ಋಣ ಮುಕ್ತ ಕಾನೂನನ್ನು ಜಾರಿಗೊಳಿಸಿ ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಕಿರುಕುಳಗಳಿಂದ ಮಹಿಳೆಯರನ್ನು ರಕ್ಷಿಸಲು ಒತ್ತಾಯಿಸಿ ನಿರ್ಣಯ

ಕೋವಿಡ್ ಸಾಂಕ್ರಾಮಿಕತೆಯ ಎರಡು ಅಲೆಗಳು ಮತ್ತು ಅಯೋಜಿತವಾದ ಲಾಕ್‌ಡೌನ್ ನಿಂದ ಸಾಮಾನ್ಯ ಜನತೆ ಅದರಲ್ಲೂ ಮಹಿಳೆಯರು ಇನ್ನು ಚೇತರಿಸಿಕೊಂಡಿಲ್ಲ. ಜೀವನಾಧಾರಗಳನ್ನು ಕಳೆದುಕೊಂಡ ಜನತೆ ಕನಿಷ್ಠ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಲಗಳ ಸುಳಿಗೆ ಸಿಲುಕಿದ್ದು ಹೊರಬರಲು ಹಲವು ನಮೂನೆಯ ದುಡಿಮೆಗೆ ಹೆಗಲು ನೀಡುತ್ತಾ ಜರ್ಜರಿತರಾಗಿದ್ದಾರೆ.

ಬ್ಯಾಂಕುಗಳ ಅಲಭ್ಯತೆ, ಸುಲಭದಲ್ಲಿ ಬ್ಯಾಂಕುಗಳಿಂದ ಸಾಲಸೌಲಭ್ಯಗಳು ಸಿಗದಿರುವುದು, ಸರ್ಕಾರಿ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಕಾರ್ಯಾಚರಣೆ ಇಲ್ಲದಿರುವುದು, ಬ್ಯಾಂಕ್‌ಗಳಲ್ಲಿ ಗಿರವಿ ಇಡಲು ಆಸ್ತಿ ಮತ್ತು ಒಡವೆಗಳಿಲ್ಲದಿರುವುದು, ಖಾಸಗಿಯಾಗಿ ಸಿಗುವ ಸಾಲದ ಮೇಲಿನ ಅಧಿಕಬಡ್ಡಿ, ಚಕ್ರಬಡ್ಡಿ. ದಲ್ಲಾಳಿಗಳ ಕಿರುಕುಳಗಳು ಇವುಗಳಿಂದ ಹೊರಬರಲು ಪರ್ಯಾಯ ಮಾರ್ಗೋಪಾಯಗಳಿಲ್ಲದೇ ಮನೆಬಾಗಿಲಿಗೆ ಬರುವ ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಸಾಲಗಳಿಗೆ ಲಕ್ಷಾಂತರ ಮಹಿಳೆಯರು ಸಿಲುಕಿದ್ದಾರೆ.

ಬ್ಯಾಂಕುಗಳಿಂದ ಕಡಿಮೆ ಬಡ್ಡಿಗೆ ಸಾಲಗಳನ್ನು ಪಡೆದು ಮಹಿಳೆಯರಿಗೆ ಅಧಿಕ ಬಡ್ಡಿ ವಿಧಿಸುವ ಈ ಸಂಸ್ಥೆಗಳು ರಾಜ್ಯದಲ್ಲಿ ಅನಿಯಂತ್ರಿತವಾಗಿ ಮತ್ತು ಪ್ರಶ್ನಾತೀತವಾಗಿ ವಿಸ್ತಾರಗೊಂಡಿವೆ. ಇವರಿಂದ ಸಾಲ ಪಡೆದ ಮಹಿಳೆಯರಲ್ಲಿ ಬಹುಸಂಖ್ಯಾತರು ಕುಟುಂಬದ ಕನಿಷ್ಟ ನಿರ್ವಹಣೆಗೆ, ಕೋವಿಡ್ ಮತ್ತು ಕೋವಿಡ್ಯೇತರ ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ, ಕೋವಿಡ್ ಸಾವುಗಳ ಸಂದರ್ಭದಲ್ಲಿ ಹೆರಿಗೆ, ಬಾಣಂತನದ ಸಂದರ್ಭ ನಿಭಾಯಿಸಲು, ಮಕ್ಕಳ ಶಾಲಾ ಕಾಲೇಜು ಶುಲ್ಕಗಳನ್ನು ಪಾವತಿಸಲು, ಸಾಲಗಳ ಮರುಪಾವತಿಗಾಗಿ ಸಾಲ ಪಡೆದವರಾಗಿದ್ದಾರೆ. ಬಹುಸಂಖ್ಯಾತ ಮಹಿಳೆಯರಿಗೆ ತಾವು ತೆಗೆದುಕೊಂಡಿರುವ ಸಾಲ ಕಟ್ಟಬೇಕಾದ ವಾರದ/ತಿಂಗಳ ಕಂತುಗಳ ಹಣದ ಮಾಹಿತಿ ಇದೆ. ಆದರೆ, ಅದರೊಂದಿಗೆ ಮಿಳಿತಗೊಂಡಿರುವ ಬಡ್ಡಿ ಮತ್ತು ಚಕ್ರ ಬಡ್ಡಿಯ ವಿವರಗಳು ತಿಳಿದಿಲ್ಲ. ಅದರಲ್ಲು ಗ್ರಾಮಾಂತರ ಮತ್ತು ಹಿಂದುಳಿದ ಜಿಲ್ಲೆಗಳಲ್ಲಿ ಅವರಿಗೇ ಅರಿವಿಲ್ಲದಂತೆ ಶೋಷಣೆಗೆ ಒಳಗಾಗಿರುವುದನ್ನು ನೋಡಬಹುದು.

ಗುಂಪಿನಲ್ಲಿ ಯಾರಾದರು ಒಬ್ಬರು ಸಾಲ ಪಡೆದು ತೀರಿಸಲಾಗದಿದ್ದರೆ ಇಡೀ ಗುಂಪನ್ನು ಹೊಣೆ ಮಾಡುವ ಎಂ.ಎಫ್.ಐ.ಗಳ ಹುನ್ನಾರಗಳಿಂದ ಬಾಧಿತ ಮಹಿಳೆಯರು ಸಾರ್ವಜನಿಕ ಅಪಮಾನಕ್ಕೆ ಒಳಗಾಗುವುದು ಹಲ್ಲೆ ದೌರ್ಜನ್ಯಗಳಿಗೆ ಒಳಗಾಗುತ್ತಿರುವುದನ್ನು ನಾಡಿನಾದ್ಯಂತ ಕಾಣಬಹುದು. ಅದರಲ್ಲೂ ಧರ್ಮಸ್ಥಳ ಗುಂಪುಗಳು ಎಲ್ಲ ಜಿಲ್ಲೆಗಳನ್ನು ವಿಸ್ತರಿಸಿದ್ದು ಸಾಲ ಸೌಲಭ್ಯಗಳ ನೆರವು ನೀಡುತ್ತಾ ಗುಂಪಿನ ಮಹಿಳೆಯರನ್ನು ರಾಜಕೀಯ/ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ವ್ಯವಸ್ಥಿತ ಜಾಲವನ್ನೇ ಹೊಂದಿದ್ದಾರೆ. ಆರ್.ಬಿ.ಐ. ಈ ವಲಯವನ್ನು ಆದ್ಯತಾ ವಲಯವೆಂದು ಅವಲಂಬಿಸಿರುವುದು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಮತ್ತಷ್ಟು ಪುಷ್ಟೀಕರಿಸಿದೆ. ಈ ಹಿನ್ನಲೆಯಲ್ಲಿ

ನಮ್ಮ ಹಕ್ಕೊತ್ತಾಯಗಳು

  • ಋಣಮುಕ್ತ ಕಾನೂನನ್ನು ಜಾರಿಗೊಳಿಸಿ ಮಹಿಳೆಯರ ಮೇಲಿರುವ ಸಾಲಗಳನ್ನು ಮನ್ನಾ ಮಾಡಿ.
  • ಕೋವಿಡ್ ಸಾಂಕ್ರಾಮಿಕತೆಯಿಂದ ಚೇತರಿಸಿಕೊಳ್ಳಲು ಶೂನ್ಯ ಬಡ್ಡಿದರದಲ್ಲಿ ಮಹಿಳೆಯರಿಗೆ ಸಾಲಸೌಲಭ್ಯಗಳನ್ನು ನೀಡಿ.
  • ಬ್ಯಾಂಕುಗಳ ಶಾಖೆಗಳನ್ನು ಗ್ರಾಮ ಮಟ್ಟಕ್ಕೆ ವಿಸ್ತರಿಸಿ. ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ರಚನೆಗೆ ಮತ್ತು ವಿಸ್ತರಣೆಗೆ ಆದ್ಯ ಗಮನ ನೀಡಿ, ಮಹಿಳೆಯರಿಗೆ ಆದಾಯದಾಯಕ ಚಟುವಟಿಕೆಗಳ ತರಬೇತಿಗಳನ್ನು ನೀಡಿ ಅವರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆಯ ಖಾತ್ರಿಯನ್ನು ಒದಗಿಸಬೇಕು.
  • ಮಹಿಳೆಯರಿಗೆ ಮಾನಸಿಕ ದೈಹಿಕ ಕಿರುಕುಳಗಳನ್ನು ನೀಡುವ ಅಧಿಕ ಬಡ್ಡಿ ವಿಧಿಸಿ ವಂಚಿಸುವ ಎಂ.ಎಫ್.ಐ. ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
  • ಮಹಿಳೆಯರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲರನ್ನಾಗಿಸುವ ಮೂಲಕ ಬಡತನವನ್ನು ನಿವಾರಿಸುವ ಕೇರಳದ ಕುಟುಂಬಶ್ರಿ ಯೋಜನೆಯ ಮಾದರಿಯಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳನ್ನು ಬಲಪಡಿಸಬೇಕು.

ಮೇಲಿನ ಪ್ರಮುಖ ಹತ್ತೊತ್ತಾಯಗಳನ್ನು ಈಡೇರಿಸಬೇಕೆಂದು ಸಿಪಿಐ(ಎಂ) ರಾಜ್ಯ ಸಮ್ಮೇಳನವು ಒತ್ತಾಯಿಸುತ್ತದೆ ಮತ್ತು ಇದಕ್ಕಾಗಿ ರಾಜ್ಯದಲ್ಲಿ ಪ್ರಬಲವಾದ ಹೋರಾಟಗಳನ್ನು ರೂಪಿಸಬೇಕೆಂದು ಕರೆ ನೀಡಿದೆ.

Leave a Reply

Your email address will not be published. Required fields are marked *