ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳು ಕಳವಳಕಾರಿ: ಸಿಪಿಐ(ಎಂ) ಪೊಲಿಟ್ ಬ್ಯುರೊ

ಮಧ್ಯಂತರ ಸರಕಾರ ಕೋಮುವಾದಿಗಳ ಮೇಲೆ ಲಗಾಮು ಹಾಕಬೇಕು

ಬಾಂಗ್ಲಾದೇಶದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ತೀವ್ರ ಕಳವಳ ವ್ಯಕ್ತಪಡಿಸಿದೆ. ಮಾಧ್ಯಮ ಸಂಸ್ಥೆಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ವಿರುದ್ಧ ಮತ್ತು ಜನರ ಹಕ್ಕುಗಳನ್ನು ರಕ್ಷಿಸಲು ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅದು ಒತ್ತಾಯಿಸಿದೆ. ಎರಡು ಅತ್ಯಂತ ಗೌರವಾನ್ವಿತ ಸಾಂಸ್ಕೃತಿಕ ಸಂಸ್ಥೆಗಳಾದ ‘ಛಾಯಾನೋಟ್’ ಮತ್ತು ‘ಉದಿಚಿ’ಗಳು ಭೀಕರ ದಾಳಿಗೆ ಒಳಗಾಗಿವೆ.

ಧಾರ್ಮಿಕ ಮೂಲಭೂತವಾದಿ ಶಕ್ತಿಗಳು ಸಮಾಜವನ್ನು ಕೋಮು ಧ್ರುವೀಕರಣಗೊಳಿಸುವ ಮೂಲಕ ಮತ್ತು ಅಲ್ಪಸಂಖ್ಯಾತರು ಮತ್ತು ತಮಗೆ ಅನುಕೂಲಕರವಲ್ಲದ ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ಮಾಡುವ ಮೂಲಕ ಬಾಂಗ್ಲಾದೇಶದಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ. ಧಾರ್ಮಿಕ ಮೂಲಭೂತವಾದಿ ಶಕ್ತಿಗಳ ಬೆಳವಣಿಗೆ ಬಾಂಗ್ಲಾದೇಶದ ಮೇಲೆ ಮಾತ್ರವಲ್ಲದೆ ಇಡೀ ಪ್ರದೇಶದ ಶಕ್ತಿಗುಂದಿಸುವ ಪರಿಣಾಮವನ್ನು ಬೀರುತ್ತದೆ. ಭಾರತ ಮತ್ತು ಬಾಂಗ್ಲಾದೇಶದ ಗಡಿಯ ಎರಡೂ ಬದಿಗಳಲ್ಲಿರುವ ಕೋಮುವಾದಿ ಶಕ್ತಿಗಳು ಪರಸ್ಪರ ಪೋಷಿಸುವ ಮೂಲಕ ದ್ವೇಷವನ್ನು ಮತ್ತಷ್ಟು ಪ್ರಚೋದಿಸಲು ಪರಿಸ್ಥಿತಿಯನ್ನು ಬಳಸಿಕೊಳ್ಳಲು ಪ್ರಯತ್ನಿಸಬಹುದು. ಸಾಮಾಜಿಕ ಸಾಮರಸ್ಯ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

ಇಂತಹ ಪರೀಕ್ಷಾ ಸಮಯಗಳಲ್ಲಿ ಬಾಂಗ್ಲಾದೇಶದ ಜನರು ಒಗ್ಗಟ್ಟಿನಿಂದ ಇರುತ್ತಾರೆ ಮತ್ತು 1971 ರ ವಿಮೋಚನಾ ಹೋರಾಟದ ಮೌಲ್ಯಗಳನ್ನು ಎತ್ತಿಹಿಡಿಯುತ್ತಾರೆ ಎಂದು ಸಿಪಿಐ(ಎಂ) ವಿಶ್ವಾಸ ಹೊಂದಿದೆ. ಕೋಮುವಾದಿ ಶಕ್ತಿಗಳ ಮೇಲೆ ಲಗಾಮು ಹಾಕಲು ಮತ್ತು ಹಿಂಸಾಚಾರದ ಅಪರಾಧಿಗಳನ್ನು ನ್ಯಾಯದ ಕಟಕಟೆಗೆ ತರುವುದನ್ನು ಖಚಿತಪಡಿಸಲು ಮಧ್ಯಂತರ ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು, ಜನರು ತಮ್ಮ ಇಚ್ಛೆಯನ್ನು ಭಯವಿಲ್ಲದೆ ವ್ಯಕ್ತಪಡಿಸಲು ಅನುವು ಮಾಡಿಕೊಡಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *