ಮಾಜಿ ಶಾಸಕ ಜಿ ವಿ ಶ್ರೀರಾಮರೆಡ್ಡಿ ನಿಧನ: ಸಿಪಿಐ(ಎಂ) ಶ್ರದ್ಧಾಂಜಲಿ

ಎರಡು ಬಾರಿ ವಿಧಾನ ಸಭೆಯಲ್ಲಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಶಾಸಕರಾಗಿದ್ದ ಮತ್ತು ಸಿಪಿಐಎಂ ಪಕ್ಷದ ಮಾಜಿ ಕೇಂದ್ರ ಸಮಿತಿ ಸದಸ್ಯರು ಹಾಗೂ ರಾಜ್ಯ ಸಮಿತಿ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದ ಸಂಗಾತಿ ಜಿ.ವಿ. ಶ್ರೀರಾಮರೆಡ್ಡಿಯವರು ಏಪ್ರಿಲ್‌ 15ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿರುತ್ತಾರೆ. ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯು ಅಗಲಿದ ನಾಯಕನಿಗೆ ತನ್ನ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ. ಅದೇ ರೀತಿ, ಅವರ ಅಗಲಿಕೆಯಿಂದ ದುಃಖತಪ್ತರಾದ ಅವರ ಕುಟುಂಬದ ಸದಸ್ಯರು, ದೊಡ್ಡ ಸಂಖ್ಯೆಯ ಬೆಂಬಲಿಗರು, ಅಪಾರ ಅಭಿಮಾನಿಗಳಿಗೆ ತನ್ನ ಸಂತಾಪವನ್ನು ಸಲ್ಲಿಸುತ್ತದೆ.

ಜಿ.ವಿ.ಶ್ರೀರಾಮರೆಡ್ಡಿಯವರು ವಿದ್ಯಾರ್ಥಿ ದೆಸೆಯಲ್ಲಿಯೇ ಮಾರ್ಕ್ಸ್‌ವಾದ ಹಾಗೂ ಲೆನಿನ್‌ವಾದಕ್ಕೆ ಆಕರ್ಷಿತರಾಗಿ, ಚಳುವಳಿಗೆ ಧುಮುಕಿದವರು. ಅವರ ಜೀವಿತದ ಕೊನೆಯವರೆಗೆ ಅದರಲ್ಲಿಯೇ ಮುಂದುವರೆದವರು. ಅದಕ್ಕಾಗಿ ಅವರು ತಮ್ಮ ವೈವಾಹಿಕ ಜೀವನವನ್ನು ತ್ಯಜಿಸಿದ್ದರು.

ರಾಜ್ಯದಲ್ಲಿ ವಿದ್ಯಾರ್ಥಿ-ಯುವಜನ ಚಳುವಳಿಯ ಸಂಘಟನೆಗಳಾದ ಭಾರತ ವಿದ್ಯಾರ್ಥಿ ಫೆಡರೇಷನ್‌(ಎಸ್‌ಎಫ್‌ಐ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿವೈಎಫ್‌ಐ) ಸಂಘಟನೆಯ ಸಂಸ್ಥಾಪನಾ ಮುಖಂಡರಾಗಿದ್ದವರು ಮತ್ತು ರೈತ ಚಳುವಳಿ ಸಂಘಟನೆಯಾದ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌) ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ಭೂಮಿ ಹೋರಾಟದಲ್ಲಿ ಜೈಲು ವಾಸವನ್ನು ಅನುಭವಿಸಿದ್ದರು.

ಮುಖ್ಯವಾಗಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಕಮ್ಯೂನಿಸ್ಟ್ ಪ್ರಭಾವವನ್ನು ಉಳಿಸಿಕೊಂಡು ಬೆಳೆಸುವಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇದರ ಪರಿಣಾಮವಾಗಿ  ವಿಧಾನಸಭೆಯಲ್ಲಿ ಸಿಪಿಐ(ಎಂ) ಪಕ್ಷದ ಶಾಸಕರಾಗಿ ರಾಜ್ಯದ ದುಡಿಯುವ ಜನರ ಪರವಾದ ಬಲವಾದ ಧ್ವನಿಯಾಗಿದ್ದರು. ಬೆಂಗಳೂರು ನಗರದ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಸರಕಾರಿ ಜಮೀನಿನ ಭೂ ಕಬಳಿಕೆ, ಭೂ ಮಾಫಿಯಾದ ವಿರುದ್ಧ ಧೃಢವಾದ ಧ್ವನಿ ಎತ್ತಿದವರು ಮಾತ್ರವಲ್ಲಾ, ಅಂದಿನ ಶಾಸನ ಎ.ಟಿ.ರಾಮಸ್ವಾಮಿ ನೇತೃತ್ವದ ಸದನ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದರು. ಬಳ್ಳಾರಿ ಗಣಿ ಮಾಫಿಯಾದ ವಿರುದ್ದ ಬಲವಾದ ಚಾಟಿ ಬೀಸಿದವರು.

ರಾಜ್ಯದ ಸಮಗ್ರ ನೀರಾವರಿಗಾಗಿ ಮತ್ತು ನೀರಾವರಿ ತಜ್ಞರಾದ  ಡಾ.ಪರಮಶಿವಯ್ಯ ರವರ ವರದಿ ಜಾರಿಗಾಗಿ ಚಳುವಳಿಯನ್ನು ಸಂಘಟಿಸಿದವರು. ಬಾಗೇಪಲ್ಲಿಯಿಂದ ಸಾವಿರಾರು ಜನರ ಪಾದಯಾತ್ರೆಯನ್ನು ಸಂಘಟಿಸಿದರು.

ಅದೇ ರೀತಿ, ನೀಚ, ಜಾತಿ ತಾರತಮ್ಯವನ್ನು ಮೆರೆಯುತ್ತಿದ್ದ ಮಡೆಮಡೆ ಸ್ನಾನ ಮತ್ತು ಉಡುಪಿ ಶ್ರೀ ಕೃಷ್ಣ ಮಠದ ಪಂಕ್ತಿ ಭೇದವನ್ನು ವಿರೋಧಿಸಿ ನಡೆಸಲಾದ ಸಿಪಿಐ(ಎಂ) ರಾಜ್ಯ ಮಟ್ಟದ ಹೋರಾಟದ ನೇತೃತ್ವ ವಹಿಸಿದ್ದವರು.

ಬಾಗೇಪಲ್ಲಿ ಶಾಸಕರಾಗಿ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಕೈಗೊಂಡ ಕಾರ್ಯಗಳು ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ.

ಅವರ ರಾಜಕೀಯ ಹಾಗೂ ಸಂಘಟನಾ ಮತ್ತಿತರೆ ತಪ್ಪಾದ ನಡವಳಿಕೆಗಳಿಂದಾಗಿ ಸಿಪಿಐ(ಎಂ) ಅವರನ್ನು ಉಚ್ಛಾಟಿಸಿದ ನಂತರ  ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಜಾ ಸಂಘರ್ಷ ಸಮಿತಿಯ ನೇತೃತ್ವ ವಹಿಸಿದ್ದರು.

ಯು. ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *