ವ್ಯಾಪಾರೀಕರಣ-ಖಾಸಗೀಕರಣಕ್ಕಾಗಿ ಬುಡಕಟ್ಟು ಹಕ್ಕುಗಳನ್ನು ನಿರ್ಮೂಲ ಮಾಡುವ ಧೋರಣೆ

ಕರಡು ರಾಷ್ಟ್ರೀಯ ಅರಣ್ಯ ಧೋರಣೆ, 2018, ಇದನ್ನು ಹಿಂತೆಗೆದುಕೊಳ್ಳಬೇಕು: ಸಿಪಿಐ(ಎಂ)

೨೦೧೮ರ ಕರಡು ರಾಷ್ಟ್ರೀಯ ಅರಣ್ಯ ಧೋರಣೆಯನ್ನು ಹಿಂತೆಗೆದುಕೊಳ್ಳಬೇಕು, ಏಕೆಂದರೆ ಅದರ ಮುಖ್ಯ ಒತ್ತು ಅರಣ್ಯಗಳ ಖಾಸಗೀಕರಣ ಮತ್ತು ವ್ಯಾಪಾರೀಕರಣ ಎಂದು ಈ ಕರಡಿಗೆ ಸಿಪಿಐ(ಎಂ) ತನ್ನ ಕಡುವಿರೋಧವನ್ನು ವ್ಯಕ್ತಪಡಿಸಿದೆ. ಈ ಕುರಿತ ಒಂದು ಟಿಪ್ಪಣಿಯನ್ನು ಪೊಲಿಟ್‌ಬ್ಯುರೊ ಸದಸ್ಯರಾದ ಬೃಂದಾ ಕಾರಟ್‌ರವರು ಅರಣ್ಯಗಳು, ಪರಿಸರ ಮತ್ತು ಹವಾಮಾನ ಬದಲಾವu ಮಂತ್ರಾಲಯಕ್ಕೆ ಸಲ್ಲಿಸಿದ್ದಾರೆ.

ಸಿಪಿಐ(ಎಂ) ಈ ಧೋರಣಾ ದಸ್ತಾವೇಜನ್ನು ‘ಪರಿಹಾರಾತ್ಮಕ ಅರಣ್ಯೀಕರಣ ನಿಧಿ ಕಾಯ್ದೆ’(ಸಿಎಎಫ್‌ಎ) ಸ್ಥಾಪಿಸಿರುವ ಅನ್ಯಾಯಪೂರ್ಣ ಮತ್ತು ಕಾರ್ಪೊರೇಟ್-ಪರ ಪ್ರಕ್ರಿಯೆಯ ಒಂದು ಮುಂದುವರಿಕೆಯೆಂದೇ ಕಾಣುತ್ತದೆ. ಆ  ಅತ್ಯಂತ ದೋಷಪೂರ್ಣ ಕಾಯ್ದೆ ಬುಡಕಟ್ಟು ಸಮುದಾಯಗಳು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳು ಮತ್ತು ಗ್ರಾಮಸಭೆಗಳ ಅರಣ್ಯಗಳು ಮತ್ತು ಅವುಗಳ ಉತ್ಪನ್ನಗಳ ಲಭ್ಯತೆ ಮತ್ತು ನಿರ್ವಹಣೆಯ ಹಕ್ಕುಗಳನ್ನು ನಿರ್ಮೂಲನಗೊಳಿಸಿತ್ತು. ಕರಡು ಧೋರಣೆ ಈ ನಿಲುವನ್ನು ಇನ್ನೂ ಮುಂದಕ್ಕೆ ಒಯ್ದಿದೆ.

ನಿಜಸಂಗತಿಯೆಂದರೆ, ‘ಬುಡಕಟ್ಟು’ ಎಂಬ ಪದ ಇಡೀ ದಸ್ತಾವೇಜಿನಲ್ಲಿ ಕೇವಲ ಒಂದು ಬಾರಿ ಕಾಣ ಸಿಗುತ್ತದೆ. ಇದು ಬುಡಕಟ್ಟು ಜನಗಳು ತಮ್ಮ ಸ್ವಂತ ಅರಣ್ಯ ಭೂಮಿಗಳ ಒತ್ತುವರಿದಾರರು ಎಂಬ ಬ್ರಿಟಿಶ್ ವಸಾಹತುಶಾಹೀ ಮನೋಭಾವವನ್ನೇ ಬಿಂಬಿಸುತ್ತದೆ ಎಂದು ಸಿಪಿಐ(ಎಂ) ಟಿಪ್ಪಣಿ ಹೇಳಿದೆ.

ಈ ಕರಡು ಇಂಗಾಲದ ಜಫ್ತಿ ಮತ್ತು ಹವಾಮಾನ ಬದಲಾವಣೆಯ ಉಪಶಮನದಲ್ಲಿ ಅರಣ್ಯಗಳ ಪಾತ್ರವನ್ನು ಒತ್ತಿ ಹೇಳುತ್ತದಾದರೂ, ವಾಸ್ತವವಾಗಿ ಅರಣ್ಯಗಳು ಮತ್ತು ಮರಗಳ ಆವರಣ ಎರಡೂ ಒಂದೇ ಎಂಬಂತೆ ಪರಿಗಣಿಸಿ ನೈಸರ್ಗಿಕ ಅರಣ್ಯಗಳು ಮತ್ತು ಅವುಗಳ ಇತರ ಪರಿಸರ ಮತ್ತು ಸಾಮಾಜಿಕ ಸೇವೆಗಳ ಮಹತ್ವವನ್ನು ಶಿಥಿಲಗೊಳಿಸುತ್ತದೆ. ದಸ್ತಾವೇಜಿನಲ್ಲಿ ಈ ಎರಡು ಪದಗಳನ್ನು ಪರ್ಯಾಯವಾಚಕವಾಗಿ ಬಳಸಲಾಗಿದೆ. ನೈಸರ್ಗಿಕ ಅರಣ್ಯಗಳು ಇಂಗಾಲ ಗುಂಡಿಗಳಾಗಿ ಕೆಲಸ ಮಾಡುತ್ತವೆ ಮಾತ್ರವಲ್ಲ, ಇನ್ನೂ ವ್ಯಾಪಕವಾದ ಸೌಲಭ್ಯಗಳನ್ನು ಒದಗಿಸುತ್ತವೆ ಎಂಬುದನ್ನು ಇದು ನಿರ್ಲಕ್ಷಿಸುತ್ತದೆ.

ಇದು ಮುಖ್ಯವಾಗಿ  ಅರಣ್ಯೀಕರಣ ಕಾರ್ಯಕ್ರಮಗಳ ಭಾಗವಾಗಿ ಮರಗಳ ಆವರಣದ ಹೆಸರಿನಲ್ಲಿ ವಾಣಿಜ್ಯ ತೋಟಗಾರಿಕೆಗೆ ಉತ್ತೇಜನ ನೀಡಲಿಕ್ಕಾಗಿಯೇ. ಅರಣ್ಯೀಕರಣ ಮಾಡಬೇಕಾಗಿ ಬಂದಿರುವುದೇ ಅಭಿದ್ಧಿಯ ಹೆಸರಿನಲ್ಲಿ ವಾಣಿಜ್ಯ ಪ್ರಾಜೆಕ್ಟುಗಳಿಗೆ ನೈಸರ್ಗಿಕ ಅರಣ್ಯಗಳನ್ನು ನಾಶಪಡಿಸಿದರಿಂದಾಗಿ. ಈಗ ಮೆಗಾ ಪ್ರಾಜೆಕ್ಟ್ ಗಳಿಗೆ ಅರಣ್ಯ ಭೂಮಿಯನ್ನು ತಿರುಗಿಸುವುದನ್ನು ತೀವ್ರಗೊಳಿಸಿರುವುದು ಪ್ರಶ್ನಿಸುವ ಪ್ರಯತ್ನವನ್ನೂ ಈ ದಸ್ತಾವೇಜು ಮಾಡುವುದಿಲ್ಲ ಎಂದಿರುವ ಸಿಪಿಐ(ಎಂ) ಟಿಪ್ಪಣಿ ತನ್ನ ಆಕ್ಷೇಪಗಳಲ್ಲಿ ಕೆಲವನ್ನು ವಿಶದಪಡಿಸಿದೆ. ಅವುಗಳ ಸಾರಾಂಶವನ್ನು ಇಲ್ಲಿ ಕೊಡಲಾಗಿದೆ:

  1. ಇದು ಅರಣ್ಯಗಳ ವ್ಯಾಪಾರೀಕರಣ ಮತ್ತು ಖಾಸಗೀಕರಣದ ನೀಲನಕ್ಷೆ. ಇದು ೧೯೮೮ರ ಅರಣ್ಯ ಧೋರಣೆಯ ದಸ್ತಾವೇಜಿಗೆ ತದ್ವಿರುದ್ಧವಾಗಿದೆ. ನೈಸರ್ಗಿಕ ಅರಣ್ಯಗಳನ್ನು ಉತ್ಪಾದನಾ ಅಥವ ಪ್ಲಾಂಟೇಶನ್ ಅರಣ್ಯಗಳಾಗಿ ಮಾಡುವುದು ಇದರ ಆಶಯ. ವುಡ್ ಈಸ್ ಗುಡ್ ಎಂಬ ಘೋಷಣೆಯಡಿಯಲ್ಲಿ ಇದನ್ನು ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಜಲಪೂರಣ, ಮಣ್ಣಿನ ಸವೆತ ತಡೆಯುವುದು, ಅರಣ್ಯವಾಸಿ ಸಮುದಾಯಗಳಿಗೆ ಸೌದೆ, ಜಾನುವಾರುಗಳಿಗೆ ಮೇವು ಮತ್ತಿತರ ಉತ್ಪನ್ನಗಳನ್ನು ಒದಗಿಸುವ ಅದರ ಪಾತ್ರವನ್ನು
    ಗೌಣಗೊಳಿಸಲಾಗಿದೆ.
  2. ಅರಣ್ಯೀಕರಣದ ಹೆಸರಿನಲ್ಲಿ ವಾಣಿಜ್ಯ ತೋಟಗಾರಿಕೆ: ಈ ಕರಡಿನ ವಿಭಾಗ ೩ ರಲ್ಲಿ ಹೇಳಿರುವ ಮರಮಟ್ಟು ಬಳಕೆಗೆ ಉತ್ತೇಜನೆ, ತೇಗ, ನೀಲಗಿರಿ, ಸಾಲ್ ಮುಂತಾದವುಗಳನ್ನು ನೆಡಬೇಕು ಎನ್ನುತ್ತಲೇ ಅರಣ್ಯೀಕರಣವನ್ನು ನಡೆಸಲು ಖಾಸಗಿ ಭಾಗವಹಿಸುವಿಕೆಯ ಮಾದರಿಗಳನ್ನು ಬೆಳೆಸುವುದು, ಅರಣ್ಯ-ಆಧಾರಿತ ಉದ್ದಿಮೆಯ ಬೆಳವಣಿಗೆಗೆ ಉತ್ತೇಜನೆ ಮುಂತಾದವುಗಳು ನೈಸರ್ಗಿಕ ಸಂಪನ್ಮೂಲಗಳನ್ನು ತಮ್ಮ ಲಾಭಗಳನ್ನು ಹೆಚ್ಚಿಸಿಕೊಳ್ಳಲು ಬಳಸುವ ಕಾರ್ಪೊರೇಟ್ ಗಳ ನಿರೀಕ್ಷೆಗಳನ್ನು ಈಡೇರಿಸುವುದು ಇದರ ಉದ್ದೇಶ ಎನ್ನುವುದನ್ನು ತೋರಿಸುತ್ತವೆ. ೧೯೮೮ರ ದಸ್ತಾವೇಜು ವಿದೇಶಿ ಮರ-ಗಿಡಗಳನ್ನು ವ್ಯಾಪಕ ವೈಜ್ಞಾನಿಕ ಪರೀಕ್ಷಣೆಯಿಲ್ಲದೆ ನೆಡಬಾರದು ಎಂಬ ಎಚ್ಚರಿಕೆಯನ್ನು ಅವು ಸ್ಥಳೀಯ ಮರ-ಗಿಡಗಳ ನಾಶಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ನೀಡಿತ್ತು. ಆದರೆ ಈ ದಸ್ತಾವೇಜಿನಲ್ಲಿ ಅಂತಹ ಕಾಳಜಿಯೇನೂ ಇಲ್ಲ.
  3. ಅರಣ್ಯೀಕರಣಕ್ಕೆ ಭೂಮಿಯೆಲ್ಲಿ ಎಂಬ ಪ್ರಶ್ನೆಯಲ್ಲಿ ಅಸ್ಪಷ್ಟತೆ: ಇದು ಅರಣ್ಯಗಳ ಹೊರಗೆ ಪ್ಲಾಂಟೇಶನ್‌ಗಳು ಎಂದು ಹೇಳಿದ್ದರೂ, ಹಲವೆಡೆಗಳಲ್ಲಿ ಈಗ ಇರುವ ಅರಣ್ಯಗಳಲ್ಲಿ, ಅರಣ್ಯ ನಿಗಮಗಳ ವ್ಯಾಪ್ತಿಯಲ್ಲಿರುವ ಸ್ಥಳಗಳಲ್ಲಿ ಅರಣ್ಯೀಕರಣದ ಮಾತಾಡುತ್ತದೆ. ವಾಸ್ತವವಾಗಿ ಮೇಲೆ ಹೇಳಿದ ಸಿಎಎಫ್‌ಎ ಜಾರಿಯ ಅನುಭವಗಳು ಇದನ್ನು ಪುಷ್ಟೀಕರಿಸುತ್ತವೆ. ಇಂತಹ ತೋಟಗಳಿಗೆ ಗ್ರಾಮಸ್ಥರ ಪ್ರತಿಭಟನೆಗಳು, ಅದನ್ನು ದಮನ ಮಾಡುವ ಸರಕಾರೀ ಏಜೆಂಸಿಗಳ ಪ್ರಯತ್ನಗಳನ್ನು ಮರೆಮಾಚಿರುವ ಈ ದಸ್ತಾವೇಜು ಆ ಕಾಯ್ದೆಯನ್ನು ಹೊಗಳುತ್ತಿದೆ.
  4. ಅಪಮಾರ್ಗದಲ್ಲಿ ಅರಣ್ಯ ಭೂಮಿಯ ಬಳಕೆ: ೧೯೮೮ರ ಧೋರಣೆ ಅರಣ್ಯ ಆವರಣವನ್ನು ವಿಸ್ತರಿಸುವಂತೆ ಮಾಡಿದೆ ಎಂದು ಈ ಕರಡು ಹೇಳಿದೆ. ಅದರಲ್ಲಿ ಅರಣ್ಯ ಭೂಮಿಯನ್ನು ಬೇರೆ ರೀತಿಗಳಲ್ಲಿ ಹೇಗೆ ಬಳಸಬಾರದು ಎಂದು ಒಂದು ಇಡೀ ವಿಭಾಗದಲ್ಲಿ ಹೇಳಲಾಗಿತ್ತು. ಆದರೆ ಈ ಕರಡಿನಲ್ಲಿ ಒಂದೇ ಒಂದು ವಾಕ್ಯ ಅರಣ್ಯೇತರ ಬಳಕೆಗೆ ಕಟ್ಟುನಿಟ್ಟಾಗಿ ತಡೆ ಹಾಕಬೇಕು ಎಂದಷ್ಟೇ ಇದೆ. ಸರಕಾರವೇ ‘ವ್ಯಾಪಾರಸ್ನೇಹಿ’ ಹೆಸರಲ್ಲಿ  ಪರಿಸರ ನಿಯಮಗಳನ್ನು ಸಡಿಲಿಸುತ್ತಿರುವಾಗ, ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆಯ ನಿಯಂತ್ರಣವನ್ನು ಸಡಿಲಗೊಳಿಸುತ್ತಿರುವಾಗ ತಡೆ ಹಾಕುವುದು ಯಾರಿಗೆ?
  5. ಬುಡಕಟ್ಟು ಹಕ್ಕುಗಳ ನಿರ್ಮೂಲನೆ: ಬುಡಕಟ್ಟು ಸಮುದಾಯಗಳು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳು ಮತ್ತು ಗ್ರಾಮಸಭೆಗಳಿಗೆ ಅರಣ್ಯಗಳು ಮತ್ತು ಅವುಗಳ ಉತ್ಪನ್ನಗಳ ಲಭ್ಯತೆ ಮತ್ತು ನಿರ್ವಹಣೆಯ ಹಕ್ಕುಗಳನ್ನು ಅರಣ್ಯ ಹಕ್ಕುಗಳ ಕಾಯ್ದೆ ಕೊಟ್ಟಿದೆ. ಆದರೆ ಈ ಕರಡು ಮರಮಟ್ಟು ಅಲ್ಲದ ಅರಣ್ಯ ಉತ್ಪನ್ನಗಳ ಹಕ್ಕುಗಳನ್ನು ಕಸಿದುಕೊಂಡು ಪ್ರಸ್ತಾವಿತ ಕೇಂದ್ರದ ನಿಯಂತ್ರಣದ ನಿಗಮಗಳಿಗೆ ಒಪ್ಪಿಸುತ್ತದೆ.  ಗ್ರಾಮಸಭೆಗಳನ್ನು ಈ ನಿಗಮಗಳ ಅಡಿಗೆ ತರುತ್ತದೆ. ಇದು ಅತ್ಯಂತ ಆಕ್ಷೇಪಣೀಯ. ಅರಣ್ಯ ನಿರ್ವಹಣಾ ಧೋರಣೆಗಳಲ್ಲಿ ಗ್ರಾಮ ಸಭೆಗಳು ಮತ್ತು ಬುಡಕಟ್ಟು ಸಮುದಾಯಗಳನ್ನು ಕೇಂದ್ರ ಬಿಂದುವಾಗಿ ಮಾಡಿ ಆಗಿರುವ ಅಲ್ಪ-ಸ್ವಲ್ಪ ಸಾಧನೆಗಳನ್ನೂ ಇದು ಇಲ್ಲವಾಗಿಸುತ್ತದೆ. ಈ ಕರಡು ಅರಣ್ಯ ಹಕ್ಕುಗಳ ಕಾಯ್ದೆ ಕೊಟ್ಟಿರುವ ಯಾವ ಹಕ್ಕುಗಳ ಪ್ರಸ್ತಾಪವನ್ನೂ ಮಾಡುವುದಿಲ್ಲ. ಬದಲಿಗೆ ಅದರ ನಗ್ಮ ಉಲ್ಲಂಘನೆಯ ಪ್ರಸ್ಯಾವವನ್ನು ಇಟ್ಟಿದೆ.
  6. ಪ್ರಸ್ತಾವಿತ ಕಾನೂನು ಚೌಕಟ್ಟು: ಈ ಕರಡು zಸ್ತಾವೇಜು ಅರಣ್ಯ ಹಕ್ಕುಗಳ ಕಾಯ್ದೆ, ಪರಿಶಿಷ್ಟ ಪ್ರದೇಶಗಳಿಗೆ ಪಂಚಾಯ್ತುಗಳ ವಿಸ್ತರಣೆ ಕಾಯ್ದೆ ಮುಂತಾದ ಈಗಿರುವ ಕಾಯ್ದೆಗಳಲ್ಲಿ ಹಾಗೂ ಸಂವಿಧಾನದ ಐದನೇ ಮತ್ತು ಆರನೇ ಶೆಡ್ಯೂಲಿನಲ್ಲಿ ಪಡೆದಿರುವ ರಕ್ಷಣೆಗಳಿಂದ ಉಂಟಾಗಬಹುದಾದ ತಡೆಗಳನ್ನು ನಿವಾರಿಸಲು ಒಂದು ಕಾನೂನು ಚೌಕಟ್ಟಿನ ಪ್ರಸ್ತಾವ ಇಟ್ಟಿದೆ. ಇದು ಈ ಮಂತ್ರಾಲಯ ತನ್ನ ಹಿತಕ್ಕಾಗಿ, ಅರಣ್ಯಗಳ ಖಾಸಗೀಕರಣ ಮತ್ತು ಬುಡಕಟ್ಟು ಸಮುದಾಯಗಳ ಹಕ್ಕುಗಳ ನಿರ್ಮೂಲನೆಯನ್ನು ತ್ವರಿತವಾಗಿ ಮಾಡಲು ತನಗೆ ಅನುಕೂಲವಾಗುವಂತೆ ಮಾಡಲಿಕ್ಕಾಗಿಯೇ ಇಟ್ಟಿರುವಂತದ್ದು.

ಇಂತಹ ಕರಡನ್ನು ಹಿಂದಕ್ಕೆ ತಗೊಳ್ಳಬೇಕು. ಪರಿಸರ, ಅರಣ್ಯ ರಕ್ಷಣೆಯಲ್ಲಿ, ಬುಡಕಟ್ಟು ಸಮುದಾಯಗಳು ಮತ್ತು ಪಾರಂಪರಿಕ ಅರಣ್ಯವಾಸಿಗಳ ಹಕ್ಕುಗಳ ರಕ್ಷಣೆಯಲ್ಲಿ ತೊಡಗಿರುವ ಸಂಘಟನೆಗಳು ಮತ್ತು ವ್ಯಕ್ತಿಗಳಿರುವ ಒಂದು ಸಮಿತಿಯನ್ನು ರಚಿಸಬೇಕು.

ಇದು ಅರಣ್ಯ ಹಕ್ಕುಗಳ ಕಾಯ್ದೆ  ಮತ್ತಿತರ ಭಾರತದ ನೈಸರ್ಗಿಕ ಅರಣ್ಯಗಳಲ್ಲಿ ಶ್ರೀಮಂತ ಜೀವ-ವೈವಿಧ್ಯವನ್ನು ಕಾಪಾಡಿಕೊಳ್ಳುವಲ್ಲಿ ಬುಡಕಟ್ಟು ಸಮುದಾಯಗಳ ಪಾತ್ರವನ್ನು ಗುರುತಿಸುವ ಮತ್ತು ರಕ್ಷಿಸುವ ಕಾಯ್ದೆಗಳ ಚೌಕಟ್ಟಿನೊಳಗೆ ಇದನ್ನು ಬದಲಿಸಿ ಬೇರೆ ಕರಡನ್ನು ತಯಾರಿಸಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.

Leave a Reply

Your email address will not be published. Required fields are marked *