ಸಾಕಷ್ಟು ಸುಗ್ರೀವಾಜ್ಞೆಗಳನ್ನು ಹೊರಡಿಸಿದ್ದೀರ, ಈಗ ಆದಿವಾಸಿಗಳ ಪರವಾಗಿ ಏಕಿಲ್ಲ?

brinda-karat-cpimಪ್ರಧಾನ ಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ :

ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಅವರು ಒಂದು ಪತ್ರವನ್ನು ಬರೆದು, ಬೇರೆ ಹಲವು ವಿಷಯಗಳ ಮೇಲೆ ಸುಗ್ರೀವಾಜ್ಞೆಗಳ ವಿಧಾನವನ್ನು ಅಂಗೀಕರಿಸಿರುವ ಸರಕಾರ ಆದಿವಾಸಿಗಳು ಮತ್ತು ಪಾರಂಪರಿಕ ಅರಣ್ಯವಾಸಿಗಳಿಗೆ ಒಕ್ಕಲೆಬ್ಬಿಸುವುದರಿಂದ ರಕ್ಷಣ ಕೊಡಲು ತಕ್ಷಣವೇ ಸುಗ್ರೀವಾಜ್ಞೆ ಹೊರಡಿಸದಿದ್ದರೆ ಅದೊಂದು ಅವರಿಗೆ ಮಾಡುವ ದೊಡ್ಡ ಅನ್ಯಾಯವಾಗುತ್ತದೆ ಎಂದು ಹೇಳಿದ್ದಾರೆ.

ವೈಲ್ಡ್ ಲೈಫ್ ಫಸ್ಟ್ ವರ್ಸಸ್ ಅರಣ್ಯ ಮತ್ತು ಪರಿಸರ ಮಂತ್ರಾಲಯ ರಿಟ್ ಅರ್ಜಿ ಅರಣ್ಯ ಹಕ್ಕು ಕಾಯ್ದೆಯನ್ನೇ ಪ್ರಶ್ನಿಸಿತ್ತು. ಈ ಕುರಿತಂತೆ ಸುಪ್ರಿಂ ಕೋರ್ಟ್ ಫೆಬ್ರುವರಿ ೧೩ರಂದು ನೀಡಿರುವ ಆದೇಶ ಯಾರ್‍ಯಾರ ದಾವೆಗಳನ್ನು ಸ್ವೀಕರಿಸಲಾಗಿಲ್ಲವೋ ಆ ಎಲ್ಲ ಆದಿವಾಸಿಗಳು ಮತ್ತು ಪಾರಂಪರಿಕ ಅರಣ್ಯವಾಸಿಗಳನ್ನು ಅವರು ಈಗಿರುವ ನೆಲದಿಮದ ಒಕ್ಕಲೆಬ್ಬಿಸಬೇಕು ಎಂದಿದೆ ಎಂಬ ಸಂಗತಿಯನ್ನು ಪ್ರಧಾನ ಮಂತ್ರಿಗಳ ಗಮನಕ್ಕೆ ತರುತ್ತ , ೪೨.೧೯ ಲಕ್ಷ ದಾವೆಗಳಲ್ಲಿ ೧೮.೮೯ ಲಕ್ಷ ದಾವೆಗಳನ್ನು ಮಾತ್ರ ಸ್ವೀಕರಿಸಿರುವ ಅರ್ಥವೆಂದರೆ ೨೩.೩೦ಲಕ್ಷ ಮಂದಿ ಈ ಆದೇಶದ ಪ್ರಕಾರ ಒಕ್ಕಲೆಬ್ಬಿಸುವ ಕ್ರಿಯೆಗೆ ತುತ್ತಾಗುತ್ತಾರೆ ಎಂದು ಬೃಂದಾ ಕಾರಟ್ ತಮ್ಮ ತದಲ್ಲಿ ಹೇಳಿದ್ದಾರೆ. ಇದನ್ನು ತಡೆಯಲು ಸುಗ್ರೀವಾಜ್ಞೆ ತರದಿದ್ದರೆ ಅದು ಆದಿವಾಸಿಗಳ ಮೇಲೆ ಸಮರ ಸಾರಿದಂತೆಯೇ ಎಂಬುದನ್ನು ಪ್ರಧಾನಿಗಳ ಗಮನಕ್ಕೆ ತಂದಿದ್ದಾರೆ.

ವಿಚಾರಣೆಯ ಸಮಯದಲ್ಲಿ ಬಹಳ ಮಹತ್ವದ ದಿನದಂದು ಕೇಂದ್ರ ಸರಕಾರದ ಪರವಾಗಿ ವಾದಿಸಬೇಕಾಗಿದ್ದ ವಕೀಲರು ಗೈರು ಹಾಜರಾಗಿದ್ದುದು ಅತ್ಯಂತ ಖೇದಕರ ಸಂಗತಿ. ಆದಿವಾಸಿಗಳ ಹಕ್ಕುಗಳನ್ನು ಕುರಿತಂತೆ ಈ ವಿಶ್ವಾಸಘಾತ ಅರ್ಜಿದಾರರೊಂದಿಗೆ ಮಂತ್ರಾಲಯದ ಶಾಮೀಲಿನ ಅಂತಿಮ ಫಲಿತಾಂಶ . ಈ ಕೇಸಿನಲ್ಲಿ ಬಹಳಷ್ಟು ಅರ್ಜಿದಾರರು ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಗಳು. “ನಿಮ್ಮ ಸರಕಾರದ ಕಾನೂನು ಪ್ರತಿನಿಧಿಗಳು ಯಾವ ಹಂತದಲಿ  ಆದಿವಾಸಿಗಳು ಮತ್ತು ಪಾರಂಪರಿಕ ಅರಣ್ಯವಾಸಿಗಳ ಹಕ್ಕುಗಳ ರಕ್ಷಣೆಯಲ್ಲಿ ಒಂದು ಬಲವಾದ ನಿಲುವನ್ನು ತಳೆಯಲೇ ಇಲ್ಲ ಎಂದು ಬೃಂದಾ ಕಾರಟ್ ತಮ್ಮ ಪತ್ರದಲ್ಲಿ ಪ್ರಧಾನಿಗಳಿಗೆ ಹೇಳಿದ್ದಾರೆ.

ಅರಣ್ಯ ಹಕ್ಕುಗಳ ಕಾಯ್ದೆಯ ಜಾರಿಯ ಕೇಂದ್ರ ಸಂಸ್ಠೆ ಬುಡಕಟ್ಟು ವಯಹಾರಗಳ ಮಂತ್ರಾಲಯ. ಆದ್ದರಿಂದ ಈ ಕೇಸಿನ ಜವಾಬ್ದಾರಿಯನ್ನು ಆ ಮಂತ್ರಾಲಯಕ್ಕೆ ಕೊಡುವ ಬದಲು ” ನಿಮ್ಮ ಸರಕಾರ ಉದ್ದೇಶಪೂರ್ವಕವಾಗಿಯೇ ಆರಂಭದಿಂದಲೇ ಈ ಕಾಯ್ದೆಗೆ ಸಂಪೂರ್ಣವಾಗಿ ವಿರುದ್ಧವಾಗಿರುವ ಮಂತ್ರಾಲಯಕ್ಕೆ ಅದನ್ನು ಬಿಟ್ಟು ಕೊಟ್ಟಿದೆ” ಎಂದೂ ಬೃಂದಾ ಅವರು ಪ್ರಧಾನಿಗಳಿಗೆ ನೆನಪಿಸಿದ್ದಾರೆ.

ಸೂಕ್ತ ವಿಧಾನ ಅನುಸರಿಸದೆ ಯಾರನ್ನೂ ಒಕ್ಕಲೆಬ್ಬಿಸುವಂತಿಲ್ಲ ಎಂದು ಈ ಕಾಯ್ದೆಯ ಸೆಕ್ಷನ್೪(೫) ಹೇಳುತ್ತದೆ. ಆದರೆ ಇದನ್ನು ಅನುಸರಿಸಬೇಕಾದ ಅಧಿಕಾರಿಗಳೇ ಇದನ್ನು ಉಲ್ಲಂಘಿಸಿ ದಾವೆಗಳನ್ನು ಬೇಕಾಬಿಟ್ಟಿಯಾಗಿ ತಿರಸ್ಕರಿಸಿದ್ದಾರೆ, ಗ್ರಾಮಸಭೆಗಳು ಶಿಫಾರಸು ಮಾಡಿರುವ ದಾವೆಗಳನ್ನೂ ತಿರಸ್ಕರಿಸಿದ್ದಾರೆ.

