ಅಸ್ಪೃಶ್ಯತಾ ದೌರ್ಜನ್ಯ-ಜಾತಿ ತಾರತಮ್ಯದ ವಿರುದ್ಧ ಜಾಗೃತಿ ಮೂಡಿಸಲು ಮಿಷನ್‌ ರಚಿಸಲು ನಿರ್ಣಯ

ದಲಿತರ ಮೇಲೆ ನಡೆಯುವ ಅಸ್ಪೃಶ್ಯತಾ ದೌರ್ಜನ್ಯ ಮತ್ತು ಜಾತಿ ತಾರತಮ್ಯದ ವಿರುದ್ಧ- ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಮಿಷನ್ ರಚಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ 2022ರ ಜನವರಿ 2 ರಿಂದ 4ರ ವರೆಗೆ ನಡೆದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ 23ನೇ ರಾಜ್ಯ ಸಮ್ಮೇಳನವು ನಿರ್ಣಯವನ್ನು ಅಂಗೀಕರಿಸಿದೆ.

ಜಾತಿ ತಾರತಮ್ಯ ಮತ್ತು  ಅಸ್ಪೃಶ್ಯತಾ ದೌರ್ಜನ್ಯಗಳು, ಜಾತಿಯ ಹೆಸರಿನಲ್ಲಿ ದೇಶದಾದ್ಯಂತ ದಲಿತರ ಮೇಲೆ ವ್ಯಾಪಕವಾಗಿ ನಡೆಯುತ್ತಿವೆ. ಹಾಗೆಯೇ ಕರ್ನಾಟಕ ರಾಜ್ಯದಲ್ಲಿಯೂ ಇಂತಹ ದೌರ್ಜನ್ಯಗಳು ಹೆಚ್ಚು ಕೆಟ್ಟದಾಗಿ ಆಚರಣೆಯಲ್ಲಿವೆ.

ಪ್ರಸಕ್ತ ವರ್ಷ ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಣೆಯ ವರ್ಷವಾಗಿದೆ. ಈ ಸಂದರ್ಭದಲ್ಲಿ ಸಂವಿಧಾನದ ಅನುಚ್ಭೇದ 15ರಲ್ಲಿ ನಮೂದಿಸಿರುವ ಅಸ್ಪೃಶ್ಯತಾ ಆಚರಣೆ ಮತ್ತು ಜಾತಿ ತಾರತಮ್ಯದ ರದ್ದತಿ ಕುರಿತಂತೆ ಜನ ಜಾಗೃತಿಗೊಳಿಸುವ ಸಲುವಾಗಿ ತಕ್ಷಣವೇ ಜಾತಿ ಪದ್ದತಿಯ ಭಾಗವಾಗಿರವ ಅಸ್ಪೃಶ್ಯತೆ ದೌರ್ಜನ್ಯ ಹಾಗೂ ಜಾತಿ ತಾರತಮ್ಯ ನಿರ್ಮೂಲನಾ ಅಭಿಯಾನದ ಮಿಷನ್ ಅನ್ನು ರಚಿಸಬೇಕೆಂದು ಸಿಪಿಐ(ಎಂ) ಕರ್ನಾಟಕ 23ನೇ ರಾಜ್ಯ ಸಮ್ಮೇಳನವು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.

ನಮ್ಮ ದೇಶದಲ್ಲಿ ಜಾತಿ ಎನ್ನುವುದು ವಾಸ್ತವ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಭಾರತೀಯ ಸಂವಿಧಾನವು ಅಸ್ಪೃಶ್ಯತೆಯನ್ನು ಆಚರಿಸುವುದು, ಇದರ ಹೆಸರಿನಲ್ಲಿ ದೌರ್ಜನ್ಯ ವೆಸಗುವುದು, ಅಪರಾಧ ಮತ್ತು ಕಾನೂನಿನಡಿಯಲ್ಲಿ ಶಿಕ್ಷಾರ್ಹ ಎಂದು ಘೋಷಿಸಿತು. ಹಾಗೆಯೇ, ಸಂವಿಧಾನವು ಎಲ್ಲಾ ನಾಗರಿಕರಿಗೆ ಅವರ ಜಾತಿ, ಧರ್ಮ, ಲಿಂಗ ಮತ್ತು ಜನಾಂಗೀಯತೆಯ ಹೊರತಾಗಿಯೂ ಸಮಾನತೆಯ ಹಕ್ಕನ್ನು ಖಾತರಿಪಡಿಸಿತು. ಈ ಎಲ್ಲಾ ಹಕ್ಕುಗಳು ಸಮಾಜದಲ್ಲಿನ ದಲಿತರು ಮತ್ತು ಇತರ ಹಿಂದುಳಿದ ವರ್ಗಗಳಲ್ಲಿ ಬಹಳಷ್ಟು ಭರವಸೆಯನ್ನು ಹುಟ್ಟು ಹಾಕಿದ್ದವು.

ಶತಮಾನಗಳ ಹಿಂದಿನ ಜಾತಿ ತಾರತಮ್ಯ, ಅಸ್ಪೃಶ್ಯತೆ ಮತ್ತು ಜಾತಿ ಆಧಾರಿತ ದೌರ್ಜನ್ಯಗಳು, ಸ್ವಾತಂತ್ರ್ಯ ಬಂದ ನಂತರದ ವರ್ಷಗಳಲ್ಲಿ ಕೊನೆಗೊಳ್ಳುತ್ತವೆ ಎಂದು ದಲಿತರು ದೇಶದ ಪ್ರಗತಿಪರರು ಭಾವಿಸಿದ್ದರು. ಆದರೆ ಅವರೆಲ್ಲರ ನಿರೀಕ್ಷೆ ಕನಸಾಗಿಯೇ ಉಳಿದಿದೆ ಎಂಬುದು ವಿಪರ್ಯಾಸ.

ಎನ್.ಸಿ.ಆರ್.ಬಿ. – ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ ಪ್ರಕಾರ, ಕಳೆದ 2017 ರಿಂದೀಚೆಗೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶಾದ್ಯಂತ ಸುಮಾರು 1,92,900 ಪ್ರಕರಣಗಳಲ್ಲಿ, ಕರ್ನಾಟಕದಲ್ಲಿಯೇ 9512 ಪ್ರಕರಣಗಳು ದಾಖಲಾಗಿದೆ. ಕೋವಿಡ್-19 ರ ಲಾಕ್‌ಡೌನ್ ಸಮಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಅಂದರೆ, ಸುಮಾರು ಶೇ.9.7 ರಷ್ಷು  ಅಸ್ಪೃಶ್ಯತೆ ದೌರ್ಜನ್ಯಗಳು ಹೆಚ್ಚಳವಾಗಿರುವುದು ಅಧಿಕೃತವಾಗಿ ದಾಖಲಾಗಿವೆ. ಇದರಲ್ಲಿ ಅಖಿಲ ಭಾರತ ಮಟ್ಟದಲ್ಲಿ ಶಿಕ್ಷೆಯ ಪ್ರಮಾಣ ಶೇ. 5.4 ರಷ್ಟಿದ್ದರೆ, ಕರ್ನಾಟಕದಲ್ಲಿ ಕೇವಲ ಶೇ. 4.4 ರಷ್ಟು ಮಾತ್ರ. ದಕ್ಷಿಣ ಭಾರತದಲ್ಲಿಯೇ ಅತಿ ಕಡಿಮೆ ಇದಾಗಿದೆ.

ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ, ಅಮೃತ ಮಹೋತ್ಸವ ಆಚರಣೆ ಮಾಡುತ್ತಿರುವ ನಮ್ಮ ದೇಶದಲ್ಲಿ ಮತ್ತು ನಮ್ಮ ರಾಜ್ಯದಲ್ಲೂ ಜಾತಿ ತಾರತಮ್ಯವನ್ನು ವಿವಿಧ ರೀತಿಯಲ್ಲಿ ಅನುಸರಿಸಲಾಗುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತ ಪರಿಸ್ಥಿತಿ. ಇದು ನಮ್ಮ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಪ್ರಚಲಿತದಲ್ಲಿದೆ.
ದಲಿತರಿಗೆ ಜಾತಿಯ ಹೆಸರಿನಲ್ಲಿ ಸಾಮಾಜಿಕವಾಗಿ ಮಾತ್ರ ಬಹಿಷ್ಕಾರ ಹೇರುತ್ತಿಲ್ಲ, ಜೊತೆಗೆ ಆರ್ಥಿಕವಾಗಿಯೂ ನಿರ್ಬಂಧ ಹೇರಲಾಗುತ್ತಿದೆ. ಬಡ ದಲಿತ ಸಮುದಾಯ, ಈ ತಾರತಮ್ಯದ ಕೆಟ್ಟ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ.

ಇದರೊಂದಿಗೆ, ಆರ್ಥಿಕವಾಗಿ ಉತ್ತಮವಾಗಿರುವ, ಮಧ್ಯಮ ವರ್ಗಗಳಾಗಿರುವ ವಿದ್ಯಾವಂತ ದಲಿತ ವಿಭಾಗಗಳು ಮತ್ತು ಉನ್ನತ ಸ್ಥಾನದಲ್ಲಿರುವ ದಲಿತರು ಸಹ ಕೆಲವೊಮ್ಮೆ ಈ ಅಮಾನವೀಯ ಜಾತಿ  ಅಸ್ಪೃಶ್ಯತೆಯ ಆಚರಣೆಗೆ ಬಲಿಯಾಗುತ್ತಿದ್ದಾರೆ ಎಂದು ಸುಖದೇವ್ ಥೋರತ್ ರ ಸಮೀಕ್ಷೆಯು ಸಾಭೀತುಪಡಿಸಿದೆ.

ಶಿಕ್ಷಣದ ವಂಚನೆಯಿಂದಾಗಿ ದಲಿತರು ಹಳ್ಳಿಗಳನ್ನು, ನಗರಗಳನ್ನು ಸ್ವಚ್ಛಗೊಳಿಸುವ ಉದ್ಯೋಗದಲ್ಲಿ ಮಾತ್ರ ಹೆಚ್ಚಾಗಿ ಸಕ್ರಿಯರಾಗಿ ದುಡಿಯುತ್ತಿದ್ದಾರೆ. ಎಲ್ಲಾ ದಲಿತರು ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಕೆಲಸಗಳನ್ನು ಮಾಡುತ್ತಿಲ್ಲ. ನಿಜ ಆದರೆ, ಎಲ್ಲಾ ಮ್ಯಾನ್ಯುವಲ್  ಸ್ಕ್ಯಾವೆಂಜಿಂಗ್ ಕೆಲಸ ಮಾಡುತ್ತಿರುವವರು ದಲಿತರು ಎಂಬ ವಾಸ್ತವ ಸತ್ಯವನ್ನು ಮಾತ್ರ ಮರೆಯಬಾರದು. ದಲಿತರು ಭಾರತ ದೇಶವನ್ನು ನಿಜ ಅರ್ಥದಲ್ಲಿ ಸ್ವಚ್ಛವಾಗಿಡುತ್ತಿದ್ದಾರೆ-ಸ್ವಚ್ ಭಾರತ್ ನಿರ್ಮಾಣ ಮಾಡುವರು ಇವರೇ ಆಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.

ಕೃಷಿ ಕೂಲಿಕಾರರು ಮತ್ತು ಅಸಂಘಟಿತ ಕಾರ್ಮಿಕರಾಗಿ ದಲಿತರ ಕೆಲಸ ದೇಶದ ಆರ್ಥಿಕ ಬೆಳವಣಿಗೆಗೆ ಅನಿವಾರ್ಯವಾಗಿದೆ. ಇನ್ನೂ, ಸಾಮಾಜಿಕ ಆಚರಣೆಗಳಿಗೆ ಬಂದಾಗ ದಲಿತರು ಹೆಚ್ಚಿನ ಅಮಾನವೀಯ ದೌರ್ಜನ್ಯಗಳು ಮತ್ತು ತಾರತಮ್ಯಕ್ಕೆ ತುತ್ತಾಗುತ್ತಾರೆ. ಮೇಲ್ಜಾತಿಯವರಂತೆ ಅವರು ಅದೇ ಬಾವಿ ಮತ್ತು ಕೆರೆಗಳಿಂದ ನೀರು ಸೇದಬಾರದು. ಚಪ್ಪಲಿಯೊಂದಿಗೆ ನಡೆಯಬಾರದು, ಪೇಟಾಗಳನ್ನು ಧರಿಸಬಾರದು, ಕೆಲವು ಬೀದಿಗಳಲ್ಲಿ ನಡೆಯಬಾರದು, ಹೋಟೆಲುಗಳಲ್ಲಿ ಒಂದೇ ಲೋಟದಿಂದ ಕುಡಿಯಬಾರದು ಮತ್ತು ಒಂದೇ ಮೇಜಿನ ಮೇಲೆ ಕುಳಿತುಕೊಳ್ಳಬಾರದು. ದೇವಸ್ಥಾನಗಳಿಗೆ ಪ್ರವೇಶವಿಲ್ಲ. ಊಟ ಬಡಿಸುವಾಗ ಪಂಕ್ತಿ ಭೇದ, ಯುವ ದಲಿತರು ಮೀಸೆ ಬಿಡುವಂತಿಲ್ಲ. ಅವರಿಗೆ ಬಾಡಿಗೆಗೆ ಮನೆ ಕೊಡಲ್ಲ. ಹೀಗೆ ನಮ್ಮ ರಾಜ್ಯದಲ್ಲಿ 54 ಕ್ಕೂ ಹೆಚ್ಚು ಅಮಾನವೀಯ ಅಸ್ಪೃಶ್ಯತೆ ಆಚರಣೆಗಳು ಜೀವಂತವಾಗಿವೆ.

ಪ್ರತ್ಯೇಕತೆಯ ತಾರತಮ್ಯದ ಗೋಡೆಗಳನ್ನು ನಿರ್ಮಿಸಲಾಗಿದೆ. ಪ್ರತಿ ಹಳ್ಳಿಗಳಲ್ಲೂ ಇವರ ವಾಸ ಊರಿನ ಆಚೆ, ನಿಂದನೆಗಳನ್ನು ಮಾಡಲಾಗುತ್ತದೆ. ಉನ್ನತ ಸ್ಥಾನದಲ್ಲಿರುವ ಕೆಲವೇ ದಲಿತರು ಅವಮಾನದಿಂದ ಬದುಕುತ್ತಿದ್ದಾರೆ. ಐಎಎಸ್ ಐಪಿಎಸ್ ಅಧಿಕಾರಿಗಳು ಅವಮಾನ ತಾಳಲಾರದೆ ಉದ್ಯೋಗ ತ್ಯಜಿಸುತ್ತಿದ್ದಾರೆ. ದಲಿತ ನ್ಯಾಯಾಧೀಶರು ನಿವೃತ್ತರಾದರೆ ಅಥವಾ ವರ್ಗಾವಣೆಯನ್ನು ಪಡೆದರೆ ಮತ್ತು ಅವರ ಸ್ಥಾನದಲ್ಲಿ ಮೇಲ್ಜಾತಿಯ ನ್ಯಾಯಾಧೀಶರನ್ನು ನೇಮಿಸಿದಾಗ, ದಲಿತ ನ್ಯಾಯಾಧೀಶರು ಕುಳಿತುಕೊಳ್ಳುವ ಆಸನವನ್ನು ಶುದ್ಧೀಕರಣಕ್ಕೆ ಒಳಪಡಿಸಲಾಗುತ್ತದೆ. ಮದುವೆಗಳಲ್ಲಿ ದಲಿತ ಚುನಾಯಿತ ಪ್ರತಿನಿಧಿಗಳು ಕೂಡ ತಮ್ಮ ಮೇಲ್ಜಾತಿಯ ಸಹವರ್ತಿಗಳೊಂದಿಗೆ ಕುಳಿತು ಊಟ ಮಾಡುವಂತಿಲ್ಲ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ದಲಿತ ವಿದ್ಯಾರ್ಥಿಗಳಿಗೆ ಅವರ ಜಾತಿಯ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿದೆ. ಯಾವುದೇ ಪರಿಹಾರ ತರಬೇತಿಗಳನ್ನು ನಡೆಸಲಾಗುವುದಿಲ್ಲ ಮತ್ತು ಕೆಲವೊಮ್ಮೆ, ಅವರಿಗೆ ಉದ್ದೇಶಪೂರ್ವಕವಾಗಿ ಕಡಿಮೆ ಅಂಕಗಳನ್ನು ನೀಡಲಾಗುತ್ತದೆ. ಹಲವು ಬಾರಿ ಅನುತ್ತೀರ್ಣ ಮಾಡುತ್ತಾರೆ. ದಲಿತರ ಮಹಿಳೆಯರು ಅಡುಗೆ ಮಾಡುತ್ತಾರೆ ಎಂಬ ಕಾರಣದಿಂದಾಗಿ, ಶಾಲಾ ಮಕ್ಕಳು ಮಧ್ಯಾಹ್ನ ಬಿಸಿಯೂಟವನ್ನು ತಿನ್ನುವುದಿಲ್ಲ. ದಲಿತರು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಅಸಂಖ್ಯಾತ ರೀತಿಯ ತಾರತಮ್ಯದ ಕೆಲವು ಸಣ್ಣ ಉದಾಹರಣೆಗಳು ಮಾತ್ರ ಇವು.

ದಲಿತರು ಧೈರ್ಯ ಮಾಡಿ ಈ ತಾರತಮ್ಯ ಆಚರಣೆಗಳ ವಿರುದ್ಧ ದೂರು ನೀಡಿದಾಗ, ಹಲವು ಬಾರಿ ಪೊಲೀಸರು ಪ್ರಕರಣಗಳನ್ನು ದಾಖಲಿಸಲು ನಿರಾಕರಿಸುತ್ತಾರೆ. ಪ್ರಕರಣಗಳು ದಾಖಲಾದಾಗ ತನಿಖೆ ಸರಿಯಾಗಿ ನಡೆಯುವುದಿಲ್ಲ. ನ್ಯಾಯಾಲಯದ ಮೆಟ್ಟಿಲೇರುವ ಕೆಲವು ಪ್ರಕರಣಗಳನ್ನು ಸಾಕ್ಷ್ಯಾಧಾರಗಳ ಕೊರತೆಯ ಹೆಸರಿನಲ್ಲಿ ವಜಾಗೊಳಿಸಲಾಗುತ್ತದೆ. ಅನೇಕ ರಾಜ್ಯಗಳ ಅಸೆಂಬ್ಲಿಗಳಂತಹ ಶಾಸಕಾಂಗಗಳು ಮತ್ತು ಸಂಸತ್ತು ಕೂಡ ದಲಿತರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಪರಿಹರಿಸಲು ಕಡಿಮೆ ಪ್ರಾಮುಖ್ಯತೆಯನ್ನು ನೀಡುತ್ತವೆ.

ಈ ಹಿನ್ನೆಲೆಯಲ್ಕಿ ಸಮಾಜವನ್ನು ಸಂಪೂರ್ಣ ಜಾತಿ ಅಸ್ಪೃಶ್ಯತೆ ಮತ್ತು ತಾರತಮ್ಯದಿಂದ ಸ್ವಚ್ಛಗೊಳಿಸಬೇಕಾದ ಅಗತ್ಯವಿದೆ. ರಾಜ್ಯ ಮತ್ತು ದೇಶದಲ್ಲಿ ಜಾತಿ ಪಕ್ಷಪಾತ ತೊಲಗಬೇಕು. ಇದಕ್ಕಾಗಿ ಸಹಜವಾಗಿಯೇ ಆರ್ಥಿಕ ಸಂಬಂಧಗಳಲ್ಲಿ ಬದಲಾವಣೆ ಅಗತ್ಯವಿದೆ. ಆದರೆ ಇದೊಂದೆ ಮಾರ್ಗ ಸಾಕಾಗುವುದಿಲ್ಲ. ಅಸ್ಪೃಶ್ಯತೆ, ಜಾತಿ ತಾರತಮ್ಯದ ಅಮಾನವೀಯ ಆಚರಣೆಗಳ ವಿರುದ್ಧ ಜನರಿಗೆ ಶಿಕ್ಷಣ ನೀಡಲು ವ್ಯಾಪಕ ಮತ್ತು ತೀವ್ರವಾದ ಅಭಿಯಾನವನ್ನು ಪ್ರಾರಂಭಿಸಬೇಕು.

ಸರ್ಕಾರವು ಈಗಾಗಲೇ, ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡಲು, ಆರೋಗ್ಯ ಸಂರಕ್ಷಣೆಯನ್ನು ಸುಧಾರಿಸಲು, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಮತ್ತು ನೈರ್ಮಲ್ಯ ಸ್ಥಿತಿಯನ್ನು ಸುಧಾರಿಸಲು ವಿವಿಧ ರೀತಿಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದೆ. ಈ ಎಲ್ಲಾ ಕಾರ್ಯಾಚರಣೆಗಳು ಜನರ ಮೇಲೆ ಸ್ವಲ್ಪ ಮಟ್ಟದ್ದಲ್ಲಾದರೂ, ಪರಿಣಾಮ ಬೀರಿವೆ. ಜಾತಿ ಅಸ್ಪೃಶ್ಯತೆ ಮತ್ತು ತಾರತಮ್ಯದ ವಿರುದ್ಧ ಇದೇ ರೀತಿಯ ಕಾರ್ಯಾಚರಣೆಯನ್ನು ಪ್ರಾರಂಭಿಸಬೇಕು.

ಪೋಲಿಯೊ ದೇಹವನ್ನು ಊನಗೊಳಿಸುವಂತೆ ಜಾತಿ ತಾರತಮ್ಯ ನಮ್ಮ ಸಮಾಜವನ್ನು ಊನಗೊಳಿಸುತ್ತದೆ. ನಮ್ಮ ದೇಶವು ತನ್ನ ಎಲ್ಲಾ ಸಂಪನ್ಮೂಲಗಳನ್ನು ಅದರ ಪ್ರಗತಿ ಮತ್ತು ಅಭಿವೃದ್ಧಿಗೆ ಬಳಸಿಕೊಳ್ಳಲು ಜಾತಿ ವ್ಯವಸ್ಥೆ ಅನುಮತಿಸುವುದಿಲ್ಲ. ಈ ಅಪಾಯದ ವಿರುದ್ಧ ತಕ್ಷಣವೇ ಹೋರಾಡುವುದು ಬಹಳ ಮುಖ್ಯ. ಆದ್ದರಿಂದ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದ ವಿರುದ್ಧ ಹೋರಾಡುವ ಮಿಷನ್ ಅನ್ನು ಸರ್ಕಾರವೇ ಪ್ರಾರಂಭಿಸಬೇಕು. ಸರ್ಕಾರವು ಈ ಮಿಷನ್‌ಗೆ ಅಗತ್ಯವಾದ ಹಣವನ್ನು ನಿಗದಿಪಡಿಸಬೇಕು ಮತ್ತು ಮೂಲಸೌಕರ್ಯವನ್ನು ಸೃಷ್ಟಿಸಬೇಕು ಮತ್ತು ವ್ಯಾಪಕ ಪ್ರಚಾರವನ್ನು ಪ್ರಾರಂಭಿಸಬೇಕು.

ಸಿಪಿಐ(ಎಂ)ನ 23ನೇ ರಾಜ್ಯ ಸಮ್ಮೇಳನವು ಜಾತಿ ತಾರತಮ್ಯ, ಅಸ್ಪೃಶ್ಯತೆ ಮತ್ತು ದಲಿತರ ಮೇಲಿನ ದೌರ್ಜನ್ಯಗಳ ನಿರ್ಮೂಲನೆಗಾಗಿ ರಾಜ್ಯ ಮಟ್ಟದ ಮಿಷನ್ ರಚಿಸಬೇಕೆಂದು ಒತ್ತಾಯಿಸುತ್ತದೆ. ಜಾತಿ ತಾರತಮ್ಯದ ವಿರುದ್ಧದ ಹೋರಾಟಗಾರರಾದ ಡಾ. ಬಿ.ಆರ್. ಅಂಬೇಡ್ಕರ್, ಬಸವಣ್ಣ, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ, ನಾರಾಯಣಗುರು, ಪೆರಿಯಾರ್, ಅಯ್ಯಂಕಾಳಿ, ಇಎಂಎಸ್ ನಂಬೂದರಪಾಡ್, ಎ ಕೆ ಗೋಪಾಲನ್ ಮುಂತಾದ ಎಲ್ಲಾ ಸಾಮಾಜಿಕ ಹೋರಾಟಗಾರರಿಗೆ ಇಂತಹ ಧ್ಯೇಯವನ್ನು ರೂಪಿಸುವುದು ನಿಜವಾದ ಅರ್ಥದಲ್ಲಿ ಗೌರವ ಅರ್ಪಿಸಿದಂತಾಗುತ್ತದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೂ ಅರ್ಥಪೂರ್ಣ ಆಶಯವಾಗುತ್ತದೆ. ಸಂವಿಧಾನದ ಆಶಯವಾದ ಸಾಮಾಜಿಕ ನ್ಯಾಯವನ್ನು ರಕ್ಷಣೆ ಮಾಡುವ ನಿಟ್ಡಿನಲ್ಲಿ ಸೂಕ್ತ ಮೈಲುಗಲ್ಲಾಗುತ್ತದೆ.

Leave a Reply

Your email address will not be published. Required fields are marked *