ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತದಾರರಲ್ಲಿ ಸಿಪಿಐ(ಎಂ) ಮನವಿ

ಲೋಕಸಭಾ ಚುನಾವಣೆ – 2019

  • ಬಿಜೆಪಿ ಮೈತ್ರಿಕೂಟವನ್ನು ಸೋಲಿಸಿ
  • ಸಿಪಿಐ(ಎಂ) ಮತ್ತು  ಎಡಪಂಥದ ಬಲವನ್ನು ಹೆಚ್ಚಿಸಿ
  • ಜಾತ್ಯತೀತ ಜನಪರ ಸರಕಾರ ರಚನೆಯಾಗಲಿ * ಜನಚಳುವಳಿಯನ್ನು ವಿಸ್ತರಿಸಿ ಬಲಗೊಳಿಸಿ

ಮತದಾರ ಬಂಧು ಭಗಿನಿಯರೆ,

ಹದಿನೇಳನೆಯ ಲೋಕಸಭೆಯನ್ನು ಚುನಾಯಿಸಲು ನಾವೆಲ್ಲರೂ ಸಜ್ಜಾಗುತ್ತಿದ್ದೇವೆ. ದೇಶದ ಭವಿಷ್ಯತ್ತಿಗೆ ಇದೊಂದು ನಿರ್ಣಾಯಕ ಚುನಾವಣೆಯಾಗಲಿದೆ.

ಬಿಜೆಪಿ ಮೈತ್ರಿ ಕೂಟವನ್ನು ಸೋಲಿಸಬೇಕು

೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿ ದೇಶದ ಜನತೆಗೆ ನೀಡಿದ ಒಂದೊಂದು ಭರವಸೆಗೂ ದ್ರೋಹ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ನಂತರವೂ ಮೋದಿ ಅವರು ಹೊಸ ಭರವಸೆಗಳನ್ನು, ಪೊಳ್ಳು ಘೋಷಣೆಗಳನ್ನು ನೀಡುತ್ತಾ ಬಂದು ಅದಕ್ಕಾಗಿ ‘ಸುಳ್ಳು ಭರವಸೆಗಳ ಸರದಾರ’ ಎಂಬ ಬಿರುದನ್ನು ಸಂಪಾದಿಸಿದ್ದಾರೆ.

ಈ ಭರವಸೆಗಳನ್ನು ಈಡೇರಿಸುವ ಬದಲಾಗಿ, ಕಾರ್ಮಿಕರಿಗೆ ಸ್ವಲ್ಪವಾದರೂ ರಕ್ಷಣೆ ಕೊಡುವ ಈಗಿರುವ ಕಾರ್ಮಿಕ ಕಾನೂನುಗಳಿಗೆ ಕಾರ್ಮಿಕ-ವಿರೋಧಿ ತಿದ್ದುಪಡಿಗಳನ್ನು ಮಾಡಿ ಕಾರ್ಮಿಕರ ದಮನಕ್ಕೆ ಮುಂದಾಗಿದ್ದಾರೆ. ಮುಚ್ಚಿರುವ ಕೋಲಾರ ಚಿನ್ನದ ಗಣಿ, ಭದ್ರಾವತಿ ಉಕ್ಕಿನ ಕಾರ್ಖಾನೆ ಮುಂತಾದವುಗಳನ್ನು ಪುನರಾರಂಭಿಸಲು ಸರ್ಕಾರಕ್ಕೆ ಆಸಕ್ತಿ ಇಲ್ಲ. ಕರ್ನಾಟಕದ ಹೆಮ್ಮೆಯಾದ ಎಚ್.ಎ.ಎಲ್., ಬಿ.ಇ.ಎಂ.ಎಲ್. ಮುಂತಾದ ಸಾರ್ವಜನಿಕ ವಲಯದ ಕಾರ್ಖಾನೆಗಳನ್ನು ಖಾಸಗಿಯವರಿಗೆ ಮೂರು ಕಾಸಿಗೆ ಮಾರಲು ಹೊರಟಿದ್ದಾರೆ. ರಾಜ್ಯದಲ್ಲಿ ಉದ್ದಿಮೆಗಳ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದ ವಿಶ್ವೇಶ್ವರಯ್ಯ ಸ್ಥಾಪಿಸಿದ ಮೈಸೂರು ಬ್ಯಾಂಕ್, ಕರಾವಳಿ ಉದ್ಯಮಶೀಲತೆಯ ಪ್ರತೀಕಗಳಲ್ಲಿ ಒಂದಾದ ವಿಜಯಾ ಬ್ಯಾಂಕ್ ಇವುಗಳನ್ನು ಇತಿಹಾಸಕ್ಕೆ ಸೇರಿಸಲಾಗಿದೆ. ಇಂತಹ ಸರಕಾರವನ್ನು ಕಾರ್ಮಿಕರು ಯಾಕೆ ಬೆಂಬಲಿಸಬೇಕು?

