ಲಾಕ್ ಡೌನ್: ತುರ್ತು ಕ್ರಮವಹಿಸಲು ಮುಖ್ಯಮಂತ್ರಿಗಳಿಗೆ ಮನವಿ

ಕರ್ನಾಟಕ ರಾಜ್ಯ ಬಹುತೇಕ ಲಾಕ್ ಡೌನ್ ಆಗಿ ಒಂದು ವಾರವನ್ನು ಪೂರೈಸಿದೆ. ಕಲಬುರಗಿಯಂತೂ ಎರಡು ವಾರಗಳನ್ನು ಪೂರೈಸಿದೆ. ರಾಜ್ಯದ ಬಹುತೇಕ ಜನತೆ ಕೋವಿಡ್-19 ನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜೊತೆ ಕೈ ಜೋಡಿಸಿ ಲಾಕ್ ಡೌನ್ ಆಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೋವಿಡ್-19 ರ ಮುಂದುವರಿಕೆಯ ಸರಪಳಿಯನ್ನು ತುಂಡರಿಸುವಲ್ಲಿ ಮಗ್ನವಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದಿರುವಾಗಲೇ ಕೆಲವು ಆತಂಕಕಾರಿ ಅಂಶಗಳು ಕಂಡುಬಂದಿವೆ.

ರಾಜ್ಯದಲ್ಲಿ ವಲಸೆ ಕಾರ್ಮಿಕರು ಉದ್ಯೋಗ ಹೀನರಾಗಿ, ಅನಾರೊಗ್ಯದ ಭಯದಿಂದ ರಾಜ್ಯ ಬಿಟ್ಟು ತಮ್ಮ ರಾಜ್ಯಗಳಿಗೆ ಮತ್ತು ರಾಜ್ಯದೊಳಗಿನ ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ತೆರಳುವ ಆತುರದಲ್ಲಿದ್ದಾರೆ. ಅವರಿಗೀಗ ತಮ್ಮ ಗ್ರಾಮಗಳಿಗೆ ತೆರಳಲು ಸಾರಿಗೆ ಸೌಕರ್ಯಗಳಿಲ್ಲದೇ ತೊಂದರೆಯಾಗಿ ನೂರಾರು ಕಿ.ಮೀ ಪಾದಯಾತ್ರೆಯಲ್ಲಿ ತೊಡಗಿರುವುದು ಕಂಡುಬಂದಿದೆ.

ಅದೇ ರೀತಿ, ಕೆಲವು ದೊಡ್ಡ ಕೈಗಾರಿಕೆಗಳು ದೇಶವೇ ಲಾಕ್ಡೌನ್ ಆದರೂ ಅವುಗಳು ಉತ್ಪಾದನೆಯನ್ನು ನಿಲ್ಲಿಸಿಲ್ಲ. ಸಾವಿರಾರು ಜನ, ಕೆಲವೆಡೆ ದಶ ಸಾವಿರ ಗಟ್ಟಲೇ ಕಾರ್ಮಿಕರು ಉತ್ಪಾದನೆಯಲ್ಲಿ ತೊಡಗಿದ್ದಾರೆ. ಈ ಕಾರ್ಮಿಕರು ಹಾಗೂ ಅವರ ಕುಟುಂಬಗಳು ಮತ್ತು ಅವರು ವಾಸಿಸುವ ಪ್ರದೇಶಗಳು ಗಂಭೀರ ಆತಂಕಕ್ಕೊಳಗಾಗಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಠಿಣ ಕ್ರಮ ವಹಿಸಿ ಅವುಗಳನ್ನು ತಡೆಯಲು ಮುಂದಾಗದಿರುವ ದ್ವಂದ್ವ ನಿಲುಮೆಯ ಕುರಿತು ಅನುಮಾನ ಪಡುವಂತಾಗಿದೆ.

ಸರಕಾರಗಳ ಮತ್ತು ಕೈಗಾರಿಕಾ ಮಾಲೀಕರ ಜವಾಬ್ದಾರಿ ರಹಿತ ವರ್ತನೆಯಿಂದಾಗಿ ಮತ್ತು ಇಂತಹ ಅಪಾಯಕಾರಿ ಸನ್ನಿವೇಶದಲ್ಲೂ ಲಾಭಕೋರ ನೀತಿಯಿಂದಾಗಿ, ಇದೀಗ ನಂಜನಗೂಡು ತಾಲೂಕಿನ ಜನತೆ ಅಪಾಯಕ್ಕೀಡಾಗಿದೆ. ಕೈಗಾರಿಕೆಯಲ್ಲಿನ ವೈರಸ್ ಸೋಂಕಿತರೊಬ್ಬರಿಂದ ಇಡೀ ಕೈಗಾರಿಕೆಯ ಕಾರ್ಮಿಕರೆಲ್ಲರೂ ಸೋಂಕಿಗೊಳಗಾಗುವಂತಾಗಿದೆ. ಅವರ ಕುಟುಂಬಗಳೆಲ್ಲಾ ಸೋಂಕಿಗೊಳಗಾಗುವ ಪರಿಸ್ಥಿತಿ ಮತ್ತು ಆ ಪ್ರದೇಶದ ದಶ ಸಾವಿರ ಗಟ್ಟಲೆಯ ಕುಟುಂಬಗಳು ಸೋಂಕಿನ ಭೀತಿಗೊಳಗಾಗುವಂತಾಗಿದೆ. ಈ ಕುರಿತ ರಾಜ್ಯ ಸರಕಾರದ ತೀವ್ರ ಮಧ್ಯ ಪ್ರವೇಶ ಮತ್ತು ಕಠಿಣ ಕ್ರಮಗಳು ಅಗತ್ಯವಾಗಿವೆ.

ಈಗಲೂ ತೋರಣಗಲ್ಲುನ ಜಿಂದಾಲ್ ಕಂಪನಿಯಲ್ಲಿ 15,000 ಕ್ಕೂ ಅಧಿಕ ಕಾರ್ಮಿಕರು ಈಗಲೂ ದುಡಿಯುತ್ತಿರುವುದನ್ನು ತಡೆಯಬೇಕಿದೆ.

ಗ್ರಾಮೀಣ ಹಾಗೂ ನಗರ ಪ್ರದೇಶದ ಕೃಷಿಕೂಲಿಕಾರರು, ಬಡರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಸ್ವಯಂ ವೃತ್ತಿಯಲ್ಲಿದ್ದ ಸಾರಿಗೆ ಮತ್ತಿತರೆ ಕಾರ್ಮಿಕರು, ಕ್ಷೌರಿಕರು, ಮಂಗಳ ವಾದ್ಯ ಕಲಾವಿದರು ಮುಂತಾಗಿ, ಲಾಕ್ ಡೌನ್ ನಿಂದಾಗಿ ಉದ್ಯೋಗ ಹೀನರಾಗಿದ್ದಾರೆ. ಇವರಾರಿಗೂ ನಿರುದ್ಯೋಗ ಭತ್ಯೆ, ಉಪ ಜೀವನದಯಾದಿಯು, ಆರೋಗ್ಯ ಸುರಕ್ಷೆಯು ಇನ್ನು ದೊರೆಯದಾಗಿದೆ. ಇದನ್ನೆಲ್ಲಾ ನಿವಾರಿಸಲು ಅಗತ್ಯ ಕ್ರಮಗಳಾಗಬೇಕು.

ರೈತರ ಕೃಷಿ ಉತ್ಪನ್ನಗಳ ಖರೀದಿಗೆ ಮತ್ತು ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಮತ್ತು ಕ್ರಮಗಳಾಗದೇ ರೈತರು ತೊಂದರೆಗೀಡಾಗಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಇದುವರೆಗೆ ಪ್ರಕಟಿಸಿದ ಕ್ರಮಗಳು ಸ್ವಾಗತಾರ್ಹವಾದರೂ ಅವುಗಳು ಬೆಳೆಯುತ್ತಿರುವ ಪರಿಸ್ಥಿತಿಯನ್ನೆದುರಿಸಲು ಸಾಲದಾಗಿವೆ. ಅದೇ ರೀತಿ, ಪೋಲೀಸ್ ಇಲಾಖೆಯ ಕ್ರಮ ಈ ವಿಚಾರದಲ್ಲಿ ಒಟ್ಟಾರೆ ಸ್ವಾಗಾತಾರ್ಹವಾಗಿದ್ದರೂ, ಕೆಲವೆಡೆ ಅತಿರೇಕದ ಕ್ರಮಗಳಿಂದ ಜನತೆ ಅಸಮಾಧಾನಗೊಳ್ಳುವಂತಾಗಿದೆ. ಅದನ್ನು ಸರಿಪಡಿಸಲು ಕ್ರಮಗಳಾಗಬೇಕಾಗಿದೆ. ಅದೇ ರೀತಿ, ಪ್ರಮುಖ ರಾಜಕೀಯ ಪಕ್ಷಗಳ ಕಾರ್ಯಕರ್ತರು ಸಂಕಷ್ಠದಲ್ಲಿರುವ ಜನತೆಗೆ ನೆರವಾಗಲೂ ಸಾದ್ಯವಾಗುವಂತೆ ಅಗತ್ಯ ಕ್ರಮಗಳನ್ನು ಸರಕಾರ ಕ್ರಮವಹಿಸಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ಸಿಪಿಐಎಂ ರಾಜ್ಯ ಸಮಿತಿ ಒತ್ತಾಯಿಸುತ್ತದೆ.

