ಪ್ರತಿಭಟನೆಗಳ ಸ್ವಯಂಸ್ಫೂರ್ತ ಮಹಾಪೂರ: ಎಡಪಕ್ಷಗಳ ವಂದನೆ

ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳಲ್ಲಿ ಅಭೂತಪೂರ್ವ ಹೆಚ್ಚಳ ಮತ್ತು ಈ ಮೋದಿ ಸರಕಾರ ಹೇರುತ್ತಿರುವ ಇತರ ಕಠಿಣ ಆರ್ಥಿಕ ಹೊರೆಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ಮತ್ತು ಹರತಾಳದ ಕರೆಗೆ ಜನಗಳು ಸ್ವಯಂಸ್ಫೂರ್ತಿಯಿಂದ ಸ್ಪಂದಿಸಿರುವುದನ್ನು ಎಡಪಕ್ಷಗಳು ಪ್ರಶಂಸಿಸಿವೆ.

ಅತ್ಯಂತ ಯಶಸ್ವಿ ಪ್ರತಿಭಟನೆಗಳ ವರದಿಗಳು ದೇಶದ ಎಲ್ಲೆಡೆಗಳಿಂದ ಬಂದಿವೆ. ಕೆಲವು ರಾಜ್ಯಗಳಲ್ಲಿ-ಕೇರಳ, ಕರ್ನಾಟಕ, ಪಂಜಾಬ್, ಬಿಹಾರ, ಮಹಾರಾಷ್ಟ್ರ, ಪುದುಚೇರಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರಾಗಿ ಎಲ್ಲ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡವು (ಕೇರಳದಲ್ಲಿ ನೆರೆ ಪರಿಹಾರ ಮತ್ತು ಮರುವಸತಿ ಚಟುವಟಿಕೆಗಳಿಗೆ ಈ ಹರತಾಳದಿಂದ ವಿನಾಯ್ತಿ ನೀಡಲಾಯಿತು). ಮತ್ತು ಇತರ ಹಲವು ಭಾಗಗಳಲ್ಲಿ ವ್ಯಾಪಕವಾಗಿ, ಮೋದಿ ಸರಕಾರ ಜನಗಳ ಮೇಲೆ ಹರಿಯ ಬಿಟ್ಟಿರುವ ಆರ್ಥಿಕ ಹಿಂಸಾಚಾರದ ವಿರುದ್ಧ ಪ್ರತಿಭಟಿಸಿ ಸಾಮಾನ್ಯ ಕೆಲಸಕಾರ್ಯಗಳು ಸ್ಥಗಿತಗೊಂಡವು. ಝಾರ್ಖಂಡ್, ಒಡಿಶ, ಈಶಾನ್ಯ, ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಜನಗಳು ಬೀದಿಗಿಳಿದು ಮೋದಿ ಸರಕಾರದ ಧೋರಣೆಗಳ ವಿರುದ್ಧ ಆಕ್ರೋಶ ಪ್ರದರ್ಶಿಸಿದರು ಎಂದು ಎಡಪಕ್ಷಗಳು ಹೇಳಿವೆ,

ದೇಶದ ಎಲ್ಲ ಮೂಲೆಗಳಲ್ಲೂ ಸತತವಾಗಿ  ಸ್ವಯಂಸ್ಫೂರ್ತಿಯಿಂದ ರೈಲ್ ರೋಕೋ, ರಾಸ್ತಾರೋಕೋ, ಧರಣಿ, ಮತಪ್ರದರ್ಶನ ಮುಂತಾದ  ಸಾಮೂಹಿಕ ಪ್ರತಿಭಟನೆಗಳು ನಡೆದಿವೆ. ಈ ಮೋದಿ ಸರಕಾರ ಇಂತಹ ಅಭೂತಪೂರ್ವ ಹೊರೆಗಳನ್ನು ಹೇರುವ ಧೋರಣೆಗಳನ್ನು ಬದಲಿಸದಿದ್ದರೆ, ಜನಗಳೆಲ್ಲ ಒಂದುಗೂಡಿ ಈ ಸರಕಾರವನ್ನೇ ಅಧಿಕಾರದಿಂದ ಇಳಿಸುತ್ತಾರೆ ಎಂಬ ಎಚ್ಚರಿಕೆ ಎಲ್ಲಡೆಗಳಲ್ಲೂ ಕೇಳ ಬಂದಿದೆ. ತ್ರಿಪುರಾದಲ್ಲಿ ಮುಷ್ಕರದ ಕರೆ ಅಭೂತಪೂರ್ವ ಮತ್ತು ಸಂಪೂರ್ಣ ಬೆಂಬಲಗಳಿಸಿದೆ.

ಪಶ್ಚಿಮ ಬಂಗಾಲದಲ್ಲಿ ಹರತಾಳಕ್ಕೆ ತೃಣಮೂಲ ಕಾಂಗ್ರೆಸ್ ರಾಜ್ಯ ಸರಕಾರ ದಮನದ ಮೂಲಕ ವಿರೋಧ ತೋರಿದರೂ ಸಾಮೂಹಿಕ ಪ್ರತಿಭಟನೆಗಳು ವ್ಯಾಪಕವಾಗಿ ನಡೆದಿವೆ ಎಂಬ ಮಹತ್ವದ ಸಂಗತಿಯತ್ತ ಎಡಪಕ್ಷಗಳು ಗಮನ ಸೆಳೆದಿವೆ.

ದೇಶದ ರಾಜಧಾನಿ ದಿಲ್ಲಿ ನಗರದಲ್ಲಿ ಎಡಪಕ್ಷಗಳ ಕಾರ್ಯಕರ್ತರು, ಸಿಪಿಐ(ಎಂ) ಮತ್ತು ಸಿಪಿಐನ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಿಪಿಐ(ಎಂಎಲ್)-ಲಿಬರೇಶನ್, ಎಸ್‌ಯುಸಿಐ ಮತ್ತು ಆರ್‌ಎಸ್‌ಪಿಯ ರಾಷ್ಟ್ರೀಯ ಮುಖಂಡರು ಧರಣಿ ನಡೆಸಿದರು, ಸಂಸದ್ ಮಾರ್ಗದ ವರೆಗೆ ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರನ್ನು ಬಂಧಿಸಿ ಸುಮಾರು ಎರಡು ಗಂಟೆಗಳ ಕಾಲ ಬಂಧನದಲ್ಲಿ ಇಡಲಾಯಿತು.

ಎಡಪಕ್ಷಗಳು ಜನತೆಗೆ ವಂದಿಸುತ್ತ, ಈ ಸರಕಾರದ ವಿರುದ್ಧ ಜನಗಳ ಹೋರಾಟಗಳನ್ನು ಇನ್ನಷ್ಟು ತೀವ್ರಗೊಳಿಸಬೇಕು ಎಂದು ಕರೆ ನೀಡಿವೆ.

Leave a Reply

Your email address will not be published. Required fields are marked *