ಮರುಪಾವತಿ ಮಾಡಲಾಗದ ರೈತರ ಸಾಲ ೨೦೧೭ ರಲ್ಲಿ ೭೦ ಸಾವಿರ ಕೋಟಿ ರೂ. ಇದ್ದದ್ದು ೨೦೧೮ ರಲ್ಲಿ ೧ ಲಕ್ಷ ಕೋಟಿ ರೂ. ಗೆ ಏರಿತು. ಇದು ರೈತರನ್ನು ಆತ್ಮಹತ್ಯೆಗೆ ತಳ್ಳುತ್ತಿರುವ ಕಾರ್ಷಿಕ ಬಿಕ್ಕಟ್ಟಿನ ತೀವ್ರತೆಯನ್ನು ತೋರಿಸುತ್ತದೆ. ನಿರುದ್ಯೋಗ ದರವು ೨೦೧೮ ರಲ್ಲಿ ಶೇಕಡಾ ೫.೯ ರಷ್ಟು ಇದ್ದದ್ದು ೨೦೧೯ ರಲ್ಲಿ ಶೇಕಡ ೭.೧ ಕ್ಕೆ ಏರಿತು. ಆರ್ಥಿಕ ಬೆಳವಣಿಗೆಯ ದರ ಕುಸಿದಿದೆ. ನೋಟು ರದ್ದತಿ ಮತ್ತು ಜಿ.ಎಸ್.ಟಿ ದಾಳಿಯಿಂದ ಮಧ್ಯಮ, ಸಣ್ಣ ಉದ್ದಿಮೆಗಳು ಮುಚ್ಚಿ ಹೋಗಿವೆ. ಇಂತಹ ರೈತ-ವಿರೋಧಿ ಬಡವರ ವಿರೋಧಿ ಸರಕಾರ ಬೇಕಾ?

ಬಿಜೆಪಿ ಸರ್ಕಾರ ಬಂದಾಗಿನಿಂದ ದೇಶದೊಳಗೆ ಬೇರು ಬಿಟ್ಟಿರುವ ಕೋಮುವಾದಿ, ಮತೀಯವಾದಿ, ಮನುವಾದಿ ಶಕ್ತಿಗಳಿಗೆ ಕುಮ್ಮಕ್ಕು ಸಿಕ್ಕಿದೆ. ಎಲ್ಲಾ ಜನವಿಭಾಗಗಳ ಪ್ರಜಾಪ್ರಭುತ್ವ ಹಕ್ಕುಗಳ, ಸಾಂವಿಧಾನಿಕ ಸಂಸ್ಥೆಗಳ ಮೇಲೆ ತೀವ್ರ ದಾಳಿಗಳಾಗುತ್ತಿವೆ. ಅಘೋಷಿತ ತುರ್ತು ಪರಿಸ್ಥಿತಿ ಇದೆ. ಫ್ಯಾಸಿಸ್ಟ್ ಪ್ರವೃತ್ತಿಗಳು ವ್ಯಕ್ತವಾಗುತ್ತಿವೆ. ಆಳುವ ವರ್ಗಗಳು ದುಡಿಯುವ ಜನರನ್ನು ಒಡೆಯಲು ಕಾರ್ಯತಂತ್ರವನ್ನು ರೂಪಿಸಿಕೊಂಡಿವೆ. ಅದುವೇ ಮುಂದೆ ಮತೀಯ ಫ್ಯಾಸಿಸಂ ಆಗಿ ಬೆಳೆಯಬಹುದಾದ ಮತೀಯವಾದ. ಫ್ಯಾಸಿಸ್ಟ್ ನಾಯಕ ಚುನಾವಣೆಯ ಮೂಲಕವೇ ಅಧಿಕಾರ ಪಡೆಯುತ್ತಾನೆ. ಆನಂತರ ಸರ್ವಾಧಿಕಾರಿಯಾಗುತ್ತಾನೆ. ಯಾವ ಪ್ರಜಾಸತ್ತಾತ್ಮಕ ಸಂವಿಧಾನವನ್ನೂ ಆತ ಮಾನ್ಯ ಮಾಡುವುದಿಲ್ಲ.

ಕಳೆದ ೫ ವರ್ಷಗಳ ಅವಧಿಯಲ್ಲಿ ಇಂತಹ ಪ್ರವೃತ್ತಿಯ ಹಲವು ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಸರ್ಕಾರದ ಕುಮ್ಮಕ್ಕಿನಿಂದ, ಗೋ ರಕ್ಷಣೆ ಹೆಸರಿನಲ್ಲಿ ದಲಿತರ ಮತ್ತು ಅಲ್ಪಸಂಖ್ಯಾತರ ಮೇಲೆ ಮಾರಣಾಂತಿಕ ಹಲ್ಲೆಗಳೂ ಬೀದಿಯಲ್ಲೇ ಹೊಡೆದು ಕೊಲ್ಲುವುದು, ಮತಾಂತರದ ಆರೋಪ ಹೊರಿಸಿ ಕ್ರಿಶ್ಚಿಯನ್ನರ ಮೇಲೆ ಹಲ್ಲೆ, ಮಹಿಳೆಯರ ಮೇಲೆ, ಮಕ್ಕಳ ಮೇಲೆ ಅತ್ಯಾಚಾರದ ಪ್ರಕರಣಗಳು ಕಳೆದ ೫ ವರ್ಷಗಳಲ್ಲಿ ಆತಂಕಕಾರಿಯಾಗಿ ಹೆಚ್ಚಾಗಿವೆ.

ದೇಶದ ರಕ್ಷಣೆ ಮತ್ತು ಭಯೋತ್ಪಾದನೆಯ ವಿರುದ್ಧ ಕಾರ್ಯಾಚರಣೆ ಬಗ್ಗೆ ಜಂಭ ಕೊಚ್ಚುವ ಮೋದಿ ಈ ನಿಟ್ಟಿನಲ್ಲೂ ಪೂರ್ಣ ವಿಫಲವಾಗಿದ್ದಾರೆ. ಉರಿ ಮಿಲಿಟರಿ ನೆಲೆ, ಫುಲವಾಮದಲ್ಲಿ ಸಿ.ಆರ್.ಪಿ.ಎಫ್ ಪಡೆಗಳ ಮೇಲೆ ಪ್ರಮುಖ ಭಯೋತ್ಪಾದಕ ದಾಳಿಗಳು ಸೇರಿದಂತೆ ಈ ಅವಧಿಯಲ್ಲಿ ಭಯೋತ್ಪಾದನಾ ಪ್ರಕರಣಗಳು ಶೇ. ೧೭೬ ರಷ್ಟು ಹೆಚ್ಚಾಗಿವೆ. ಮೋದಿ ಸರ್ಕಾರದ ‘ಜಮ್ಮು ಮತ್ತು ಕಾಶ್ಮೀರ’ ನೀತಿ ಒಂದು ದೊಡ್ಡ ವೈಫಲ್ಯವಾಗಿದೆ. ಗಡಿಯಲ್ಲಿ ನಡೆಯುತ್ತಿರುವ ಸೈನಿಕ ದಾಳಿ, ಪ್ರತಿದಾಳಿಗಳ ಪ್ರಕರಣಗಳ ರಾಜಕೀಯಕರಣ, ಎರಡು ದೇಶಗಳ ನಡುವೆ ಯುದ್ಧೋನ್ಮಾದವನ್ನು ಬಡಿದೆಬ್ಬಿಸಿ ಈ ವೈಫಲ್ಯಗಳನ್ನು ಮುಚ್ಚಿಕೊಳ್ಳಲಾಗುತ್ತಿದೆ. ಅದರ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಲಾಗುತ್ತಿದೆ.

ಹೀಗೆ ಎಲ್ಲಾ ರಂಗಗಳಲ್ಲೂ ವಿಫಲವಾದ ಬಿಜೆಪಿ ಸರಕಾರಕ್ಕೆ ಮತ್ತೆ ಅಧಿಕಾರ ಕೊಡಬಾರದು. ಪುನಃ ಅಧಿಕಾರ ಹಿಡಿದು ಸಾಂವಿಧಾನಿಕ ಪ್ರಜಾಪ್ರಭುತ್ವ ನಾಶ ಮಾಡಲು ಅವಕಾಶ ಕೊಡಬಾರದು. ಬಿಜೆಪಿ ಮೈತ್ರಿಕೂಟವನ್ನು ನಿರ್ಣಾಯಕವಾಗಿ ಸೋಲಿಸಬೇಕು.

ಪರ್ಯಾಯ ಜಾತ್ಯಾತೀತ ಸರ್ಕಾರ ಅಧಿಕಾರಕ್ಕೆ ಬರಲಿ

ಜಾತ್ಯಾತೀತ ಪ್ರಜಾಸತ್ತೆಯ ರಕ್ಷಣೆಗಾಗಿ ಜಾತ್ಯಾತೀತ ಸರಕಾರದ ಅಗತ್ಯವಿದ್ದು ಸಿಪಿಐ(ಎಂ) ಇದಕ್ಕಾಗಿ ಕಾರ್ಯ ನಿರ್ವಹಿಸಲಿದೆ ಮತ್ತು ಅಂತಹ ಅವಕಾಶವನ್ನು ಬಳಸಿಕೊಂಡು ಜನಪರ ಪ್ರಶ್ನೆಗಳ ಕಡೆ ಆ ಸರಕಾರವನ್ನು ಸೆಳೆಯಲು ಒತ್ತಡವನ್ನು ಹೇರಲಿದೆ. ಇದು ಮಾತ್ರವೇ ಜನ ಚಳುವಳಿಯನ್ನು ಮುನ್ನಡೆಸುವ, ಅವರ ಹಕ್ಕುಗಳನ್ನು ಬಲವಾಗಿ ಒತ್ತಾಯಿಸುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಿದೆ. ದೇಶದಲ್ಲಿ ಕೋಮು ಸಾಮರಸ್ಯ, ಗಡಿಯಲ್ಲಿ ಶಾಂತಿ, ಸಹಕಾರ, ಎಲ್ಲ ರೀತಿಯ ಭಯೋತ್ಪಾದನೆ ವಿರುದ್ಧ ದೃಢವಾದ ಐಕ್ಯ ಹೋರಾಟದ ಮೂಲಕ ಮಾತ್ರ ನಾವು ಈ ದೇಶವನ್ನು ಅಭಿವೃದ್ಧಿಯತ್ತ ಹೆಜ್ಜೆ ಹಾಕಿಸಬಹುದು.

ಸಿಪಿಐ(ಎಂ) ಮತ್ತು ಎಡ ಪಕ್ಷಗಳ ಪ್ರಾತಿನಿಧ್ಯ ಹೆಚ್ಚಾಗಲಿ :

ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಜಾತ್ಯಾತೀತ ಸರ್ಕಾರ ಜನಪರವಾಗಿ ಕೆಲಸ ಮಾಡಬೇಕಾದರೆ ಸರ್ಕಾರದ ಆರ್ಥಿಕ, ಸಾಮಾಜಿಕ ಮೊದಲಾದ ನೀತಿಗಳು ಬದಲಾಗಬೇಕು. ಜಾತ್ಯಾತೀತ ಸರಕಾರದ ಮೇಲೆ ಇಂತಹ ಒತ್ತಡವನ್ನು ಹೊರಗೆ ಮತ್ತು ಒಳಗಿನಿಂದ ಹಾಕಲು ಲೋಕಸಭೆಯಲ್ಲಿ ಸಿಪಿಐ(ಎಂ) ಮತ್ತು ಎಡ ಶಕ್ತಿಗಳ ಪ್ರಾತಿನಿಧ್ಯ ಹೆಚ್ಚ್ಚಬೇಕಾಗಿದೆ.

2004ರ ಚುನಾವಣೆಯಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳ ಒಟ್ಟು ೬೧ ಪ್ರತಿನಿಧಿಗಳನ್ನು ಜನತೆ ಲೋಕಸಭೆಗೆ ಆರಿಸಿ ಕಳುಹಿಸಿತ್ತು. ಬಿಜೆಪಿ ಸರ್ಕಾರದಲ್ಲಿ ಪಾಲ್ಗೊಳ್ಳುವುದನ್ನು ತಡೆಯಲು, ಎಡಪಕ್ಷಗಳು ಜಾತ್ಯತೀತ ಸರ್ಕಾರ ರಚನೆಗೆ ಬೆಂಬಲ ನೀಡಿದ್ದವು. ಮಾತ್ರವಲ್ಲ ಮಾಹಿತಿ ಹಕ್ಕು ಕಾಯ್ದೆ, ಅರಣ್ಯ ಹಕ್ಕುಗಳ ಕಾಯ್ದೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಅಂತಹ ಕೆಲವು ಜನಪರವಾದ ಕಾಯ್ದೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದವು. ನವ-ಉದಾರೀಕರಣದ ಜನವಿರೋಧಿ ನೀತಿಗಳ ಹರಿಕಾರ ಮತ್ತು ಇನ್ನೂ ಅದರ ಪ್ರಬಲ ಬೆಂಬಲಿಗನಾಗಿರುವ ಕಾಂಗ್ರೆಸಿನ ನಾಯಕತ್ವದ ಸರಕಾರಗಳ ಜನವಿರೋಧಿ ನೀತಿಗಳನ್ನು ಅಷ್ಟೇ ಧೃಢವಾಗಿ ವಿರೊಧಿಸಿದ್ದವು. ಇಂತಹ ಕಟುವಾದ ಜನವಿರೋಧಿ ನೀತಿಗಳ ಜಾರಿಯೇ ಕೋಮುವಾದಿ ಬಲಪಂಥಿಯ ಬಿಜೆಪಿ ಸರಕಾರದ ರಚನೆಗೆ ಹಾದಿ ಮಾಡಿಕೊಟ್ಟಿತು ಎಂದೂ ಮರೆಯುವಂತಿಲ್ಲ. ಅದು ಮರುಕಳಿಸದಂತೆ ಎಡಪಕ್ಷಗಳು ಮಾತ್ರ ಮಾಡಬಲ್ಲವು.

