ಕೋವಿಡ್‍: ಮೋದಿ ಸರಕಾರ ಮಾಡುತ್ತಿರುವುದೇನು, ಮಾಡಬೇಕಾದುದೇನು?

ಭಾರತದಲ್ಲಿ ಕೋವಿಡ್‍ ಮಹಾಮಾರಿಯನ್ನು ಎದುರಿಸಲು ಮೋದಿ ಸರಕಾರ ಮಾಡುತ್ತಿರುವುದೇನು, ಮಾಡಬೇಕಾದುದೇನು?

ಭಾರತದಲ್ಲಿ ಕೊರೊನ ವೈರಸ್‍ ಬಿಕ್ಕಟ್ಟು ಆಳಗೊಳ್ಳುತ್ತಿದೆ. ಆದರೆ ಮೋದಿ ಸರಕಾರ ಇದನ್ನು  ಪರಿಣಾಮಕಾರಿಯಾಗಿ ಎದುರಿಸುತ್ತಿದೆಯೇ ಎಂಬ ಬಗ್ಗೆ  ಹಲವಾರು ಪ್ರಶ್ನೆಗಳು ಏಳುತ್ತಿವೆ. ಈ ಕುರಿತಂತೆ  ಸಮಗ್ರವಾಗಿ ವಿಶ್ಲೇಷಿಸಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿಯವರು  ಏಳು ಪ್ರಶ್ನೆಗಳನ್ನು ಎತ್ತಿದ್ದಾರೆ.

yechury on covid fight2ಮೊದಲನೆಯದಾಗಿ, ಈ ಕುರಿತ ಮೂಲ ಮಾಹಿತಿಗಳನ್ನು ತಿಳಿಸದೆ ಗುಟ್ಟು ಮಾಡಲಾಗುತ್ತಿದೆ ಎಂದು ಆರೋಗ್ಯ ವರದಿಗಾರರು ಹೇಳುತ್ತಿದ್ದಾರೆ. ಅವರೆಲ್ಲರೂ  ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ  ಕೋವಿಡ್-19 ವೈರಸ್‍ ಬಗ್ಗೆ ನಮಗೆ ಸರಕಾರದಿಂದ ಸ್ಪಷ್ಟ ಮತ್ತು ಪ್ರಾಮಾಣಿಕ ಮಾಹಿತಿ ಬೇಕು ಎಂದು ಯೆಚುರಿ ಆಗ್ರಹಿಸಿದ್ದಾರೆ. ನೈಜ ಪ್ರಶ್ನೆಗಳನ್ನು ಬೇರೆಡೆಗೆ ತಿರುಗಿಸುವುದು ಮತ್ತು ಅದಕ್ಕೆ ಅಡ್ಡಿ ಪಡಿಸುವುದೆಂದರೆ ಲಕ್ಷಾಂತರ ಭಾರತೀಯ ಜೀವಗಳೊಂದಿಗೆ ಆಟವಾಡಿದಂತೆಯೇ. ಆರೋಗ್ಯ ಮಂತ್ರಿಗಳು ಮತ್ತು ಗೃಹಮಂತ್ರಿಗಳು ಏಕೆ ಪ್ರತಿದಿನ ಸಾಯಂಕಾಲದ ಪತ್ರಿಕಾ ಮಾಹಿತಿಯ ನೇತೃತ್ವ ವಹಿಸುತ್ತಿಲ್ಲ ಎಂದು ಯೆಚುರಿ ಪ್ರಶ್ನಿಸಿದ್ದಾರೆ.

ಎರಡನೆಯದಾಗಿ, ಸೋಂಕು ಹರಡಿಕೆಯ ವ್ಯಾಪಕವಾದ ತಪಾಸಣೆ ಮಾಡಬೇಕಾಗಿದೆ. ಇದುವರೆಗೆ 38,442 ತಪಾಸಣೆಗಳನ್ನು ಮಾತ್ರ ಮಾಡಲಾಗಿದೆ. ಇದು ನಮ್ಮ ಜಸನಸಂಖ್ಯೆಯ ಕೇವಲ 0.032ಶೇ. ಬ್ರಿಟನ್ನಿನಲ್ಲಿ 1.92 ಶೇ. ಮತ್ತು ಅಮೆರಿಕಾದಲ್ಲಿ 2.6ಶೇ. ತಪಾಸಣೆ ಮಾಡಲಾಗಿದೆ. ಭಾರತೀಯ ವೈಧ್ಯಕೀಯ ಸಂಶೋಧನಾ ಮಂಡಳಿ ಕೇವಲ ಅಮೆರಿಕ ಮತ್ತು ಯುರೋಪಿಯನ್  ಮಾದರಿ ತಪಾಸಣಾ ಕಿಟ್‍ಗಳಿಗೆ ಮಾತ್ರ ಅನುಮತಿ ನೀಡಿದ್ದು, ಉಳಿದ  ಕಿಟ್‍ಗಳಿಗೆ ಮಂಜೂರಾತಿ ನೀಡುವಲ್ಲಿ ಬಹಳ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ. ತಪಾಸಣೆಯನ್ನು ಸೀಮಿತಗೊಳಿಸುವ ಇಂತಹ ಕ್ರಮಗಳು ಸೋಂಕು ಎಷ್ಟು ಹರಡಿದೆ ಎಂದು ಅಂದಾಜು ಮಾಡುವಲ್ಲಾಗಲೀ, ಅಥವ ಅದರ ಹರಡಿಕೆಯನ್ನು ತಡೆಯುವ ಗಟ್ಟಿ ಕ್ರಮ ಕೈಗೊಳ್ಳುವಾಗಲಾಗಲೀ ಯಾವುದೇ ರೀತಿಯಲ್ಲಿ ಸಹಾಯ ಮಾಡುವುದಿಲ್ಲ.

