ಆರ್‌ಎಸ್‌ಎಸ್ ಸ್ಥಾಪನೆಯ 100ನೇ ವರ್ಷಾಚರಣೆಯ ಸ್ಮರಣಾರ್ಥ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂಚೆ ಚೀಟಿ ಮತ್ತು 100 ರೂಪಾಯಿ ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಿರುವುದು ಭಾರತದ ಸಂವಿಧಾನಕ್ಕೆ ಗಂಭೀರವಾದ ಗಾಯ ಮತ್ತು ಅವಮಾನವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೊ ಹೇಳಿದೆ.
ಆರ್‌ಎಸ್‌ಎಸ್ ಎಂದಿಗೂ ಭಾರತದ ಸಂವಿಧಾನವನ್ನು ಒಪ್ಪಿಕೊಂಡಿಲ್ಲ. ತನ್ನ ಹಿಂದುತ್ವ ರಾಷ್ಟ್ರದ ಪಂಥೀಯ ಪರಿಕಲ್ಪನೆಯ ಸಂಕೇತವಾಗಿ ಆರ್‌ಎಸ್‌ಎಸ್ ಪ್ರಚಾರ ಮಾಡಿರುವ ಹಿಂದೂ ದೇವತೆಯ “ಭಾರತ ಮಾತಾ” ಚಿತ್ರವನ್ನು ಅಧಿಕೃತ ನಾಣ್ಯದಲ್ಲಿ ಮುದ್ರಿಸಿರುವುದು ಅತ್ಯಂತ ಆಕ್ಷೇಪಾರ್ಹವಾಗಿದೆ ಎಂದು ಸಿಪಿಐ(ಎಂ) ಅಸಮಾಧಾನ ವ್ಯಕ್ತಪಡಿಸಿದೆ.
1963ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಸಮವಸ್ತ್ರಧಾರಿ ಆರ್‌ಎಸ್‌ಎಸ್ ಸ್ವಯಂಸೇವಕರು ಭಾಗವಹಿಸಿದ್ದನ್ನು ಅಂಚೆ ಚೀಟಿಯಲ್ಲಿ ಚಿತ್ರಿಸಲಾಗಿದೆ. ಇದು ಇತಿಹಾಸವನ್ನು ಸುಳ್ಳಾಗಿಸುತ್ತದೆ, 1963 ರ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಾಗರಿಕರ ಬೃಹತ್ ಸಮಾವೇಶವಿತ್ತು ಎಂಬುದು ಪುರಾವೆಗಳ ಮೂಲಕ ಸಾಬೀತಾಗಿದೆ. ಆದರೂ, ಭಾರತ-ಚೀನಾ ಯುದ್ಧದ ಸಮಯದಲ್ಲಿ ಆರೆಸ್ಸೆಸ್ ನ ದೇಶಭಕ್ತಿಯ ಮನ್ನಣೆಯಾಗಿ ನೆಹರೂ ಅವರು 1963ರ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಲು ಆರೆಸ್ಸೆಸ್ ಅನ್ನು ಆಹ್ವಾನಿಸಿದರು ಎಂಬ ಸುಳ್ಳನ್ನು ಈ ಅಂಚೆ ಚೀಟಿಯ ಚಿತ್ರವು ಆಧರಿಸಿದೆ. ಅಂದಿನ ಮೆರವಣಿಗೆಯಲ್ಲಿ ಸಮವಸ್ತ್ರ ಧರಿಸಿದ ಆರ್‌ಎಸ್‌ಎಸ್ ಸ್ವಯಂಸೇವಕರ ಉಪಸ್ಥಿತಿಯೇನಾದರೂ ಇದ್ದಿದ್ದರೆ, ಅದು ಆಕಷ್ಮಿಕವಷ್ಟೆ, ಆ ಕುರಿತು ವರದಿಯೇನೂ ಆಗಿಲ್ಲ ಎಂದು ಸಿಪಿಐ(ಎಂ) ಹೇಳಿದೆ.
ಸ್ವಾತಂತ್ರ್ಯ ಹೋರಾಟದಿಂದ ಆರೆಸ್ಸೆಸ್ ಸಂಪೂರ್ಣವಾಗಿ ದೂರವಿದ್ದುದು ಮಾತ್ರವಲ್ಲದೆ, ಬ್ರಿಟಿಷರ ಒಡೆದು ಆಳುವ ತಂತ್ರವನ್ನು ವಾಸ್ತವವಾಗಿ ಬಲಪಡಿಸಿತ್ತು. ಈ ರೀತಿ ಮಾಡುವ ಮೂಲಕ, ವಸಾಹತುಶಾಹಿ ಆಳ್ವಿಕೆಯ ವಿರುದ್ಧದ ಹೋರಾಟದ ನಿರ್ಣಾಯಕ ಅಂಶವಾಗಿದ್ದ ಭಾರತದ ಜನರ ಐಕ್ಯತೆಯನ್ನು ದುರ್ಬಲಗೊಳಿಸಲು ಆರೆಸ್ಸೆಸ್ ಪ್ರಯತ್ನಿಸಿತು. ಇಂದಿನ ಸಂಪೂರ್ಣ ಕಸರತ್ತು ಆರ್‌ಎಸ್‌ಎಸ್ ನ ಇಂತಹ ನಾಚಿಕೆಗೇಡಿನ ಪಾತ್ರವನ್ನು ಮರೆಮಾಚುವ ಉದ್ದೇಶವನ್ನು ಹೊಂದಿದೆ.
ಸ್ವತಂತ್ರ ಭಾರತದ ಇತಿಹಾಸವು ಅತ್ಯಂತ ಭೀಕರವಾದ ಕೋಮು ಹಿಂಸಾಚಾರವನ್ನು ಕಂಡಿದೆ. ಇಂತಹ ಕೋಮು ಹಿಂಸಾಚಾರದಲ್ಲಿ ಆರ್‌ಎಸ್‌ಎಸ್ ಪಾತ್ರ ಇರುವುದನ್ನು ಅಧಿಕೃತ ತನಿಖಾ ಆಯೋಗಗಳ ಹಲವಾರು ವರದಿಗಳಲ್ಲಿ ವಿವರಿಸಲಾಗಿದೆ. ಇಂದು ಆರೆಸ್ಸೆಸ್ ಮತ್ತು ಅದರ ಪರಿವಾರವು ಮನುವಾದಿ ಸಿದ್ಧಾಂತಗಳ ಪ್ರಚಾರದ ಮೂಲಕ ಅಲ್ಪಸಂಖ್ಯಾತ ಸಮುದಾಯಗಳನ್ನು ಮತ್ತು ಸಮಾಜದ ಅಂಚಿನಲ್ಲಿರುವ ವರ್ಗಗಳನ್ನು ಗುರಿಯಾಗಿಸಿಕೊಂಡು ಮುಂದುವರಿಯುತ್ತಿದೆ. ಇದು ಆರೆಸ್ಸೆಸ್ ನ ಇತಿಹಾಸದ ವಾಸ್ತವವಾಗಿದೆ. ಪ್ರಧಾನಿಯವರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಆರೆಸ್ಸೆಸ್ ನ ನೈಜ ಇತಿಹಾಸವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ಆ ಮೂಲಕ ತಾವು ಹೊಂದಿದ್ದ ಸಾಂವಿಧಾನಿಕ ಸ್ಥಾನದ ಘನತೆಯನ್ನು ಕುಗ್ಗಿಸಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೊ ವಿಷಾದ ವ್ಯಕ್ತಪಡಿಸಿದೆ.