ಲೋಕಸಭೆಯಲ್ಲಿ ತೀವ್ರ ಹಾಗೂ ಅಧ್ಯಯನ ಪೂರ್ಣವಾದ ಚರ್ಚೆಗೆ ಸಿಪಿಐ(ಎಂ) ಹೆಸರುವಾಸಿಯಾಗಿದೆ. ಸಿಪಿಐ(ಎಂ) ಪ್ರತಿನಿಧಿಗಳು ಯಾರ ಮುಲಾಜಿಲ್ಲದೆ ನಿರ್ಭಿಡೆಯಿಂದ ಮಾತನಾಡುತ್ತಾರೆ. ಸೈದ್ಧಾಂತಿಕ ಹಾಗೂ ಜನಪರ ನಿಲುವುಗಳ ವಿಷಯದಲ್ಲಿ ಅವರು ರಾಜಿ ಮಾಡಿಕೊಳ್ಳುವುದಿಲ್ಲ. ತಾನು ಬೆಂಬಲಿಸುವ ಒಂದು ರಾಜಕೀಯ ಮೈತ್ರಿ ಕೂಟವನ್ನು ಅಗತ್ಯಬಿದ್ದರೆ ಟೀಕಿಸಲು ಸಿಪಿಐ(ಎಂ) ಹಿಂಜರಿಯುವುದಿಲ್ಲ.

ಈ ಹಿನ್ನೆಲೆಯಲ್ಲಿ ಸ್ಪರ್ಧಿಸುತ್ತಿರುವ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಸಿಪಿಐ(ಎಂ) ನ ಎಸ್. ವರಲಕ್ಷ್ಮಿ, ಮತ್ತು ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಸಿಪಿಐ ನ ಶಿವಣ್ಣ ಅವರಿಗೆ ಮತ ನೀಡಿ ಆರಿಸಬೇಕೆಂದು ನಮ್ಮ ವಿನಂತಿ. ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯನ್ನು ಸೋಲಿಸಬಲ್ಲ ಅಭ್ಯರ್ಥಿಗೆ ಮತನೀಡುವ ಮೂಲಕ, ಕೇಂದ್ರದಲ್ಲಿ ಜಾತ್ಯತೀತ ಜನಪರ ಸರಕಾರ ರಚಿಸಲು ಅನುವು ಮಾಡಿಕೊಡಬೇಕೆಂದು ನಮ್ಮ ಕೋರಿಕೆ.

ಜನಚಳುವಳಿಯನ್ನು ವಿಸ್ತರಿಸಿ ಬಲಗೊಳಿಸಿ

ಒಂದು ಉತ್ತಮ ಭಾರತವನ್ನು ಕಟ್ಟಬೇಕಾದರೆ ಧೋರಣೆಯ ದಿಕ್ಕಿನಲ್ಲಿ ಒಂದು ತೀವ್ರಗಾಮಿ ಪಲ್ಲಟವನ್ನು ತರಬೇಕಾಗಿದೆ. ಜನಪರ ಅಭಿವೃದ್ಧಿಯ ಪರ್ಯಾಯ ಧೋರಣೆಗಳನ್ನು ಸಿಪಿಐ(ಎಂ) ದೇಶದ ಮುಂದಿಟ್ಟಿದೆ. ಈ ಪರ್ಯಾಯ ಧೋರಣೆಗಳ ಸುತ್ತ ಜನಚಳುವಳಿಗಳನ್ನು ವಿಸ್ತರಿಸಿ ಬಲಗೊಳಿಸಬೇಕಾಗಿದೆ. ಅದರ ಪ್ರಮುಖ ಅಂಶಗಳು ಹೀಗಿವೆ.

ಸಿಪಿಐ(ಎಂ) ಪ್ರಣಾಳಿಕೆಯ ಮುಖ್ಯಾಂಶಗಳು:

  • ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಜಾತ್ಯತೀತತೆಯ ನೀತಿ ಮತ್ತು ಪ್ರಜಾಪ್ರಭುತ್ವ ಹಕ್ಕುಗಳನ್ನು ರಕ್ಷಿಸಿ
  • ರೈತರು ತಮ್ಮ ಉತ್ಪನ್ನಗಳನ್ನು ಕನಿಷ್ಟ ಬೆಂಬಲ ಬೆಲೆಯಲ್ಲಿ ಮಾರುವ ಹಕ್ಕನ್ನು ಜಾರಿಗೊಳಿಸಿ; ಈ ಬೆಂಬಲ ಬೆಲೆ ಒಟ್ಟು ಉತ್ಪಾದನೆಯ ಖರ್ಚಿಗಿಂತ ಕನಿಷ್ಟ ಶೇ. ೫೦ರಷ್ಟು ಹೆಚ್ಚಿರಬೇಕು.
  • ತಿಂಗಳಿಗೆ ರೂ.೧೮ ಸಾವಿರಕ್ಕಿಂತ ಕಡಿಮೆಯಿಲ್ಲದಂತೆ ಕಾರ್ಮಿಕರಿಗೆ ಶಾಸನಾತ್ಮಕ ಕನಿಷ್ಟ ಸಂಬಳ; ಇದನ್ನು ಬಳಕೆದಾರರ ಬೆಲೆ ಸೂಚ್ಯಂಕಕ್ಕೆ ಜೋಡಿಸಿರಬೇಕು.
  • ಸಾರ್ವತ್ರಿಕ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪ್ರತಿ ಕುಟುಂಬಕ್ಕೆ ೩೫ ಕೆ.ಜಿ. ಅಥವ ಪ್ರತಿ ವ್ಯಕ್ತಿಗೆ ೭ ಕೆ.ಜಿ. ಆಹಾರಧಾನ್ಯಗಳು  ಕೆ.ಜಿ.ಗೆ  ಗರಿಷ್ಟ ೨ರೂ. ಬೆಲೆಯಲ್ಲಿ.
  • ಉಚಿತ ಆರೋಗ್ಯ ಪಾಲನೆಯ ಹಕ್ಕು; ಖಾಸಗಿ ವಿಮೆ ಆಧಾರಿತ ಆರೋಗ್ಯ ಪಾಲನೆ ಬೇಡ;
  • ಆರೋಗ್ಯದ ಮೇಲೆ ಸಾರ್ವಜನಿಕ ವೆಚ್ಚವನ್ನು ಜಿ.ಡಿ.ಪಿ.ಯ ಶೇ.೫ಕ್ಕೆ ಏರಿಸಬೇಕು.
  • ಮಹಿಳೆಯರಿಗೆ ಸಂಸತ್ತಿನಲ್ಲಿ ಮತ್ತು ವಿಧಾನ ಸಭೆಗಳಲ್ಲಿ ಮೂರನೇ ಒಂದು ಮೀಸಲಾತಿಯನ್ನು ಜಾರಿಗೆ ತರಬೇಕು;
  • ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸಾಚಾರವನ್ನು ಕೊನೆಗೊಳಿಸಲು ಸಮಗ್ರ ಕ್ರಮಗಳು.
  • ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ-ಶಾಲೆಗಳು ಮತ್ತು ಉನ್ನತ ಶಿಕ್ಷಣದ ಬಹು ದೊಡ್ಡ ವಿಸ್ತರಣೆ; ಶಿಕ್ಷಣದ ಮೇಲೆ ಸಾರ್ವಜನಿಕ ವೆಚ್ಚದ ಪ್ರಮಾಣವನ್ನು ಜಿ.ಡಿ.ಪಿ.ಯ ಶೇ. ೬ಕ್ಕೆ ಏರಿಸಬೇಕು; ಶಿಕ್ಷಣ ವ್ಯವಸ್ಥೆಯ ಕೋಮುವಾದೀಕರಣವನ್ನು ಕೊನೆಗೊಳಿಸಬೇಕು, ಅದರ ಪ್ರಜಾಪ್ರಭುತ್ವ ಸ್ವರೂಪವನ್ನು  ಖಾತ್ರಿಗೊಳಿಸಬೇಕು.
