ಲೋಕಸಭಾ ಚುನಾವಣೆ 2019 : ರಾಜ್ಯದ ಜನತೆ ಸಿಪಿಐ(ಎಂ) ಮನವಿ

  • *  ಬಿಜೆಪಿ ಮೈತ್ರಿಕೂಟ ಸೋಲಿಸಿ                  *   ಎಡ ಪಕ್ಷಗಳ ಪ್ರಾತಿನಿಧ್ಯ ಹೆಚ್ಚಿಸಿ

  • *  ಜಾತ್ಯತೀತ ಬದಲಿ ಜನಪರ ಸರಕಾರ ರಚನೆಯಾಗಲಿ         * ಜನಚಳುವಳಿಯನ್ನು ವಿಸ್ತರಿಸಿ ಬಲಗೊಳಿಸಿ

ಆತ್ಮೀಯ ಮತದಾರ ಬಂಧುಗಳೇ,

    ಹದಿನೇಳನೇಯ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಇದು ಸಾಧಾರಣ ಚುನಾವಣೆಯಲ್ಲ. ಭಾರತದ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಚುನಾವಣೆಯಾಗಲಿದೆ. ಏಕೆಂದರೆ ನಮ್ಮ ಜಾತ್ಯತೀತ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಕಳೆದ ಐದು ವರ್ಷಗಳಲ್ಲಿ ಮೋದಿ ನಾಯಕತ್ವದ ಎನ್.ಡಿ.ಎ. ಸರಕಾರ ತನ್ನ ಯಾವುದೇ ಪ್ರಮುಖ ಆಶ್ವಾಸನೆಗಳನ್ನು ಪೂರೈಸುವಲ್ಲಿ ದಯನೀಯವಾಗಿ ವಿಫಲವಾಗಿದೆ. ಮಾತ್ರವಲ್ಲ, ನಮ್ಮ ಸಂವಿಧಾನದ ನಾಲ್ಕು ಆಧಾರಸ್ತಂಭಗಳು ಮತ್ತು ಸಂಸ್ಥೆಗಳನ್ನು ಬುಡಮೇಲು ಮಾಡಲು ಹೊರಟಿದೆ. ಈ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಿ, ನಮ್ಮ ಸಾಂವಿಧಾನಿಕ ಗಣತಂತ್ರವನ್ನು ರಕ್ಷಿಸುವುದು ಮತ್ತು ಇನ್ನಷ್ಟು ಬಲಪಡಿಸುವುದು ಬದಲಿ ಜನಪರ ಆರ್ಥಿಕ ನೀತಿಗಳ ಜಾತ್ಯತೀತ ಸರಕಾರದಿಂದ ಮಾತ್ರ ಸಾಧ್ಯ. ಈಗ ಅಪಾಯದಲ್ಲಿದ್ದು ನಾವು ರಕ್ಷಿಸಿ ಬೆಳೆಸಬೇಕಾದ ಸಂವಿಧಾನದ ನಾಲ್ಕು ಆಧಾರಸ್ತಂಭಗಳು – ಜಾತ್ಯತೀತ ಪ್ರಜಾಪ್ರಭುತ್ವ, ಆರ್ಥಿಕ ಸ್ವಾವಲಂಬನೆ, ಸಾಮಾಜಿಕ ನ್ಯಾಯ ಮತ್ತು ಒಕ್ಕೂಟ ತತ್ವ.

ಬಿಜೆಪಿ ಮೈತ್ರಿಕೂಟ ಸೋಲಿಸಿ

ಜಾತ್ಯತೀತ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಗೋರಕ್ಷಣೆ, ನೈತಿಕ ಪೋಲಿಸ್ ಗಿರಿ ಮತ್ತು ಧರ್ಮ ರಕ್ಷಣೆಗಳ ಹೆಸರಲ್ಲಿ ಖಾಸಗಿ ಸೇನೆಗಳು ಯಾವುದೇ ಎಗ್ಗಿಲ್ಲದೆ ದಲಿತರು, ಮುಸ್ಲಿಮರು, ಮಹಿಳೆಯರ ಮೇಲೆ ಹಿಂಸಾತ್ಮಕ ದಾಳಿ ದೌರ್ಜನ್ಯಗಳನ್ನು ನಡೆಸುತ್ತಿವೆ. ಕೋಮುವಾದೀಕರಣ ಮತ್ತು ಮನುವಾದೀಕರಣ ವಿಷದಂತೆ ಹಬ್ಬುತ್ತಿದ್ದು ಸಾಮಾಜಿಕ ಸೌಹಾರ್ದ ಕದಡಿದೆ. ಉಚ್ಛ ಶಿಕ್ಷಣ ಸಂಸ್ಥೆಗಳ ಮೇಲೆ ಅವುಗಳನ್ನು ನಾಶ ಮಾಡುವ ಅಥವಾ ಕೋಮುವಾದೀಕರಿಸುವ ಉದ್ದೇಶದಿಂದ ದಾಳಿ ಮಾಡಲಾಗುತ್ತಿದೆ. ಕಾರ್ಮಿಕರು, ರೈತರು ಮತ್ತಿತರ ಜನವಿಭಾಗಗಳ ಹಕ್ಕುಗಳ ದಮನ ಮಾಡಲಾಗುತ್ತಿದೆ. ಅಭಿವ್ಯಕ್ತಿಯ ಸ್ವಾತಂತ್ರ್ಯದ ಮೇಲೆ ರಾಷ್ಟ್ರೀಯ ಭದ್ರತೆಯ ಹೆಸರಲ್ಲಿ ದಾಳಿ ಮಾಡಲಾಗುತ್ತಿದೆ.

ಸ್ವಾವಲಂಬನೆ ಆಧಾರಿತ ಆರ್ಥಿಕ ಬೆಳವಣಿಗೆಯ ಗುರಿಯಿಂದ ಈ ಸರಕಾರ ಮತ್ತಷ್ಟು ದೂರ ಸರಿದಿದೆ. ಐದು ವರ್ಷಗಳಲ್ಲಿ ಕೃಷಿ, ಕೈಗಾರಿಕೆ, ಇತರ ಕ್ಷೇತ್ರಗಳು ಸೇರಿದಂತೆ ಸಾಧಿಸಿದ ಒಟ್ಟಾರೆ ಆರ್ಥಿಕ ಬೆಳವಣಿಗೆ ಹಲವು ದಶಕಗಳಲ್ಲೇ ಅತ್ಯಂತ ಕಳಪೆಯಾಗಿದೆ. ಕಳೆದ ೪೫ ವರ್ಷಗಳಲ್ಲೇ ಅತ್ಯಂತ ಹೆಚ್ಚು ನಿರುದ್ಯೋಗ ಕಂಡುಬಂದಿದೆ. ರೈತ ಮತ್ತು ಕೃಷಿಯ ಸಂಕಷ್ಟಗಳು ಇನ್ನಷ್ಟು ತೀವ್ರ ಮತ್ತು ಆಳಗೊಂಡಿದ್ದು ರೈತರ ಆತ್ಮಹತ್ಯೆಗಳು ಅವ್ಯಾಹತವಾಗಿ ಮುಂದುವರೆದಿವೆ. ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ, ಸಾಲದಿಂದ ವಿಮೋಚನೆಗೆ ಕೊಡಲಾದ ಆಶ್ವಾಸನೆ ಈಡೇರಿಲ್ಲ. ಉದ್ಯೋಗ ಖಾತ್ರಿ ಯೋಜನೆಯನ್ನು ಸಾಯಿಸಲಾಗುತ್ತಿದ್ದು ಗ್ರಾಮೀಣ ಕೂಲಿಕಾರರ ವಲಸೆ ಕಳವಳಕಾರಿ ಪ್ರಮಾಣ ಮುಟ್ಟಿದೆ. ಆರ್ಥಿಕ ಸ್ಥಗಿತತೆ ಮತ್ತು ಬೆಲೆಏರಿಕೆ ಜನರ ಜೀವನವನ್ನು ದುರ್ಭರಗೊಳಿಸಿದೆ.

ಇದು ಸಾಲದೆಂಬಂತೆ ನೋಟು ನಿಷೇಧ ಮತ್ತು ಜಿ.ಎಸ್.ಟಿ ತೆರಿಗೆ ಭಾರದ ಹೇರಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಆರ್ಥಿಕದ ದೊಡ್ಡ ವಿಭಾಗಗಳ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ. ಅದೇ ಸಮಯದಲ್ಲಿ ಬಹುರಾಷ್ಟ್ರೀಯ ಮತ್ತು ದೇಶೀಯ ಕಾರ್ಪೊರೇಟುಗಳ ೧೫ ಲಕ್ಷ ಕೋಟಿ ರೂ,ನಷ್ಟು  ಸಾಲಮನ್ನಾ ಮಾಡುವುದಲ್ಲದೆ ಲಾಭ ಗರಿಷ್ಟಗೊಳಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.  ಚಮಚಾ ಬಂಡವಾಳಶಾಹಿ ವ್ಯವಸ್ಥೆ ಅತ್ಯಂತ ಅಪಾಯಕಾರಿಯಾಗಿ ಬೆಳೆದಿದೆ. ಮೋದಿಯ ಮಿತ್ರರು ಬಹುಪಾಲು ಸಾಲಮನ್ನಾ ಮತ್ತಿತರ ಸವಲತ್ತುಗಳನ್ನು ಬಾಚಿಕೊಳ್ಳುತ್ತಿದ್ದು, ರಾಫೆಲ್ ಹಗರಣಗಳಂತಹ ಹಗರಣಗಳಿಗೆ ಹಾದಿ ಮಾಡಿಕೊಟ್ಟಿದೆ. ಅಪಾರದರ್ಶಕ ’ಚುನಾವಣಾ’ ಬಾಂಡುಗಳು ಹೊಸ ಕಾನೂನುಬದ್ಧ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಿದ್ದು, ಆ ಮೂಲಕ ಹರಿದು ಬಂದ ಕಾರ್ಪೊರೆಟ್ ನಿಧಿಯಲ್ಲಿ ಶೇ. ೯೫ ಬಿಜೆಪಿಗೆ ಹೋಗಿದೆ. ಯಾವ ಕಾರ್ಪೊರೇಟುಗಳು ಈ ನಿಧಿ ಕೊಟ್ಟವು ಎಂದು ಊಹಿಸುವುದು ಕಷ್ಟವೇನಲ್ಲ.

ದಲಿತ/ಆದಿವಾಸಿ ದೌರ್ಜನ್ಯ ತಡೆ ಕಾಯಿದೆ, ಶಿಕ್ಷಣ ಸಂಸ್ಥೆಗಳಲ್ಲಿ ರೋಸ್ಟರ್ ಪದ್ಧತಿಯ ನೇಮಕ, ಬಡ್ತಿಯಲ್ಲಿ ಮೀಸಲಾತಿ, ಅರಣ್ಯವಾಸಿಗಳ ಹಕ್ಕು ಕಾಯಿದೆ ಇತ್ಯಾದಿ – ಹಲವು ಕ್ರಮಗಳನ್ನು ಈ ಐದು ವರ್ಷಗಳಲ್ಲಿ ಪರೋಕ್ಷವಾಗಿ ದುರ್ಬಲ ಅಥವಾ ಸಡಿಲಗೊಳಿಸಲಾಗುತ್ತಿದೆ.  ಇಂತಹ ಕ್ರಮಗಳ ವಿರುದ್ಧ ಪ್ರತಿಭಟಿಸಿದರೆ ಅವರ ಮೇಲೆ ದಮನಚಕ್ರ ಹರಿಬಿಡಲಾಗುತ್ತಿದೆ. ದಲಿತರು, ಮುಸ್ಲಿಮರು, ಮಹಿಳೆಯರ ಮೇಲೆ ದೌರ್ಜನ್ಯದ ಅಪರಾಧಗಳು ವಿಪರೀತವಾಗಿ ಏರಿವೆ. ಸಾಮಾಜಿಕ ನ್ಯಾಯದ ಜಾರಿ ತೀವ್ರ ಅಪಾಯದಲ್ಲಿದೆ.

ಬಿಜೆಪಿಯೇತರ ಸರಕಾರಗಳ ಬಗ್ಗೆ ಮಲತಾಯಿ ಮತ್ತು ಘರ್ಷಣೆಯ ಧೋರಣೆ, ವಿರೋಧ ಪಕ್ಷಗಳ ಸರಕಾರಗಳನ್ನು ಬುಡಮೇಲು ಮಾಡಲು ಸತತ ಯತ್ನ, ಯೋಜನಾ ಆಯೋಗ ಮತ್ತು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ರದ್ದತಿ, ರಾಜ್ಯ ಸರಕಾರಗಳ ಆದಾಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಜಿ.ಎಸ್.ಟಿ. ಜಾರಿ, ಮುಂತಾದ ಕ್ರಮಗಳು ರಾಜ್ಯ ಸರಕಾರಗಳನ್ನು ಕೇಂದ್ರದ ಮುಂದೆ ಭಿಕ್ಷುಕರ ಮಟ್ಟಕ್ಕೆ ಇಳಿಸಿದೆ. ಇದು ಸಾಂವಿಧಾನಿಕ ಒಕ್ಕೂಟ ತತ್ವಗಳನ್ನು ಉಲ್ಲಂಘಿಸುತ್ತಿದ್ದು ಆರೆಸ್ಸೆಸ್ ನ ಮನುವಾದ-ಪ್ರೇರಿತ ಕೇಂದ್ರೀಕೃತ ಹಿಂದೂರಾಷ್ಟ್ರ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತಿವೆ.

ಹಾಗಾಗಿ, ಬಿಜೆಪಿ ಸರಕಾರಕ್ಕೆ ಮತ್ತೆ ಅಧಿಕಾರ ಕೊಡಬಾರದು. ಪುನಃ ಅಧಿಕಾರ ಹಿಡಿದು ಸಾಂವಿಧಾನಿಕ ಪ್ರಜಾಪ್ರಭುತ್ವ ನಾಶ ಮಾಡಲು ಅವಕಾಶ ಕೊಡಬಾರದು. ಬಿಜೆಪಿ ಮೈತ್ರಿಕೂಟವನ್ನು ನಿರ್ಣಾಯಕವಾಗಿ ಸೋಲಿಸಬೇಕು.

ಎಡ ಪಕ್ಷಗಳ ಬಲ ಹೆಚ್ಚಿಸಿ

ಜಾತ್ಯತೀತ ಪ್ರಜಾಪ್ರಭುತ್ವ, ಆರ್ಥಿಕ ಸ್ವಾವಲಂಬನೆ, ಸಾಮಾಜಿಕ ನ್ಯಾಯ ಮತ್ತು ಒಕ್ಕೂಟ ತತ್ವ. – ಸಂವಿಧಾನದ ಈ ನಾಲ್ಕು ಆಧಾರಸ್ತಂಭಗಳನ್ನು ಉಳಿಸಿ ಬೆಳೆಸಬೇಕಾದರೆ, ಬದಲಿ ಜನಪರ ಆರ್ಥಿಕ ನೀತಿಗಳ ಜಾತ್ಯತೀತ ಸರಕಾರದ ರಚನೆ ಆಗಬೇಕಾಗಿದೆ. ಇದಕ್ಕಾಗಿ ೧೭ನೇ ಲೋಕಸಭೆಯಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳ ಪ್ರಬಲ ಪ್ರಾತಿನಿಧ್ಯ ಅಗತ್ಯವಾಗಿದೆ. ಏಕೆಂದರೆ ಸಿಪಿಐ(ಎಂ) ಮತ್ತು ಎಡಪಕ್ಷಗಳು ಮಾತ್ರ ಸಮಗ್ರವಾದ ಪರ್ಯಾಯ ಜನಪರ ನೀತಿಗಳನ್ನು ಪ್ರತಿಪಾದಿಸುತ್ತವೆ. ೨೦೦೪ರ ಚುನಾವಣೆಗಳಲ್ಲಿ ಆಯ್ಕೆಯಾದ 61 ಎಡ ಸಂಸದರ ಬಾಹ್ಯ ಬೆಂಬಲ ಮತ್ತು ಒತ್ತಡದಿಂದಾಗಿ ಯುಪಿಎ-1 ಸರಕಾರದ ಅವಧಿಯಲ್ಲಿ ಗ್ರಾಮೀಣ ಉದ್ಯೋಗದ ಖಾತ್ರಿ, ಶಿಕ್ಷಣ ಹಕ್ಕು, ಅರಣ್ಯವಾಸಿಗಳ ಹಕ್ಕು ಮತ್ತು ಮಾಹಿತಿಯ ಹಕ್ಕು ಮುಂತಾದವುಗಳನ್ನು ಕಾನೂನುಬದ್ಧ ಹಕ್ಕುಗಳಾಗಿಸುವುದು ಸಾಧ್ಯವಾಗಿತ್ತು. ಯುಪಿಎ-೨ ಇಂತಹ ಜನಪರ ಒತ್ತಡ ಇಲ್ಲದೆ ಜನವಿರೋಧಿಯಾಗಿ ಜನರ ಕೋಪಕ್ಕೆ ಗುರಿಯಾದ್ದು ಇತಿಹಾಸ.

ಕರ್ನಾಟಕದಲ್ಲಿ ಸಿಪಿಐ(ಎಂ)

ರಾಜ್ಯದಲ್ಲೂ ಎಡ ಮತ್ತು ಕಮ್ಯುನಿಸ್ಟ್ ಚಳುವಳಿ ೧೯೫೦ರ ದಶಕದಿಂದಲೂ ರೈತ-ಕಾರ್ಮಿಕರ ಬಡಜನತೆಯ ಹಿತಾಸಕ್ತಿಗಳ ರಕ್ಷಣೆಗೆ ತೀವ್ರ ಹೋರಾಟ ಮತ್ತು ಶಾಸನ ಸಭೆಗಳಲ್ಲೂ ಅವರ ದನಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದೆ. ’ಉಳುವವನೇ ಹೊಲದೊಡೆಯ’ ಘೋಷಣೆಯನ್ನು ೧೯೫೦ರ ದಶಕದಲ್ಲಿ ರಾಜ್ಯದಾದ್ಯಂತ ಮೊಳಗಿಸಿ ಸತತ ಭೂಹೋರಾಟಗಳನ್ನು ನಡೆಸುತ್ತಾ, ಇನ್ನೊಂದು ಕಡೆ ಭೂಸುಧಾರಣೆ ಕಾನೂನು ಮಂಜೂರು ಮತ್ತು ಜಾರಿಗೆ ಶ್ರಮಿಸಿದೆ. ದಶಕಗಳ ಕಾಲ ಸಂಘಟಿತ (ಬಟ್ಟೆ ಗಿರಣಿ, ಚಿನ್ನದ ಗಣಿ, ಇಂಜಿನೀಯರಿಂಗ್, ಇತ್ಯಾದಿ) ಮತ್ತು ಅಸಂಘಟಿತ (ಬೀಡಿ, ಮೂರ್ತೆದಾರ, ಗೇರುಬೀಜ ಇತ್ಯಾದಿ) ಕಾರ್ಮಿಕರನ್ನು ಸಂಘಟಿಸಿ ಅವರ ದನಿಯಾಗಿದೆ. ೧೯೭೦-೮೦ ರ ದಶಕದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮತ್ತು ಆ ನಂತರದ ದುಡಿಯುವ ಜನರ ತೀವ್ರ ಪ್ರಜಾಸತ್ತಾತ್ಮಕ ಉಬ್ಬರದಲ್ಲಿ ಸಿಪಿಐ(ಎಂ) ಮಹತ್ವದ ಪಾತ್ರ ವಹಿಸಿದೆ. ಈ ಅವಧಿಯ ನರಗುಂದ-ನವಲಗುಂದ ರೈತ ಬಂಡಾಯ, ಸಾರ್ವಜನಿಕ ಉದ್ಯಮಗಳ ಮತ್ತು ಮೈಕೋ ಚಾರಿತ್ರಿಕ ಮುಷ್ಕರಗಳು ಅದರ ಮೈಲಿಗಲ್ಲುಗಳು.

1990 ರ ದಶಕದ ಆರಂಭದಿಂದ ಜಾಗತೀಕರಣ-ಉದಾರೀಕರಣ-ಖಾಸಗೀಕರಣದ ನೀತಿಗಳ ಬಗ್ಗೆ ಇನ್ನೂ ವ್ಯಾಪಕ ಭ್ರಮೆಗಳಿದ್ದಾಗ, ಅದರ ವಿರುದ್ಧ ಮುಂಚೂಣಿಯಲ್ಲಿ ನಿಂತು ರೈತ-ಕಾರ್ಮಿಕರ ಜನತೆಯ ಪ್ರತಿರೋಧವನ್ನು ಒಡ್ಡುತ್ತಾ ಬಂದಿದೆ. ಇತ್ತೀಚಿನ ದಶಕಗಳಲ್ಲಿ ನವ-ಉದಾರೀಕರಣದ ನೀತಿಗಳ ವಿರುದ್ಧ, ಭೂಸ್ವಾಧೀನ ಮತ್ತು ಕೃಷಿ ಸಂಕಟಗಳ ವಿರುದ್ಧ ರೈತರ, ಅಸಂಘಟಿತ ವಲಯದ (ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯತ್ ಇತ್ಯಾದಿ) ಮತ್ತು ಸಂಘಟಿತ ವಲಯದ ಗುತ್ತಿಗೆ ಮತ್ತಿತರ ಖಾಯಮೇತರ ಕಾರ್ಮಿಕರ ದೃಢವಾದ ರಾಜಿಯಿಲ್ಲದ ಹೋರಾಟಗಳಿಗೆ ನಾಯಕತ್ವ ಕೊಡುತ್ತಿದೆ. ಇವಲ್ಲದೆ ೧೯೯೦ರ ದಶಕದಿಂದ ಕರಾಳ ಸ್ವರೂಪಗಳನ್ನು ಪಡೆದಿರುವ ಕೋಮುವಾದದ ವಿರುದ್ಧ, ಜನತೆಯ ಸೌಹಾರ್ದ ಐಕ್ಯತೆ ಕಾಪಾಡಲು ಸಹ ದೃಢ ಹೋರಾಟಗಳನ್ನು ನಡೆಸಿದೆ.

ಜಾತಿಬೇಧ-ಅಸ್ಫೃಶ್ಯತೆಯ ಕ್ರೂರ ಆಚರಣೆಗಳು, ಮೂಢಾಚಾರಣೆಗಳ ವಿರುದ್ಧ ವೈಜ್ಞಾನಿಕ ಲೋಕದೃಷ್ಟಿ ಹರಡುವತ್ತ ಹಲವು ಸಾಮಾಜಿಕ ವಿಷಯಗಳ ಬಗೆಗೂ ಹೋರಾಟ ನಡೆಸುತ್ತಾ ಬಂದಿದೆ. ಕಂಬಾಲಪಲ್ಲಿ ಹತ್ಯಾಕಾಂಡದ ವಿರುದ್ಧ ಪಾದಯಾತ್ರೆ, ಮಡೆಸ್ನಾನ-ಪಂಕ್ತಿಬೇಧದ ವಿರುದ್ಧ ಉಡುಪಿ ಕೃಷ್ಣ ದೇವಾಲಯಕ್ಕೆ ಮುತ್ತಿಗೆ, ಮೂಢಾಚಾರಣೆ ತಡೆ ಕಾಯಿದೆ ಬೆಂಬಲಿಸಿ ಪ್ರಚಾರಾಂದೋಲನ ಕೆಲವು ಉದಾಹರಣೆಗಳು. ಇನ್ನೊಂದು ಕಡೆ, ಕೆ.ಎಸ್.ವಾಸನ್ ಆದಿಯಾಗಿ ಕೃಷ್ಣ ಶೆಟ್ಟಿ, ಬಿ.ವಿ.ಕಕ್ಕಿಲ್ಲಾಯ, ಪಿ. ರಾಮಚಂದ್ರ ರಾವ್, ಎಸ್. ಸೂರ್‍ಯನಾರಾಯಣರಾವ್, ಜಿ.ವಿ.ಶ್ರೀರಾಮರೆಡ್ಡಿ ವರೆಗೆ ಎಡ-ಕಮ್ಯುನಿಸ್ಟ್ ಶಾಸಕರು ವಿರೋಧ ಪಕ್ಷದಲ್ಲಿದ್ದರೂ, ಶಾಸನ ಸಭೆಗಳಲ್ಲಿ ಜನದನಿ ಮೊಳಗಿಸಿದ್ದಾರೆ. ಸರಕಾರಗಳು ಜನಪರ ಕೆಲಸ ಮಾಡುವಂತೆ ಒತ್ತಡ ಹೇರಿದ್ದಾರೆ.

ಜನಚಳುವಳಿಯನ್ನು ವಿಸ್ತರಿಸಿ ಬಲಗೊಳಿಸಿ

ಒಂದು ಉತ್ತಮ ಭಾರತವನ್ನು ಕಟ್ಟಬೇಕಾದರೆ ಧೋರಣೆಯ ದಿಕ್ಕಿನಲ್ಲಿ ಒಂದು ತೀವ್ರಗಾಮಿ ಪಲ್ಲಟವನ್ನು ತರಬೇಕಾಗಿದೆ. ಧೋರಣೆಗಳಲ್ಲಿನ ಈ ಪಲ್ಲಟಕ್ಕೆ ಸಂಸತ್ತಿನ ಹೊರಗೆ ಎಡಪಕ್ಷಗಳ ನೇತೃತ್ವದ ಚಳುವಳಿಗಳು ಮತ್ತು ಹೋರಾಟಗಳೊಂದಿಗೇ, ಸಂಸತ್ತಿನ ಸದನಗಳ ಒಳಗೂ ಒತ್ತಡಗಳನ್ನು ತರಬೇಕಾಗುತ್ತದೆ. ಇದರಲ್ಲಿ ಎಡಪಕ್ಷಗಳ ಬಲವು ನಿರ್ಣಾಯಕವಾಗಿರುತ್ತದೆ. ಬಿಜೆಪಿಯ ಲೂಟಿ ಮತ್ತು ಚಮಚಾ ಬಂಡವಾಳಶಾಹಿಗೆ ಉತ್ತೇಜನೆ ನೀಡುವ, ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣ ಗೊಳಿಸುವ ಹಾಗೂ ಆರ್ಥಿಕ ಅಸಮಾನತೆ ಹೊಲಸು ಮಟ್ಟಗಳನ್ನು ತಲುಪುವಂತೆ ಮಾಡಿರುವ ಧೋರಣೆಗಳಿಗೆ ವಿರುದ್ಧವಾದ, ಜನಪರ ಅಭಿವೃದ್ಧಿಯ ಪರ್ಯಾಯ ಧೋರಣೆಗಳನ್ನು ಸಿಪಿಐ(ಎಂ) ದೇಶದ ಮುಂದಿಟ್ಟಿದೆ. ಈ ಪರ್ಯಾಯ ಧೋರಣೆಗಳ ಸುತ್ತ ಜನಚಳುವಳಿಗಳನ್ನು ವಿಸ್ತರಿಸಿ ಬಲಗೊಳಿಸಬೇಕಾಗಿದೆ.

ಜಾತ್ಯತೀತ ಬದಲಿ ಜನಪರ ಸರಕಾರ ರಚನೆಯಾಗಲಿ

ಜಾತ್ಯಾತೀತ ಪ್ರಜಾಸತ್ತೆಯ ರಕ್ಷಣೆಗಾಗಿ ಜಾತ್ಯಾತೀತ ಸರಕಾರದ ಅಗತ್ಯವಿದ್ದು ಸಿಪಿಐ(ಎಂ) ಇದಕ್ಕಾಗಿ ಕಾರ್ಯ ನಿರ್ವಹಿಸಲಿದೆ ಮತ್ತು ಅಂತಹ ಅವಕಾಶವನ್ನು ಬಳಸಿಕೊಂಡು ಜನಪರ ಪ್ರಶ್ನೆಗಳ ಕಡೆ ಆ ಸರಕಾರವನ್ನು ಸೆಳೆಯಲು ಒತ್ತಡವನ್ನು ಹೇರಲಿದೆ. ಇದು ಮಾತ್ರವೇ ಜನ ಚಳುವಳಿಯನ್ನು ಮುನ್ನಡೆಸುವ, ಅವರ ಹಕ್ಕುಗಳನ್ನು ಬಲವಾಗಿ ಒತ್ತಾಯಿಸುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಿದೆ.

ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಬಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಸಿಪಿಐ(ಎಂ) ನ ಎಸ್. ವರಲಕ್ಷ್ಮಿ, ಮತ್ತು ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಸಿಪಿಐ ನ ಶಿವಣ್ಣ ಅವರಿಗೆ ಮತ ನೀಡಿ ಆರಿಸಬೇಕೆಂದು ನಮ್ಮ ವಿನಂತಿ. ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯನ್ನು ಸೋಲಿಸಬಲ್ಲ ಅಭ್ಯರ್ಥಿಗೆ ಮತನೀಡುವ ಮೂಲಕ, ಕೇಂದ್ರದಲ್ಲಿ ಜಾತ್ಯತೀತ ಜನಪರ ಸರಕಾರ ರಚಿಸಲು ಅನುವು ಮಾಡಿಕೊಡಬೇಕೆಂದು ನಮ್ಮ ಕೋರಿಕೆ.

  • ಬಿಜೆಪಿ ಮೈತ್ರಿಕೂಟ ಸೋಲಿಸಿ
  • ಎಡ ಪಕ್ಷಗಳ ಪ್ರಾತಿನಿಧ್ಯ ಹೆಚ್ಚಿಸಿ
  • ಜಾತ್ಯತೀತ ಬದಲಿ ಜನಪರ ಸರಕಾರ ರಚನೆಯಾಗಲಿ
  • ಜನಚಳುವಳಿಯನ್ನು ವಿಸ್ತರಿಸಿ ಬಲಗೊಳಿಸಿ

Leave a Reply

Your email address will not be published. Required fields are marked *