ಜನಗಳ ಆತಂಕಗಗಳಿಗೆ ಸಮರೋಪಾದಿಯಲ್ಲಿ ಗಮನಕೊಡಿ-ಎಡಪಕ್ಷಗಳ ಆಗ್ರಹ

ದೇಶ ಕೊವಿಡ್-19 ಮಹಾಮಾರಿ ಸಮುದಾಯದಲ್ಲಿ ಹರಡದಂತೆ ತಡೆಯುವ 21 ದಿನಗಳ ಲಾಕ್‌ಡೌನಿನ ಎರಡನೇ ವಾರವನ್ನು ಪ್ರವೇಶಿಸಿದೆ. ಈ ಮೊದಲ ವಾರದಲ್ಲಿ ಹಲವು ಸಮಸ್ಯೆಗಳು ತೀಕ್ಷ್ಣವಾಗಿ ಎದ್ದು ಬಂದಿವೆ. ಅವನ್ನು ತುರ್ತಾಗಿ ಪರಿಹರಿಸಬೇಕಾಗಿದೆ.

ಇವನ್ನು ಗುರುತಿಸಿ ಈ ಬಗ್ಗೆ ಸರಕಾರ ಕೈಗೊಳ್ಳಬೇಕೆಂದಿರುವ ಕ್ರಮಗಳನ್ನು ನಿರೀಕ್ಷಿಸಿದ್ದವರಿಗೆ ಪ್ರಧಾನ ಮಂತ್ರಿಗಳ ಇತ್ತೀಚಿನ ಎರಡು ಭಾಷಣಗಳು ತೀವ್ರ ನಿರಾಸೆಯನ್ನೇ ತಂದಿವೆ. ಅವರು ಈ ಯಾವ ವಿಷಯಗಳ ಬಗ್ಗೆಯೂ ಪ್ರಸ್ತಾಪಿಸದೆ, ಕೇವಲ ಇನ್ನೊಂದು ಸಾಂಕೇತಿಕ ಆಚರಣೆಯ ಕರೆ ಕೊಟ್ಟಿದ್ದಾರೆ.

ತದ್ವಿರುದ್ಧವಾಗಿ ಐದು ಎಡಪಕ್ಷಗಳು ಈ ಲಾಕ್‌ಡೌನಿನ ಎರಡನೇ ವಾರದಲ್ಲಿ ಕೈಗೊಳ್ಳಲೇ ಬೇಕಾದ ಕ್ರಮಗಳ ಬಗ್ಗೆ ಒಂದು ಜಂಟಿ ಹೇಳಿಕೆ ನೀಡಿ ಜನಗಳ ಆತಂಕಗಳಿಗೆ ಸಮರೋಪಾದಿಯಲ್ಲಿ ಗಮನ ಕೊಡಿ ಎಂದು ಸರಕಾರವನ್ನು ಆಗ್ರಹಿಸಿವೆ. ಕೊವಿಡ್-19 ರ ವಿರುದ್ಧ ಹೋರಾಟ ನಾವೆಲ್ಲರೂ ಒಗ್ಗಟ್ಟಿನಿಂದ, ಅದನ್ನು ಸೋಲಿಸುವ ದೃಢನಿರ್ಧಾರದಿಂದ ನಡೆಸುವ ಹೋರಾಟ ಎಂದು ಮನಗಾಣಿಸಲು ಕೇಂದ್ರ ಸರಕಾರ ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಹೇಳಿರುವ ಎಡಪಕ್ಷಗಳ ಈ ಜಂಟಿ ಹೇಳಿಕೆಯ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:

ದೇಶ ಕೊವಿಡ್-19 ಮಹಾಮಾರಿ ಸಮುದಾಯದಲ್ಲಿ ಹರಡದಂತೆ ತಡೆಯುವ 21 ದಿನಗಳ ಲಾಕ್‌ಡೌನಿನ ಎರಡನೇ ವಾರವನ್ನು ಪ್ರವೇಶಿಸಿದೆ.

