ಲಡಾಖ್: ಸೋನಮ್ ವಾಂಗ್ ಚುಕ್ ಬಿಡುಗಡೆಗೆ ಸಿಪಿಐ(ಎಂ) ಆಗ್ರಹ

ಲಡಾಖ್‌ ಗೆ ರಾಜ್ಯದ ಸ್ಥಾನಮಾನ ಮತ್ತು ಅದನ್ನು ಸಂವಿಧಾನದ ಆರನೇ ಷೆಡ್ಯೂಲಿನ ಅಡಿಯಲ್ಲಿ ಸೇರಿಸಬೇಕೆಂದು ಒತ್ತಾಯಿಸುವ ಚಳವಳಿಯ ಮುಂಚೂಣಿಯಲ್ಲಿದ್ದ ಸೋನಮ್ ವಾಂಗ್‌ಚುಕ್ ಅವರ  ಬಂಧನವನ್ನು ಸಿಪಿಐ(ಎಂ) ಬಲವಾಗಿ ಖಂಡಿಸಿದೆ.  ವಾಂಗ್‌ಚುಕ್ ಅವರನ್ನು ಕರಾಳ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‍ಎಸ್‍ಎ) ಅಡಿಯಲ್ಲಿ ಬಂಧಿಸಿರುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಸ್ವಭಾವ ಮತ್ತು ಲಡಾಖ್ ಜನತೆಯ ನಿಜವಾದ ಆಕಾಂಕ್ಷೆಗಳ ಬಗ್ಗೆ ಅದರ ತಿರಸ್ಕಾರವನ್ನು ಬಯಲಿಗೆ ತರುತ್ತದೆ ಎಂದು ಅದು ಹೇಳಿದೆ.

ಲಡಾಖ್ ಜನತೆಗೆ ನೀಡಿದ ಭರವಸೆಗಳನ್ನು ಗೌರವಿಸುವ ಬದಲು, ಸರ್ಕಾರವು ಅಲ್ಲಿನ ಪ್ರಜಾಪ್ರಭುತ್ವ ಚಳುವಳಿಯನ್ನು ಹತ್ತಿಕ್ಕಲು ದಮನಕಾರಿ ಕ್ರಮಗಳಲ್ಲಿ ತೊಡಗುವ ದಾರಿ ಆಯ್ದುಕೊಂಡಿದೆ. ಇದು ಲಡಾಖ್ ಜನತೆಯ ಮೂಲಭೂತ ಹಕ್ಕುಗಳು ಮತ್ತು ಪ್ರಜಾಪ್ರಭುತ್ವ ಸ್ವಾತಂತ್ರ್ಯಗಳ ಮೇಲಿನ ಒಂದು ಗಂಭೀರ ದಾಳಿಯಾಗಿದೆ. ಇಂತಹ ಕ್ರಮಗಳು ಲಡಾಖ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಜನರ ಪರಕೀಯತೆ ಭಾವವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಸೋನಮ್ ವಾಂಗ್‌ಚುಕ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು, ಜನರ ಮೇಲೆ ಹೇರಲಾದ ಎಲ್ಲಾ ಪ್ರಕರಣಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳಬೇಕು, ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಹಕ್ಕುಗಳ ಸಂಪೂರ್ಣ ರಕ್ಷಣೆಯನ್ನು, ಚಳವಳಿಯ ನ್ಯಾಯಯುತ ಬೇಡಿಕೆಗಳನ್ನು ತ್ವರಿತವಾಗಿ ಸ್ವೀಕರಿಸಬೇಕು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಲಡಾಖ್ ಅನ್ನು ಆರನೇ ಷೆಡ್ಯೂಲಿನ ಅಡಿಯಲ್ಲಿ ಸೇರಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಸೆಪ್ಟೆಂಬರ್‍ 27ರಂದು ನೀಡಿರುವ ಹೇಳಿಕೆಯಲ್ಲಿ ಒತ್ತಾಯಿಸಿದೆ.

Leave a Reply

Your email address will not be published. Required fields are marked *