1) ನಂಜನಗೂಡಿನ ಜ್ಯುಬಿಲಿಯೆಂಟ್ ಆರ್ಗನೈಜೇಸನ್ ಕೈಗಾರಿಕೆ ಕಾರ್ಮಿಕರಲ್ಲುಂಟಾದ ಸೋಂಕಿನಿಂದುಂಟಾದ ಪರಿಸ್ಥಿತಿಯಾಧಾರದಲ್ಲಿ ನಂಜನಗೂಡು ತಾಲೂಕನ್ನು ವಿಶೇಷ ಲಾಕ್ ಡೌನ್ ಪ್ರದೇಶವಾಗಿ ಪರಿಗಣಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕ್ರಮವಹಿಸಬೇಕು. ಕಾರ್ಮಿಕರು ಹಾಗೂ ಅವರ ಕುಟುಂಬಗಳ ಸೋಂಕು ನಿಯಂತ್ರಣಕ್ಕೆ ಆ ಪ್ರದೇಶದ ಸುರಕ್ಷತೆಗೆ ವಿಶೇಷ ಕ್ರಮಗಳನ್ನು ಅಗತ್ಯ ಆರೋಗ್ಯ ಸೌಲಭ್ಯ ಮತ್ತು ಬಂಡವಾಳವನ್ನು ಒದಗಿಸಬೇಕು. ಈ ವಿಚಾರದಲ್ಲಿ ಜವಾಬ್ದಾರಿ ರಹಿತವಾಗಿ ವರ್ತಿಸಿದ ಕೈಗಾರಿಕಾ ಮಾಲೀಕನ ಮೇಲೆ ಕ್ರಿಮಿನಲ್ ಧಾವೆ ಹೂಡಬೇಕು.

2) ಬಳ್ಳಾರಿ ಜಿಲ್ಲೆಯ ಸಂರಕ್ಷಣೆಗಾಗಿ, ತೋರಣಗಲ್ಲು ಪ್ರದೇಶದ ಜಿಂದಾಲ್ ಸ್ಟೀಲ್ಸ್ ಕೈಗಾರಿಕೆಯ ಉತ್ಪಾದನೆ ಸ್ಥಗಿತಗೊಳಿಸುವಂತೆ ತಕ್ಷಣ ಆದೇಶಿಸಿ, ನಿಲ್ಲಿಸಬೇಕು. ಕಾರ್ಮಿಕರಿಗೆ ವೇತನ ಸಹಿತ ರಜೆಯನ್ನು ಘೋಷಿಸುವಂತೆ ಮತ್ತು ಅವರ ಆರೋಗ್ಯ ತಪಾಸಣೆಗೆ ಕ್ರಮವಹಿಸಿ ಅವರ ಸ್ವಗ್ರಾಮಗಳಿಗೆ ತೆರಳುವಂತೆ ಕ್ರಮ ವಹಿಸಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ವಿಚಾರದಲ್ಲಿ ಜವಾಬ್ದಾರಿಯನ್ನು ಮೆರೆಯಬೇಕು ಬಳ್ಳಾರಿ ಜಿಲ್ಲೆಯ ಜನತೆಯ ಆತಂಕವನ್ನು ತಡೆಯಬೇಕು.

3) ವಲಸೆ ಕಾರ್ಮಿಕರ ಪರಿಸ್ಥಿತಿಯನ್ನು ಗಮನಿಸಿ ಹೊರ ರಾಜ್ಯಗಳಿಂದ ರಾಜ್ಯಕ್ಕೆ ವಲಸೆ ಬಂದು ದುಡಿಯುತ್ತಿರುವ ಕಾರ್ಮಿಕರನ್ನು, ಅತಿಥಿ ಕಾರ್ಮಿಕರೆಂದು ಪರಿಗಣಿಸಿ, ಅವರ ವಾಸಕ್ಕೆ ಮತ್ತು ಅವರ ಆಹಾರ, ಆರೋಗ್ಯ ಮತ್ತಿತರೆ ಅಂಶಗಳಿಗೆ ಅಗತ್ಯ ಸೌಲಭ್ಯಗಳನ್ನು ರಾಜ್ಯ ಸರಕಾರ ಒದಗಿಸಬೇಕು. ಅವರ ಆರೋಗ್ಯ ಪರಿಸ್ಥಿತಿಯ ಆಧಾರದಲ್ಲಿ, ಅವರು ಆರೋಗ್ಯವಾಗಿದ್ದು ಅವರು ತಮ್ಮ ಸ್ವಗ್ರಾಮಗಳಿಗೆ ತೆರಳಲು ಇಚ್ಛಿಸಿದಲ್ಲಿ ಅಂತಹವರನ್ನು ವಿಶೇಷ ಬಸ್ ಹಾಗೂ ರೈಲುಗಳ ಮೂಲಕ ಕಳುಹಿಸಲು ವ್ಯವಸ್ಥೆ ಮಾಡಬೇಕು. ಇದಕ್ಕೆ ಕೇಂದ್ರ ಸರಕಾರದ ನೆರವನ್ನು ಪಡೆಯಬೇಕು. ಅದೇ ರೀತಿ, ಆರೋಗ್ಯ ಸಮಸ್ಯೆ ಇರುವವರನ್ನು ಇಲ್ಲಿಯೇ ಉಳಿಸಿಕೊಂಡು ಶೂಶೃಷೆ ನೀಡಬೇಕು. ಅವರ ಆರೋಗ್ಯ ಸುಧಾರಣೆಯ ನಂತರ ಅವರ ಸ್ವ ಗ್ರಾಮಗಳಿಗೆ ಕಳುಹಿಸಲು ಕ್ರಮ ವಹಿಸಬೇಕು.

4) ರಾಜ್ಯದ ವಲಸೆ ಕಾರ್ಮಿಕರಿಗೂ ಮೇಲಿನಂತೆಯೇ ಕ್ರಮ ವಹಿಸಬೇಕು. ಅದಾಗಲೇ ಸಾವಿರಾರು ಕಾರ್ಮಿಕರು ಸುತ್ತ- ಮುತ್ತಲ ರಾಜ್ಯಗಳಿಂದ ನಮ್ಮದೇ ರಾಜ್ಯದ ವಿವಿಧ ನಗರ ಹಾಗೂ ಪಟ್ಟಣಗಳಿಂದ ಸ್ವಗ್ರಾಮಗಳಿಗೆ ಪಾದ ಯಾತ್ರೆಯಲ್ಲಿ ತೆರಳುತ್ತಿದ್ದಾರೆ. ಅವರುಗಳನ್ನು ಅಯಾ ತಾಲೂಕಾ ಕೇಂದ್ರಗಳಲ್ಲಿ ತಡೆದು ಅವರಿಗೆ ಅಗತ್ಯ ಉಟೋಪಚಾರ ಮತ್ತು ವಸತಿ ಸೌಲಭ್ಯವನ್ನು ಒದಗಿಸಬೇಕು ಅಲ್ಲದೇ ಅವರ ಆರೋಗ್ಯ ತಪಾಸಣೆ ಗೈದು, ಆರೋಗ್ಯವಂತರನ್ನು ವಿಶೇಷ ಬಸ್ ಹಾಗೂ ರೈಲು ವ್ಯವಸ್ಥೆ ಮಾಡಿ ಸ್ವಗ್ರಾಮಗಳಿಗೆ ತಲುಪಿಸಬೇಕು. ಉಳಿದವರಿಗೆ ಶೂಶೃಷೆ ನೀಡಿ ಕಳುಹಿಸಬೇಕು. ಅಲ್ಲಿಯವರೆಗೆ ಎಲ್ಲ ರೀತಿಯ ನೆರವು ನೀಡಬೇಕು.

5) ಗ್ರಾಮೀಣ ಹಾಗೂ ನಗರ ಪ್ರದೇಶದ ಕೃಷಿ ಕೂಲಿಕಾರರು ಮತ್ತು ಬಡರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಸ್ವಯಂ ವೃತ್ತಿ ನಿರತರು (ಉದಾ : ಕ್ಷೌರಿಕ ವೃತ್ತಿ ನಿರತರು, ಮಂಗಳ ವಾದ್ಯ ಕಲಾವಿದರು, ಸಾರಿಗೆ ಸೇವೆಯ ಸಣಗಣ ವೃತ್ತಿ ನಿರತರು ಮುಂತಾಗಿ) ಲಾಕ್ ಡೌನ್ ಅವಧಿಯಲ್ಲಿ ನಿರುದ್ಯೋಗಿಗಳಾಗಿದ್ದು ಈ ಎಲ್ಲರನ್ನು ಗುರುತಿಸಿ ಪ್ರತಿ ದಿನ ತಲಾ 500 ರೂಗಳಂತೆ ನಿರುದ್ಯೋಗ ಭತ್ಯೆ ನೀಡಬೇಕು. ಈ ಎಲ್ಲಾ ಕುಟುಂಬಗಳಿಗೆ ಕೇರಳ ಸರಕಾರದ ಮಾದರಿಯಲ್ಲಿ ಕನಿಷ್ಟ ಮೂರು ತಿಂಗಳಿಗಾಗುವಷ್ಟು ಸಮಗ್ರ ಪಡಿತರವನ್ನು ಮನೆ ಮನೆಗೆ ಒದಗಿಸಬೇಕು. ಅದೇ ರೀತಿ, ಆರೋಗ್ಯ ಸುರಕ್ಷಾ ಕ್ರಮಗಳನ್ನು ಒದಗಿಸಬೇಕು.
ಎಲ್ಲಾ ಬಿಪಿಎಲ್ ಕುಟುಂಬಗಳ ಜನಾಧನ ಖಾತೆಗೆ ತಕ್ಷಣ 5,000 ರೂಗಳು ಜಮಾ ಮಾಡಬೇಕು.

6) ರೈತರ ಕೃಷಿ ಉತ್ಪನ್ನಗಳ ಮಾರಾಟವು ಲಾಕ್ ಡೌನ್ ಕಾರಣದಿಂದ ಸಂಕಷ್ಠಕ್ಕೊಳಗಾಗಿದೆ. ಚಿಕ್ಕ ಬಳ್ಳಾಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ರಕ್ಷಣೆಗೆ ತುರ್ತುಕ್ರಮಗಳಾಗಬೇಕು. ಅದೇ ರೀತಿ ಇತರೇ ಕೃಷಿ ಉತ್ಪನ್ನಗಳ ಖರೀದಿಗೆ ರಾಜ್ಯ ಸರಕಾರದ ಖರೀದಿ ಏಜೆನ್ಷಿಗಳ ಮೂಲಕ ಖರೀದಿಗೆ ಮತ್ತು ಮಾರಾಟಕ್ಕೆ ಹಾಗೂ ಸಾಗಾಟದ ಸಾರಿಗೆಗೆ ತಕ್ಷಣ ಕ್ರಮವಹಿಸಬೇಕು. ಮಾರಾಟದ ಹಾಗೂ ಸುಗ್ಗಿ ಕೃಷಿ ಕೆಲಸದಲ್ಲಿ ತೊಡಗುವ, ಹಮಾಲರು, ಕೃಷಿಕೂಲಿಕಾರರು, ಬಡ ರೈತರುಗಳಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಒದಗಿಸಬೇಕು.

7) ರಾಜ್ಯದ ಕೆಲವೆಡೆ ಆರೋಗ್ಯ ಕಾರ್ಯಕರ್ತರಿಗೆ ಭೀತಿಗೊಂಡ ಜನತೆ ಅವರು ವಾಸ ಸ್ಥಳಕ್ಕೆ ಬರದಂತೆ ಕಿರುಕುಳ ಹಾಗೂ ತೊಂದರೆ ನೀಡುತ್ತಿರುವರೆನ್ನಲಾಗಿದೆ. ಅಂತಹ ತೊಂದರೆ ನಿವಾರಣೆಗೆ ಅಗತ್ಯ ಕ್ರಮವಹಿಸಬೇಕು ಮತ್ತು ಜನಗಳ ಆತಂಕದ ನಿವಾರಣೆಗೆ ಅಗತ್ಯ ಕ್ರಮವಹಿಸಬೇಕು.

8) ಪ್ರಮುಖ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಅಥವಾ ಕೊನೆಯ ಪಕ್ಷ ರಾಷ್ಟ್ರೀಯ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪರಿಹಾರ ಕಾರ್ಯದಲ್ಲಿ ತೊಡಗಲು ಕನಿಷ್ಠ ತಾಲೂಕಿಗೊಬ್ಬ ಕಾರ್ಯಕರ್ತನಿಗೆ ಅನುಮತಿ ನೀಡಿ, ಪಾಸ್ ಒದಗಿಸಬೇಕು.

9) ಕೆಲವೆಡೆ ಪೋಲೀಸರ ಅತಿರೇಕದ ಕ್ರಮಗಳು ಕಂಡು ಬಂದಿದ್ದು ಅವುಗಳನ್ನು ತಡೆಯಬೇಕು.

ಯು. ಬಸವರಾಜ
ಕಾರ್ಯದರ್ಶಿ

Leave a Reply

Your email address will not be published. Required fields are marked *