ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಯುತ್ತದೆಂಬ ವಿಶ್ವಾಸಕ್ಕೆ ಮೋಡ ಕವಿಯುತ್ತಿದೆ

ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸುವುದಕ್ಕಿಂತ ಮುರಿಯುವುದೇ ಹೆಚ್ಚುತ್ತಿರುವಾಗ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಯುತ್ತದೆಂಬ ವಿಶ್ವಾಸಕ್ಕೆ ಮೋಡ ಕವಿಯುತ್ತಿದೆ – ಚುನಾವಣಾ ಆಯೋಗಕ್ಕೆ ಮತ್ತೊಂದು ಸಿಪಿಐ(ಎಂ) ಪತ್ರ

“ಒಂದೆಡೆಯಲ್ಲಿ ಬಿಜೆಪಿ, ಇನ್ನೊಂದೆಡೆಯಲ್ಲಿ ಸಾರ್ವಜನಿಕ ಹಣದಿಂದ ಕೆಲಸ ಮಾಡುವ ಸಾರ್ವಜನಿಕ ಪ್ರಸಾರಣ ಸಂಸ್ಥೆ ಮಾದರಿ ಆಚಾರ ಸಂಹಿತೆಯ ಉಲ್ಲಂಘನೆಗಳನ್ನು ಭಂಡತನದಿಂದ ಮಾಡುತ್ತಿರುವುದನ್ನು ಕಂಡು ನಮಗೆ ಆಘಾತವಾಗಿದೆ. ಈ ರೀತಿಯ ಉಲ್ಲಂಘನೆಗಳ ಸರಣಿ ಮುಂದುವರೆಯುತ್ತಿದ್ದು, ಮತ್ತು ಭಾರತದ ಚುನಾವಣಾ ಆಯೋಗದಿಂದ ಇದನ್ನು ತಡೆಯುವ ಯಾವುದೇ ಗಮನಾರ್ಹ ಕ್ರಮದ ಸಾಕ್ಷಿಗಳು ಕಾಣುತ್ತಿಲ್ಲವಾದ್ದರಿಂದ ಒಂದು ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಯುವ ಬಗ್ಗೆ ಜನಗಳ ವಿಶ್ವಾಸಕ್ಕೆ ಮೋಡ ಕವಿದಂತಾಗಿದೆ” ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಸದಸ್ಯರಾದ ನೀಲೋತ್ಪಲ್‍ ಬಸು ಮಾದರಿ ಆಚಾರ ಸಂಹಿತೆಯ ಉಲ್ಲಂಘನೆಗಳ ಬಗ್ಗೆ ಭಾರತದ ಚುನಾವಣಾ ಆಯೋಗದ ಮುಖ್ಯಚುನಾವಣಾ ಆಯುಕ್ತರಿಗೆ ಇಂದು ಬರೆದ ಮತ್ತೊಂದು ಪತ್ರದಲ್ಲಿ ಖೇದ ವ್ಯಕ್ತಪಡಿಸಿದ್ದಾರೆ.

ಬಸು ಅವರು ಈ ಪತ್ರದಲ್ಲಿ ಮೂರು ಇಂತಹ ಉಲ್ಲಂಘನೆಗಳನ್ನು ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ  ತರುತ್ತ “ಸಂವಿಧಾನ ಭಾರತದ ಚುನಾವಣಾ ಆಯೋಗಕ್ಕೆ ಒಂದು ಮುಕ್ತ ಮತ್ತು ನ್ಯಾಯಯುತ ಮತದಾನ ಸಡೆಸಲು ಒಂದು ಸಮಾನ ನೆಲೆಯಲ್ಲಿ ಅವಕಾಶವನ್ನು ಕಲ್ಪಿಸಬೇಕು ಎಂದು ಆದೇಶವಿತ್ತಿದೆ” ಎಂಬುದನ್ನು ನೆನಪಿಸಿದ್ದಾರೆ, ಇತ್ತೀಚಿನ ಬೆಳವಣಿಗೆಗಳು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ  ರಾಜಕೀಯ ಪಕ್ಷಗಳಿಗೆ ಮತ್ತು ಅಭ್ಯರ್ಥಿಗಳಿಗೆ ಸಮಾನ ನೆಲೆಯನ್ನು ತೀವ್ರವಾಗಿ ಕುಂಠಿತಗೊಳಿಸಲಾಗುತ್ತಿದೆ ಎಂಬುದನ್ನು ತೋರಿಸುತ್ತಿವೆ ಎಂಬುದರಲ್ಲಿ  ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ.

Sathish Acharyaನಮೋ ಟಿವಿ ಎಂಬ ಅಸಹ್ಯಕರ ಬೆಳವಣಿಗೆ :

ನೀಲೋತ್ಪಲ ಬಸುರವರು ತಮ್ಮ ಈ ಎರಡನೇ ಪತ್ರದಲ್ಲಿ ಎತ್ತಿರುವ ಮೊದಲ ಸಂಗತಿಯೆಂದರೆ ಸ್ತಂಭೀಭೂತಗೊಳಿಸುವ ‘ನಮೋ ಟಿವಿ ಕುರಿತ ಮಾಹಿತಿ. ಇದು “ಪ್ರಧಾನ ಮಂತ್ರಿ ಮೋದಿಯ ಕೌತುಕಭರಿತ ಚುನಾವಣಾ ಪ್ರಚಾರದ ನೇರ ಪ್ರಸಾರ ಮಾಡುತ್ತದೆ ಮತ್ತು ಇನ್ನೂ ಹಲವು ಮಂತ್ರಮುಗ್ಧಗೊಳಸುವ ಅಂಶಗಳನ್ನು ಹೊಂದಿರುತ್ತದೆ” ಎಂದು ಅದರ ಜಾಹೀರಾತು ಹೇಳಿದೆ. ಈಗಾಗಲೇ ಒಂದು ವಾರದಿಂದ ಪ್ರಸಾರವಾಗುತ್ತಿರುವ  ಇದು ಪ್ರಸಾರಣ ಲೈಸೆನ್ಸನ್ನು ಹೊಂದಿಲ್ಲ.

ಇನ್ನಷ್ಟು ಆಘಾತಕಾರಿ ಸಂಗತಿಯೆಂದರೆ ಲೈಸೆನ್ಸ್ ಬೇಕೆಂದು ಅದು ಅರ್ಜಿಯನ್ನೂ ಹಾಕಿಲ್ಲ! ದೇಶದಲ್ಲಿನ ಪ್ರಸಾರಣ ಕಾನೂನುಗಳ ಪ್ರಕಾರ ಕಡ್ಡಾಯವಾಗಿರುವ ಭದ್ರತಾ  ಅನುಮತಿಯನ್ನೂ ಪಡೆದಿಲ್ಲವಾದ್ದರಿಂದ ಇದೊಂದು ಕಾನೂನುಬಾಹಿರ ಉದ್ಯಮವೇ ಆಗಿದೆ. ರಾಷ್ಟ್ರೀಯ ಭದ್ರತೆಯ ಬಗ್ಗೆ  ದಿನಬೆಳಗಾದರೆ ಮಾತಾಡುತ್ತ ಇರುವ  ಪಕ್ಷದ ಇಂತಹ ಕೃತ್ಯದಿಂದ ರಾಷ್ಟ್ರೀಯ ಭದ್ರತೆಯ ಮೇಲೆ ಆಗಬಹುದಾದ ಪರಿಣಾಮಗಳು ಮೈನಡುಗಿಸುವಂತವು ಎಂದು ಬಸುರವರು ತಮ್ಮ ಪತ್ರದಲ್ಲಿ ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತಂದಿದ್ದಾರೆ.

ಪ್ರಸಾರಣ ಲೈಸೆನ್ಸಿಗೆ ಅರ್ಜಿಯನ್ನೇ ಹಾಕಿಲ್ಲವಾದ್ದರಿಂದ ನಮೋಟಿವಿಯ ಒಡೆತನದ ಬಗ್ಗೆ ಏನೂ ತಿಳಿದಿಲ್ಲ.  ಈ ವಾಹಿನಿ ತನ್ನ ಪ್ರಸಾರಣಕ್ಕೆ ಬಳಸುವ ಅಪ್‍ ಲಿಂಕಿಂಗ್‍ ಮತ್ತು ಡೌನ್‍ ಲಿಂಕಿಂಗ್ ವ್ಯವಸ್ಥೆ ರಹಸ್ಯಮಯವಾಗಿದೆ. ಮೋದಿ ಸರಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆ ಮಾರ್ಚ್ 31 ರ ವೇಳೆಗೆ ಪರವಾನಿಗೆ ನೀಡಿರುವ ವಾಹಿನಿಗಳ ಪಟ್ಟಿಯಲ್ಲಿ ಇದರ ಹೆಸರು ಇಲ್ಲ. ಆದರೂ ಈ ವಾಹಿನಿ ಪ್ರಸಾರಗೊಳ್ಳುತ್ತಿದೆ, ಮತ್ತು ಎಲ್ಲ ಪ್ರಮುಖ ಡಿಟಿಹೆಚ್‍ಗಳಲ್ಲಿ ಇದು ಲಭ್ಯ ಇದೆ!

ಇದು ಒಂದು ಗಂಭೀರ ಭದ್ರತಾ ಆಪಾಯ ಮಾತ್ರವೇ ಅಲ್ಲದೆ, ಕೇಬಲ್‍ ಟೆಲಿವಿಶನ್‍ ಜಾಲಗಳನ್ನು ಕುರಿತ ಈಗಿರುವ ಕಾನೂನು ಮತ್ತು ನಿಯಮಗಳ ಹಾಗೂ ಜನತಾ ಪ್ರಾತಿನಿಧ್ಯ ಕಾನೂನು, 1951 ರ ಹಲವು ಸೆಕ್ಷನ್‍ ಗಳ ಇಂತಹ ಕಣ್ಣಿಗೆ ರಾಚುವ ಉಲ್ಲಂಘನೆಗಳಾಗಿವೆ. ಭಾರತದ ಚುನಾವಣಾ ಆಯೋಗ ಇಂತಹ ಒಂದು ಅಸಹ್ಯಕರ ಬೆಳವಣಿಗೆಯ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು, ಮತ್ತು ಇಂತಹ ಸನ್ನಿವೇಶಕ್ಕೆ ಹೊಣೆಗಾರರಾದವರನ್ನು ಗುರುತಿಸಬೇಕು ಎಂದು ನೀಲೋತ್ಪಲ ಬಸು ತಮ್ಮ ಪತ್ರದಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಆಗ್ರಹಿಸಿದ್ದಾರೆ.

ವಿಶೇಷವಾಗಿ, ಫ್ರಸಾರವನ್ನು ಚುನಾವಣೆಗಳ ದಿನಾಂಕಗಳನ್ನು ಪ್ರಕಟಿಸಿ ಮಾದರಿ ಆಚಾರ ಸಂಹಿತೆ ಜಾರಿಗೆ ಬಂದ ನಂತರವೇ ಈ ಪ್ರಸಾರವನ್ನು ಆರಂಭಿಸಿರುವುದರಿಂದ ಇದು ಅಗತ್ಯ ಎಂದು ಅವರು ಹೇಳಿದ್ದಾರೆ.

ಚುನಾವಣಾ ಆಯೋಗದ ಕ್ಲೀನ್‍ ಚಿಟ್ ಮತ್ತು  ಹೆಚ್ಚಿದ ಭಂಡತನ:

“ಸಾರ್ವಜನಿಕ ಪ್ರಸಾರಕರಾದ ದೂರದರ್ಶನ ಮತ್ತು ಆಕಾಶವಾಣಿ ದೇಶದ ಪ್ರಧಾನ ಮಂತ್ರಿಯಾಗಿದ್ದರೂ ಚುನಾವಣೆಯಲ್ಲಿ ಆಳುವ ಪಕ್ಷದ ಒಬ್ಬ ಅಭ್ಯರ್ಥಿಯಾಗಿರುವವರಿಗೆ ಅಳತೆ ಮೀರಿ ಪ್ರಚಾರ ನೀಡುತ್ತಿರುವುದು” ನೀಲೋತ್ಪಲ ಬಸು ರವರು ತಮ್ಮ ಪತ್ರದಲ್ಲಿ ಪ್ರಸ್ತಾವಿಸಿರುವ ಇನ್ನೊಂದು ಪ್ರಶ್ನೆ. “ಪ್ರಧಾನ ಮಂತ್ರಿಗಳ ಸಾರ್ವಜನಿಕ ಪ್ರಸಾರ ಭಾಷಣಕ್ಕೆ ಚುನಾವಣಾ ಆಯೋಗ ‘ಕ್ಲೀನ್‍ ಚಿಟ್‍’ ನೀಡಿದ್ದರಿಂದ ಧೈರ್ಯ ತುಂಬಿಕೊಂಡ ಇವು ಅಷ್ಟೇ ಹುಮ್ಮಸ್ಸಿನಿಂದ ಈ ಪ್ರವೃತ್ತಿಯನ್ನು ಮುಂದುವರೆಸಿವೆ ಎಂದು ಹೇಳುವ ಧೈರ್ಯ ತೋರುತ್ತೇವೆ” ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಎಪ್ರಿಲ್‍ 3ರಂದು ಪ್ರಧಾನ ಮಂತ್ರಿಗಳ ಕೊಲ್ಕತಾದಲ್ಲಿನ ಭಾಷಣವನ್ನು ದೂರದರ್ಶನ ನೇರ ಪ್ರಸಾರ ಮಾಡಿತು .ಇಷ್ಟೇ ಅಲ್ಲ, ಖಾಸಗಿ ವಾಹಿನಿಗಳೂ ಅದನ್ನೇ ನೇರವಾಗಿ  ಮರುಪ್ರಸಾರ ಮಾಡಿದವು, ಅದರಲ್ಲಿ ಇದನ್ನು ದೂರದರ್ಶನದಿಂದ ಪಡೆಯಲಾಗಿದೆ ಎಂದು ಎದ್ದು ಕಾಣುವಂತೆ ಪ್ರದರ್ಶಿಸಿವೆ.

ಸಾರ್ವಜನಿಕ ಪ್ರಸಾರ ಸಂಸ್ಥೆಯ ಇಂತಹ ಪಕ್ಷಪಾತಪೂರ್ಣ ವರ್ತನೆ ಮತ್ತೆ-ಮತ್ತೆ ನಡೆಯುತ್ತಿದ್ದರೆ, ಚುನಾವಣಾ ಆಯೋಗ ಮುಕ್ತ ಮತ್ತು ನ್ಯಾಯಯುತ ಚುನಾವಣೆಗೆ ಅಗತ್ಯವಾದ  ಒಂದು ಸಮಾನ ನೆಲೆಯನ್ನು ಒದಗಿಸಬಲ್ಲುದೇ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಸದಸ್ಯರು ಮುಖ್ಯ ಆಯುಕ್ತರನ್ನು ಖಾರವಾಗಿ ಪ್ರಶ್ನಿಸಿದ್ದಾರೆ. “ಈ ಪ್ರವೃತ್ತಿಯನ್ನು ನಿಲ್ಲಿಸಲು ತಕ್ಷಣವೇ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಮಾದರಿ ಆಚಾರ ಸಂಹಿತೆಯ ಇಂತಹ ಎದ್ದು ಕಾಣುವ ಉಲ್ಲಂಘನೆಗಳಿಗೆ ಹೊಣೆಗಾರರಾದ ಅಧಿಕಾರಿಗಳನ್ನು ಗುರುತಿಸಬೇಕು ಎಂದು ನಾವು ಆಗ್ರಹಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

Cortoons P Mohammadಆಯೋಗದ ಸ್ಪಷ್ಟ ನಿರ್ದೇಶನವನ್ನು ಮುರಿದು ಪ್ರಚಾರ:

ನೀಲೋತ್ಪಲ ಬಸುರವರು ತಮ್ಮ ಪತ್ರದಲ್ಲಿ ಎತ್ತಿರುವ ಮೂರನೇ ಪ್ರಶ್ನೆ ಮನರೇಗದ ಅಡಿಯಲ್ಲಿ ಹೆಚ್ಚಿಸಿದ ಕೂಲಿ ದರಗಳ ಸುದ್ದಿಗೆ ಚುನಾವಣಾ ಆಯೋಗದ ನಿರ್ದೇಶನದ ಹೊರತಾಗಿಯೂ ದೂರದರ್ಶನ ಮತ್ತು ಆಕಾಶವಾಣಿ ವ್ಯಾಪಕ ಪ್ರಚಾರ ನೀಡಿರುವುದು. ಈ ಕುರಿತ ಅಸಾಮಾನ್ಯ ಗಜೆಟ್ ಅಧಿಸೂಚನೆಗೆ ಭಾರತದ ಚುನಾವಣಾ ಆಯೋಗ ನಿರ್ದಿಷ್ಟ ಶರತ್ತುಗಳೊಂದಿಗೆ ಅನುಮತಿ ಕೊಟ್ಟಿತ್ತು. ಈ ಕುರಿತು ಯಾವುದೇ ಪ್ರಚಾರವನ್ನು ಇಲೆಕ್ಟ್ರಾನಿಕ್, ಮುದ್ರಣ, ರೇಡಿಯೊ, ಇಂಟರ್ನೆಟ್ ಅಥವ ಬೇರೆ ಯಾವುದೇ ಮಾಧ್ಯಮದಲ್ಲಿ ಯಾವುದೇ ಸ್ವರೂಪದಲ್ಲಿ ನೀಡಲೇ ಬಾರದು ಎಂದು ಚುನಾವಣಾ ಆಯೋಗ ಗ್ರಾಮೀಣ ಅಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡಿತ್ತು ಎಂಬುದನ್ನು ಆಯೋಗಕ್ಕೆ ಬಸುರವರು ತಮ್ಮ ಪತ್ರದಲ್ಲಿ ನೆನಪಿಸಿದ್ದಾರೆ.

ಈ ಇಲಾಖೆ ನಂತರ ಮಾರ್ಚ್‍ 28ರಂದು ಒಂದು ಆದೇಶ ಹೊರಡಿಸಿತು. ದೂರದರ್ಶನ ಮತ್ತು ಆಕಾಶವಾಣಿ ಸುದ್ದಿ ಬುಲೆಟಿನ್‍ಗಳಲ್ಲಿ ಕೂಲಿ ಹೆಚ್ಚಳದ ಸುದ್ದಿಯನ್ನು ಪ್ರಚಾರ ಮಾಡಲಾಯಿತು. ವಾಟ್ಸ್ ಆಪ್‍ ಸಂ ದೇಶಗಳಲ್ಲೂ ಈ ಮಾಹಿತಿಯನ್ನು ಪಸರಿಸಿರುವುದೂ ಗಮನಕ್ಕೆ ಬಂದಿದೆ.

“ಭಾರತದ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸುವುದಕ್ಕಿಂತ ಮುರಿಯುವುದೇ ಹೆಚ್ಚುತ್ತಿದೆ. ಇಂತಹ ಉಲ್ಲಂಘನೆಗಳಿಗೆ ಹೊಣೆಗಾರರಾದವರ  ಮೇಲೆ ಬಲವಾದ ಮತ್ತು ಎಲ್ಲರ ಗಮನಕ್ಕೆ ತರುವ ಕಾರ್ಯಾಚರಣೆಗಳನ್ನು ನಡೆಸಬೇಕು” ಎಂದು ನೀಲೋತ್ಪಲ  ಬಸುರವರು ತಮ್ಮ ಪತ್ರದಲ್ಲಿ ಆಗ್ರಹಿಸುತ್ತ,  ಭಾರತದ ಚುನಾವಣಾ ಆಯೋಗ ಸಂವಿಧಾನ ತನಗೆ ಆದೇಶಿಸಿರುವ ಪಾತ್ರದ ಬಗ್ಗೆ ಜನರಿಗೆ ಮನವರಿಕೆ ಮಾಡಿಸಲು ಈ ಮಹತ್ವದ ಪ್ರಶ್ನೆಗಳ ಮೇಲೆ ಸೂಕ್ತ ಕ್ರಮಗಳನ್ನು ಜರುಗಿಸುವುದು ಅಗತ್ಯವಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *