ಲಸಿಕೆ ಕೊರತೆ ನೀಗಿಸಲು ಸರ್ಕಾರಿ ಔಷಧಿ ಕಂಪನಿಯಲ್ಲಿ ತಯಾರಿಸಿ

ಲಸಿಕೆ ಕೊರತೆಯಿದೆ ಎಂದು ಕೈ ಚೆಲ್ಲಿ ಕೂರುವ ಬದಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಜಂಟಿ ಒಡೆತನದ ಬೆಂಗಳೂರಿನಲ್ಲೆ ಇರುವ ಕರ್ನಾಟಕ ಆಂಟಿಬಯಾಟಿಕ್ಸ್ ಮತ್ತು ಫಾರಮಾಕ್ಯೂಟಿಕಲ್ಸ್ ಕಂಪನಿಯಲ್ಲಿ ಲಸಿಕೆ ತಯಾರಿಸಲು ಅಗತ್ಯ ಕ್ರಮ ವಹಿಸಿ ರಾಜ್ಯದ ಜನತೆಯ ಜೀವ ಉಳಿಸಲು ಮುಂದಾಗ ಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಒತ್ತಾಯಿಸಿದೆ.

ಲಸಿಕೆ ಕೊರತೆಯಿಂದಾಗಿ 18 ವರ್ಷ ಮೇಲ್ಪಟ್ಟವರಿಗೆ ಮೇ 1 ರಂದು ಉದ್ಘಾಟನೆ ಮಾಡಲಾಗಿರುವ ಲಸಕೀಕರಣ ಮುಂದೂಡುತ್ತಾ ಬರಲಾಗುತ್ತಿದೆ. ಇದೀಗ 45 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಇಲ್ಲದಾಗಿದೆ. 2ನೇ ಡೋಸಿಗೆ ಮಾತ್ರ ಲಸಿಕೆ ಹಾಕಲಾಗುತ್ತಿದೆ. ಅವರಿಗೂ ಇರುವ ಲಸಿಕೆ ಸಾಲದು ಎಂಬ ವರದಿಗಳಿವೆ. ಸದ್ಯ ಬಿಬಿಎಂಪಿ ಬಳಿ ಕೇವಲ 40 ಲಕ್ಷ ಲಸಿಕೆ ದಾಸ್ತಾನು ಮಾತ್ರ ಇದೆ ಎಂಬ ವಾಸ್ತವಾಂಶವು ಜನತೆಯಲ್ಲಿ ಆತಂಕ ನಿರ್ಮಿಸಿದೆ.

ಕೇಂದ್ರ ಸರ್ಕಾರವು ಸಹಾ ರಾಜ್ಯಕ್ಕೆ ಅಗತ್ಯ ಲಸಿಕೆ ಫೂರೈಸುತ್ತಿಲ್ಲ. ಇದು ಜನತೆಯಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ರಾಜ್ಯ ಸರ್ಕಾರವು ಸ್ವಯಂ ಘೋಷಿಸಿದ್ದ 400 ಕೋಟಿ ರೂ.ಗಳಲ್ಲಿ 1 ಕೋಟಿ ಲಸಿಕೆ ಖರೀದಿ ತೀರ್ಮಾನ ಕಾರ್ಯಗತವಾಗುತ್ತಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಒಡೆತನದ ಔಷಧಿ ಕಂಪನಿ ಬಳಸಿ ಲಸಿಕೆ ಉತ್ಪಾಧಿಸಿ ಕೊರತೆ ನೀಗಿಸಲು ಕ್ರಮ ವಹಿಸಬೇಕೆಂದು ಸಿಪಿಐ(ಎಂ) ಪಕ್ಷವು ರಾಜ್ಯ ಸರ್ಕಾರವನ್ನು ಕೋರಿದೆ. ಅದಕ್ಕೆ ಕೇಂದ್ರ ಸರ್ಕಾರವು ಅನುವುಗೊಳಿಸಬೇಕೆಂದು ಒತ್ತಾಯಿಸಿದೆ.

Leave a Reply

Your email address will not be published. Required fields are marked *