  • ಉದ್ಯೋಗದ ಹಕ್ಕು ಮೂಲಭೂತ ಸಂವಿಧಾನಿಕ ಹಕ್ಕು ಆಗಬೇಕು; ಉದ್ಯೋಗವಿಲ್ಲದವರಿಗೆ ನಿರುದ್ಯೋಗ ಭತ್ತೆಯನ್ನು ಕೊಡಬೇಕು.
  • ಎಲ್ಲ ನಾಗರಿಕರಿಗೆ ವೃದ್ಧಾಪ್ಯ ಪಿಂಚಣಿ-ಮಾಸಿಕ ಪಿಂಚಣಿಯ ಮೊತ್ತ, ಕನಿಷ್ಟ ಸಂಬಳದ ಅರ್ಧಕ್ಕಿಂತ ಕಡಿಮೆಯಾಗಬಾರದು, ಯಾವುದೇ ಸಂದರ್ಭದಲ್ಲೂ ಇದು ೬೦೦೦ ರೂ.ಗಿಂತ ಕಡಿಮೆಯಿರಬಾರದು.
  • ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣವನ್ನು ನಿಲ್ಲಿಸಬೇಕು ಮತ್ತು ರಕ್ಷಣೆ, ಇಂಧನ ಮತ್ತು ರೈಲ್ವೆ ಹಾಗೂ ಮೂಲ ಸೇವೆಗಳ ಖಾಸಗೀಕರಣವನ್ನು ಹಿಂದಕ್ಕೆ ಪಡೆಯಬೇಕು.
  • ಡಿಜಿಟಲ್ ಮೂಲರಚನೆಯನ್ನು ಸಾರ್ವಜನಿಕ ಮೂಲರಚನೆಯಾಗಿ ಮಾನ್ಯ ಮಾಡಬೇಕು ಮತ್ತು ಅದನ್ನು ಸಾರ್ವಜನಿಕ ಒಳಿತಿಗೆ ಬಳಸಬೇಕು
  • ಖಾಸಗೀ ವಲಯದಲ್ಲಿ ಉದ್ಯೋಗದಲ್ಲಿ ಮತ್ತು ಶಿಕ್ಷಣದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳಿಗೆ ಮೀಸಲಾತಿ ಕೊಡಬೇಕು
  • ಶ್ರೀಮಂತರು ಮತ್ತು ಕಾರ್ಪೊರೇಟುಗಳ ಲಾಭಗಳ ಮೇಲೆ ತೆರಿಗೆಗಳನ್ನು ಹೆಚ್ಚಿಸಬೇಕು; ಅತಿ ಶ್ರೀಮಂತರ ಮೇಲೆ ಸಂಪತ್ತು ತೆರಿಗೆಯನ್ನು ಹಾಗೂ ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆಯನ್ನು ಮತ್ತೆ ತರಬೇಕು ಮತ್ತು ವಾರಸುದಾರಿಕೆ ತೆರಿಗೆಯನ್ನು ಆರಂಭಿಸಬೇಕು.
  • ಚುನಾವಣಾ ವ್ಯವಸ್ಥೆಯ ಸುಧಾರಣೆ; ಆನುಪಾತಿಕ ಪ್ರಾತಿನಿಧ್ಯವನ್ನು ಭಾಗಶಃ ಪಟ್ಟಿ ಪದ್ಧತಿಯೊಂದಿಗೆ ಆರಂಭಿಸಬೇಕು. ಚುನಾವಣಾ ಬಾಂಡುಗಳನ್ನು ರದ್ದು ಮಾಡಬೇಕು; ಚುನಾವಣಾ  ವೆಚ್ಚಗಳಿಗೆ ವಸ್ತು ರೂಪದಲ್ಲಿ ಪ್ರಭುತ್ವದಿಂದ ನಿಧಿ ನೀಡಿಕೆ

Leave a Reply

Your email address will not be published. Required fields are marked *