ಜಹಾಂಗೀರ್‌ಪುರಿ ಗಲಭೆ: ಪೊಲೀಸರ ವಿಫಲತೆಗೆ ನ್ಯಾಯಾಲಯದ ಛೀಮಾರಿ

ಜಹಾಂಗೀರ್ ಪುರಿಯಲ್ಲಿ ಹನುಮಾನ್ ಜಯಂತಿಯಂದು (ಏಪ್ರಿಲ್ 16) ಕೋಮು ಘರ್ಷಣೆ ನಡೆದಿತ್ತು. ಅದಕ್ಕೆ ಕಾರಣವಾದ ಮೆರವಣಿಗೆಗೆ ಅನುಮತಿ ಇರಲಿಲ್ಲ. ಆದರೂ ಮೆರವಣಿಗೆ ಮಾಡಲಾಯಿತು. ಇದಕ್ಕೆ ಪೊಲೀಸರು ಕೂಡಾ ಸಾಕ್ಷಿಯಾಗಿದ್ದರು. ಆದ್ದರಿಂದ ಪೊಲೀಸರ ವೈಫಲ್ಯವೇ ಈ ಗಲಭೆಗೆ ಕಾರಣವೆಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.

ಜಹಾಂಗೀರ್ ಪುರಿಯ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾದ ಎಂಟು ಮಂದಿ ಆಪಾದಿತರಿಗೆ ಜಾಮೀನು ವಿಚಾರಣೆಯಲ್ಲಿ ಸೆಷನ್ಸ್ ನ್ಯಾಯಲಯದ ನ್ಯಾಯಧೀಶ ಗಗನ್ ದೀಪ್ ಸಿಂಗ್ ಪೊಲೀಸರಿಂದಾಗಿರುವ ತಪ್ಪುಗಳನ್ನು ತೊಡಕುಗಳಿದ್ದರೆ ಅವನ್ನು ತನಿಖೆ ಮಾಡುವ ಅಗತ್ಯವಿದೆ ಎಂದರು.

ಏಪ್ರಿಲ್ 16 ರಂದು ನಡೆದ ಮೂರನೇ/ಕೊನೆಯ ಮೆರವಣಿಗೆಗೆ ಅನುಮತಿ ಇರಲಿಲ್ಲ, ಅದು ಕಾನೂನುಬಾಹಿರವಾಗಿತ್ತು, ಆದರೂ ಈ ಕಾನೂನುಬಾಹಿರ ಮೆರವಣಿಗೆಯನ್ನು ತಡೆಯುವ ಬದಲು ಜಹಾಂಗೀರ್ ಪುರಿ ಪೊಲೀಸ್ ಠಾಣೆಯ ಸ್ಥಳೀಯ ಸಿಬ್ಬಂದಿ, ಇನ್ಸ್‌ಪೆಕ್ಟರ್ ರಾಜೀವ್ ರಂಜನ್ ಮತ್ತು ಡಿಸಿಪಿ ಮೀಸಲಿನ ಇತರ ಅಧಿಕಾರಿಗಳ ನೇತೃತ್ವದಲ್ಲಿ ಮೆರವಣಿಗೆಯ ಜತೆಗೆ ನಡೆದರು ಎಂದು ಸ್ವತಃ ಎಫ್‌ಐಆರ್ ನಲ್ಲೇ ಹೇಳಿರುವುದನ್ನು ಗಮನಿಸಿದ ನ್ಯಾಯಾಲಯ, “ಸ್ಥಳೀಯ ಪೊಲೀಸರು ಆರಂಭದಲ್ಲೇ ಕಾನುನುಬಾಹಿರ ಮೆರವಣಿಗೆಯನ್ನು ನಿಲ್ಲಿಸುವ ಮತ್ತು ಜನಜಂಗುಳಿಯನ್ನು ಚದುರಿಸುವ ತನ್ನ ಕರ್ತವ್ಯ ನಿಭಾಯಿಸುವ ಬದಲು ಮೆರವಣಿಗೆಯುದ್ದಕ್ಕೂ ಅದರೊಂದಿಗೆ ಸಾಗಿದಂತೆ ಕಾಣುತ್ತದೆ. ಇದು ನಂತರ ಎರಡು ಸಮುದಾಯಗಳ ನಡುವೆ ಗಲಭೆಗಳಿಗೆ ಕಾರಣವಾಯಿತು” ಎಂದು ಹೇಳುತ್ತ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳು ಸರಳವಾಗಿ ತಳ್ಳಿಹಾಕಿದಂತಿದೆ, ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವಲ್ಲಿ ಪೊಲೀಸರು ಸುಮ್ಮನೆ ಕೂಡುವುದು ಸರಿಯಾದ ವಿಧಾನವಲ್ಲ ಎಂದು ಟಿಪ್ಪಣಿ ಮಾಡಿದೆ. ಭವಿಷ್ಯದಲ್ಲಿ ಇಂತಹ ಘಟನೆ ನಡೆಯದಂತೆ ಸಂಬಂಧಪಟ್ಟ ಅಧಿಕಾರಿಗಳ ಹೊಣೆಗಾರಿಕೆಯನ್ನು ನಿಗದಿ ಮಾಡಬೇಕು. ಶಾಮೀಲಿನ ಅಂಶಗಳೇನಾದರೂ ಇದ್ದರೆ, ಅದರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನು ದಿಲ್ಲಿಯ ಪೊಲೀಸ್ ಕಮಿಷನರ್ ಗಮನಕ್ಕೆ ತಂದಿರುವ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ನ ದಿಲ್ಲಿ ರಾಜ್ಯ ಕಾರ್ಯದರ್ಶಿ ಕೆ.ಎಂ.ತಿವಾರಿ ಇನ್ಸ್‌ಪೆಕ್ಟರ್ ರಾಜೀವ ರಂಜನ್ ಮತ್ತು ಇತರರನ್ನು ತಕ್ಷಣವೇ ತನಿಖೆಗೊಳಪಡಿಸಿ ಅಮಾನತಿನಲ್ಲಿಡಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *