ಶಿಕ್ಷಣ ಸಂಸ್ಥೆಗಳು, ಸರಕಾರಿ ಸ್ಥಳಗಳಲ್ಲಿ ಆರ್.ಎಸ್.ಎಸ್. ಚಟುವಟಿಕೆ ನಿಯಂತ್ರಿಸುವ ಸರಕಾರದ ಪ್ರಸ್ತಾಪಕ್ಕೆ ಸಿಪಿಐ(ಎಂ) ಬೆಂಬಲ

ಶಿಕ್ಷಣ ಸಂಸ್ಥೆಗಳು, ಸರಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆರ್.ಎಸ್.ಎಸ್. ನಡೆಸುವ ಚಟುವಟಿಕೆಗಳನ್ನು ನಿಷೇಧಿಸುವ ಪ್ರಸ್ತಾಪವನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬೆಂಬಲಿಸಿದೆ. ಅದೇ ವೇಳೆಗೆ ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳನ್ನು ಸೈದ್ಧಾಂತಿಕವಾಗಿ ಎದುರಿಸಲು ಸಮಾಜ ಹಾಗೂ ಸರಕಾರ ಸನ್ನದ್ಧವಾಗಬೇಕೆ ಹೊರತು, ಸಂಘಟನೆಗಳ ಮೇಲೆ ನಿಷೇಧ ಹೇರುವುದು ಪರಿಹಾರವಲ್ಲ ಎಂದೂ ಅಭಿಪ್ರಾಯಪಟ್ಟಿದೆ.

ಬಹುತ್ವವೇ ಜೀವಾಳವಾಗಿರುವ ಭಾರತವನ್ನು ಹಿಂದುತ್ವವಾದದ ಮೂಲಕ ಏಕ ಧರ್ಮವನ್ನು ಹೇರುವ ಕನಸಿನಲ್ಲಿ ಮುನ್ನಡೆಯುತ್ತಿರುವ ಆರ್‌ಎಸ್‌ಎಸ್ ಗೆ ಈಗ ಶತಮಾನ. ಈ ಹೊತ್ತಿನಲ್ಲಿ ಅದು ತಾನು ಮತ್ತು ತನ್ನ ಅಂಗಸಂಸ್ಥೆಗಳ ಮೂಲಕ ನಡೆಸಿಕೊಂಡು ಬಂದಿರುವ ಚಟುವಟಿಕೆಗಳನ್ನು ಅವಲೋಕಿಸಿದರೆ, ಜನರನ್ನು ಭಾವನಾತ್ಮಕವಾಗಿ ಸೆಳೆದು ಧರ್ಮಾಧಾರಿತ ವಿಭಜನೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಎಳೆ ಮಕ್ಕಳನ್ನು ಕೇಂದ್ರೀಕರಿಸಿಕೊಂಡು ಅವರು ನಡೆಸುವ ಚಟುವಟಿಕೆಗಳು ಭವಿಷ್ಯದ ಭಾರತವನ್ನು ಕೋಮುದ್ವೇಷದ ಜ್ವಾಲಾಮುಖಿಯಾಗಿ ಮಾರ್ಪಡಿಸುವುದರಲ್ಲಿ ಸಂಶಯವಿಲ್ಲ. ಜನರ ಮನಸ್ಸಿನಲ್ಲಿ ಕೋಮು ವಿಷಬೀಜ ಬಿತ್ತುವ ಉದ್ದೇಶದಿಂದಲೇ ಆಡಳಿತದ ಎಲ್ಲ ವಿಭಾಗಗಳಲ್ಲಿ ತನ್ನ ಸಿದ್ದಾಂತವನ್ನು ಅಂತರಂಗದಲ್ಲಿ ಬೆಂಬಲಿಸುವವರನ್ನು ತೂರಿಸಿರುವ ಸಂಘ, ನೆಲದ ಕಾನೂನನ್ನು ಕಾಲಕಸದಂತೆ ಪರಿಗಣಿಸುತ್ತಿದೆ.

ತಾನೊಂದು ಸಾಂಸ್ಕೃತಿಕ ಸಂಘಟನೆ ಎಂದು ಕರೆದುಕೊಳ್ಳುವ, ಆದರೆ ದೇಶದ ರಾಜಕಾರಣವನ್ನು ತನಗೆ ಬೇಕಾದ ಹಾಗೆ ನಿಯಂತ್ರಿಸುವ ಮತ್ತು ದ್ವೇಷ ರಾಜಕಾರಣವನ್ನು ಮುಂದೊತ್ತುತ್ತಿರುವ ಸಂಗತಿ ಜಗಜ್ಜಾಹಿರವಾಗಿದೆ. ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ, ಮೆರವಣಿಗೆಗಳನ್ನು ನಡೆಸಲು ನಿರ್ಬಂಧವಿದೆ ಎಂದು ಹೇಳಿ ತಡೆ ಒಡ್ಡುವ, ಪ್ರಕರಣ ದಾಖಲಿಸುವ ನಗರ ಪೊಲೀಸ್ ಇಲಾಖೆ ಆರ್‌ಎಸ್‌ಎಸ್‌ ಗೆ ಪಥಸಂಚಲನಕ್ಕೆ ಅನುಮತಿ ನೀಡಿ, ಸಂಚಾರ ನಿರ್ಬಂಧ ಹೇರಿ, ಪೊಲೀಸ್ ಬಂದೋಬಸ್ತಿನಲ್ಲಿ ನಡೆಸಿಕೊಟ್ಟ ಘಟನೆ ನಡೆದಿದೆ.

ರಾಜ್ಯದಲ್ಲಿ ಸರಕಾರ ಇವರದು, ಅಧಿಕಾರ ಅವರದು ಎಂಬಂತಹ ಸ್ಥಿತಿ ಇದೆ. ಈ ಮೊದಲೂ ಪೆಹಲ್ಗಾಮ್ ದುರಂತದ ವಿರುದ್ಧ ಇತರ ಸಂಘಟನೆಗಳಿಗೆ ಖಂಡನಾ ಸಭೆ ಶಾಂತಿ ಸಭೆ ನಡೆಸಲು ಅವಕಾಶ ನಿರಾಕರಿಸಿ, ಸಂಘದ ಸದಸ್ಯರೂ ಇರುವ ಭಾರತೀಯ ಜನತಾ ಪಕ್ಷದ ನಾಯಕರುಗಳೇ ಭಾಗವಹಿಸಿ ಪ್ರಚೋದನಕಾರಿ ಹೇಳಿಕೆಗಳನ್ನು ಮಾಡಿದ ಘಟನೆಯೂ ನಡೆದಿದೆ ಎಂದಿರುವ ಸಿಪಿಐ(ಎಂ), ಇವೆಲ್ಲವನ್ನೂ ಸರಕಾರ ಮತ್ತು ಸಮಾಜ ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರತಿಪಾದಿಸುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸಲು ಕಂಕಣಬದ್ಧವಾಗಬೇಕು. ಸಹಬಾಳ್ವೆಯ ಸಾಮರಸ್ಯದ ಮೌಲ್ಯಗಳನ್ನು ಸ್ಥಿರವಾಗಿಸಲು ಜನರನ್ನು ಅಣಿನೆರೆಸಬೇಕೆಂದು ಕರೆ ನೀಡಿದೆ.

Leave a Reply

Your email address will not be published. Required fields are marked *