“ಇಂಡಿಯ ಕೇರ್ಸ್” ಎಂದು ಹೆಸರಿಸಬೇಕಾಗಿತ್ತಲ್ಲವೇ ?

‘ಪಿ.ಎಂ.ಎನ್‍.ಆರ್.ಎಫ್.’ ನ್ನು ಬದಿಗೊತ್ತಿ ಹೊಸದೊಂದು ನಿಧಿ ರಚನೆ ಅನಗತ್ಯ “ಇಂಡಿಯ ಕೇರ್ಸ್” ಎಂದು ಹೆಸರಿಸಬೇಕಾಗಿತ್ತಲ್ಲವೇ?-ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಕೋವಿಡ್-19 ಮಹಾಮಾರಿಯನ್ನು ಎದುರಿಸಲು “ಪಿಎಂ ಕೇರ್ಸ್’ ಎಂಬ ಬೇರೊಂದು ನಿಧಿಯನ್ನು ರಚಿಸುವ ಅಗತ್ಯವಿರಲಿಲ್ಲ. ಇದರಲ್ಲಿ ಲೆಕ್ಕಪತ್ರಗಳನ್ನು  ಇಡುವ, ಅವುಗಳ ಪರಿಶೋಧನೆಯ, ಅಥವ  ನಾಲ್ಕು ಟ್ರಸ್ಟಿಗಳ ಉತ್ತರದಾಯಿತ್ವದ ಬಗ್ಗೆ ಏನೂ ಪ್ರಸ್ತಾಪವಿಲ್ಲ. ಸಂಕ್ಷಿಪ್ತವಾಗಿ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಎಂಬುದಿಲ್ಲ ಎಂದು  ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಈ ಮೊದಲು  ‘ಭಾರತ್ ಕೇ ವೀರ್’ ಎಂಬ ನಿಧಿಯನ್ನು ರಚಿಸಲಾಗಿದ್ದು,  ಅದನ್ನು ಹೇಗೆ ಬಳಸಲಾಗಿದೆ ಎಂಬ ಬಗ್ಗೆ ಉತ್ತರದಾಯಿತ್ವ ಇದುವರೆಗೆ ಕಂಡು ಬಂದಿಲ್ಲ.  ಈ ಹಿನ್ನೆಲೆಯಲ್ಲಿ ‘ಪಿಎಂ ಕೇರ್ಸ್’ ಬಹಳಷ್ಟು ಕಳವಳಕಾರೀ ಪ್ರಶ್ನೆಗಳನ್ನು ಎತ್ತುತ್ತದೆ ಎಂದಿರುವ ಪೊಲಿಟ್‍ಬ್ಯುರೊ  ಈ ಹೊಸ ನಿಧಿಯಲ್ಲಿ ಸಂಗ್ರಹವಾದ ಮೊತ್ತಗಳನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾಯಿಸಬೇಕು, ಮತ್ತು ಅದರ ಮೂಲಕ ರಾಜ್ಯಸರಕಾರಗಳಿಗೆ ಈ ಮಹಾಮಾರಿಯ ಸವಾಲುಗಳನ್ನು ಎದುರಿಸಲು ಮತ್ತು ಜನಗಳ ಜೀವಗಳನ್ನು ಉಳಿಸಲು ಸಿಗುವಂತಾಗಬೇಕು ಎಂದು ಆಗ್ರಹಿಸಿದೆ.

PM-CARES‘ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ’ ( ಪಿ.ಎಂ.ಎನ್‍.ಆರ್.ಎಫ್.) 1948ರಿಂದ  ಅಸ್ತಿತ್ವದಲ್ಲಿ ಇದೆ. ಇದರಲ್ಲಿ ವೆಚ್ಚಮಾಡದೇ ಉಳಿದಿರುವ 3800 ಕೋಟಿ ರೂ. ಇದೆ ಎಂದು ವರದಿಯಾಗಿದೆ. ಈ ನಿಧಿಯ ಲೆಕ್ಕಪತ್ರಗಳು ಪಾರದರ್ಶಕವಾಗಿವೆ, ಸಿ,ಎ,ಜಿ, ಇದರ ಪರಿಶೋಧನೆ ನಡೆಸುತ್ತದೆ; ಮತ್ತು ದಾನಿಗಳಿಗ ಸ್ವಯಂ-ಉಂಟಾಗುವ ರಸೀತಿಗಳನ್ನು ಕೊಡಲಾಗುತ್ತದೆ. ಹೀಗಿರುವಾಗ ಹೊಸದೊಂದು ನಿಧಿಯನ್ನು ಏಕೆ ಸೃಷ್ಟಿಸಲಾಗಿದೆ ಎಂಬ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಈ ಹೊಸ ನಿಧಿಗೆ ಪ್ರಧಾನ ಮಂತ್ರಿಗಳು ಮತ್ತು ಮೂವರು ಇತರ ಮಂತ್ರಿಗಳು ಟ್ರಸ್ಟಿಗಳಾಗಿದ್ದಾರೆ, ಯಾವುದ ಪ್ರತಿಪಕ್ಷದ ಅಥವ ನಾಗರಿಕ ಸಮಾಜದ ಮುಖಂಡರುಗಳನ್ನು ಸದಸ್ಯರಾಗಿ ಮಾಡಿಲ್ಲ. ವಂತಿಗೆ ಪುಟವನ್ನು ಪ್ರಧಾನ ಮಂತ್ರಿಗಳ ಅಧಿಕೃತ ವೆಬ್‍ಪುಟದಲ್ಲಿ ಇಡಲಾಗಿದೆ. ಪ್ರಧಾನ ಮಂತ್ರಿಗಳು ಬಹಿರಂಗವಾಗಿಯೇ ಸಾಮಾಜಿಕ ಮಾಧ್ಯಮಗಳ ಮೂಲಕ ದೇಣಿಗೆಗಳಿಗೆ ಮನವಿ ಮಾಡಿದ್ದಾರೆ.

ಕಾರ್ಪೊರೇಟ್ ‍ಜಗತ್ತಿನಿಂದ, ಪ್ರಸಿದ್ಧ ವ್ಯಕ್ತಿಗಳು ಮತ್ತು ಸಾರ್ವಜನಿಕ  ಉದ್ದಿಮೆಗಳು ಮುಂತಾದವುಗಳಿಂದ ಗಮನಾರ್ಹ ಪ್ರಮಾಣದಲ್ಲಿ ದೇಣಿಗೆಗಳ ಬಂದು ಸುರಿಯುತ್ತಿವೆ. ಸರಕಾರೀ ನೌಕರರು ಮತ್ತು ವೃತ್ತಿಪರರು, ಸಶಸ್ತ್ರ ಮತ್ತು ಅರೆ-ಮಿಲಿಟರಿ ಪಡೆಗಳಿಂದ ಒಂದು ದಿನದ ವೇತನವನ್ನು  ನಿಧಿಗೆ ಮುರಿದುಕೊಳ್ಳಲಾಗುತ್ತಿದೆ ಎಂಬ ವರದಿಗಳಿವೆ. ಅಲ್ಲದೆ ಕಾರ್ಪೊರೇಟ್‍ ಗಳು ಇದಕ್ಕೆ ದೇಣಿಗೆ ನೀಡಿದರೆ ಸಾಕು, ಅದನ್ನೇ ಅವರ ಸಿ.ಎಸ್.ಆರ್.(ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ಬಾಧ್ಯತೆಯನ್ನು ಈಡೇರಿಸಿದಂತೆ ಎಂದು ಪರಿಗಣಿಸಲಾಗುವುದಂತೆ. ಲೆಕ್ಕಪತ್ರಗಳನ್ನು  ಇಡುವ, ಅವುಗಳ ಪರಿಶೋಧನೆಯ, ಅಥವ  ನಾಲ್ಕು ಟ್ರಸ್ಟಿಗಳ ಉತ್ತರದಾಯಿತ್ವದ ಬಗ್ಗೆ ಏನೂ ಪ್ರಸ್ತಾಪವಿಲ್ಲ. ಸಂಕ್ಷಿಪ್ತವಾಗಿ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಎಂಬುದಿಲ್ಲ.

ಫುಲ್ವಾಮ ಭಯೋತ್ಪಾದಕ ದಾಳಿಯ ನಂತರ ಇಂತಹುದೇ ‘ಭಾರತ್ ಕೇ ವೀರ್’ ಎಂಬ ನಿಧಿಯನ್ನು ಈ ದುರಂತಕ್ಕೆ ಬಲಿಯಾದವರ ನೆರವಿಗೆಂದು ರಚಿಸಲಾಯಿತು. ಆದರೆ ಈ ಬಗ್ಗೆ ಯಾವುದೇ ಪಾರದರ್ಶಕತೆ, ಅಥವ ಈ ನಿಧಿಯನ್ನು ಹೇಗೆ ಬಳಸಲಾಗಿದೆ ಎಂಬ ಬಗ್ಗೆ ಉತ್ತರದಾಯಿತ್ವ ಕಂಡು ಬಂದಿಲ್ಲ.  ಈ ಹಿನ್ನೆಲೆಯಲ್ಲಿ ‘ಪಿಎಂ ಕೇರ್ಸ್’ ಬಹಳಷ್ಟು ಕಳವಳಕಾರೀ ಪ್ರಶ್ನೆಗಳನ್ನು ಎತ್ತುತ್ತದೆ.

ಅಲ್ಲದೆ, ಆರೋಗ್ಯ ಸಮವರ್ತಿ ಪಟ್ಟಿಯಲ್ಲಿರುವ ವಿಷಯ, ರಾಜ್ಯಸರಕಾರಗಳಿಗೆ ಇದರಲ್ಲಿ ಒಂದು ಪ್ರಮುಖ ಪಾತ್ರವಿದೆ. ಈಗಾಗಲೇ ರಾಜ್ಯಸರಕಾರಗಳು ತೀವ್ರ ಒತ್ತಡಗಳಿಗೆ ಒಳಗಾಗಿವೆ, ಜಿ.ಎಸ್‍.ಟಿ. ಪಾವತಿ ಬಾಕಿಯೂ ಸೇರಿದಂತೆ ಅವುಗಳ ಸಂಪನ್ಮೂಲಗಳು ಕುಗ್ಗಿವೆ. ಇಂತಹ ಸನ್ನಿವೇಶದಲ್ಲಿ, ನಮ್ಮ ಸಂವಿಧಾನದ ಒಕ್ಕೂಟ ನೀತಿಗಳ ಪ್ರಕಾರ,  ಹೊಸ ನಿಧಿಯಲ್ಲಿ ಸಂಗ್ರಹವಾದ ಮೊತ್ತಗಳನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾಯಿಸಬೇಕು, ಮತ್ತು ಅದರ ಮೂಲಕ ರಾಜ್ಯಸರಕಾರಗಳಿಗೆ ಈ ಮಹಾಮಾರಿಯ ಸವಾಲುಗಳನ್ನು ಎದುರಿಸಲು ಮತ್ತು ಜನಗಳ ಜೀವಗಳನ್ನು ಉಳಿಸಲು ಸಿಗುವಂತಾಗಬೇಕು ಎಂದು ಪೊಲಿಟ್‍ ಬ್ಯುರೊ ಹೇಳಿದೆ.

ಈ ಹೊಸ ನಿಧಿಯನ್ನು ರಚಿಸಿರುವುದರ ಹಿಂದಿರುವ  ಉದ್ದೇಶವಂತೂ ಸಂದೇಹಾಸ್ಪದವಾಗಿಯೇ ಉಳಿದಿದೆ. ಅದೇನೇ ಇರಲಿ, ಇದಕ್ಕೆ ’ಇಂಡಿಯ ಕೇರ್ಸ್’ ಎಂದ ಹೆಸರಿಸಬೇಕಾಗಿತ್ತೇ ವಿನಹ ’ಪಿಎಂ ಕೇರ್ಸ್’  ಎಂದಲ್ಲ  ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಅಭಿಪ್ರಾಯ ಪಟ್ಟಿದೆ.

Leave a Reply

Your email address will not be published. Required fields are marked *