗಿ ಅವರು ನೇರವಾಗಿ ಜನರೊಂದಿಗೆ ಸಂವಹನ ಸಾಧಿಸುವ ಕಲೆಯಲ್ಲಿ ನಿಪುಣರಾಗಿದ್ದರು. ಸಂಯಮಿತ ಜೀವನಶೈಲಿ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಅಚಲ ನಿಷ್ಠೆಗೆ ಹೆಸರಾದ ವಿ.ಎಸ್. ಅಚ್ಯುತಾನಂದನ್ ಅವರು ಕೇರಳ ರಾಜಕಾರಣದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರ ನಿಧನದಿಂದ ಪಕ್ಷ ಹಾಗೂ ಕಮ್ಯುನಿಸ್ಟ್ ಚಳವಳಿ ಭಾರೀ ನಷ್ಟ ಅನುಭವಿಸಿದೆ.
ಭಾರತ ಕಮ್ಯುನಿಸ್ಟ್ ಪಾರ್ಟಿ (ಮಾರ್ಕ್ಸಿಸ್ಟ್) ಯ ಪೊಲಿಟ್ ಬ್ಯೂರೋವು ವಿ.ಎಸ್. ಅಚ್ಯುತಾನಂದನ್ ಅವರಿಗೆ ಕೆಂಪು ಧ್ವಜವನ್ನು ಬಾಗಿಸಿ ಗೌರವ ಸಲ್ಲಿಸುತ್ತದೆ. ಅವರ ಪತ್ನಿ, ಮಗ ಹಾಗೂ ಮಗಳಿಗೆ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತದೆ.
