ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲು ನಿರಾಕರಿಸುವ ರಾಜ್ಯಪಾಲರ ನಡೆ ಅಸಂವಿಧಾನಿಕ

ತಮ್ಮದೇ ಒಂದು ನಿಮಿಷದ ಹೇಳಿಕೆ ಓದಿರುವುದು ಸರ್ವಾಧಿಕಾರಿ ನಡೆ

– ಸಿಪಿಐ(ಎಂ) ಟೀಕೆ

ರಾಜ್ಯ ಸರಕಾರವನ್ನು ಪ್ರತಿನಿಧಿಸುವ ರಾಜ್ಯಪಾಲರು ಸರಕಾರ ನಡೆಸುವ ಪ್ರತಿ ವರ್ಷದ ಮೊದಲ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಪಾಲ್ಗೊಂಡು ಮಂತ್ರಿಮಂಡಲ ಸಿದ್ಧಪಡಿಸಿದ ವರದಿ ಓದುವುದನ್ನು ಸಂವಿಧಾನದ ಕಲಂ 176 ವಿಧಿಸುತ್ತದೆ. ರಾಜ್ಯದ ರಾಜ್ಯಪಾಲರಾದ ತಾವರಚಂದ್ ಗೆಹ್ಲೋಟ್ ಸಂವಿಧಾನದ ವಿಧಿಯಂತೆ ನಡೆದುಕೊಳ್ಳದೆ, ಜಂಟಿ ಸದನ ಅಧಿವೇಶನದಲ್ಲಿ ಸರಕಾರದ ಭಾಷಣ ಓದದೆ ತನ್ನದೆ ಮಾತುಗಳನ್ನಾಡಿ ನಿರ್ಗಮಿಸಿರುವುದು ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದೆ.

ರಾಜ್ಯಪಾಲರು, ರಾಜ್ಯ ಸರಕಾರವನ್ನು ಪ್ರತಿನಿಧಿಸುವವರೇ ಹೊರತು, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮಂತ್ರಿಮಂಡಲದ ಮೇಲಿನ ಸೂಪರ್ ಮುಖ್ಯಮಂತ್ರಿಯಲ್ಲ. ರಾಜ್ಯಪಾಲರು ಕೇಂದ್ರ ಸರಕಾರದ ಮೂಲಕ ನೇಮಕಗೊಂಡವರು, ಅವರು ಚುನಾಯಿತ ಪ್ರತಿನಿಧಿಗಳಲ್ಲ.

ಬದಲಿಗೆ, ರಾಜ್ಯ ಸರಕಾರವು, ರಾಜ್ಯದ ಜನತೆಯ ಮತದಾನದ ಮೂಲಕ ಆಯ್ಕೆಯಾದ ಜನ ಪ್ರತಿನಿಧಿಗಳಾದ ಶಾಸಕರು, ಅದರಲ್ಲೂ ಬಹುಮತ ಪಡೆದ ಪಕ್ಷದ ಶಾಸಕರು ಸರಕಾರ ರಚನೆಗೆ ತನ್ನ ನಾಯಕನನ್ನು ಆಯ್ಕೆ ಮಾಡಿಕೊಂಡು ಸರಕಾರ ರಚಿಸಲು ಅವಕಾಶ ಮಾಡಿಕೊಡುವ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆಯಾದದ್ದು ಎಂಬುದನ್ನು ಜನತೆ ಇಲ್ಲಿ ಗಮನಿಸಬೇಕಾಗಿದೆ.

ಹೀಗಾಗಿ, ರಾಜ್ಯ ಸರಕಾರದ ಅಥವಾ ಮಂತ್ರಿಮಂಡಲ ಸಿದ್ಧಪಡಿಸಿದ ರಾಜ್ಯಪಾಲರ ಭಾಷಣವನ್ನು, ರಾಜ್ಯ ಸರಕಾರವನ್ನು ಪ್ರತಿನಿಧಿಸಿ ಜಂಟಿ ಸದನದಲ್ಲಿ ರಾಜ್ಯಪಾಲರು ಓದುವುದು ಅವರ ಕರ್ತವ್ಯವಾಗಿದೆ. ಅದನ್ನು ತಮ್ಮ ಮನಬಂದಂತೆ ತಿದ್ದುಪಡಿಗೆ ಕ್ರಮವಹಿಸುವುದುಕ್ಕೆ ಮತ್ತು ವ್ಯತಿರಿಕ್ತವಾಗಿ ತಮ್ಮದೆ ಭಾಷಣ ಮಾಡಲು ಅದು ರಾಜ್ಯಪಾಲರ ವೈಯ್ಯಕ್ತಿಕ ಭಾಷಣವಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ.

ಇತ್ತೀಚೆಗೆ ಹಲವು ರಾಜ್ಯಗಳಲ್ಲಿ ರಾಜ್ಯಪಾಲರುಗಳು ತಾವು ರಾಜ್ಯ ಸರಕಾರವನ್ನು ಪ್ರತಿನಿಧಿಸುವವರು ಎಂಬುದನ್ನು ಮರೆತು, ಕೇಂದ್ರ ಸರಕಾರದ ಪ್ರತಿನಿಧಿಗಳು ಎಂಬಂತೆ ಅಥವಾ ರಾಜಕೀಯ ಪ್ರತಿನಿಧಿಗಳು ಎಂಬಂತೆ ವರ್ತಿಸುತ್ತಿರುವುದು, ರಾಜ್ಯ ಸರಕಾರಗಳ ಜತೆ ನಿತ್ಯ ತಿಕ್ಕಾಟಕ್ಕೆ ನಿಲ್ಲುವುದು ಕಂಡುಬಂದಿದೆ. ಅದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

ದೇಶದ ಒಕ್ಕೂಟವಾದಿ ಸ್ವರೂಪವನ್ನು ಬಲಗೊಳಿಸುವ ದಿಶೆಯಲ್ಲಿ ಕೇಂದ್ರ ಹಾಗು ರಾಜ್ಯ ಸಂಬಂಧಗಳನ್ನು ಬಲಗೊಳಿಸುವ ಬದಲು, ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳಾದ ನಂತರ, ಅವರ ನೇತೃತ್ವದ ಸರಕಾರವು, ರಾಜ್ಯ ಸರಕಾರಗಳ ಸಂವಿಧಾನಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವಲ್ಲಿ ನಿರತವಾಗಿರುವುದು, ಅದಕ್ಕಾಗಿ ರಾಜ್ಯಪಾಲರ ಕಛೇರಿ ಹಾಗು ಸ್ಥಾನವನ್ನು ದುರುಪಯೋಗ ಮಾಡುತ್ತಿರುವುದನ್ನು ನಾವೀಗಾಗಲೆ ಗಮನಿಸಿದ್ದೇವೆ. ಜನತೆ ಇದನ್ನು ತಡೆಯಬೇಕಾಗಿದೆ.

ರಾಜ್ಯಪಾಲರು ಸಂವಿಧಾನವನ್ನು ಗೌರವಿಸದೇ ಜಂಟಿ ಸದನದ ಅಧಿವೇಶನದಲ್ಲಿ ಸಾಂವಿಧಾನಿಕ ಕ್ರಮದಂತೆ ಸರಕಾರದಿಂದ ಸಿದ್ಧಪಡಿಸಿಕೊಟ್ಟ ಭಾಷಣ ಓದದೇ ನಾಲ್ಕು ವಾಕ್ಯಗಳನ್ನು ಹೇಳಿ ನಿರ್ಗಮಿಸಿದ್ದು ಸರಿಯಾದ ಕ್ರಮವಲ್ಲ ಎಂದು ಸಿಪಿಐ(ಎಂ) ಪಕ್ಷ ಹೇಳಿದೆ.

ಇದೇ ವೇಳೆಗೆ ಅಧಿಕೃತ ವಿರೋಧ ಪಕ್ಷ, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ರಾಜ್ಯಪಾಲರ ನಡೆಯನ್ನು ಸ್ವಾಗತಿಸಿದೆ. ಇದು ಸಂವಿಧಾನದ ಬಗ್ಗೆ ಅವರಿಗೆ ಗೌರವ ಇಲ್ಲ ಎನ್ನುವುದನ್ನು ಸೂಚಿಸುತ್ತದೆ. ಇದನ್ನೂ ಸಿಪಿಐ(ಎಂ) ಖಂಡಿಸಿದೆ.

Leave a Reply

Your email address will not be published. Required fields are marked *