ಈ ಮೊದಲ ವಾರದಲ್ಲಿ ಹಲವು ಸಮಸ್ಯೆಗಳು ತೀಕ್ಷ್ಣವಾಗಿ ಎದ್ದು ಬಂದಿವೆ. ಅವನ್ನು ತುರ್ತಾಗಿ ಪರಿಹರಿಸಬೇಕಾಗಿದೆ. ಇವುಗಳಲ್ಲಿ ಹಲವು ನಿರೀಕ್ಷಿತ ಸಮಸ್ಯೆಗಳೇ. ಆದರೆ ದುರದೃಷ್ಟವಶಾತ್ ಲಾಕ್‌ಡೌನ್ ಪ್ರಕಟಿಸುವ ಮೊದಲು ಅವುಗಳನ್ನು ಸರಿಪಡಿಸುವ ಕ್ರಮವನ್ನು ಕೈಗೊಳ್ಳಲಿಲ್ಲ.

  1. ಕೋಟ್ಯಂತರ ಮಂದಿ ತಮ್ಮ ಜೀವನೋಪಾಯದ ಮೂಲಗಳನ್ನು ಕಳಕೊಂಡಿದ್ದಾರೆ. ನಗರ ಕೇಂದ್ರಗಳಿಂದ ವಲಸೆ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಹೊರ ಹೋಗುತ್ತಿರುವುದು, ಈ ಲಾಕ್‌ಡೌನನ್ನು ಇದ್ದಕ್ಕಿದ್ದಂತೆ ಪ್ರಕಟಿಸಿದ್ದರಿಂದ ಜನಗಳ ಜೀವನೋಪಾಯಗಳನ್ನು ಎಷ್ಟರ ಮಟ್ಟಿಗೆ ಅಲ್ಲೋಲ-ಕಲ್ಲೋಲಗೊಂಡಿದೆ ಎಂಬುದನ್ನು ತೋರಿಸಿದೆ. ಹಸಿವು ಮತ್ತು ಅಪೌಷ್ಟಿಕತೆ ವ್ಯಾಪಕವಾಗಿ ಬೆಳೆಯುವುದನ್ನು ನಿಲ್ಲಿಸಲು ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಏಕೆಂದರೆ ಇಂತಹ ಪರಿಸ್ಥಿತಿಗಳು ಕೊವಿಡ್-19ನ್ನು ಪೋಷಿಸುತ್ತವೆ. ಎಲ್ಲ ಜನಧನ ಬಿಪಿಎಲ್ ಕುಟುಂಬಗಳಿಗೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಆಶ್ವಾಸನೆ ನೀಡಿದ 5,000 ರೂ.ಗಳನ್ನು ತಕ್ಷಣವೇ ವರ್ಗಾಯಿಸಬೇಕು. ಕೇಂದ್ರ ಸರಕಾರ ದೇಶಾದ್ಯಂತ ಪ್ರತಿ ವಲಸೆ ಕಾರ್ಮಿಕ ಕುಟುಂಬಕ್ಕೆ, ಅವರ ಬಳಿ ರೇಷನ್ ಕಾರ್ಡ್ ಇರಲಿ, ಇಲ್ಲದಿರಲಿ 35 ಕೆ.ಜಿ. ಆಹಾರಧಾನ್ಯಗಳನ್ನು, ತನ್ನ ಬಳಿ ಇರುವ 7.5 ಕೋಟಿ ಟನ್ ದಾಸ್ತಾನಿನಿಂದ ಒದಗಿಸಬೇಕು. ವಿವಿಧ ಭಾಗಳಿಂದ ತಮ್ಮ ಊರುಗಳತ್ತ ಹೊರಟ ವಲಸೆ ಕಾರ್ಮಿಕರಿಗೆ ಸರಿಯಾದ ಆರೋಗ್ಯಪಾಲನೆ ಸೌಕರ್ಯಗಳನ್ನು ಕಲ್ಪಿಸಬೇಕು. ದೇಶದ ಎಲ್ಲ ಭಾಗಗಳಲ್ಲಿ ಪರಿಣಾಮಕಾರಿ ಮತ್ತು ಶುಚಿತ್ವಪೂರ್ಣ ಕ್ವಾರಂಟೈನ್ ಸೌಲಭ್ಯಗಳನ್ನು ಸ್ಥಾಪಿಸಬೇಕು. ವಲಸೆ ಕಾರ್ಮಿಕರ ಮೇಲೆ ಅಮಾನುಷ ಪೋಲೀಸ್ ಕ್ರಮಗಳನ್ನು ಕೊನೆಗೊಳಿಸಬೇಕು ಮತ್ತು ಇಂತಹ ಆದೇಶಗಳನ್ನು ಕೊಟ್ಟವರ ಮೇಲೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕು.

ಎಲ್ಲ ನಗರ ಕೇಂದ್ರಗಳಲ್ಲಿ, ವಿಶೇಷವಾಗಿ ಕೊಳೆಗೇರಿಗಳು ದೊಡ್ಡ ಪ್ರಮಾಣದಲ್ಲಿ ಇರುವಲ್ಲಿ, ಹಸಿವು, ಆಹಾರವಿಲ್ಲದೆ ಉಪವಾಸ ಮತ್ತು ಕೊವಿಡ್-19 ಸಮುದಾಯದಲ್ಲಿ ಹರಡುವುದನ್ನು ತಡೆಯಲು ತುರ್ತಾಗಿ ಆಹಾರ ಧಾನ್ಯಗಳನ್ನು ಮತ್ತು ಆವಶ್ಯಕ ಸಾಮಗ್ರಿಗಳನ್ನು ಒದಗಿಸಬೇಕಾಗಿದೆ.

ಇದು ಕಟಾವಿನ ಸಮಯ. ನಮ್ಮ ಆಹಾರ ಭದ್ರತೆಗೆ ಅತ್ಯಗತ್ಯವಾದ ಆಹಾರ ಬೆಳೆ ವ್ಯರ್ಥವಾಗದಂತೆ ಖಾತ್ರಿಪಡಿಸಲು ರೈತರಿಗೆ ಬೆಂಬಲದ ಅಗತ್ಯವಿದೆ. ಅವರು ಹತಾಶೆಯಿಂದ ಸಿಕ್ಕ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಉಂಟಾಗದಿರಲು ಭಾರತ ಆಹಾರ ನಿಗಮ(ಎಫ್‌ಸಿಐ) ಅವರ ಬೆಳೆಗಳನ್ನು ಕನಿಷ್ಟ ಬೆಂಬಲ ಬೆಲೆಗಳಲ್ಲಿ ಖರೀದಿಸಬೇಕೆಂದು ನಿರ್ದೇಶನ ನೀಡಬೇಕು.

