ರಾಜದ್ರೋಹ’ ಕಾನೂನನ್ನು ರದ್ದುಗೊಳಿಸಿ: ಸಿಪಿಐ(ಎಂ) ಆಗ್ರಹ

ದೇಶದ್ರೋಹದ ಕಾನೂನು ಈಗ  ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುವುದರಿಂದಾಗಿ, ಈ ಕಾನೂನಿನ ನಿಬಂಧನೆಯನ್ನು ಮರುಪರಿಶೀಲಿಸುವುದಾಗಿ ಮತ್ತು ಮರುಪರೀಕ್ಷಿಸುವುದಾಗಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಲೇ ಬೇಕಾಗಿ ಬಂದಿದೆ. ಐಪಿಸಿಯ ಸೆಕ್ಷನ್ 124 ಎ ಅನ್ನು ಸದ್ಯಕ್ಕೆ ಅಮಾನತಿನಲ್ಲಿಡುವಂತೆ ಸುಪ್ರಿಂ ಕೋರ್ಟ್ ಆದೇಶಿಸಿರುವುದು ಮತ್ತು ಎಲ್ಲಾ ಬಾಕಿ ಇರುವ ವಿಚಾರಣೆಗಳಿಗೆ ತಡೆ ಹಾಕಿರುವುದು ಹಾಗೂ ದೇಶದ್ರೋಹ ಕಾನೂನಿನಡಿಯಲ್ಲಿ ಹೊಸ ಪ್ರಕರಣಗಳನ್ನು ದಾಖಲಿಸದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿರುವುದು ಒಳ್ಳೆಯ ಸಂಗತಿ. ಸುಪ್ರಿಂ ಕೋರ್ಟ್‍ ಈ ಸರ್ಕಾರದ ಮರುಪರಿಶೀಲನೆಗೆ ಕಾಯದೆ ಜುಲೈ 2022 ರಲ್ಲಿ ವಿಚಾರಣೆಯನ್ನು ಪುನರಾರಂಭಿಸಿದಾಗ ಭಾರತೀಯ ದಂಡ ಸಂಹಿತೆಯ ಈ ಕಾಲಕ್ಕೆ ತಕ್ಕುದಲ್ಲದ  ಸೆಕ್ಷನ್ 124 A ಅನ್ನು ರದ್ದುಗೊಳಿಸಲು ಮುಂದಾಗಬೇಕು ಎಂದು ಹೇಳಿದೆ.

ಸಿಪಿಐ(ಎಂ)ನ  23ನೇ ಮಹಾಧಿವೇಶನದಲ್ಲಿ ಚುನಾಯಿತವಾದ ಪೊಲಿಟ್‍ ಬ್ಯುರೋದ  ಮೊದಲ ಸಭೆ ಮೇ 9 ಮತ್ತು 10ರಂದು ನಡೆಯಿತು. ಈ ಸಭೆಯಲ್ಲಿ ದೇಶದ ಪ್ರಸಕ್ತ ಪರಿಸ್ಥಿತಿಯನ್ನು ವಿಶ್ಲೇಷಿಸಲಾಯಿತು. ಈ ಸಭೆಯ ನಂತರ ಪೊಲಿಟ್‍ಬ್ಯುರೊ ಪ್ರಕಟಿಸಿರುವ ಪತ್ರಿಕಾ ಹೇಳಿಕೆ ಹೀಗಿದೆ:

ನಾಗಾಲೋಟ ಹೂಡಿರುವ ಬೆಲೆ ಏರಿಕೆಯನ್ನು ನಿಯಂತ್ರಿಸಿ

ಅವ್ಯಾಹತವಾಗಿ ನಾಗಾಲೋಟ ಹೂಡಿರುವ ಬೆಲೆ ಏರಿಕೆಯು ಜನರ ಮೇಲೆ ಹಿಂದೆಂದೂ ಕಾಣದ ಹೊರೆಯನ್ನು ಹೇರುತ್ತಿದೆ. ಕೋಟಿಗಟ್ಟಲೆ ಜನರು ಬಳಲುತ್ತಿದ್ದಾರೆ , ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ, ಅವರ ಹಸಿವಿನ ಸಂಕಟ ಹೆಚ್ಚುತ್ತಿದೆ. ಅಭೂತಪೂರ್ವ ಮಟ್ಟದ ನಿರುದ್ಯೋಗದ ಸಂಕಟದೊಂದಿಗೆ ಇದು ಜನರ ದುಃಖವನ್ನು ಹೆಚ್ಚಿಸುತ್ತಿದೆ.

ಕಳೆದೊಂದು ವರ್ಷದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಶೇ.70, ತರಕಾರಿ ಶೇ.20, ಅಡುಗೆ ಎಣ್ಣೆ ಶೇ.23 ಮತ್ತು ಬೇಳೆಕಾಳುಗಳ ಬೆಲೆಗಳು ಶೇ.8ರಷ್ಟು ಹೆಚ್ಚಾಗಿವೆ. ಕೋಟ್ಯಂತರ ಭಾರತೀಯರ ಪ್ರಧಾನ ಆಹಾರವಾಗಿರುವ ಗೋಧಿ ಬೆಲೆ ಕೆಜಿಗೆ ಸುಮಾರು ರೂ. 35/ಕೆಜಿ. ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಗಳ ನಿರಂತರ ಏರಿಕೆಯು ಈ ಒಟ್ಟಾರೆ ಹಣದುಬ್ಬರವನ್ನು ಮುಂದೊತ್ತುತ್ತಿವೆ.

ಕೇಂದ್ರ ಸರ್ಕಾರವು ಎಲ್ಲಾ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಎಲ್ಲಾ ಸೆಸ್/ಸರ್‌ಚಾರ್ಜ್‌ಗಳನ್ನು ತಕ್ಷಣವೇ ಹಿಂಪಡೆಯಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಡಿತರ) ಮೂಲಕ ಗೋಧಿ ಪೂರೈಕೆಯನ್ನು ಮತ್ತೆ ತರಬೇಕು. ಈ ಬೆಲೆ ಏರಿಕೆಯನ್ನು ತಡೆಯಲು ಪಡಿತರ ವ್ಯವಸ್ಥೆಯನ್ನು ಬಲಪಡಿಸಬೇಕು.

ಎಡಪಕ್ಷಗಳು ಬೆಲೆ ಏರಿಕೆ ವಿರುದ್ಧ ಒಂದು ರಾಷ್ಟ್ರವ್ಯಾಪಿ ಐಕ್ಯ ಮತ್ತು ಸಾಮೂಹಿಕ ಹೋರಾಟಕ್ಕೆವನ್ನು ಸಂಯೋಜಿಸುತ್ತವೆ.

ರಾಷ್ಟ್ರೀಯ ಸೊತ್ತುಗಳ ಲೂಟಿ

ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ (ಎನ್‌ಎಂಪಿ) ಅನ್ನು ಭಾರೀ ಜಿದ್ದಿನಿಂದ ಅನುಷ್ಠಾನಗೊಳಿಸುವ ಮೂಲಕ ಕೇಂದ್ರ ಸರ್ಕಾರವು ಭಾರತದ ರಾಷ್ಟ್ರೀಯ ಸೊತ್ತುಗಳ ಲೂಟಿಗೆ ಅನುಕೂಲ ಮಾಡಿಕೊಡುತ್ತಿದೆ.

ಜೀವ ವಿಮಾ ನಿಗಮದ (ಎಲ್ಐಸಿ) ಖಾಸಗೀಕರಣಕ್ಕೆ ಸಿಪಿಐ(ಎಂ)ನ ಸಂಪೂರ್ಣ ವಿರೋಧವನ್ನು ಪೊಲಿಟ್ ಬ್ಯೂರೋ ಪುನರುಚ್ಚರಿಸುತ್ತ, ಎಲ್ಐಸಿ ಐಪಿಒ ಆರಂಭಿಸಿರುವ ರೀತಿಯನ್ನು ಖಂಡಿಸಿದೆ. ಎಲ್ಐಸಿ ಬಹುತೇಕ 29 ಕೋಟಿ ಪಾಲಿಸಿದಾರರ ಒಡೆತನದಲ್ಲಿದೆ. ಅವರ ಹಿತಾಸಕ್ತಿಗಳನ್ನು ತುಳಿಯುತ್ತ ಸರ್ಕಾರವು ಅಂತರರಾಷ್ಟ್ರೀಯ ಹೂಡಿಕೆದಾರರನ್ನು ತುಷ್ಟೀಕರಿಸಲು ಮತ್ತು ಪಾಲಿಸಿದಾರರ ವೆಚ್ಚದಲ್ಲಿ ಭಾರಿ ಲಾಭವನ್ನು ಗಳಿಸಲು ಮಾರಾಟವಾಗುತ್ತಿರುವ ಷೇರುಗಳ ಮೌಲ್ಯವನ್ನು ತಗ್ಗಿಸಿ ಲೆಕ್ಕ ಹಾಕಿಸಿದೆ. ಎಲ್ಐಸಿ ಆಸ್ತಿಗಳ ಮೌಲ್ಯ ರೂ. 38 ಲಕ್ಷ ಕೋಟಿಗಳು, ಒಂದು ಲಕ್ಷಕ್ಕೂ ಹೆಚ್ಚು ನಿಯಮಿತ ಉದ್ಯೋಗವನ್ನು ಒದಗಿಸುತ್ತದೆ ಮತ್ತು ದೇಶಾದ್ಯಂತ 14 ಲಕ್ಷ ಏಜೆಂಟರನ್ನು ಹೊಂದಿದೆ.

ಬೇಕಾಬಿಟ್ಟಿಯಾಗಿ ಎಲ್ಐಸಿ ಯ ಅಪಮೌಲ್ಯಮಾಪನವನ್ನು ನಡೆಸಿರುವುದನ್ನು ಬಲವಾಗಿ ಖಂಡಿಸುತ್ತ  ಷೇರುಗಳ ಭವಿಷ್ಯದ ಕಂತುಗಳ ಈ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಲು ಪೊಲಿಟ್ ಬ್ಯೂರೋ ಕರೆ ನೀಡುತ್ತದೆ.

ಆಕ್ರೋಶಕಾರೀ ಕೋಮುವಾದಿ ಹಿಂಸಾಚಾರ

ದೇಶದ ಹಲವು ರಾಜ್ಯಗಳ ವಿವಿಧ ಭಾಗಗಳಲ್ಲಿ ಕೋಮು ಹಿಂಸಾಚಾರದ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಪೊಲಿಟ್ ಬ್ಯೂರೋ ಆಳವಾದ ಕಳವಳ ಮತ್ತು ಆತಂಕವನ್ನು ವ್ಯಕ್ತಪಡಿಸಿದೆ. ಈ ಘಟನೆಗಳ ಹಿಂದೆ  ಒಂದು ದುಷ್ಟ ವಿಧಾನವಿದೆ. ರಾಮ ನವಮಿ ಮತ್ತು ಹನುಮ ಜಯಂತಿಯಂತಹ ಧಾರ್ಮಿಕ ಹಬ್ಬಗಳನ್ನು ಕೋಮು ಹಿಂಸಾಚಾರವನ್ನು ಪ್ರಚೋದಿಸುವ ಆಕ್ರಮಣಕಾರಿ ಶಸ್ತ್ರಧಾರೀ ಧಾರ್ಮಿಕ ಮೆರವಣಿಗೆಗಳನ್ನು ಹರಿಯಬಿಡಲು ಬಳಸಲಾಯಿತು. ಇಂತಹ ಮೆರವಣಿಗೆಗಳಿಗೆ ಮುಂಚಿತವಾಗಿ ಪ್ರಚೋದನಕಾರೀ ದ್ವೇಷಭಾಷಣಗಳು ನಡೆದಿವೆ.. ಮುಸ್ಲಿಮರ ವಿರುದ್ಧ ನರಮೇಧವನ್ನು ಹರಿಯಬಿಡುವ  ಕರೆ ಕೊಟ್ಟವರಿಗೆ ಶಿಕ್ಷೆಯಾಗುವುದಿಲ್ಲ, ಇದು ದ್ವೇಷ ಮತ್ತು ಹಿಂಸಾಚಾರವನ್ನು ಹರಡಲು ಅಧಿಕೃತ ಕೃಪಾಪೋಷಣೆ ಇದೆ ಎಂಬುದನ್ನು ದೃಢಪಡಿಸುತ್ತದೆ.

ದ್ವೇಷ ಭಾಷಣಗಳು ಮತ್ತು ಧರ್ಮಾಂಧತೆಯನ್ನು ಪ್ರತಿಪಾದಿಸುವ ಕ್ರಮಗಳ ವಿರುದ್ಧ ಪ್ರಧಾನಿಯವರ ಮೌನವು ಇಂತಹ ಖಾಸಗಿ ಶಸ್ತ್ರಧಾರೀ  ಗುಂಪುಗಳು ಅಧಿಕೃತ ಕೃಪಾಪೋಷಣೆಯನ್ನು ಅನುಭವಿಸುತ್ತಿವೆ ಎಂಬುದಕ್ಕೆ ಇದು ಜ್ವಲಂತ ಸಾಕ್ಷಿ.

ಶಾಂತಿಯನ್ನು ಕಾಪಾಡಿಕೊಳ್ಳಬೇಕು,  ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸಲು ದ್ವೇಷಭಾಷಣ ಮತ್ತು ಹಿಂಸಾಚಾರವನ್ನು ಹರಡುವವರ ಈ ದುಷ್ಟ ಉದ್ದೇಶಗಳನ್ನು ವಿಫಲಗೊಳಿಸಬೇಕು ಎಂದು  ಪೊಲಿಟ್ ಬ್ಯೂರೋ ಎಲ್ಲಾ ಜನವಿಭಾಗಗಳಿಗೆ ಮನವಿ ಮಾಡುತ್ತದೆ. ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಲು, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಸ್ವತಂತ್ರವಾಗಿ ಮತ್ತು ಜಂಟಿಯಾಗಿ ಕೆಲಸ ಮಾಡುವಂತೆ ಪೊಲಿಟ್‍ ಬ್ಯುರೊ ಪಕ್ಷದ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.

ಬುಲ್ಡೋಜರ್ ರಾಜಕೀಯಕ್ಕೆ ಖಂಡನೆ

ಜಹಾಂಗೀರ್ ಪುರಿ ಮತ್ತು ದೆಹಲಿಯ ಇತರ ಪ್ರದೇಶಗಳಲ್ಲಿ ಗುರಿಯಿಟ್ಟು ಕೆಡವಿ ಹಾಕುವ ಅಭಿಯಾನಗಳು ಉದ್ವಿಗ್ನತೆಯನ್ನು ಸೃಷ್ಟಿಸುವ ಮತ್ತು ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ನೀಚ ಪ್ರಯತ್ನಗಳ ಅಭಿನ್ನ ಭಾಗವಾಗಿವೆ. ಬುಲ್ಡೋಜರ್ ರಾಜಕೀಯವು ಬಡ ಜನರು ಮತ್ತು ಕಾರ್ಮಿಕ ವರ್ಗದ ಕುಟುಂಬಗಳ ಸೂರುಗಳನ್ನು ನೆಲಸಮ ಮಾಡಿದೆ.

ಅಕ್ರಮ ಕಟ್ಟಡಗಳು ಮತ್ತು ಅತಿಕ್ರಮಣಗಳನ್ನು ಕೆಡವಲು ಕಾನೂನುಗಳು ಮತ್ತು ವಿಧಿ-ವಿಧಾನಗಳು ಇವೆ. ಇಂತಹ ಬುಲ್ಡೋಜರ್ ರಾಜಕಾರಣ ಇವುಗಳನ್ನು ಭಂಡತನದಿಂದ ಉಲ್ಲಂಘಿಸುತ್ತದೆ. ನ್ಯಾಯಾಂಗದ ಮಧ್ಯಪ್ರವೇಶ ಸದ್ಯಕ್ಕೆ ಜಹಾಂಗೀರ್ ಪುರಿ ಯಲ್ಲಿ ಇದನ್ನು ನಿಲ್ಲಿಸಿದೆ, ಆದರೆ ಅಂತಹ ಕ್ರಮಗಳು ವಿವಿಧ ಸ್ಥಳಗಳಲ್ಲಿ ಮುಂದುವರೆದಿದೆ. ಯಾವುದೇ ಅಕ್ರಮ ಕಟ್ಟಡಗಳನ್ನು ತೆಗೆದುಹಾಕುವ ಕೆಲಸ ಕಾನೂನಿಗೆ ಅನುಸಾರವಾಗಿರಬೇಕು ಮತ್ತು ನಿಗದಿಪಡಿಸಿದ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಬಡಜನರಿಗೆ ಪರ್ಯಾಯ ಜೀವನೋಪಾಯ ಮತ್ತು ಆಶ್ರಯವನ್ನು ಖಾತರಿಪಡಿಸುವವರೆಗೆ ಎಲ್ಲಾ ಕೆಡಹುವ ಕೆಲಸಗಳು ನಿಲ್ಲಬೇಕು.

ಬೆಳೆಯುತ್ತಿರುವ ಸರ್ವಾಧಿಕಾರಶಾಹಿ

ಪ್ರಧಾನ ಮಂತ್ರಿಗಳು ಮತ್ತು ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಬಂಧಿಸಿದ, ಮತ್ತೆ ಬಂಧಿಸಿದ ರೀತಿಯನ್ನು ಪೊಲಿಟ್ ಬ್ಯೂರೋ ತೀವ್ರವಾಗಿ ಖಂಡಿಸಿದೆ.

‘ರಾಜದ್ರೋಹ’ ಕಾನೂನನ್ನು ರದ್ದುಗೊಳಿಸಿ: ದೇಶದ್ರೋಹದ ಕಾನೂನನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುವುದರಿಂದಾಗಿ, ಈ ಕಾನೂನಿನ ನಿಬಂಧನೆಯನ್ನು ಮರುಪರಿಶೀಲಿಸುವುದಾಗಿ ಮತ್ತು ಮರುಪರೀಕ್ಷಿಸುವುದಾಗಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಲೇ ಬೇಕಾಗಿ ಬಂದಿದೆ. ಐಪಿಸಿಯ ಸೆಕ್ಷನ್ 124 ಎ ಅನ್ನು ಸದ್ಯಕ್ಕೆ ಅಮಾನತಿನಲ್ಲಿಡುವಂತೆ ಸುಪ್ರಿಂ ಕೋರ್ಟ್ ಆದೇಶಿಸಿರುವುದು ಮತ್ತು ಎಲ್ಲಾ ಬಾಕಿ ಇರುವ ವಿಚಾರಣೆಗಳಿಗೆ ತಡೆ ಹಾಕಿರುವುದು ಹಾಗೂ ದೇಶದ್ರೋಹ ಕಾನೂನಿನಡಿಯಲ್ಲಿ ಹೊಸ ಪ್ರಕರಣಗಳನ್ನು ದಾಖಲಿಸದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿರುವುದು ಒಳ್ಳೆಯ ಸಂಗತಿ. ಸುಪ್ರಿಂ ಕೋರ್ಟ್‍ ಈ ಸರ್ಕಾರದ ಮರುಪರಿಶೀಲನೆಗೆ ಕಾಯದೆ ಜುಲೈ 2022 ರಲ್ಲಿ ವಿಚಾರಣೆಯನ್ನು ಪುನರಾರಂಭಿಸಿದಾಗ ಭಾರತೀಯ ದಂಡ ಸಂಹಿತೆಯ ಈ ಕಾಲಕ್ಕೆ ತಕ್ಕುದಲ್ಲದ  ಸೆಕ್ಷನ್ 124 A ಅನ್ನು ರದ್ದುಗೊಳಿಸಲು ಮುಂದಾಗಬೇಕು.

ಮತ್ತೊಂದು ಗಂಭೀರ ಬೆಳವಣಿಗೆಯೆಂದರೆ, ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ, 2022 ಭಾರತವನ್ನು 180 ದೇಶಗಳಲ್ಲಿ 150 ನೇ ಸ್ಥಾನದಲ್ಲಿ ಇರಿಸಿದೆ. ಭಾರತ  ಕಳೆದ ವರ್ಷದ 142 ನೇ ಮತ್ತು 2016 ರಲ್ಲಿದ್ದ 133 ಸ್ಥಾನದಿಂದ ಇನ್ನೂ ಕೆಳಕ್ಕೆ  ಕುಸಿದಿದೆ.

ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ-ಮರುವಿಂಗಡಣೆ  ಆಯೋಗದ ಶಿಫಾರಸುಗಳನ್ನು ತಿರಸ್ಕರಿಸಬೇಕು.

ಜಮ್ಮು ಮತ್ತು ಕಾಶ್ಮೀರದ ಜನಸಂಖ್ಯಾ ಸ್ವರೂಪ ಮತ್ತು ಸಂಯೋಜನೆಯನ್ನು ಬದಲಾಯಿಸುವ ಗುರಿಯನ್ನು ಹೊಂದಿರುವ, ಸ್ಪಷ್ಟವಾಗಿ ರಾಜಕೀಯವಾಗಿ ಪ್ರೇರೇಪಿತವಾಗಿರುವ ಈ ಶಿಫಾರಸುಗಳನ್ನು ತಿರಸ್ಕರಿಸಬೇಕೆಂದು ಪೊಲಿಟ್ ಬ್ಯೂರೋ ಒತ್ತಾಯಿಸಿತು.

ಚುನಾವಣಾ ಕ್ಷೇತ್ರಗಳ ಯಾವುದೇ ಮರುವಿಂಗಡಣೆಯಲ್ಲಿ ಜನಸಂಖ್ಯೆಯು ಒಂದು ಪ್ರಮುಖ ಅಂಶವಾಗಿದೆ. 2011 ರ ಜನಗಣತಿಯ ಪ್ರಕಾರ, ಕಾಶ್ಮೀರದ ಜನಸಂಖ್ಯೆ 68.9 ಲಕ್ಷ ಮತ್ತು ಜಮ್ಮುವಿನ ಜನಸಂಖ್ಯೆಯು 53.8 ಲಕ್ಷ. ನ್ಯಾಯಯುತವಾದ ಮರುವಿಂಗಡಣೆ 90 ಸದಸ್ಯರ ವಿಧಾನಸಭೆಯಲ್ಲಿ ಕಾಶ್ಮೀರಕ್ಕೆ 51 ಮತ್ತು ಜಮ್ಮುವಿಗೆ 39 ಸ್ಥಾನಗಳನ್ನು ನೀಡುತ್ತಿತ್ತು. ಬದಲಾಗಿ, ಈ ಶಿಫಾರಸುಗಳು ಕಾಶ್ಮೀರಕ್ಕೆ 47 ಮತ್ತು ಜಮ್ಮುವಿಗೆ 43 ಸ್ಥಾನಗಳನ್ನು ನೀಡುತ್ತವೆ.

ಕೋವಿಡ್ ಸಾವುಗಳ ಡಬ್ಲ್ಯುಹೆಚ್‍ಒ ಅಂದಾಜು

ಭಾರತದಲ್ಲಿ ಕೋವಿಡ್ ಸಂಬಂಧಿತ ಸಾವುಗಳ ಕುರಿತು ಇತ್ತೀಚೆಗೆ ಬಿಡುಗಡೆಯಾದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‍ಒ) ಅಂದಾಜಿನ ಬಗ್ಗೆ ಪೊಲಿಟ್ ಬ್ಯೂರೋ ತೀವ್ರ ಕಳವಳ ವ್ಯಕ್ತಪಡಿಸಿದೆ. ಡಬ್ಲ್ಯುಎಚ್‌ಒ ಅಂದಾಜು ಪ್ರಕಾರ  ಇಂತಹ ಸಾವುಗಳ ಸಂಖ್ಯೆ 47 ಲಕ್ಷ, ಅಂದರೆ ಅಧಿಕೃತ ಅಂಕಿಅಂಶ 4.8 ಲಕ್ಷಕ್ಕಿಂತ 10 ಪಟ್ಟು ಹೆಚ್ಚು. ಅನೇಕ ರಾಜ್ಯಗಳಲ್ಲಿ, ಕೋವಿಡ್ ಸಾವಿನ ಪರಿಹಾರವನ್ನು ಅಧಿಕೃತ ಸಾವಿನ ಸಂಖ್ಯೆಯ ಹಲವು ಪಟ್ಟು ಹೆಚ್ಚು ಸಂಖ್ಯೆಯಲ್ಲಿ ಮಂಜೂರು ಮಾಡಲಾಗಿದೆ. ಬಿಜೆಪಿ ಆಡಳಿತವಿರುವ ಗುಜರಾತ್‌ನಲ್ಲಿ ಅಧಿಕೃತ ಸಾವಿನ ಸಂಖ್ಯೆಗಿಂತ 10 ಪಟ್ಟು ಪರಿಹಾರ ನೀಡಲಾಗಿದೆ. ಇದು ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಮೋದಿ ಸರ್ಕಾರದ ಕ್ರಿಮಿನಲ್ ಅಪರಾಧಕ್ಕೆ ಮಾತ್ರವಲ್ಲ, ಅದರ ಕುಖ್ಯಾತ ದತ್ತಾಂಶ  ವಂಚನೆಯ ಬಗ್ಗೆಯೂ ಬಂದಿರುವ ದೋಷಾರೋಪಣೆಯಾಗಿದೆ. ಇದು ಬಹು ನಿಂದನೀಯ. ಮೋದಿ ಸರ್ಕಾರ ಸತ್ತವರನ್ನು ಎಣಿಸಲು ನಿರಾಕರಿಸುವ ಮೂಲಕ ಅವರನ್ನು ಅವಮಾನಿಸಬಾರದು. ಅವರೆಲ್ಲರ ಕುಟುಂಬಗಳಿಗೆ ಸುಪ್ರಿಂ ಕೋರ್ಟ್‍ ಆದೇಶಿಸಿರುವ ಪರಿಹಾರವನ್ನು  ಕೊಡಬೇಕು.

ಪೊಲಿಟ್ ಬ್ಯೂರೋ ಮತ್ತು ಕೇಂದ್ರ ಸಮಿತಿ ಸದಸ್ಯರ ನಡುವೆ ಜವಾಬ್ದಾರಿಗಳ ಹಂಚಿಕೆ

ಇತ್ತೀಚೆಗೆ ಮುಕ್ತಾಯಗೊಂಡ ಸಿಪಿಐ(ಎಂ)ನ 23ನೇ ಮಹಾಧಿವೇಶನದ ನಂತರ ಮೊದಲ ಬಾರಿಗೆ ಸಭೆ ಸೇರಿದ ಪೊಲಿಟ್ ಬ್ಯೂರೋ, ಕೆಲಸದ ಮತ್ತು ಜವಾಬ್ದಾರಿಗಳ ಹಂಚಿಕೆಯನ್ನು ಚರ್ಚಿಸಿತು. ಇದನ್ನು ಜೂನ್ 18-19, 2022 ರಂದು ನಡೆಯಲಿರುವ ಸಭೆಯಲ್ಲಿ ಕೇಂದ್ರ ಸಮಿತಿಯ ಪರಿಗಣನೆಗಾಗಿ ಪ್ರಸ್ತುತಪಡಿಸಲಾಗುವುದು.

Leave a Reply

Your email address will not be published. Required fields are marked *