ಫುಲ್ವಾಮಾದ ನಂತರ…..

Prakash_karat
ಪ್ರಕಾಶ್ ಕಾರಟ್

ಫೆಬ್ರವರಿ 14ರಂದು ಫುಲ್ವಾಮಾದಲ್ಲಿ ಭೀಕರ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ೪೦ ಯೋಧರ ಸಾವು ದೇಶದಾದ್ಯಂತ ಜನರಲ್ಲಿ ದುಃಖ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ. ಹತಯೋಧರು ೧೬ ರಾಜ್ಯಗಳಿಗೆ ಸೇರಿದವರಾಗಿದ್ದು ಅವರ ಅಂತ್ಯಸಂಸ್ಕಾರಗಳಲ್ಲಿ ಆಯಾಯ ಸ್ಥಳಗಳಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.

  • ರಾಜಕೀಯ ಸಂವಾದ ಮತ್ತು ಸಂವಿಧಾನದಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮಾನ್ಯ ಮಾಡುವ ಮೂಲಕ ಮಾತ್ರವೇ ಶಾಂತಿ ಹಾಗೂ ಸಹಜ ಸ್ಥಿತಿಯತ್ತ ಸುದೀರ್ಘ ದಾರಿಯಲ್ಲಿ  ಸಾಗಬಹುದಾಗಿದೆ. ಈ ಪ್ರಜಾಸತ್ತಾತ್ಮಕ ರಾಜಕೀಯ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳದೆ ಮೋದಿ ಸರಕಾರ ಕೇವಲ ಕುರುಡು ದೇಶಭಕ್ತಿಗೆ ಇಳಿಯುತ್ತಿದೆ ಮತ್ತು ಭಾವನೆಗಳನ್ನು ಪ್ರಚೋದಿಸುತ್ತದೆ ಎಂದೇ ಕಾಣಬರುತ್ತಿದೆ.
  • ಈ ನಡುವೆ, ಜಮ್ಮು ಮತ್ತು ಕಾಶ್ಮೀರದಲ್ಲಿರುವ ಹತ್ತಾರು ಸಾವಿರ ಸಶಸ್ತ್ರ ಪಡೆಗಳು ಮತ್ತು ಅರೆ-ಸೇನಾ ಪಡೆಗಳ ಯೋಧರು ಕಾಶ್ಮೀರಿ ಜನರ ವಿರುದ್ಧ ಸಂಘರ್ಷದಲ್ಲಿ ತೊಡಗಿ ಅದರಿಂದ ಸಾವು-ನೋವುಗಳಿಗೆ ಈಡಾಗುತ್ತಿದ್ದಾರೆ.
    ಅತ್ತ ಕಣಿವೆಯಲ್ಲಿನ ಸಾಮಾನ್ಯ ಜನರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆಯಂತೂ ಹೇಳಲೇ ಬೇಕಾಗಿಲ್ಲ. 

ಈ ಇತ್ತೀಚಿನ ಅತ್ಯಾಚಾರಕ್ಕೆ  ಜೈಷ್ ಎ-ಮೊಹಮದ್ (ಜೆಇಎಂ) ಸಂಘಟನೆ ಹೊಣೆಯಾಗಿರುವುದರಿಂದ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಮತ್ತು ಇತರೆ ಜಿಹಾದಿ ಗುಂಪುಗಳಿಗೆ  ಆಶ್ರಯ ನೀಡಿರುವುದರಲ್ಲಿ ಪಾಕಿಸ್ತಾನದ ಪಾತ್ರದ ಮೇಲೆ ಗಮನ ಕೇಂದ್ರೀಕೃತವಾಗಿದೆ. ೨೦೧೬ರಲ್ಲಿ ಪಠಾಣ್‌ಕೋಟ್ ಮತ್ತು ಉರಿಗಳಲ್ಲಿ ನಡೆದ ದಾಳಿಗಳಿಗೂ ಜೆಇಎಂ ಹೊಣೆಯಾಗಿತ್ತು. ಈ ವಿಚಾರದಲ್ಲಿ ತನ್ನ ತಪ್ಪನ್ನು ಒಪ್ಪಿಕೊಳ್ಳಲು ಪಾಕಿಸ್ತಾನ ಸಿದ್ಧವಾಗಿಲ್ಲ ಮತ್ತು ಇದಕ್ಕೆ ಸಾಕ್ಷಿ ಕೊಡುವಂತೆ ಅದು ಭಾರತವನ್ನೇ ಕೇಳುತ್ತಿದೆ. ಪಾಕಿಸ್ತಾನ ಸರಕಾರದ ಈ ರೀತಿಯ ತಪ್ಪಿಸಿಕೊಳ್ಳುವ ಧೋರಣೆ ಖಂಡನೀಯವಾಗಿದೆ.

Think out of box-ballot or bollywood

ಇಂಥದ್ದೊಂದು ಸನ್ನಿವೇಶದಲ್ಲಿ ಮಸೂದ್ ಅಜರ್ ಮತ್ತು ಜೆಇಎಂ ವಿರುದ್ಧ ಕ್ರಮಗಳನ್ನು ಕೈಗೊಳ್ಳುವಂತೆ ರಾಜತಾಂತ್ರಿಕತೆ ಮೂಲಕ ಪಾಕಿಸ್ತಾನದ ಮೇಲೆ ಅಂತಾರ್ರಾಷ್ಟ್ರೀಯ ಒತ್ತಡ ಹೇರುವಂಥ ದೊಡ್ಡ ಜವಾಬ್ದಾರಿಯನ್ನು ಭಾರತ ಎದುರಿಸುತ್ತಿದೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಈ ವಿಚಾರದಲ್ಲಿ ಗರಿಷ್ಠವಾದುದನ್ನು ಮಾಡಬಹುದಾದ ದೇಶ ಅಮೆರಿಕ. ಆದರೆ ಪಾಕಿಸ್ತಾನಿ ಸಶಸ್ತ್ರ ಪಡೆಗಳಿಗೆ  ಹಣಕಾಸು ನೆರವು ಮತ್ತು ಶಸ್ತ್ರಾಸ್ತ್ರ ನೀಡಿರುವುದು ಹಾಗೂ ಅದರ ರಾಜಕೀಯ ಆಳ್ವಿಕೆಗೆ ಊರುಗೋಲಾಗಿರುವುದು ಅಮೆರಿಕವೇ. ಭಯೋತ್ಪಾದಕ ಗುಂಪುಗಳಿಗೆ ಆಶ್ರಯತಾಣಗಳನ್ನು ಒದಗಿಸುವುದನ್ನು ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಅಮೆರಿಕ ಈ ಬಾರಿ ಕೂಡ ಕರೆ ನೀಡಿರುವುದಾದರೂ ಈ ನಿಟ್ಟಿನಲ್ಲಿ ಅದು  ಕ್ರಮಕೈಗೊಳ್ಳುವಂತೆ ಪಾಕಿಸ್ತಾನ ಸರಕಾರ ಮತ್ತು ಸೇನೆಯ ಮೇಲೆ ಒತ್ತಡ ಹೇರಲು ನಿರ್ದಿಷ್ಟವಾದುದೇನನ್ನೂ ಮಾಡಿಲ್ಲ.

ಅಫಘಾನಿಸ್ತಾನದಿಂದ ಆದಷ್ಟು ಬೇಗ ತನ್ನ ಪಡೆಗಳನ್ನು ವಾಪಸ್ ಪಡೆಯಲು ಅನುಕೂಲವಾಗುವಂತೆ ತಾಲಿಬಾನ್ ಜೊತೆಗಿನ ಮಾತುಕತೆಗಳಲ್ಲಿ ಅಮೆರಿಕ ಅವಲಂಬಿಸಿರುವುದು ಪಾಕಿಸ್ತಾನವನ್ನು.  ಇಂಥ ಸನ್ನಿವೇಶದಲ್ಲಿ, ಜಿಹಾದಿ ಗುಂಪುಗಳ ಮೇಲೆ ಪಾಕಿಸ್ತಾನಿ ಸರಕಾರ ಮತ್ತು ಸೇನೆ ಕಠಿಣ ಕ್ರಮಕೈಗೊಳ್ಳುವಂತೆ ಮಾಡುವ ವಿಚಾರದಲ್ಲಿ ಅಮೆರಿಕ ಮೃದು ಧೋರಣೆ ತಾಳದಂತೆ ಟ್ರಂಪ್ ಆಡಳಿತಕ್ಕೆ ಮೋದಿ ಸರಕಾರ ಸ್ಪಷ್ಟಪಡಿಸಬೇಕಿದೆ.

ಇದು ತುಂಬಾ ಮುಖ್ಯವಾಗುತ್ತದೆ. ಏಕೆಂದರೆ, ಅಫಘಾನಿಸ್ತಾನದಲ್ಲಿ ತಾಲಿಬಾನ್ ಪರವಾದ ರಾಜಕೀಯ ಬದಲಾವಣೆಯೇನಾದರೂ ಆದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯಾಚೆಯಿಂದ ಚಟುವಟಿಕೆಗಳನ್ನು ಹೆಚ್ಚಿಸಲು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಗುಂಪುಗಳಿಗೆ  ಉತ್ತೇಜನ ಸಿಕ್ಕಂತಾಗುತ್ತದೆ.

ಪಾಕಿಸ್ತಾನದ ನೆಲದಿಂದ ಭಯೋತ್ಪಾದನೆಗೆ ಇನ್ನೊಂದು ನೆರೆ ದೇಶ ಇರಾನ್ ಕೂಡ ಗುರಿಯಾಗಿರುವುದರಿಂದ ಪಾಕಿಸ್ತಾನಿ ನೆಲದಿಂದ ಭಯೋತ್ಪಾದನೆ ಹೊಮ್ಮುತ್ತಿರುವ ಅಪಾಯವನ್ನು ಜಗತ್ತಿಗೆ ತೋರಿಸಲು ಭಾರತೀಯ ಸರಕಾರ ಮಾಡುವ ಪ್ರಯತ್ನಗಳಿಗೆ ಹೆಚ್ಚು ಬಲ ಸಿಗಲಿದೆ. ಫುಲ್ವಾಮಾ ದಾಳಿಯ ಕೇವಲ ಒಂದು ದಿನದ ಮುಂಚೆ ಬಸ್ ಮೇಲೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ೨೭ ಇರಾನಿ ಸೈನಿಕರು ಮೃತಪಟ್ಟಿದ್ದರು.  ಇದಕ್ಕೆ ಹೊಣೆಯಾದ ಜೈಷ್ ಅಲ್ ಅದಲ್ (ನ್ಯಾಯದ ಸೇನೆ)ಗೆ ಪಾಕಿಸ್ತಾನ ಸರಕಾರ ಮತ್ತು ಸೇನೆ ಬೆಂಬಲ ನೀಡುತ್ತಿವೆ ಎಂದು ಇರಾನ್ ಸೇನೆ ಆರೋಪಿಸಿತ್ತು. ಆದರೆ ಪಾಕಿಸ್ತಾನದ ನೆಲದಿಂದ ಹುಟ್ಟುವ ಭಯೋತ್ಪಾದನೆ ಚಟುವಟಿಕೆಗಳ ವಿರುದ್ಧದ ಹೋರಾಟದಲ್ಲಿ ಇರಾನ್‌ನೊಂದಿಗೆ ಕೈಜೋಡಿಸುವ ಭಾರತದ ಪ್ರಯತ್ನಗಳು ಇರಾನ್ ವಿರುದ್ಧದ ಅಮೆರಿಕದ ನಿರಂತರ ವೈರತ್ವದ ವಿರುದ್ಧ ದನಿಯೆತ್ತುವಲ್ಲಿ ಭಾರತದ ಅಸಮರ್ಥತೆಯಿಂದಾಗಿ ಅಡ್ಡಿ ಎದುರಿಸಲಿವೆ.

ಪಾಕಿಸ್ತಾನದ ಮೇಲೆ ಸೌದಿ ಅರೇಬಿಯಾ ಏನಾದರೂ ಪ್ರಭಾವ ಬೀರಬಹುದೇನೋ ಎಂಬ ಆಶಾವಾದ ಬೇಗನೆ ಹುಸಿಯಾಗಿದೆ. ಸೌದಿ ಅರೇಬಿಯಾದ ರಾಜಕುಮಾರ ಸಲ್ಮಾನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ ವೇಳೆ ಹೊರಡಿಸಿದ ಸಂಯುಕ್ತ ಹೇಳಿಕೆ ನಿರಾಶಾದಾಯಕವಾಗಿತ್ತು. ವಿಶ್ವ ಸಂಸ್ಥೆಯ ಪಟ್ಟಿ ಮಾಡುವ ಕ್ರಮವನ್ನು ರಾಜಕೀಯಕರಣಳಿಸುವುದನ್ನು ನಿಲ್ಲಿಸುವುದು ಅಗತ್ಯ ಎಂಬುದಾಗಿ ಆ ಹೇಳಿಕೆ ತಿಳಿಸಿತ್ತು.

ಮಸೂದ್ ಅಜರ್‌ನನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸುವಂತೆ ಭಾರತವು ವಿಶ್ವ ಸಂಸ್ಥೆಯನ್ನು ಒತ್ತಾಯಿಸುತ್ತಿರುವುದಕ್ಕೆ ಸಂಬಂಧಪಟ್ಟಂತಹ ಹೇಳಿಕೆ ಅದಾಗಿತ್ತು. ಹೀಗಾಗಿ ಪಾಕಿಸ್ತಾನವನ್ನು ಓಲೈಸುತ್ತಿರುವ ಅಮೆರಿಕವೇ ಆಗಲಿ ಸೌದಿ ಅರೇಬಿಯಾವೇ ಆಗಲಿ ಜಿಹಾದಿ ಗುಂಪುಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರಬಹುದು ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ.

blasts-how long will it last -Suhail-Naqshbandi-Twitter

ಪಾಕಿಸ್ತಾನದ ಜೊತೆ ನಿಕಟ ಬಾಂಧವ್ಯ ಹೊಂದಿರುವ ಇನ್ನೊಂದು ದೇಶವೆಂದರೆ ಚೀನಾ. ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿನ ಜಿಹಾದಿ ಚಟುವಟಿಕೆಗಳ ಬಗ್ಗೆ ಅಪಾರ ಕಳವಳ ಹೊಂದಿದ್ದರೂ ಮತ್ತು ಕರಾಚಿಯಲ್ಲಿನ ತನ್ನ ಕಾನ್ಸುಲೇಟ್ ಕಚೇರಿ ಮೇಲೆ ನಡೆದ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಒಳಗೆ ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರೂ ಚೀನಾವು ಈ ವಿಚಾರದಲ್ಲಿ ಒಂದು ನಿಲವು ತಾಳಲು ಇದಕ್ಕಿಂತ ಮುಂದೆ ಹೋಗುತ್ತಿಲ್ಲ.

ಭಾರತದೊಳಗೆ, ಭಯೋತ್ಪಾದಕ ಹಿಂಸಾಚಾರದ ವಿರುದ್ಧ ಜನಗಳು ಒಂದಾಗಿರುವಾಗ ಈ ಒಗ್ಗಟ್ಟನ್ನು ಮುರಿಯಲು ಮತ್ತು ಕಾಶ್ಮೀರಿಗಳ್ನು ಹಾಗೂ ಅವ್ಯಕ್ತ ರಾಷ್ಟ್ರ-ವಿರೋಧಿಗಳನ್ನು ಹುಡುಕಲು ಬಿಜೆಪಿ ಮತ್ತು ಹಿಂದುತ್ವ ಶಕ್ತಿಗಳು ಪ್ರಯತ್ನಿಸುತ್ತಿವೆ.  ಭಜರಂಗದಳ ಮತ್ತಿತರ ಸಂಘಟನೆಗಳು ವಿವಿಧೆಡೆ ಕಾಶ್ಮೀರಿ ವಿದ್ಯಾರ್ಥಿಗಳು, ವರ್ತಕರು ಮತ್ತು ವ್ಯಾಪಾರಿಗಳ ಮೇಲೆ ನಡೆಸಿದ ದಾಳಿಗಳು, ಡೆಹ್ರಾಡೂನ್ ಮೊದಲಾದೆಡೆ ಕಾಶ್ಮೀರಿ ವಿದ್ಯಾರ್ಥಿಗಳನ್ನು ನಾಚಿಕೆಯಿಲ್ಲದೆ ಹೊರಗಟ್ಟಿದ್ದು ಇವೇ ಮೊದಲಾದವು ಕಾಶ್ಮೀರಿ ಮುಸ್ಲಿಮರನ್ನು ದೇಶದ್ರೋಹಿಗಳು ಮತ್ತು ಭಯೋತ್ಪಾದಕರ ಹಿತೈಷಿಗಳು ಎಂದು ಬಿಂಬಿಸುವ ಪ್ರಯತ್ನಗಳಾಗಿವೆ. ಇದರಿಂದಾಗಿ ಸಮಸ್ಯೆಯ ಬೇರಿರುವ ಕಾಶ್ಮೀರ ಕಣಿವೆಯ ಜನರನ್ನು ಇನ್ನಷ್ಟು ಅನ್ಯರಾಗಿಸಿದಂತಾಗುತ್ತದೆ.

ಸ್ವತಃ ಪ್ರಧಾನಿಯವರ ನೇತೃತ್ವದಲ್ಲಿ ಇಡೀ ಬಿಜೆಪಿ ನಾಯಕತ್ವ ಪಾಕಿಸ್ತಾನದ ವಿರುದ್ಧ ಪ್ರತೀಕಾರ ಮತ್ತು ಪ್ರತಿದಾಳಿ ನಡೆಸುವುದಕ್ಕೆ ಕರೆ ಕೊಡುವ ಭಾಷಣಗಳನ್ನು ಮಾಡುತ್ತಿದೆ. ಪರಿಸ್ಥಿತಿಯನ್ನು ಎದುರಿಸಲು ಎಲ್ಲರೂ ಒಗ್ಗಟ್ಟಾಗಬೇಕೆಂದು ಪ್ರಧಾನಿ ಕರೆ ನೀಡಿದ್ದಾರೆ; ಆದರೆ ಅಸ್ಸಾಂನಲ್ಲಿ ಮಾಡಿದ ಭಾಷಣವೊಂದರಲ್ಲಿ ಪಕ್ಷ ರಾಜಕಾರಣ ಮಾಡುವಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ತಡ ಮಾಡಿಲ್ಲ. ಯೋಧರ ತ್ಯಾಗ ವ್ಯರ್ಥವಾಗುವುದಿಲ್ಲ. ಯಾಕೆಂದರೆ ಕೇಂದ್ರದಲ್ಲಿರುವುದು ಬಿಜೆಪಿ ಸರಕಾರವೇ ಹೊರತು ಕಾಂಗ್ರೆಸ್ ಸರಕಾರವಲ್ಲ ಎಂದು ಅವರು ಭಾಷಣದಲ್ಲಿ ಹೇಳಿದರು.

ಕುರುಡು ದೇಶಭಕ್ತಿಯ ಪ್ರದರ್ಶನಕ್ಕೆ ಇಳಿದಿರುವುದು ಮತ್ತು ಪ್ರತೀಕಾರಕ್ಕೆ ಕರೆಗಳು ಬರುತ್ತಿರುವುದು  ಒಂದು ರೀತಿಯ ಗಡಿಯಾಚೆ-ಈಚೆ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂಬುದನನು ಸೂಚಿಸುತ್ತಿದೆ.  ಆದರೆ ಆಳುವ ಪಕ್ಷಕ್ಕೆ ಚುನಾವಣಾ ಗಳಿಕೆಗಳಿಗೆ ಇದೊಂದು ಉತ್ತೇಜನೆ ಬಿಟ್ಟು, ಮಿಲಿಟರಿ ಕಾರ್ಯಾಚರಣೆಯು ಗಡಿಯಾಚೆಯಿಂದ ಭಯೋತ್ಪಾದನೆಯನ್ನು ದಮನಿಸುವ ವ್ಯೂಹಾತ್ಮಕ ಉದ್ದೇಶವನ್ನು  ಈಡೇರಿಸಿಕೊಳ್ಳಬಹುದೇ ಎನ್ನುವುದು ಅನುಮಾನಾಸ್ಪದವಾಗಿದೆ.

ಒಂದು ರೀತಿಯ ಮಿಲಿಟರಿ ಮಧ್ಯಪ್ರವೇಶ ಆಗಬೇಕೆಂಬ ಒತ್ತಾಯವನ್ನು ಸೂಕ್ತ ಎಚ್ಚರಿಕೆಯೊಂದಿಗೆ ಪರಿಶೀಲಿಸಬೇಕಾಗುತ್ತದೆ. ೨೦೧೬ರ ’ಮಿಂಚಿನ ಪ್ರಹಾರ’(ಸರ್ಜಿಕಲ್ ಸ್ಟ್ರೈಕ್) ಸೇರಿದಂತೆ ಗಡಿಯಲ್ಲಿ ಈ ಹಿಂದೆ ನಡೆಸಿದ ಕಾರ್ಯಾಚರಣೆಗಳು ಹೆಚ್ಚಿನ ಫಲ ನೀಡಿಲ್ಲ. ಹೆಚ್ಚು ಪ್ರಖರತೆಯಿಲ್ಲದ ಒಂದು ’ಸೀಮಿತ ಯುದ್ಧ’ ನಡೆಸಬೇಕೆನ್ನುವ ಮಾತುಗಳು ಅತ್ಯಂತ ಬೇಜವಾಬ್ದಾರಿಯುತವಾದುದು. ಇಂಥ ಯಾವುದೇ ಕ್ರಮವು ಹೇಳಲಸಾಧ್ಯವಾದ ಪರಿಣಾಮಗಳಿಗೆ ನಾಂದಿಯಾಗಲಿದೆ.

೨೦೧೬ ಸೆಪ್ಟೆಂಬರ್‌ನ ಮಿಂಚಿನ ದಾಳಿಯ ನಂತರದಲ್ಲಿ ಕಾಶ್ಮೀರ ಕಣಿವೆಯಲ್ಲಿನ ಪರಿಸ್ಥಿತಿ ಹದಗೆಟ್ಟಿದೆ ಎನ್ನುವುದು ಕಟು ವಾಸ್ತವವಾಗಿದೆ. ಉಗ್ರಗಾಮಿಗಳ ದಾಳಿ ೨೦೧೪ರಲ್ಲಿ ೨೨೨ ಇದ್ದದ್ದು ೨೦೧೮ರಲ್ಲಿ ೬೧೪ಕ್ಕೆ ಏರಿದೆ. ೨೦೧೪ರಲ್ಲಿ ೪೭ ಭದ್ರತಾ ಪಡೆಗಳ ಯೋಧರು ಸಾವನ್ನಪ್ಪಿದ್ದರು, ಅದು ೨೦೧೭ರಲ್ಲಿ ೮೦ ಮತ್ತು ೨೦೧೮ರಲ್ಲಿ ೯೧ಕ್ಕೆ ಏರಿದೆ.

ಇನ್ನೂ ಕಳವಳಕಾರಿ ಸಂಗತಿಯೆಂದರೆ ೨೦೦೦ನೇ ಇಸವಿಯ ನಂತರದಲ್ಲಿ ಇದೇ ಮೊದಲ ಬಾರಿಗೆ ೨೦೧೮ರಲ್ಲಿ ವಿದೇಶಿ ಉಗ್ರಗಾಮಿಗಳಿಗಿಂತ ಹೆಚ್ಚು ಸ್ಥಳೀಯ ಉಗ್ರಗಾಮಿಗಳು ಹತರಾಗಿದ್ದಾರೆ. ಈ ವರ್ಷ ಕೊಲ್ಲಲ್ಪಟ್ಟ ೨೪೬ ಉಗ್ರರ ಪೈಕಿ ೧೫೦ ಮಂದಿ ಸ್ಥಳೀಯರು ಹಾಗೂ ೯೦ ಮಂದಿ ವಿದೇಶಿಯರು. ಇದು ಕಣಿವೆಯ ಜನರಲ್ಲಿ ಮಡುಗಟ್ಟಿರುವ ಆಳವಾದ ಪರಕೀಯ ಭಾವವನ್ನು ಹಾಗೂ ಯುವಜನರಿಗೆ ಉಗ್ರಗಾಮಿತ್ವದೆಡೆಗಿನ ಆಕರ್ಷಣೆಯನ್ನು ಸೂಚಿಸುತ್ತದೆ. ಸಮಸ್ಯೆಯ ಕೇಂದ್ರ ಅಡಗಿರುವುದು ಇಲ್ಲೇ ಹಾಗೂ ಫುಲ್ವಾಮಾದಲ್ಲಿ ಆಗಿರುವುದು ಅದರ ಕೆಡುಕಿನ ಅಭಿವ್ಯಕ್ತಿ.

ಆದ್ದರಿಂದ ಕಾಶ್ಮೀರ ಮತ್ತು ಸಮಸ್ಯೆಯ ರಾಜಕೀಯ ಪರಿಹಾರಕ್ಕೆ ಗಮನವನ್ನು ಕೇಂದ್ರೀಕರಿಸಬೇಕಿರುವುದು ಈಗಿನ ಅಗತ್ಯವಾಗಿದೆ. ಕಾಶ್ಮೀರಿ ಜನರ ಸಮಸ್ಯೆಗಳು ಮತ್ತು ಬೇಡಿಕೆಗಳಿಗೆ ಸ್ಪಂದಿಸುವ ರಾಜಕೀಯ ಪ್ರಕ್ರಿಯೆಯಿಲ್ಲದೆ ಸಮಸ್ಯೆಯನ್ನು ಸಶಸ್ತ್ರ ಪಡೆಗಳ ಬಲಪ್ರಯೋಗದಿಂದಷ್ಟೇ ಎದುರಿಸಲು ಮುಂದಾಗುವುದರಿಂದ ಪರಿಸ್ಥಿತಿ ಇನ್ನಷ್ಟು ಸಂಕೀರ್ಣಗೊಳ್ಳುತ್ತದೆ. ಉಗ್ರಗಾಮಿ ಹಿಂಸಾಚಾರ ಮತ್ತು ಅದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳ ಪ್ರತಿ ಕಾರ್ಯಾಚರಣೆಗಳ ವಿಷ ಚಕ್ರ ಅವ್ಯಾಹತವಾಗಿ ಮುಂದುವರಿಯುತ್ತದೆ.

