ನೇಪಾಳದ ಪ್ರಕ್ಷುಬ್ಧತೆಯ ಕುರಿತು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿಕೆ

ನೇಪಾಳದಲ್ಲಿ ನಡೆದ ಇಂಟರ್ನೆಟ್  ಪೀಳಿಗೆಯ (GenZ) ಪ್ರತಿಭಟನೆಯ ಸಂದರ್ಭದಲ್ಲಿ 20 ಅಮೂಲ್ಯ ಯುವ ಜೀವಗಳ  ಹಾನಿಯಾಗಿರುವ  ಬಗ್ಗೆ ಸಿಪಿಐ(ಎಂ)  ತೀವ್ರ ದುಃಖವನ್ನು ವ್ಯಕ್ತಪಡಿಸಿದೆ. ಈ ಪ್ರತಿಭಟನೆಗಳು ಜನರ, ವಿಶೇಷವಾಗಿ ಯುವಜನರ ನಿಜವಾದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರ ಆಕಾಂಕ್ಷೆಗಳನ್ನು ಪೂರೈಸಲು ಪದೇ ಪದೇ ವಿಫಲವಾಗುತ್ತಿರುವುದರಿಂದಾಗಿ  ಹೆಚ್ಚುತ್ತಿರುವ ಬೇಗುದಿಗಳಿಂದ ಉಂಟಾಗಿರುವ ವ್ಯಾಪಕ ಆಕ್ರೋಶವನ್ನು  ಪ್ರತಿಬಿಂಬಿಸುತ್ತವೆ ಎಂದು ಅದು ಹೇಳಿದೆ.

ಆಳುವ ವಲಯಗಳಲ್ಲಿ ವ್ಯಾಪಕವಾದ ಭ್ರಷ್ಟಾಚಾರ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಪ್ರಧಾನವಾಗಿ ಯುವ ಜನಸಂಖ್ಯೆಗೆ ಉದ್ಯೋಗಾವಕಾಶಗಳ ಕೊರತೆ ಇವು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ನಿಷೇಧದ ಬೆನ್ನಲ್ಲಿ ಭುಗಿಲೆದ್ದ ಇಂಟರ್ನೆಟ್‍ ಪೀಳಿಗೆಯ (GenZ) ಪ್ರತಿಭಟನೆಗಳ ಹಿಂದಿನ ಪ್ರಮುಖ ಕಾರಣಗಳಲ್ಲಿ ಸೇರಿವೆ. ಕೆ.ಪಿ. ಓಲಿ ಸರ್ಕಾರವನ್ನು ಪದಚ್ಯುತಗೊಳಿಸಲಾಗಿದೆ. ಈಗ ಶಾಂತಿ ಮತ್ತು ಸಹಜಸ್ಥಿತಿಯನ್ನು ಪುನಃಸ್ಥಾಪಿಸುವ ಪ್ರಯತ್ನಗಳನ್ನು ಗಂಭೀರವಾಗಿ ನಡೆಸಬೇಕು. ಪ್ರಮುಖ ರಾಜಕೀಯ ಪದಾಧಿಕಾರಿಗಳ ವಿರುದ್ಧ ನಿರ್ದೇಶಿಸಲಾದ ದೊಂಬಿ ಹಿಂಸಾಚಾರದ ಹಿನ್ನೆಲೆಯಲ್ಲಿ ಇದು ಹೆಚ್ಚು ಅವಶ್ಯಕವಾಗಿದೆ. ನಿರ್ದಿಷ್ಟವಾಗಿ ಮಾಜಿ ಪ್ರಧಾನಿ ಝಲನಾಥ್ ಖನಲ್ ಅವರ ಪತ್ನಿ ರಾಜ್ಯಲಕ್ಷ್ಮಿ ಚಿತ್ರಕಾರ್ ಅವರ ಹತ್ಯೆ ಖಂಡನೀಯ ಎಂದು ಪೊಲಿಟ್‍ ಬ್ಯುರೊ ಹೇಳಿದೆ.

ನೇಪಾಳದ ಯುವಜನರ ಬೇಗುದಿಗಳಿಗೆ ತಕ್ಷಣವೇ ಕಿವಿಗೊಡಬೇಕು ಮತ್ತು ಅವುಗಳನ್ನು ಪರಿಹರಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದೇ ಸಮಯದಲ್ಲಿ, ರಾಜಪ್ರಭುತ್ವದ ವಿರುದ್ಧ ದೀರ್ಘ ಮತ್ತು ಕಠಿಣ ಹೋರಾಟದ ಮೂಲಕ ಸಾಧಿಸಲಾದ ಸಂವಿಧಾನದಲ್ಲಿ ಪ್ರತಿಷ್ಠಾಪಿಸಲಾದ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಳಜಿ ವಹಿಸಬೇಕು. ರಾಜಪ್ರಭುತ್ವವಾದಿಗಳು ಮತ್ತು ಇತರ ಪ್ರತಿಗಾಮಿ ಶಕ್ತಿಗಳು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳದಂತೆ ನೇಪಾಳದ ಯುವ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳು ಜಾಗರೂಕರಾಗಿರಬೇಕು. ಈ ಸಾಮೂಹಿಕ ಪ್ರತಿಭಟನೆಗಳ ಫಲಿತಾಂಶವು ಒಂದು ಪ್ರಜಾಸತ್ತಾತ್ಮಕ ನವೀಕರಣವಾಗಿರಬೇಕು, ಊಳಿಗಮಾನ್ಯ ಸರ್ವಾಧಿಕಾರಿ ಆಳ್ವಿಕೆಗೆ ಮರಳುವಂತಾಗಬಾರದು ಎಂದು ಸಿಪಿಐ(ಎಂ) ಆಶಿಸಿದೆ..

Leave a Reply

Your email address will not be published. Required fields are marked *