ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ, ಕನ್ನಡದ ಹೆಸರಾಂತ ಬರಹಗಾರ್ತಿ ಬಾನು ಮುಷ್ತಾಕ್ ಆಯ್ಕೆಯನ್ನು ಸ್ವಾಗತಿಸಿರುವ ಸಿಪಿಐ(ಎಂ) ರಾಜ್ಯ ಸಮಿತಿಯು, ದಸರಾ ಉದ್ಘಾಟನೆಗೆ ಬಾನುಮುಷ್ತಾಕ್ ಆಯ್ಕೆಯನ್ನು ವಿರೋಧಿಸಿ ನಾಡ ಹಬ್ಬದಲ್ಲಿ ಧರ್ಮದ್ವೇಷ ರಾಜಕಾರಣ ಮಾಡುವ ಬಿಜೆಪಿಯ ನಡೆಯನ್ನು ಖಂಡಿಸಿದೆ.
ಭಾರತೀಯ ಜನತಾ ಪಕ್ಷ ಎಂದಿನಂತೆ ಇಲ್ಲಿಯೂ ಧರ್ಮದ್ವೇಷ ರಾಜಕಾರಣ ಮಾಡುತ್ತಿರುವುದು ಖಂಡನೀಯ. ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿ, ನಾಡಿನ ಸೌಹಾರ್ದ ಪರಂಪರೆಯನ್ನು ಪ್ರೀತಿಸುವ, ಗೌರವಿಸುವ ಬಾನುಮುಷ್ತಾಕ್ ರವರ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಇದು ಕನ್ನಡದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದೆ. ಅವರು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರು ಎಂಬ ಕಾರಣಕ್ಕೆ, ಆಗಲೂ ಕನಿಷ್ಟ ಅಭಿನಂದನೆ ಸಲ್ಲಿಸುವ ಸೌಜನ್ಯ ತೋರದಿರುವ ಭಾರತೀಯ ಜನತಾ ಪಕ್ಷ, ಈಗ ನಾಡಹಬ್ಬದಲ್ಲಿ ತನ್ನ ಕೋಮುವಾದೀ ರಾಜಕಾರಣವನ್ನು ಮುಂದೆ ಮಾಡುತ್ತಿದೆ.
ಸಿಪಿಎಂ ಪಕ್ಷವು ಕೋಮುವಾದದ ವಿರುದ್ಧ ನಡೆಸುವ ನಿರಂತರ ಹೋರಾಟದ ಭಾಗವಾಗಿಯೇ ಬಿಜೆಪಿಯ ಈ ಧರ್ಮದ್ವೇಷ ರಾಜಕಾರಣವನ್ನು ವಿರೋಧಿಸುತ್ತದೆ. ಮತ್ತು ನಾಡ ಹಬ್ಬ ದಸರಾವನ್ನು ಈ ಹಿಂದೆ ಖ್ಯಾತ ಕವಿ ನಿಸಾರ್ ಅಹ್ಮದ್ ರವರು ಉದ್ಘಾಟನೆ ಮಾಡಿದ್ದರು. ದಸರಾ ಕನ್ನಡ ನಾಡಿನ ಹಬ್ಬವೇ ಹೊರತು, ಹಿಂದುತ್ವವಾದಿಗಳ ಹಬ್ಬವಲ್ಲ ಎಂಬುದನ್ನು ಬಿಜೆಪಿಯವರು ಅರ್ಥಮಾಡಿಕೊಂಡು ಕ್ಷುಲ್ಲಕ ರಾಜಕಾರಣವನ್ನು ಕೈಬಿಡಬೇಕು ಎಂದು ಸಿಪಿಎಂ ಒತ್ತಾಯಿಸಿದೆ.