ಕಾಶ್ಮೀರದಲ್ಲಿನ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ದಿಸೆಯಲ್ಲಿ ರಾಜಕೀಯ ಪ್ರಕ್ರಿಯೆ ಆರಂಭಿಸುವಲ್ಲಿ ನರೇಂದ್ರ ಮೋದಿ ಸರಕಾರ ತೀವ್ರ ವಿಫಲಗೊಂಡಿದೆ. ರಾಜ್ಯದಲ್ಲಿ ಪಿಡಿಪಿಯೊಂದಿಗೆ ಸಮ್ಮಿಶ್ರ ಸರಕಾರದಲ್ಲಿ ಬಿಜೆಪಿ ಕೂಡ ಭಾಗಿದಾರ ಪಕ್ಷವಾಗಿದ್ದರಿಂದ ರಾಜಕೀಯ ಪ್ರಕ್ರಿಯೆ ಆರಂಭಿಸಲು ಅದಕ್ಕೆ ಉತ್ತಮ ಅವಕಾಶ ಇತ್ತು. ಆ ಅವಕಾಶವನ್ನು ವ್ಯರ್ಥಗೊಳಿಸಿದ್ದು ಮಾತ್ರವಲ್ಲದೆ ಅದನ್ನು ಜಮ್ಮು ಮತ್ತು ಕಾಶ್ಮೀರ ನಡುವಿನ ವಿಭಜನೆಯನ್ನು ಇನ್ನಷ್ಟು ಕೋಮುವಾದಗ್ರಸ್ತಗೊಳಿಸಲು ಮತ್ತು ನಾಗರಿಕ ಪ್ರತಿಭಟನೆಕಾರರ ಮೇಲೆ ದಬ್ಬಾಳಿಕೆ ಹರಿಬಿಡಲು ಬಳಸಿಕೊಂಡರು.
ರಾಜಕೀಯ ಸಂವಾದ ಮತ್ತು ಸಂವಿಧಾನದಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮಾನ್ಯ ಮಾಡುವ ಮೂಲಕ ಮಾತ್ರವೇ ಶಾಂತಿ ಹಾಗೂ ಸಹಜ ಸ್ಥಿತಿಯತ್ತ ಸುದೀರ್ಘ ದಾರಿಯಲ್ಲಿ  ಸಾಗಬಹುದಾಗಿದೆ.

ಈ ಪ್ರಜಾಸತ್ತಾತ್ಮಕ ರಾಜಕೀಯ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳದೆ ಮೋದಿ ಸರಕಾರ ಕೇವಲ ಕುರುಡು ದೇಶಭಕ್ತಿಗೆ ಇಳಿಯುತ್ತಿದೆ ಮತ್ತು ಭಾವನೆಗಳನ್ನು ಪ್ರಚೋದಿಸುತ್ತದೆ ಎಂದೇ ಕಾಣಬರುತ್ತಿದೆ. ಈ ನಡುವೆ, ಜಮ್ಮು ಮತ್ತು ಕಾಶ್ಮೀರದಲ್ಲಿರುವ ಹತ್ತಾರು ಸಾವಿರ ಸಶಸ್ತ್ರ ಪಡೆಗಳು ಮತ್ತು ಅರೆ-ಸೇನಾ ಪಡೆಗಳ ಯೋಧರು ಕಾಶ್ಮೀರಿ ಜನರ ವಿರುದ್ಧ ಸಂಘರ್ಷದಲ್ಲಿ ತೊಡಗಿ ಅದರಿಂದ ಸಾವು-ನೋವುಗಳಿಗೆ ಈಡಾಗುತ್ತಿದ್ದಾರೆ. ಅತ್ತ ಕಣಿವೆಯಲ್ಲಿನ ಸಾಮಾನ್ಯ ಜನರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆಯಂತೂ ಹೇಳಲೇ ಬೇಕಾಗಿಲ್ಲ.

ಅನುವಾದ : ವಿಶ್ವ

Leave a Reply

Your email address will not be published. Required fields are marked *