ರಾಷ್ಟ್ರವ್ಯಾಪಿ ಬ್ಲ್ಯಾಕ್-ಔಟ್‌ನ ಅಪಾಯಕ್ಕೆ ಕೈಹಾಕಬಾರದು

“ಪ್ರಧಾನ ಮಂತ್ರಿಗಳು ಈ ಸ್ವಯಂ-ಹೇರಿಕೆಯ ಕರೆಯನ್ನು ಹಿಂತೆಗೆದುಕೊಳ್ಳಬೇಕು”

ಕೊವಿಡ್-19 ರ ಎದುರು ಹೋರಾಟಕ್ಕೆ ಎಂದು ಪ್ರಧಾನ ಮಂತ್ರಿಗಳು ಭಾನುವಾರ 9 ನಿಮಿಷಗಳ ಕಾಲ ದೀಪಗಳನ್ನು ಸ್ವಿಚ್ ಆಫ್ ಮಾಡಲು ಕರೆ ನೀಡಿರುವುದು ದೇಶದ ವಿದ್ಯುತ್ ವ್ಯವಸ್ಥೆಗೆ, ರಾಷ್ಟ್ರೀಯ ಗ್ರಿಡ್‌ಗೆ ಒಂದು ನಿಜವಾದ ಬೆದರಿಕೆಯನ್ನು ಒಡ್ಡಿದೆ. ಎಲ್ಲ ಮನೆಗಳಲ್ಲಿ ವಿದ್ಯುತ್ ದೀಪಗಳನ್ನು, ಗ್ರಿಡ್‌ನ ಸುಮಾರು 15ಶೇ. ದಿಂದ 20ಶೇ. ವನ್ನು ಏಕಕಾಲದಲ್ಲಿ ಸ್ವಿಚ್ ಆಫ್ ಮತ್ತು ಆನ್ ಮಾಡುವುದರಿಂದ, ರಾಷ್ಟ್ರೀಯ ವಿದ್ಯುತ್ ಜಾಲಕ್ಕೆ ಏನಾಗಬಹುದು? ಅದು ಅಸ್ಥಿರಗೊಳ್ಳಬಹುದು ಮತ್ತು ಕುಸಿಯಬಹುದು.

ಇದರಿಂದ, ಜುಲೈ 2012ರಲ್ಲಿ ಭಾರತದ ಹೆಚ್ಚಿನ ಕಡೆಯಲ್ಲಿ ಆದಂತೆ, ಧಾರೆ-ಧಾರೆಯಾಗಿ ಕತ್ತಲು ಆವರಿಸಬಹುದು. ನಂತರ ವಿದ್ಯುತ್ ವ್ಯವಸ್ಥೆಯನ್ನು ಮೊದಲಿನ ಸ್ಥಿತಿಗೆ ತರಲು 2-3 ದಿನಗಳು ಬೇಕಾಗಬಹುದು. ಇದರಿಂದ ಕೊವಿಡ್-19 ರ ವಿರುದ್ಧ ನಮ್ಮ ನಿರ್ಣಾಯಕ ಸಮರದಲ್ಲಿ ನಮ್ಮ ಆಸ್ಪತ್ರೆಗಳು, ಡಾಕ್ಟರುಗಳು, ಆರೋಗ್ಯ ಕಾರ್ಯಕರ್ತರು ಮತ್ತು ರೋಗಿಗಳ ಮೇಲಾಗುವ ಪರಿಣಾಮಗಳನ್ನು ಊಹಿಸಿಕೊಳ್ಳಬೇಕಷ್ಟೇ. ನಮ್ಮ ಮನೆಗಳಲ್ಲಿ ದಿಗ್ಬಂಧನಕ್ಕೊಳಗಾಗಿರುವ ನಮ್ಮ ಪರಿಸ್ಥಿತಿಗಳೂ ಏನಾಗಬಹುದು ಊಹಿಸಿಕೊಳ್ಳಬೇಕು.

ವಿದ್ಯುತ್ ಗ್ರಿಡ್‌ಗೆ ಇರುವ ಈ ಅಪಾಯದ ಬಗ್ಗೆ ರಾಷ್ಟ್ರೀಯ ಮತ್ತು ರಾಜ್ಯ ಅಧಿಕಾರಿಗಳು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪ್ರಧಾನ ಮಂತ್ರಿಗಳು ತಕ್ಷಣವೇ ದೇಶದ ಮೇಲಿನ ಈ ಸ್ವಯಂ-ಹೇರಿಕೆಯ ಬ್ಲ್ಯಾಕ್- ಔಟ್‌ನ ಕರೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

ವಿದ್ಯುತ್ ಹರಿವು ಟ್ರಿಪ್ ಆದರೆ ದೇಶ ಅದು ಮತ್ತೆ ಸರಿಯಾಗುವ ವರೆಗೆ ವಿದ್ಯುತ್ ಇಲ್ಲದ, ಮಹಾಮಾರಿಯನ್ನು ಎದುರಿಸಲು ಸಾಧ್ಯವಾಗದ ಪರಿಸ್ಥಿತಿಯ ಪರಿಣಾಮಗಳನ್ನು ಎದುರಿಸಬೇಕಾದೀತು. ಇಂತಹ ಅಪಾಯಕ್ಕೆ ಈಗಾಗಲೇ ಲಾಕ್‌ಡೌನ್‌ನ ಮತ್ತು ಕೊವಿಡ್-19 ಮಹಾಮಾರಿಯಿಂದ ನರಳುತ್ತಿರುವ ದೇಶ ಕೈಹಾಕಲು ಸಾಧ್ಯವಿಲ್ಲ, ಕೈಹಾಕಬಾರದು ಎಂದು ಪೊಲಿಟ್‌ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *