ಪಕ್ಷದ ಮೊದಲ ಮಹಾಧಿವೇಶನ -1943

ಸಮಾನ ಗುರಿ, ಸಮಾನ ಕಾರ್ಯಕ್ರಮ ಸಾಧಿಸುವ ಐಕ್ಯತೆ

  • ಪಕ್ಷವನ್ನು ಸಾಮೂಹಿಕ ರಾಜಕೀಯ ಶಕ್ತಿಯಿಂದ ಸಾಮೂಹಿಕ ರಾಜಕೀಯ ಸಂಘಟನೆಯಾಗಿ ಮಾರ್ಪಾಟು ಮಾಡಲು ಮತ್ತು ಕೇವಲ ಲಕ್ಷಾಂತರ ದುಡಿಯುವ ಜನರ ಮೇಲೆ ಮಾತ್ರವಲ್ಲದೇ ಇಡೀ ಭಾರತದ ಜನರ ಮೇಲೆ ರಾಜಕೀಯ ಪ್ರಭಾವವನ್ನು ಹೊಂದಬೇಕು ಎಂದು ಮಹಾಧಿವೇಶನವು ನಿರ್ಣಯ ಮಾಡಿತು. ಮಹಾಧಿವೇಶನದ ನಿರ್ಣಯಗಳು ಮತ್ತು ವರದಿಗಳು ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟವು. ಕೇಂದ್ರ ಸಮಿತಿ ಮತ್ತು ಪ್ರಧಾನ ಕಾರ್ಯದರ್ಶಿಯನ್ನು ಕೂಡ ಸರ್ವಾನುಮತದಿಂದ ಆರಿಸಿತು. ಮಹಾಧಿವೇಶನದಲ್ಲಿ ಪ್ರಕಟವಾದ ಐಕ್ಯತೆಯು ಹಲವು ವರ್ಷಗಳ ಸಮಾನ ಆಚರಣೆಗಳಿಂದ ಪರಿಪಕ್ವವಾದ ಸಮಾನ ಗುರಿ, ಸಮಾನ ಕಾರ್ಯಕ್ರಮ ಸಾಧಿಸುವ ಉದ್ದೇಶದಿಂದ ಹೊರಹೊಮ್ಮಿದೆ ಎಂದು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಪಿ.ಸಿ.ಜೋಷಿ ವ್ಯಾಖ್ಯಾನ ಮಾಡಿದರು.

ಭಾರತ ಕಮ್ಯುನಿಸ್ಟ್ ಪಕ್ಷದ ಮೊದಲ ಮಹಾಧಿವೇಶನವು ೧೯೪೩ರಲ್ಲಿ ಬೊಂಬಾಯಿಯಲ್ಲಿ ನಡೆಯಿತು. ಅದು ಮೇ ೨೩ರಿಂದ ಜೂನ್ ೧ರವರೆಗೆ ಎಂಟು ದಿನಗಳ ಕಾಲ ನಡೆಯಿತು. ಪಕ್ಷದ ೧೫,೫೬೩ ಸದಸ್ಯರನ್ನು ಪ್ರತಿನಿಧಿಸಿ ೧೩೯ ಪ್ರತಿನಿಧಿಗಳು ಮಹಾಧಿವೇಶನದಲ್ಲಿ ಭಾಗವಹಿಸಿದ್ದರು. ಅಷ್ಟೊತ್ತಿಗಾಗಲೇ, ಪಕ್ಷದ ಪತ್ರಿಕೆಗಳು ೧೧ ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದವು ಅವು ಒಟ್ಟಾಗಿ ೬೦,೦೦೦ ಚಂದಾದಾರನ್ನು ಹೊಂದಿದ್ದವು. ಕೊನೇ ಪಕ್ಷ ೬,೦೦,೦೦೦ ಜನರು ಪಕ್ಷವು ಹೊರತರುತ್ತಿದ್ದ ಇತರ ಕರಪತ್ರಗಳು ಹಾಗೂ ಹೊತ್ತಿಗೆಗಳೊಂದಿಗೆ ಪಕ್ಷದ ಈ ಪತ್ರಿಕೆಗಳನ್ನು ಓದುತ್ತಿದ್ದರೆಂದು ಅಂದಾಜಿಸಲಾಗಿದೆ. ಪಕ್ಷ, ಕಾರ್ಮಿಕ ಸಂಘ, ಕಿಸಾನ್ ಸಭಾ ಮತ್ತು ಇತರೆ ಸಾಮೂಹಿಕ ಸಂಘಟನೆಗಳ ಸದಸ್ಯತ್ವವು ಒಟ್ಟಾರೆಯಾಗಿ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಮಹಾಧಿವೇಶನವನ್ನು ನಡೆಸಲಾಯಿತು.

ಆಗ ದೇಶದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲಾ ಕಮ್ಯುನಿಸ್ಟ್ ಗುಂಪುಗಳು ಒಂದಾಗಿ ಬೆರೆತು ಏಕೈಕ ಬಲಿಷ್ಠ ಕಮ್ಯುನಿಸ್ಟ್ ಪಕ್ಷವಾದ ನಂತರ ಈ ಮಹಾಧಿವೇಶನವನ್ನು ನಡೆಸಲಾಯಿತು. ಮಹಾಧಿವೇಶನಕ್ಕೆ ಸ್ವಲ್ಪ ಮುಂಚೆ, ೧೯೪೧ರಲ್ಲಿ, ಘದರ್-ಕಿರ್ತಿ ಗುಂಪು ಪಕ್ಷದೊಂದಿಗೆ ವಿಲೀನವಾಯಿತು ಮತ್ತು ಬಾಬಾ ಸೋಹನ್ ಸಿಂಗ್ ಭಕ್ನಾ ರಂತಹ ಅದರ ಮುಖಂಡರು ಪ್ರತಿನಿಧಿಗಳಾಗಿ ಆ ಮಹಾಧಿವೇಶನದಲ್ಲಿ ಪಾಲ್ಗೊಂಡಿದ್ದರು. ಮಹಾಧಿವೇಶನದಲ್ಲಿ ಮಂಡಿಸಿದ ವರದಿಯ ಪ್ರಕಾರ ಪಕ್ಷದ ಸದಸ್ಯತ್ವವು ೧೯೩೩ರ ಕೊನೆಯಲ್ಲಿ ೧೫೦ ಇದ್ದದ್ದು ೧೯೪೨ರಲ್ಲಿ ೪,೪೦೦ ತಲುಪಿ ೧೯೪೩ರ ಮೇ ದಿನಾಚರಣೆಯ ಹೊತ್ತಿಗೆ ೧೫,೫೬೩ ಮುಟ್ಟಿತ್ತು. ಅದೇ ರೀತಿಯಲ್ಲಿ, ಪಕ್ಷದಲ್ಲಿ ೨,೬೩೭ ಪೂರ್ಣಕಾಲದ ಕಾರ್ಯಕರ್ತರು ಕೆಲಸ ಮಾಡುತ್ತಿದ್ದರು. ಪಕ್ಷದ ಸ್ವಯಂಸೇವಕರಾಗಿ ೩೨,೧೬೬ ಮಂದಿ, ೯,೦೦೦ ಸದಸ್ಯರು ಕಿಶೋರ್ ವಾಹಿನಿಯಲ್ಲಿ, ೪೧,೧೦೦ ಸದಸ್ಯರು ಮಹಿಳಾ ಸಂಘಟನೆಯಲ್ಲಿ(ಅದರಲ್ಲಿ ೭೦೦ ಪಕ್ಷದ ಸದಸ್ಯರಾಗಿದ್ದರು, ಒಟ್ಟು ಸದಸ್ಯರಲ್ಲಿ ೫% ಮಹಿಳೆಯರನ್ನು ಪಕ್ಷದ ಸದಸ್ಯರನ್ನಾಗಿ ಹೊಂದಿದ್ದ ಏಕೈಕ ಪಕ್ಷವಾಗಿತ್ತು.), ವಿದ್ಯಾರ್ಥಿ ಸಂಘಟನೆಯಲ್ಲಿ ೩೯,೧೫೫ ಸದಸ್ಯರು, ಕಿಸಾನ್ ಸಭಾದಲ್ಲಿ ೩,೮೫,೩೭೦ ಸದಸ್ಯರು(೫,೫೦೦ ಪಕ್ಷದ ಸದಸ್ಯರು), ಕಾರ್ಮಿಕ ಸಂಘಗಳಲ್ಲಿ ೩,೦೧,೪೦೦ ಸದಸ್ಯರು(೪,೦೦೦ ಪಕ್ಷದ ಸದಸ್ಯರು) ಇದ್ದರು. ಎಸ್.ಎ.ಡಾಂಗೆ ಮತ್ತು ಬಂಕಿಂ ಮುಖರ್ಜಿ ಅವರು ಅನುಕ್ರಮವಾಗಿ ಕಾರ್ಮಿಕ ಸಂಘ ಹಾಗೂ ಕಿಸಾನ್ ಸಭಾದ ಚುನಾಯಿತ ಅಧ್ಯಕ್ಷರಾಗಿದ್ದರು ಎಂಬ ಸಂಗತಿಯು ಆ ವರ್ಗಗಳ ನಡುವೆ ಕಮ್ಯುನಿಸ್ಟರು ಕೆಲಸ ಮಾಡುತ್ತಿದ್ದರು ಎಂಬುದನ್ನು ಪ್ರತಿಬಿಂಬಿಸುತ್ತಿತ್ತು.

ist congress-2
                                  ಮೊದಲ ಮಹಾಧಿವೇಶನ ಆರಿಸಿದ ಕೇಂದ್ರ ಸಮಿತಿ

ಪಕ್ಷದ ಮಹಾಧಿವೇಶನದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳ ವಿಶಾಲ ಜನಸಮೂಹವನ್ನು ಅವಲೋಕಿಸಿದಾಗ ಸಮಾಜದ ಎಲ್ಲಾ ಜನವಿಭಾಗಗಳ ನಡುವೆ ಕಮ್ಯುನಿಸ್ಟ್ ಪಕ್ಷದ ಪ್ರಭಾವ ಇತ್ತು ಎಂಬುದು ಕಂಡು ಬರುತ್ತದೆ. ಮಹಾಧಿವೇಶನದಲ್ಲಿ ಮಂಡಿಸಿದ ಪ್ರತಿನಿಧಿಗಳ ಪರಿಚಯ ಪತ್ರ ವರದಿಯ ಪ್ರಕಾರ ೧೩೯ ಪ್ರತಿನಿಧಿಗಳಲ್ಲಿ ೨೨ ಕಾರ್ಮಿಕರು, ೨೫ ರೈತರು, ೮೬  ವಿಚಾರವಂತರು(ಸಾಮೂಹಿಕ ಚಳುವಳಿಗಳಲ್ಲಿ ಭಾಗವಹಿಸುತ್ತಾ, ದುಡಿಯುವ ಜನ ಸಮೂಹದ ಮಧ್ಯೆ ಮಾರ್ಕ್ಸ್‌ವಾದವನ್ನು ವ್ಯಾಪಕವಾಗಿ ಜನಪ್ರಿಯಗೊಳಿಸಿ, ಕಾರ್ಮಿಕರ ನಡುವೆ ಮಾರ್ಕ್ಸ್‌ವಾದಿ ಗುಂಪುಗಳಾಗಿ ಕೆಲಸ ಮಾಡುತ್ತಿದ್ದವರನ್ನು ಒಂದು ಕಡೆಯಲ್ಲಿ ಸೇರಿಸಿ ಒಂದು ಪ್ರಮುಖ ರಾಜಕೀಯ ಪಕ್ಷವನ್ನಾಗಿ ಮಾರ್ಪಾಟು ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದ ಎಲ್ಲರು), ೩ ಜಮೀನುದಾರರು, ಇಬ್ಬರು ಸಣ್ಣ ಹಿಡುವಳಿದಾರರು ಮತ್ತು ಒಬ್ಬ ವ್ಯಾಪಾರಿ ಇದ್ದರು. ಒಟ್ಟು ಪ್ರತಿನಿಧಿಗಳಲ್ಲಿ ೧೩ ಮಹಿಳೆಯರು, ಮೂರು ದಲಿತರು, ೧೩ ಮುಸ್ಲಿಮರು, ಎಂಟು ಸಿಖ್ಖರು, ಇಬ್ಬರು ಪಾರ್ಸಿಗಳು ಮತ್ತು ಒಬ್ಬ ಜೈನರಿದ್ದರು.

ಪಕ್ಷದ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡಿದ್ದಾಗ್ಯೂ, ೬೯೫ ಪಕ್ಷದ ಸದಸ್ಯರು ಮಹಾಧಿವೇಶನ ನಡೆಯುತ್ತಿರುವಾಗ ಜೈಲುಗಳಲ್ಲಿ ನರಳುತ್ತಿದ್ದರು. ಅವರಲ್ಲಿ, ೧೦೫ ಜನರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ಮಹಾಧಿವೇಶನದ ಪ್ರತಿನಿಧಿಗಳಲ್ಲಿ ೭೦% ಸದಸ್ಯರು ಒಂದಕ್ಕಿಂತ ಹೆಚ್ಚು ಬಾರಿ ಜೈಲುವಾಸ ಮಾಡಿದವರಾಗಿದ್ದರು ಮತ್ತು ಅವರೆಲ್ಲರ ಒಟ್ಟು ಜೈಲುವಾಸವನ್ನು ಲೆಕ್ಕ ಹಾಕಿದರೆ ಅದು ೪೧೧ ವರ್ಷಗಳಾಗಿತ್ತು! ಅಂದರೆ, ಪಕ್ಷದ ಮುಖಂಡರು ತಮ್ಮ ರಾಜಕೀಯ ಅವಧಿಯ ಅರ್ಧ ಭಾಗವನ್ನು ಜೈಲಿನಲ್ಲೇ ಸವೆಸಿದ್ದರು. ಅವರಲ್ಲಿ ಇಬ್ಬರು ಮಹಿಳೆಯರು, ಕಲ್ಪನಾ ದತ್ತ್ ಹಾಗೂ ಕಮಲಾ ಚಟರ್ಜಿ ಏಳೂವರೆ ವರ್ಷ ಜೈಲಿನಲ್ಲಿ ಕಳೆದಿದ್ದರು. ೫೩% ಪ್ರತಿನಿಧಿಗಳು ಭೂಗತ ಜೀವನ ಅನುಭವಿಸಿದ್ದರು ಮತ್ತು ಅದೆಲ್ಲವನ್ನು ಒಟ್ಟುಗೂಡಿಸಿದರೆ ೫೪ ವರ್ಷ ಭೂಗತರಾಗಿದ್ದರು.

ಮಹಾಧಿವೇಶನದಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳ ವಯಸ್ಸಿನ ಸಂಯೋಜನೆಯನ್ನು ನೋಡಿದರೆ, ೮ ಪ್ರತಿನಿಧಿಗಳು ೧೯೨೯ರ ಮೊದಲು ಪಕ್ಷ ಸೇರಿದ್ದ ಮೂಲ ಪ್ರವರ್ತಕರಾಗಿದ್ದಾಗ್ಯೂ, ೬೮% ಮಂದಿ ೩೫ ವರ್ಷದೊಳಗಿನವರು. ಆಸಕ್ತಿದಾಯಕ ವಿಚಾರವೆಂದರೆ, ಪ್ರತಿನಿಧಿಗಳಲ್ಲಿ ಯಾರೂ ಅನಕ್ಷರಸ್ಥರಾಗಿರಲಿಲ್ಲ. ಕಾರ್ಮಿಕರು ಮತ್ತು ರೈತರನ್ನು ಪ್ರತಿನಿಧಿಸಿದವರಲ್ಲಿ ಅನೇಕರು ಸ್ವತಃ ಇಂಗ್ಲಿಷ್ ಕಲಿತವರಾಗಿದ್ದರು. ಮಾರ್ಕ್ಸ್, ಏಂಗೆಲ್ಸ್, ಲೆನಿನ್ ಹಾಗೂ ಸ್ಟ್ಯಾಲಿನ್ ಅವರ ಕೃತಿಗಳನ್ನು ಓದಿ ಅರ್ಥಮಾಡಿಕೊಳ್ಳುವಷ್ಟು ಮತ್ತು ಮಾರ್ಕ್ಸ್‌ವಾದ-ಲೆನಿನ್‌ವಾದ ಸಿದ್ಧಾಂತವನ್ನು ನಮ್ಮ ದೇಶಕ್ಕೆ ಅಳವಡಿಸಲು ಗ್ರಹಿಸುವಷ್ಟು ಸಮರ್ಥರಾಗಿದ್ದರು.

ಸರಿ ಸುಮಾರು ೨೫,೦೦೦ ಜನರು ಭಾಗವಹಿಸಿದ್ದ ಬಹಿರಂಗ ಸಭೆಯೊಂದಿಗೆ ಮಹಾಧಿವೇಶನವು ಪ್ರಾರಂಭವಾಯಿತು. ಕಾಂ.ಮುಜಾಫರ್ ಅಹಮದ್, ಡಾಂಗೆ, ಭಯ್ಯಾಜಿ ಕುಲಕರ್ಣಿ(ಹಿರಿಯ ಕಾರ್ಯಕರ್ತ ಮತ್ತು ಬೊಂಬಾಯಿ ಪ್ರಾಂತದ ಕಾರ್ಯದರ್ಶಿ), ಕೇರಳದಿಂದ ಕೃಷ್ಣ ಪಿಳ್ಳೈ, ಕಲ್ಕತ್ತಾದ ಮಹಿಳಾ ಮುಖಂಡೆ ಮಣಿಕುಂತಳ ಸೇನ್, ರೈಲ್ವೇ ಕಾರ್ಮಿಕ ಹಾಗೂ ಬೊಂಬಾಯಿ ಸಮಿತಿಯ ಕಾರ್ಯದರ್ಶಿ ಡಿ.ಎಸ್.ವೈದ್ಯ ಮತ್ತು ವಿದ್ಯಾರ್ಥಿ ನಾಯಕ ನರ್ಗಿಸ್ ಬಾಟ್ಲಿವಾಲಾ ಇವರುಗಳು ಅಧ್ಯಕ್ಷೀಯ ಮಂಡಳಿಯಲ್ಲಿದ್ದರು. ಬಂಕಿಂ ಮುಖರ್ಜಿ ಧ್ವಜಾರೋಹಣ ಮಾಡಿದರು ಮತ್ತು ಬಾಬಾ ಸೋಹನ್ ಸಿಂಗ್ ಭಕ್ನಾ ಹುತಾತ್ಮರಿಗೆ ಶ್ರದ್ಧಾಂಜಲಿ ನಿರ್ಣಯವನ್ನು ಮಂಡಿಸಿದರು.

pc joshi-1
ಮೊದಲ ಮಹಾಧಿವೇಶನ ಆರಿಸಿದ ಪ್ರಧಾನ ಕಾರ್ಯದರ್ಶಿ ಪಿ ಸಿ ಜೋಷಿ

ಪಕ್ಷದ ಕಾರ್ಯದರ್ಶಿ ಪಿ.ಸಿ.ಜೋಷಿ ಒಂಭತ್ತು ಗಂಟೆಗಳ ಕಾಲ ರಾಜಕೀಯ ನಿರ್ಣಯವನ್ನು ಮಂಡಿಸಿದರು. ಕಾರ್ಮಿಕ ವರ್ಗದ ಸವಾಲುಗಳು ಮತ್ತು ರಾಷ್ಟ್ರೀಯ ಭದ್ರತೆ ಕುರಿತು ಬಿ.ಟಿ.ರಣದೀವೆ ವರದಿ ಮಂಡಿಸಿದರು. ಮಹಾಧಿವೇಶನವು ಪ್ರತಿದಿನ ಬೆಳಿಗ್ಗೆ ೬ ಗಂಟೆಯಿಂದ ರಾತ್ರಿ ೧೧ ಗಂಟೆಯವರೆಗೆ ನಡೆಯುತ್ತಿತ್ತು; ವರದಿಗಳ ಮಂಡನೆ, ಅದರ ಮೇಲೆ ಗುಂಪು ಚರ್ಚೆ ಹಾಗೂ ಚರ್ಚೆಯ ವರದಿ ಮಂಡನೆ ನಡೆಯುತ್ತಿದ್ದವು ಮತ್ತು ಮಧ್ಯೆ ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಸ್ವಲ್ಪವೇ ಸಮಯ ಸಿಗುತ್ತಿತ್ತು. ಆರು ಸೌಹಾರ್ದ ಪಕ್ಷಗಳಿಂದ  ಗ್ರೇಟ್ ಬ್ರಿಟನ್, ದಕ್ಷಿಣ ಆಫ್ರಿಕಾ, ಯು.ಎಸ್.ಎ, ಚಿಲಿ, ಕ್ಯೂಬಾ ಹಾಗೂ ಕೆನಡಾ  ಮಹಾಧಿವೇಶನಕ್ಕೆ ಶುಭಾಶಯ ಕೋರಿ ಸಂದೇಶಗಳು ಬಂದಿದ್ದವು; ಶ್ರೀಲಂಕಾ ಹಾಗೂ ಬರ್ಮಾದಿಂದ ಪ್ರತಿನಿಧಿಗಳು ಬಂದಿದ್ದರು. ಬ್ರಿಟಿಷರ ವಿರುದ್ಧದ ಚಿತ್ತಗಾಂಗಿನಂತಹ ಹೋರಾಟದಲ್ಲಿ ತಮ್ಮ ಮಕ್ಕಳನ್ನು ಬಲಿದಾನ ಮಾಡಿದ್ದ ತಾಯಂದಿರು ಹಾಗೂ ಖಾಯಿಲೆಯಿಂದ ನರಳುತ್ತಿದ್ದ ಪಕ್ಷದ ಮುಖಂಡರುಗಳು ಮಹಾಧಿವೇಶನಕ್ಕೆ ಶುಭಾಶಯ ಸಂದೇಶಗಳನ್ನು ಕಳಿಸಿದ್ದರು ಮತ್ತು ಕಮ್ಯುನಿಸ್ಟ್ ಪಕ್ಷಕ್ಕೆ ದುಡಿಯುವುದಾಗಿ ಪ್ರತಿಜ್ಞೆ ಮಾಡಿದ್ದರು.

ಬಂಗಾಳದ ಪ್ರಸಿದ್ಧ ಕಲಾವಿದ ಚಿತ್ತ ಪ್ರಸಾದ್ ರಚಿಸಿದ ಮಾರ್ಕ್ಸ್, ಏಂಗೆಲ್ಸ್, ಲೆನಿನ್ ಹಾಗೂ ಸ್ಟ್ಯಾಲಿನ್ ಚಿತ್ರಗಳನ್ನು ವೇದಿಕೆಯ ಮೇಲೆ ಗಾಂಧಿ, ನೆಹರೂ ಹಾಗೂ ಜಿನ್ನಾ ಅವರ ಫೋಟೋಗಳೊಂದಿಗೆ ಇಟ್ಟು ಅಲಂಕರಿಸಲಾಗಿತ್ತು. ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ಬಾವುಟಗಳು ಕೂಡ ಹಿನ್ನೆಲೆಯಲ್ಲಿ ಇದ್ದವು. ಫ್ಯಾಸಿಸಂ ವಿರುದ್ಧದ ಹೋರಾಟಕ್ಕೆ ಸಂಯುಕ್ತ ರಂಗವನ್ನು ಕಟ್ಟಬೇಕೆಂಬ ಮತ್ತು ಕಾಂಗ್ರೆಸ್-ಲೀಗ್ ಐಕ್ಯತೆಯನ್ನು ಗಟ್ಟಿಗೊಳಿಸಬೇಕೆಂಬ ಪಕ್ಷದ ರಾಜಕೀಯ-ಕಾರ್ಯತಂತ್ರಾತ್ಮಕ ತಿಳುವಳಿಕೆಯನ್ನು ವೇದಿಕೆಯ ಮೇಲಿನ ವ್ಯಕ್ತಿಚಿತ್ರಗಳು ಮತ್ತು ಬಾವುಟಗಳ ಪ್ರದರ್ಶನವು ಪ್ರತಿಬಿಂಬಿಸಿದವು.

ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಂದರ್ಭದಲ್ಲಿ ಕಮ್ಯುನಿಸ್ಟ್ ಪಕ್ಷವು ಅಳವಡಿಸಿಕೊಳ್ಳಬೇಕಾದ ತಂತ್ರಗಳನ್ನು, ಕೈಗಾರಿಕಾ ಹಾಗೂ ಕೃಷಿ ಉತ್ಪಾದನೆಗಳನ್ನು ಹೆಚ್ಚಿಸಲು ಕೆಲಸ ಮಾಡಬೇಕಾದ ಕಾರಣ ಹಾಗೂ ಅಗತ್ಯತೆಯನ್ನು ಮತ್ತು ಒಟ್ಟು ಜನಸಮುದಾಯದ ಐಕ್ಯತೆಯನ್ನು ಬೆಳೆಸಬೇಕೆಂಬ ವಿಚಾರಗಳನ್ನು ಪಿ.ಸಿ.ಜೋಷಿಯವರು ಮಂಡಿಸಿದ ರಾಜಕೀಯ ನಿರ್ಣಯದಲ್ಲಿ ವಿವರಿಸಲಾಗಿತ್ತು. ಅದಾದ ನಂತರ, ಹಲವಾರು ಪ್ರಾಂತೀಯ ಕಾರ್ಯದರ್ಶಿಗಳು ತಮ್ಮ ತಮ್ಮ ಪ್ರಾಂತಗಳಲ್ಲಿ ಮಾಡಿದ ಕೆಲಸಗಳು ಮತ್ತು ಪಡೆದ ಅನುಭವಗಳನ್ನು ವರದಿ ಮಾಡಿದರು. ಈ ವರದಿಗಳಾದ ನಂತರ, ದೇಶದಲ್ಲಿನ ಆಹಾರ ಪರಿಸ್ಥಿತಿಯ ಕುರಿತು ಸರ್ದೇಸಾಯಿಯವರು, ಹೆಚ್ಚು ಆಹಾರ ಬೆಳೆಯಬೇಕಾದ ಅವಶ್ಯಕತೆ ಕುರಿತು ನಂಬೂದಿರಿಪಾಡ್ ಅವರು, ವಿದ್ಯಾರ್ಥಿಗಳ ಕುರಿತು ಅರುಣ್ ಅವರು, ಬಾಲಸಂಘಂ ಬಗ್ಗೆ ಕುನ್ನೈನಂದನ್ ಅವರು ಮತ್ತು ಕನಕ್, ಯಶೋದಾ, ಅನ್ನಪೂರ್ಣಮ್ಮ ಮತ್ತು ಪೂರನ್ ಮೆಹ್ತಾ ಅವರು ಮಹಿಳೆಯರ ಕುರಿತು ವರದಿಗಳನ್ನು ಮಂಡಿಸಿದರು. ಈ ಸಂಗಾತಿಗಳು ತಮ್ಮ ನಿರ್ದಿಷ್ಟ ರಂಗಗಳಲ್ಲಿನ ಪರಿಸ್ಥಿತಿಯ ಬಗ್ಗೆ ಮಾತ್ರ ಹೇಳದೆ, ಈ ರಂಗಗಳಲ್ಲಿ ಪಕ್ಷದ ನೀತಿಗಳನ್ನು ಜಾರಿ ಮಾಡಿದಾಗ ಗಳಿಸಿದ ಗೆಲುವುಗಳ ಬಗ್ಗೆಯೂ ತಮ್ಮ ವರದಿಗಳಲ್ಲಿ ತಿಳಿಸಿದರು. ಬದಲಾದ ವಾತಾವರಣದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಹೊಸ ಸಂವಿಧಾನವನ್ನು ಅಧಿಕಾರಿಯವರು ಮುಂದಿಟ್ಟರು.

ರಾಷ್ಟ್ರೀಯ ಸರ್ಕಾರ ಪಡೆಯುವ ಸಲುವಾಗಿನ ರಾಷ್ಟ್ರೀಯ ರಕ್ಷಣೆಗೆ ರಾಷ್ಟ್ರೀಯ ಐಕ್ಯತೆ ಸಾಧಿಸುವುದೇ ಅವತ್ತಿನ ಪ್ರಮುಖ ಕಾರ್ಯಭಾರವಾಗಿದೆ. ಎಂದು ಮಹಾಧಿವೇಶನದಲ್ಲಿ ಅಂಗೀಕರಿಸಿದ ರಾಜಕೀಯ ನಿರ್ಣಯವು ಸ್ಪಷ್ಟಪಡಿಸಿದೆ. ಆ ಕಾರ್ಯ ಸಾಧಿಸಲು ಇಡೀ ಪಕ್ಷವು ಚಳುವಳಿ ನಡೆಸಬೇಕು; ಜತೆಯಲ್ಲಿಯೇ ಎಲ್ಲಾ ರಾಷ್ಟ್ರೀಯ ಮುಖಂಡರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಬೇಕು; ಕಳ್ಳ ದಾಸ್ತಾನಿನ ವಿರುದ್ಧ ಮಧ್ಯಪ್ರವೇಶಿಸಿ ಆಹಾರ ಪರಿಸ್ಥಿತಿಯನ್ನು ಸುಧಾರಿಸಬೇಕು ಮತ್ತು ಆಹಾರ ದಂಗೆಗಳನ್ನು ತಡೆಯಲು ಯತ್ನಿಸಬೇಕು ಮತ್ತು ದೇಶದ್ರೋಹಿ ಗುಂಪುಗಳನ್ನು ಮೂಲೆಗುಂಪು ಮಾಡಬೇಕು ಎಂದು ಕರೆ ನೀಡಿತು.

ಫ್ಯಾಸಿಸಂನ ಸೋಲನ್ನು ಖಾತ್ರಿಪಡಿಸಲು ಎಲ್ಲಾ ಕಾರ್ಮಿಕರು ಮತ್ತು ರೈತರು ಒಗ್ಗೂಡಬೇಕು ಮತ್ತು ಕೈಗಾರಿಕಾ ಹಾಗೂ ಕೃಷಿ ಉತ್ಪಾದನೆ ಹೆಚ್ಚಿಸಲು ಕೆಲಸ ಮಾಡಬೇಕೆಂದು ಮಹಾಧಿವೇಶನವು ಕರೆ ನೀಡಿತು. ಈ ಉದ್ದೇಶಕ್ಕಾಗಿ ಒಂದಾಗದಿದ್ದರೆ, ತಮ್ಮ ಸಂಘಟನೆಗಳನ್ನು ಬಲಪಡಿಸಲು ಅಥವಾ ಸಾಕಾಗುವಷ್ಟು ತುಟ್ಟಿಭತ್ಯೆ, ಕೂಲಿ, ಬೋನಸ್ ಹೆಚ್ಚಳ, ಸಂಘಗಳಿಗೆ ಮಾನ್ಯತೆ, ಪಾಳುಬಿದ್ದ ಜಮೀನುಗಳ ಹಂಚಿಕೆ, ನೀರಾವರಿ ಸೌಲಭ್ಯ, ಬೀಜಗಳು, ಗೇಣಿ ಮತ್ತು ಬಡ್ಡಿಗಳಿಂದ ಮುಕ್ತಿ ಮುಂತಾದ ಬೇಡಿಕೆಗಳನ್ನು ಗಳಿಸಲು ಅವರು ಸಮರ್ಥರಾಗುವುದಿಲ್ಲ ಎಂದು ಮನದಟ್ಟು ಮಾಡಿತು. ವಿದ್ಯಾರ್ಥಿಗಳ ಐಕ್ಯತೆಗೂ ಕರೆ ಕೊಟ್ಟು ತಮ್ಮ ಶೈಕ್ಷಣಿಕ ಹಕ್ಕುಗಳು ಹಾಗೂ ಸಂಸ್ಥೆಗಳಲ್ಲಿ ಸ್ವಾತಂತ್ರ್ಯದ ಪರವಾಗಿ ನಿಲ್ಲಬೇಕೆಂದು ಪ್ರೇರೇಪಿಸಿತು.

ಪ್ರಮುಖವಾಗಿ ಬಂಗಾಳ, ಆಂಧ್ರ ಹಾಗೂ ಮಲಬಾರಿನಲ್ಲಿ ಕಮ್ಯುನಿಸ್ಟರ ಕೆಲಸಗಳಿಂದಾಗಿ ಉಂಟಾದ ಸಾಮೂಹಿಕ ಜಾಗೃತಿಯ ಎದ್ದುಕಾಣುವ ಲಕ್ಷಣದ ಭಾಗವಾಗಿ ಮೇಲೆದ್ದು ಬಂದ ಮಹಿಳಾ ಚಳುವಳಿಯನ್ನು ಗುರುತಿಸಿದ ಮಹಾಧಿವೇಶನವು, ಮಹಿಳೆಯರ, ಅದರಲ್ಲೂ ದುಡಿಯುವ ಮಹಿಳೆಯರ ಸಂಘಟನೆಗಳ ಬಗ್ಗೆ ವಿಶೇಷ ಗಮನ ಹರಿಸಬೇಕೆಂದು ನಿರ್ಣಯ ಕೈಗೊಂಡಿತು. ಈ ಮೇಲಿನ ಚಳುವಳಿಗಳ ಆಧಾರದಲ್ಲಿ ಸಾಮೂಹಿಕ ಸಂಘಟನೆಗಳನ್ನು ಕಟ್ಟುವ ಯೋಜನೆಗಳನ್ನು ರೂಪಿಸಬೇಕೆಂದು ಮತ್ತು ಸಾಮೂಹಿಕ ಕಮ್ಯುನಿಸ್ಟ್ ಪಕ್ಷ ಕಟ್ಟಲು ಬುನಾದಿ ಹಾಕಬೇಕೆಂದು ತನ್ನ ಎಲ್ಲಾ ಘಟಕಗಳನ್ನೂ ಮಹಾಧಿವೇಶನವು ಕೇಳಿಕೊಂಡಿತು.

ಪಕ್ಷವನ್ನು ಸಾಮೂಹಿಕ ರಾಜಕೀಯ ಶಕ್ತಿಯಿಂದ ಸಾಮೂಹಿಕ ರಾಜಕೀಯ ಸಂಘಟನೆಯಾಗಿ ಮಾರ್ಪಾಟು ಮಾಡಲು ಮತ್ತು ಕೇವಲ ಲಕ್ಷಾಂತರ ದುಡಿಯುವ ಜನರ ಮೇಲೆ ಮಾತ್ರವಲ್ಲದೇ ಇಡೀ ಭಾರತದ ಜನರ ಮೇಲೆ ಪಕ್ಷವು ರಾಜಕೀಯ ಪ್ರಭಾವವನ್ನು ಹೊಂದಬೇಕು ಎಂದು ಮಹಾಧಿವೇಶನವು ನಿರ್ಣಯ ಮಾಡಿತು. ಪಕ್ಷದ ಸದಸ್ಯರನ್ನು, ಪೂರ್ಣಕಾಲದ ಕಾರ್ಯಕರ್ತರನ್ನು, ಸ್ವಯಂಸೇವಕರನ್ನು, ನಿಧಿಯನ್ನು ಹೆಚ್ಚಿಸಬೇಕೆಂದು ಮತ್ತು ಜತೆಯಲ್ಲೇ ಕಾರ್ಮಿಕ ಸಂಘಗಳ, ಕಿಸಾನ್ ಸಭಾದ, ವಿದ್ಯಾರ್ಥಿಗಳ, ಮಹಿಳೆಯರ ಹಾಗೂ ಮಕ್ಕಳ ಸಂಘಟನೆಗಳ ಸದಸ್ಯತ್ವವನ್ನು ಹೆಚ್ಚಿಸಬೇಕೆಂದೂ ಕೂಡ ಅದು ನಿರ್ಧರಿಸಿತು.

ರಾಜಕೀಯ ಸನ್ನಿವೇಶದ ಗ್ರಹಿಕೆಯಲ್ಲಿನ ಮತ್ತು ಅಳವಡಿಸಬೇಕಾದ ತಂತ್ರಗಳ ನಿರ್ಧಾರದಲ್ಲಿನ ಇತಿಮಿತಿಯ ನಡುವೆಯೂ ಮಹಾಧಿವೇಶನದ ನಿರ್ಣಯಗಳು ಮತ್ತು ವರದಿಗಳು ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟವು. ಅದು ಕೇಂದ್ರ ಸಮಿತಿ ಮತ್ತು ಪ್ರಧಾನ ಕಾರ್ಯದರ್ಶಿಯನ್ನು ಕೂಡ ಸರ್ವಾನುಮತದಿಂದ ಆರಿಸಿತು. ಪಿ.ಸಿ.ಜೋಷಿಯವರು ಮಹಾಧಿವೇಶನದ ಬಗ್ಗೆ ವರದಿಮಾಡುತ್ತಾ ಪ್ರತಿನಿಧಿಗಳು ಮಹಾಧಿವೇಶನದಲ್ಲಿನ ಸ್ವಯಂವಿಮರ್ಶೆಯ ಚರ್ಚೆಗಳಿಂದ ಕಲಿತೆವು ಎಂದು ಸರ್ವಾನುಮತದಿಂದ ಆಲೋಚಿಸಿದರು ಎಂದರು. ಮಹಾಧಿವೇಶನದಲ್ಲಿ ಪ್ರಕಟವಾದ ಐಕ್ಯತೆಯು ಹಲವು ವರ್ಷಗಳ ಸಮಾನ ಆಚರಣೆಗಳಿಂದ ಪರಿಪಕ್ವವಾದ ಸಮಾನ ಗುರಿ, ಸಮಾನ ಕಾರ್ಯಕ್ರಮ ಸಾಧಿಸುವ ಉದ್ದೇಶದಿಂದ ಹೊರಹೊಮ್ಮಿದೆ ಎಂದು ವ್ಯಾಖ್ಯಾನ ಮಾಡಿದರು.

ಪಕ್ಷದ ಸಂಸ್ಥಾಪಕರಲ್ಲೊಬ್ಬರಾದ ಮುಜಾಫರ್ ಅಹಮದ್ ಅವರು ಅಧ್ಯಕ್ಷೀಯ ಮಂಡಳಿಯ ಪರವಾಗಿ ಸಮಾರೋಪ ಭಾಷಣ ಮಾಡಿದರು. ಪಕ್ಷದ ಮೊದಲ ಮಹಾಧಿವೇಶನ ಮುಗಿಯಿತು. ತನ್ನ ಬದುಕಿನ ಅತ್ಯಂತ ದೊಡ್ಡ ಹೊಣೆಯನ್ನು ಪಕ್ಷವು ವಹಿಸಿಕೊಂಡಿದೆ. ಅದನ್ನು ಪೂರೈಸಲು ನಾವೆಲ್ಲಾ ಶ್ರಮಿಸೋಣ. ಎಂದರು.

ಕನ್ನಡಕ್ಕೆ : ಟಿ.ಸುರೇಂದ್ರ ರಾವ್

 

Leave a Reply

Your email address will not be published. Required fields are marked *