ಎಡರಂಗಕ್ಕೆ ಬೆಂಬಲ ನೀಡಿದ 45% ಮತದಾರರಿಗೆ ಸಿಪಿಐ(ಎಂ) ಅಭಿವಂದನೆ

ತ್ರಿಪುರಾದ ಜನತೆಗೆ ಬುಡಕಟ್ಟು-ಬುಡಕಟ್ಟೇತರ ಜನಗಳ ಐಕ್ಯತೆಯನ್ನು ಎತ್ತಿ ಹಿಡಿಯುವ ಭರವಸೆ

ತ್ರಿಪುರಾ ಜನತೆಯ ತೀರ್ಪಿನಿಂದ ರಾಜ್ಯದಲ್ಲಿ ಒಂದು ಬಿಜೆಪಿ-ಐಪಿಎಫ್‍ಟಿ ಸರಕಾರ ರಚನೆಗೊಳ್ಳುತ್ತದೆ. 25 ವರ್ಷ ಸರಕಾರದಲ್ಲಿದ್ದ ನಂತರ  ಎಡರಂಗವನ್ನು ಮತದಾನದ ಮೂಲಕ ಅಧಿಕಾರದಿಂದ ಹೊರಕಳಿಸಲಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ತ್ರಿಪುರಾ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಬೇರೆಲ್ಲ ಅಂಶಗಳಲ್ಲದೆ, ಬಿಜೆಪಿ ಚುನಾವಣೆಯ ಮೇಲೆ ಪ್ರಭಾವ ಬೀರಲು ಹಣ ಮತ್ತು ಇತರ ಸಂಪನ್ಮೂಲಗಳನ್ನು ಬೃಹತ್‍ ಪ್ರಮಾಣದಲ್ಲಿ ಬಳಸಿದೆ. ಹಿಂದಿನ ಪ್ರಧಾನ ಪ್ರತಿಪಕ್ಷವಾದ ಕಾಂಗ್ರೆಸನ್ನು  ಸುಮಾರಾಗಿ ಸ್ವಾಧೀನ ಪಡಿಸಿಕೊಂಡು ಎಲ್ಲ ಎಡ-ವಿರೋಧಿ ಮತಗಳನ್ನು ಕ್ರೋಡೀಕರಿಸಲು ಬಿಜೆಪಿಗೆ ಸಾಧ್ಯವಾಗಿದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.

ಸಿಪಿಐ(ಎಂ) ಮತ್ತು ಎಡರಂಗಕ್ಕೆ ಬೆಂಬಲ ನೀಡಿದ 45% ಮತದಾರರನ್ನು ಅಭಿವಂದಿಸಿದ ಪೊಲಿಟ್‍ಬ್ಯುರೊ, ಈ ಚುನಾವಣಾ ಹಿನ್ನಡೆಯ ಕಾರಣಗಳನ್ನು ಸಿಪಿಐ(ಎಂ)  ಜಾಗರೂಕತೆಯಿಂದ ಪರೀಕ್ಷಿಸುತ್ತದೆ ಮತ್ತು ಅಗತ್ಯ ಸರಿಪಡಿಕೆ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು  ತಿಳಿಸಿದೆ.

ಸಿಪಿಐ(ಎಂ) ದುಡಿಯುವ ಜನಗಳ ಎಲ್ಲ ವಿಭಾಗಗಳ ಹಿತಗಳನ್ನು ಪ್ರತಿಪಾದಿಸುವುದನ್ನು ಮುಂದುವರೆಸುತ್ತದೆ ಮತ್ತು ಬುಡಕಟ್ಟು-ಬುಡಕಟ್ಟೇತರ ಜನಗಳ ಐಕ್ಯತೆಯನ್ನು ಎತ್ತಿ ಹಿಡಿಯುತ್ತದೆ ಎಂದು ಪೊಲಿಟ್‍ಬ್ಯುರೊ ತ್ರಿಪುರಾದ ಜನತೆಗೆ ಭರವಸೆ ನೀಡಿದೆ.

ನಿಲ್ಲಿಸಿದ್ದ ಮತಗಣನೆ ಮುಂದುವರೆದು

ಮಾಣಿಕ್‍ ಸರ್ಕಾರ್ ವಿಜೇತರೆಂದು ಘೋಷಣೆ

ಸಿಪಿಐ(ಎಂ) ಮುಖ್ಯಮಂತ್ರಿ ಮಾಣಿಕ್‍ ಸರ್ಕಾರ್ ಸ್ಪರ್ಧಿಸಿದ್ದ ಧನ್‍ಪುರ್ ಚುನಾವಣಾ ಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ 42, 43 ಮತ್ತು 47ರಲ್ಲಿ   ಬಿಜೆಪಿಯ ಆಕ್ಷೇಪದಿಂದಾಗಿ ಮತಗಣನೆಯನ್ನು ನಿಲ್ಲಿಸಲಾಗಿತ್ತು. ಈ ಮತಗಟ್ಟೆಗಳ ಯುನಿಟ್‍ಗಳಲ್ಲಿ ಬಿಜೆಪಿಯ ಚುನಾವಣಾ ಏಜೆಂಟರ ಸಹಿ ಇಲ್ಲದಿರುವುದರಿಂದಾಗಿ ಇಲ್ಲಿ ಮರು ಮತದಾನ ನಡೆಯಬೇಕು ಎಂಬುದು ಬಿಜೆಪಿ ಆಗ್ರಹವಾಗಿತ್ತು. ಆತನ ಸಹಿ ಬಿಟ್ಟು ಬೇರೆಲ್ಲ ರಾಜಕೀಯ ಪಕ್ಷಗಳ ಸಹಿ ಮತ್ತು ಅಲ್ಲಿನ ಪ್ರಿಸೈಡಿಂಗ್‍ ಆಫೀಸರ್ ರವರ ಸಹಿಗಳು ಇದ್ದವು. ಬಿಜೆಪಿಯ ಅಭ್ಯರ್ಥಿ ಹಿಂದಿದ್ದದ್ದು ಇದಕ್ಕೆ ಕಾರಣ.

ಅಲ್ಲದೆ ಐಟಿಬಿಪಿ ಪಡೆಯ ನೆರವಿನಿಂದ ಸಿಪಿಐ(ಎಂ)ನ ಮತಗಣನೆ ಏಜೆಂಟರನ್ನು ಹೊರಗೋಡಿಸಿ ಏಕಾಂಗಿಯಾಗುಳಿದ ಮಾಣಿಕ್‍ ಸರ್ಕಾರ್ ರವರನ್ನು ಬಿಜೆಪಿ ಮಂದಿ ಘೇರಾವ್‍ ಮಾಡಿ ಛೇಡಿಸಿದರು. ಈ ಬಗ್ಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಮತ್ತು ಪೊಲಿಟ್‍ಬ್ಯುರೊ ಸದಸ್ಯರಾದ ಬೃಂದಾ ಕಾರಟ್‍ ದಿಲ್ಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು  ಭೇಟಿಯಾಗಿ ಒಂದು ಪತ್ರವನ್ನು ಸಲ್ಲಿಸಿ ಇದರಲ್ಲಿ ಮಧ್ಯಪ್ರವೇಶಿಸಿ ಕೂಡಲೇ ಮತಗಣನೆಯನ್ನು ಪುನರಾರಂಭಿಸಬೇಕು ಎಂದು ಆಗ್ರಹಿಸಿದರು. ನಂತರ ಮತಗಣನೆ ಮುಂದುವರೆದು ಮಾಣಿಕ್‍ ಸರ್ಕಾರ್ ಅವರನ್ನು ವಿಜೇತರೆಂದು ಈಗ ಘೋಷಿಸಲಾಗಿದೆ.

Leave a Reply

Your email address will not be published. Required fields are marked *