ಮೂರು, ಡಬ್ಲ್ಯು.ಹೆಚ್.ಒ. (ವಿಶ್ವ ಆರೋಗ್ಯ ಸಂಘಟನೆಯ) ಎಚ್ಚರಿಕೆಗಳಂತೆ ಆರೋಗ್ಯ ಪಾಲನೆ ಒದಗಿಸುವವರಿಗೆ  ರಕ್ಷಣಾತ್ಮಕ ಉಡುಗೆಗಳು ಮತ್ತು ಮುಖಗವಸುಗಳನ್ನು ಒದಗಿಸಬೇಕು. ಆದರೆ  ಇವನ್ನು ಖರೀದಿಸುವಲ್ಲಿ ಅನಗತ್ಯ ವಿಳಂಬಗಳಾಗುತ್ತಿವೆ ಎಂದು ದೇಶದ ಹಲವೆಡೆಗಳಿಂದ ವರದಿಗಳು ಬಂದಿವೆ. ಈ ವಿಳಂಬಕ್ಕೆ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕಾಗಿದೆ. ಈ ವಿಳಂಬಕ್ಕೆ ಹೊಣೆಗಾರರು  ಮತ್ತು  ಅತ್ಯಂತ ಹೆಚ್ಚು ರಕ್ಷಣೆಯ ಅಗತ್ಯವಾಗಿರುವ ಜನಗಳ ಆರೋಗ್ಯದೊಂದಿಗೆ ಆಟವಾಡುತ್ತಿರುವವರು ಯಾರು ಎಂದು ಯೆಚುರಿ ಪ್ರಶ್ನಿಸಿದ್ದಾರೆ.

ನಾಲ್ಕು, ಮೋದಿ “ಸಹಕಾರೀ ಒಕ್ಕೂಟ ತತ್ವ’ ದ ಮಾತಾಡುತ್ತ ಅಧಿಕಾರಕ್ಕೆ ಬಂದರು. ಅವರು ರಾಜ್ಯ ಸರಕಾರಗಳಿಗೆ ಕಿವಿಗೊಡಬೇಕು, ಅವುಗಳಿಗೆ  ಅಗತ್ಯವಾದ ಎಲ್ಲ ಬೆಂಬಲವನ್ನು ಒದಗಿಸಬೇಕು, ಬದಲಾಗಿ, ಅಧಿಕಾರಗಳನ್ನು ಕೇಂದ್ರೀಕರಿಸಲಾಗುತ್ತಿದೆ.  ಈ ವೈರಾಣುವನ್ನು ಸೋಲಿಸಬೇಕಾದ್ದು ರಾಜ್ಯ ಸರಕಾರಗಳೇ, ಅದಕ್ಕೆ ಕೇಂದ್ರದ ಬೆಂಬಲ ಬೇಕು.

ಐದು, ಊರಿಗೆ ಹೋಗದೆ ದಿಲ್ಲಿಯಲ್ಲೇ ಉಳಿದುಕೊಂಡಿರುವ ವಲಸೆ ಕಾರ್ಮಿಕರಿಗೆ ಕೇಂದ್ರ ಸರಕಾರ ಅಥವ ವಿವಿಧ ರಾಜ್ಯಸರಕಾರಗಳು ಪ್ರಕಟಿಸಿರುವ ಪರಿಹಾರಗಳು ತಲುಪುವುದಿಲ್ಲ. ಅವರೆಲ್ಲರಿಗೆ ಸರಕಾರದಿಂದ ಕಣ್ಣಿಗೆ ಕಾಣುವಂತಹ , ಸಕ್ರಿಯ ಬೆಂಬಲ ಬೇಕು. ಇದನ್ನು ಕೇಂದ್ರ ಒದಗಿಸಬೇಕು. ಖಾಸಗಿ ಉದಾರ ದಾನಗಳು ಸ್ವಾಗತಾರ್ಹವಾದರೂ, ಅದು ಸರಕಾರ ತನ್ನ ಮೂಲ ಸಂವಿಧಾನಿಕ ಕರ್ತವ್ಯವನ್ನು ನಿಭಾಯಿಸಲು ವಿಫಲವಾಗಿರುವುದನ್ನು ಭರಿಸಲಾರದು.

ಆರು, ವೈರಸ್‍ ಭೀತಿ ಸಮಾಜವನ್ನು ಒಡೆಯುತ್ತಿರುವ ಲಕ್ಷಣಗಳು ಕಾಣುತ್ತಿವೆ. ವಲಸೆ ಕಾರ್ಮಿಕರು ಮಾತ್ರವಲ್ಲ, ವೈರಸ್‍ ವಿರುದ್ಧ ಸಮರದಲ್ಲಿ ತೊಡಗಿರುವ ಡಾಕ್ಟರುಗಳು, ನರ್ಸ್‍ಗಳು, ಅಷ್ಟೇ ಅಲ್ಲ, ವಿಮಾನಯಾನ ಸಿಬ್ಬಂದಿಗಳನ್ನೂ ಬಹಿಷ್ಕರಿಸುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಸಾಮಾಜಿಕ ಅಪಸ್ವರ ಸೃಷ್ಟಿಸುವ, ಕೆಲವು ವಿಭಾಗಗಳಿಗೆ ಮಸಿ ಬಳೆಯುವ, ಕಾರ್ಯಕರ್ತರನ್ನು ಮತ್ತು ದುರ್ಬಲ ವಿಭಾಗಗಳನ್ನು ಬಹಿಷ್ಕರಿಸುವ ಕೋಮುವಾದಿ, ಜಾತಿವಾದಿ ಮತ್ತು ಸಂಕುಚಿತವಾದಿ ಶಕ್ತಿಗಳ ಇಂತಹ ಪ್ರಯತ್ನಗಳನ್ನು ಪತ್ರಿರೋಧಿಸಬೇಕು. ಇಲ್ಲವಾದರೆ, ಕೇಂದ್ರ ಸರಕಾರ ಇದ್ದಕ್ಕಿದ್ದಂತೆ ಯೋಚನೆ ಮಾಡದೇ ಪ್ರತಿಕ್ರಿಯಿಸುವುದರಿಂದ  ಭಾರತದ ಆರೋಗ್ಯ ಮತ್ತು ಮಾನವೀಯ ಬಿಕ್ಕಟ್ಟು ಮತ್ತಷ್ಟು ಹದಗೆಡುತ್ತದೆ ಎಂದು ಯೆಚುರಿ ಎಚ್ಚರಿಸಿದ್ದಾರೆ.

ಅಂತಿಮವಾಗಿ,  ‘ಪಿಎಂ ಕೇರ್ಸ್’’ ಎಂಬ ಹೊಸದೊಂದು ನಿಧಿಯನ್ನು ಆರಂಭಿಸಲಾಗಿದೆ.  ಈ ಬಗೆ ಹಲವೆಡೆಗಳಿಂದ ಟೀಕೆಗಳು ಬಂದಿವೆ.  ‘ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ’ ಇರುವಾಗ ಹೊಸದೊಂದು ನಿಧಿಯ ಅಗತ್ಯವೇನಿದೆ?  ಈ ಹೊಸ ನಿಧಿಯ ಬಗ್ಗೆ ಸ್ಪಷ್ಟತೆಗಳಿಲ್ಲ, ಆದ್ದರಿಂದ ಅದರ ಸಂಗ್ರಹಗಳ ಬಗ್ಗೆ ಹಲವು ಪ್ರಶ್ನೆಗಳು ಏಳುತ್ತವೆ. ಈ ಸರಕಾರ ಯಾವುದೇ ಪಾರದರ್ಶಕತೆಯಿಲ್ಲದ ಚುನಾವಣಾ ಬಾಂಡುಗಳನ್ನು ತಂದು ಸಾವಿರಾರು ಕೋಟಿಗಳನ್ನು ಅನಾಮಧೇಯವಾಗಿ ಸಂಗ್ರಹಿಸಿತು ಎಂಬುದನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ಸೀತಾರಾಂ ಯೆಚುರಿಯವರು ನೆನಪಿಸಿದ್ದಾರೆ.

Leave a Reply

Your email address will not be published. Required fields are marked *