ಸಮುದಾಯಿಕ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುತ್ತಿಲ್ಲ. ಆದಿವಾಸಿಗಳ ಸ್ವಾಧೀನದಲ್ಲಿ ಇರುವ ಭೂಮಿಯನ್ನು ” ಸುಗಮ ವ್ಯಾಪಾರ’ದ ಕಾರ್ಯಕ್ರಮದ ಅಡಿಯಲ್ಲಿ ದೊಡ್ಡ ಕಂಪನಿಗಳಿಗೆ ವಿವಿಧ ಪ್ರಾಜೆಕ್ಟ್ ಗಳಿಗಾಗಿ ಮತ್ತು ಗಣಿಗಾರಿಕೆಗೆ ವಹಿಸಿಕೊಡಲಾಗುತ್ತಿದೆ. ಆದ್ದರಿಂದ ತಿರಸ್ಕರಿಸಲ್ಪಟ್ಟ ಆದಿವಾಸಿಗಳ ದಾವೆಗಳ ಪರಿಶೀಲನೆಗೆ ಒಂದು ನಿಷ್ಪಕ್ಷಪಾತೀ ಸಂಸ್ಥೆಯನ್ನು ರಚಿಸುವುದು ಅಗತ್ಯವಾಗಿದೆ, ಅವನ್ನು ಮಂತ್ರಾಲಯಗಳಿಗೇ ಬಿಡಬಾರದು  ಎಂದು ಬೃಂದಾ ಕಾರಟ್ ಈ ಪತ್ರದಲ್ಲಿ ಪ್ರಧಾನಿಗಳನ್ನು ಆಗ್ರಹಿಸಿದ್ದಾರೆ.

“ಕಳೆದ ಐದು ವರ್ಷಗಳಲ್ಲಿ ನಿಮ್ಮ ಸರಕಾರ ಅರಣ್ಯ ಹಕಕುಗಳ ಕಾಯ್ದೆ ಕೊಟ್ಟಿರುವ ರಕ್ಷಣೆಯನ್ನು ದುರ್ಬಲಗೊಳಸಲು ಮತ್ತು ನಿರ್ಮೂಲಗೊಳಿಸಲು ಹಲವು ಕಾನೂನುಗಳನ್ನು ಪಾಸು ಮಾಡಿಸಿದೆ. ಗಣಿಗಾರಿಕೆ ಕಾಯ್ದೆಗೆ ಮತ್ತು ಪರಿಹಾರಾತ್ಮಕ ಅರಣ್ಯೀಕರಣ ಕಾಯ್ದೆಗೆ ತಿದ್ದುಪಡಿಗಳು, ಅರಣ್ಯ ಮತ್ತು ಪರಿಸರ ಇಲಾಖೆಯ ಅರಣ್ಯ ಹಕ್ಕುಗಳ ಕಾಯ್ದೆಯನ್ನು ದುರ್ಬಲಗೊಳಿಸುವ ಹಲವು ಅಧಿಸೂಚನೆಗಳು ಇವುಗಳಲ್ಲಿ ಸೇರಿವೆ. ಎನ್‌ಡಿಎ ಅಡಿಯಲ್ಲಿರುವ ರಾಜ್ಯ ಸರಕಾರಗಳು ಭೂಸ್ವಾಧೀನ , ಮರುವಸತಿ ಮತ್ತು ಮರುನೆಲೆ ಕಾಯ್ದೆ, ೨೦೧೩ನ್ನು ದುರ್ಬಲಗೊಳಿಸುವ ತಿದ್ದುಪಡಿಗಳನ್ನು ಅಂಗೀಕರಿಸಿವೆ.” ಎಂಬ ಸಂಗತಿಯನ್ನೂ ಈ ಪತ್ರದಲ್ಲಿ ಪ್ರಧಾನಿಗಳಿಗೆ ನೆನಪಿಸಲಾಗಿದೆ.

ಸುಪ್ರಿಂ ಕೋರ್ಟಿನಲ್ಲಿನ ಅರ್ಜಿಗಳಲ್ಲಿ ಹಿಂದಿನ ಎನ್‌ಡಿಎ ಸರಕಾರವೂ ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ಮೇ ೨೦೦೨ರಲ್ಲಿ ಆ ಎನ್‌ಡಿಎ ಸರಕಾರದ ಆದೇಶದಿಂದಾಗಿ ಲಕ್ಷಾಂತರ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಯಿತು. ೨೦೦೪ರಲ್ಲಿ ಯುಪಿಎ ಸರಕಾರ ಮೂಡಿಬಂದಾಗ, ಪ್ರಸಕ್ತ ಅರಣ್ಯ ಹಕ್ಕುಗಳ ಕಾಯ್ದೆಯನ್ನು ೨೦೦೫ರಲ್ಲಿ ಆದಿವಾಸಿಗಳಿಗೆ ಚಾರಿತ್ರಿಕವಾಗಿ ಮಾಡಿರುವ ಅನ್ಯಾಯಗಳನ್ನು ಸರಿಪಡಿಸಲಾಯಿತು.

ಆ ಕುರಿತ ಮಸೂದೆಯನ್ನು ಪರಿಶೀಲಿಸಿದ ಸಂಸತ್ತಿನ ಸೆಲೆಕ್ಟ್ ಕಮಿಟಿಯಸದಸ್ಯರಾಗಿದ್ದ ಬೃಂದಾ ಕಾರಟ್ ಈ ಹಿನ್ನೆಲೆಯನ್ನು ಪ್ರಧಾಮಿಗಳ ಗಮನಕಕೆ ತರುತ್ತ “ಆದಿವಾಸಿಗಳಿಗೆ ಯಾವುದೇ ಹಕ್ಕುಗಳನ್ನು ಕೊಡುವುದರ ವಿರುದ್ಧ ವಾದಿಸಿರುವ ಬಲಿಷ್ಟ ಲಾಬ್ಬಿಗಳ ಕುರಿತು ನನಗೆ ವೈಯಕ್ತಿಕವಾಗಿ ಗೊತ್ತಿದೆ. ಸಂಸತ್ತು ಈ ತಪ್ಪುವಾದಗಳನ್ನು ಬದಿಗೊತ್ತಿತು ಮತ್ತು ಕಾನೂನ್ನು ಅಂಗೀಕರಿಸಿತು. ಆ ಹೆಜ್ಜೆಯಿಂದ ಹಿಂದಕ್ಕೆ ಹೋಗಲು ನಾವು ಬಿಡಲಾರೆವು” ಎಂದು ಪ್ರಧಾನ ಮಂತ್ರಿಗಳಿಗೆ ಹೇಳಿದ್ದಾರೆ.

“ಬೇರೆ ಹಲವು ವಿಷಯಗಳ ಮೇಲೆ ಸುಗ್ರೀವಾಜ್ಞೆಗಳ ವಿಧಾನವನ್ನು ಅಂಗೀಕರಿಸಿರುವ ನಿಮ್ಮ ಸರಕಾರ ಆದಿವಾಸಿಗಳು ಮತ್ತು ಪಾರಂಪರಿಕ ಅರಣ್ಯವಾಸಿಗಳಿಗೆ ಒಕ್ಕಲೆಬ್ಬಿಸುವುದರಿಂದ ರಕ್ಷಣೆ ಕೊಡಲು ತಕ್ಷಣವೇ ಸುಗ್ರೀವಾಜ್ಞೆ ಹೊರಡಿಸದಿದ್ದರೆ ಅದೊಂದು ಅವರಿಗೆ ಮಾಡುವ ದೊಡ್ಡ ಅನ್ಯಾಯವಾಗುತ್ತz” ಎಂದು ತಮ್ಮ ಪತ್ರವನ್ನು ಕೊನೆಗೊಳಿಸುತ್ತ ಬೃಂದಾ ಕಾರಟ್ ಪ್ರಧಾನಿಗಳಿಗೆ ಹೇಳಿದ್ದಾರೆ.

Leave a Reply

Your email address will not be published. Required fields are marked *