  1. ಇವುಗಳಲ್ಲಿ ಹೆಚ್ಚಿನ ಕ್ರಮಗಳನ್ನು ರಾಜ್ಯಸರಕಾರಗಳು ಕೈಗೊಳ್ಳ ಬೇಕಾಗುತ್ತದೆ. ರಾಜ್ಯ ಸರಕಾರಗಳು ಈಗಾಗಲೇ ತೀವ್ರ ಹಣಕಾಸು ಕೊರತೆಯನ್ನು ಎದುರಿಸುತ್ತಿವೆ, ಅವು ಈ ಕಾರ್ಯಭಾರಗಳನ್ನು ಕೈಗೆತ್ತಿಕೊಳ್ಳುವ ಸ್ಥಿತಿಯಲ್ಲಿ ಇರುವುದಿಲ್ಲ. ಕೇಂದ್ರ ಸರಕಾರ ಅವುಗಳಿಗೆ ಉದಾರ ಹಣಕಾಸು ಸಹಾಯ ನೀಡಬೇಕಾಗುತ್ತದೆ. ರಾಜ್ಯಗಳು ಸಾಲ ತರಲು ಇರುವ ಮಿತಿಯನ್ನು ಹೆಚ್ಚಿಸಬೇಕು. ಕೋಟ್ಯಂತರ ಭಾರತೀಯ ಜನಗಳ ಬದುಕು ಮತ್ತು ಜೀವನೋಪಾಯ ಇದರ ಮೇಲೆ ನಿಂತಿದೆ.
  2. ಲಾಕ್‌ಡೌನ್‌ನ ಅವಧಿಯಲ್ಲಿ ಆವಶ್ಯಕ ಸರಕುಗಳು ಮತ್ತು ಔಷಧಿಗಳ ಕೊರತೆಗಳು ಹೆಚ್ಚೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಆವಶ್ಯಕ ಸಾಮಗ್ರಿಗಳನ್ನು ಒಯ್ಯುವ ಟ್ರಕ್‌ಗಳ ಅಂತರ್-ರಾಜ್ಯ ಸಾಗಾಟದ ಬಗ್ಗೆ ಸ್ಪಷ್ಟತೆಗಳಿಲ್ಲ. ಇದನ್ನು ಕೂಡಲೇ ಸರಿಪಡಿಸಬೇಕು., ಮತ್ತು ಜನಗಳ ಎಲ್ಲ ಆವಶ್ಯಕತೆಗಳನ್ನು ಪೂರೈಸಬೇಕು.
  3. ಧೈರ್ಯದಿಂದ ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಂದ ಸುರಕ್ಷಾತ್ಮಕ ವೈಯಕ್ತಿಕ ಪರಿಕರಗಳು ಮತ್ತು ಔಷಧಿಗಳ ಕೊರತೆಯ ಬಗ್ಗೆ ನೈಜ ದೂರುಗಳು ಹೆಚ್ಚುತ್ತಿವೆ. ಅವನ್ನು ತಕ್ಷಣವೇ ಪೂರೈಸಬೇಕು. ವೆಂಟಿಲೇಟರುಗಳು ಮುಂತಾದ ಸಾಧನಗಳನ್ನು ತುರ್ತಾಗಿ ಆದ್ಯತೆಯ ಮೇಲೆ ಖರೀದಿಸಬೇಕು. ಕೇಂದ್ರ ಸರಕಾರ ತಕ್ಷಣವೇ ಇವುಗಳ ಪೂರೈಕೆಯನ್ನು ಹೆಚ್ಚಿಸಬೇಕು.

ಇತರ ಜೀವ ಬೆದರಿಕೆ ಇರುವ ಪರಿಸ್ಥಿತಿಗಳಿಂದ ನರಳುತ್ತಿರುವ ಜನಗಳ ಶುಶ್ರೂಷೆಯ ಆರೋಗ್ಯ ಸೌಕರ್ಯಗಳನ್ನು ನಿರ್ಲಕ್ಷಿಸುವಂತಿಲ್ಲ. ಇದುವರೆಗೆ ಕನಿಷ್ಟ ೪೩ ರೋಗಿಗಳು ಮರಣ ಹೊಂದಿದ್ದಾರೆ ಎಂದು ಕೆಲವು ವರದಿಗಳು ಅಂದಾಜು ಮಾಡಿವೆ.

  1. ಈ ಲಾಕ್‌ಡೌನ್ ಅವಧಿಯಲ್ಲಿ ಈ ಮಹಾಮಾರಿ ಹರಡುತ್ತಿರುವ ಗುಂಪುಗಳನ್ನು ಗುರುತಿಸಬೇಕು, ಅವನ್ನು ಪ್ರತ್ಯೇಕಗೊಳಿಸಬೇಕು ಮತ್ತು ಜನಗಳಿಗೆ ಸರಿಯಾಗಿ ಚಿಕಿತ್ಸೆ ಒದಗಿಸಬೇಕು. ಐಸಿಎಂಆರ್ ಈಗ ಒಂದು ತ್ವರಿತ ತಪಾಸಣೆ ಕಿಟ್ ಗೆ ಮಂಜೂರಾತಿ ನೀಡಿದೆ. ಇದನ್ನು ದೇಶದಾದ್ಯಂತ ದೊಡ್ಡ ಪ್ರಮಾಣದಲ್ಲಿ ಬಳಸುವಂತಾಗಬೇಕು. ಈಗ, ಭಾರತದ ತಪಾಸಣಾ ದರ ಜಗತ್ತಿನಲ್ಲೇ ಅತೀ ಕಡಿಮೆಯಾಗಿದೆ. ದಕ್ಷಿಣ ಕೊರಿಯಾಕ್ಕಿಂತ ೨೪೧ ಪಟ್ಟು ಕಡಿಮೆ ಇದೆ.
  2. ತಬ್ಲಿಘಿ ಜಮಾತ್‌ನ ಗೋಷ್ಠಿಯ ನಂತರ ಉನ್ನತ್ತ ಕೋಮುವಾದಿ ಪ್ರಚಾರಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ಹೆಚ್ಚುತ್ತಿದೆ. ಈ ಗೋಷ್ಠಿ ಅದರ ಸಂಘಟಕರ ಶುದ್ಧ ಬೇಜವಾಬ್ದಾರಿ ಕೃತ್ಯ. ಆದರೆ ಅದನ್ನು ಒಂದು ಕೋಮುವಾದಿ ಧ್ರುವೀಕರಣದ ಸಾಧನವಾಗಿ ಪರಿವರ್ತಿಸುವುದು ಈ ಮಹಾಮಾರಿಯನ್ನು ಎದುರಿಸಿ ಸೋಲಿಸಬೇಕಾದ ಸಮರದಲ್ಲಿ ಎಲ್ಲ ಭಾರತೀಯರ ಐಕ್ಯ ಪ್ರಯತ್ನಗಳನ್ನು ಒಡೆಯುತ್ತದಷ್ಟೇ. ಕಳಂಕದ ಭಾವನೆಯನ್ನು ಹೋಗಲಾಡಿಸಲು, ರೋಗಿಗಳನ್ನು ಕ್ರಿಮಿನಲ್‌ಗಳೆಂದು ಕಾಣುವ ಬದಲು ಅನುತಾಪದಿಂದ ಕಾಣುವಂತಾಗಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಈ ಮಹಾಮಾರಿಯ ಬಗ್ಗೆ ಹುಸಿ ಸುದ್ದಿಗಳನ್ನು ದಮನ ಮಾಡಬೇಕು, ವೈಜ್ಞಾನಿಕ ಸಂಗತಿಗಳನ್ನು ತಿಳಿಸಬೇಕು. ಕೊವಿಡ್-೧೯ರ ವಿರುದ್ಧ ಹೋರಾಟ ನಾವೆಲ್ಲರೂ ಒಗ್ಗಟ್ಟಿನಿಂದ, ಅದನ್ನು ಸೋಲಿಸುವ ದೃಢನಿರ್ಧಾರದಿಂದ ನಡೆಸುವ ಹೋರಾಟ ಎಂದು ಮನಗಾಣಿಸಲು ಕೇಂದ್ರ ಸರಕಾರ ತುರ್ತಾಗಿ ಮಧ್ಯಪ್ರವೇಶಿಸಬೇಕು.
  • ಸೀತಾರಾಂ ಯೆಚುರಿ, ಪ್ರಧಾನ ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)
  • ಡಿ.ರಾಜ, ಪ್ರಧಾನ ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ
  • ದೀಪಂಕರ್ ಭಟ್ಟಾಚಾರ್ಯ, ಪ್ರಧಾನ ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ-ಲೆನಿನ್‌ವಾದಿ)-ಲಿನರೇಷನ್,
  • ದೇಬಬೃತ ಬಿಸ್ವಾಸ್, ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್
  • ಮನೋಜ್ ಭಟ್ಟಾಚಾರ್ಯ, ರಿವೊಲ್ಯುಷನರಿ ಸೋಶಲಿಸ್ಟ್ ಪಾರ್ಟಿ

ಈ ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ.

Leave a Reply

Your email address will not be published. Required fields are marked *