ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಯೋಜನೆಗಳಿಗಾಗಿ ಒತ್ತಾಯಿಸಿ ಸಿಪಿಐ(ಎಂ) ರಾಜ್ಯ ಸಮ್ಮೇಳನ ನಿರ್ಣಯ

ರಾಜ್ಯದಲ್ಲಿ ಶೇಕಡಾ 90ರಷ್ಟು ಅಸಂಘಟಿತ ಕಾರ್ಮಿಕರು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದು, ಯಾವುದೇ ಜೀವನ ಭದ್ರತೆ ಇಲ್ಲದೆ ಬದುಕು ನಡೆಸುತ್ತಿದ್ದಾರೆ. ಎಲ್ಲಾ ಅಸಂಘಟಿತ ಕಾರ್ಮಿಕರಿಗಾಗಿ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಬೇಕೆಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ 2022ರ ಜನವರಿ 2 ರಿಂದ 4ರ ವರೆಗೆ ಜರುಗಿದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ 23ನೇ ರಾಜ್ಯ ಸಮ್ಮೇಳನವು ಒತ್ತಾಯಿಸಿದೆ.

ರಾಜ್ಯದ ದುಡಿಯುವ ವರ್ಗದ ಕಾರ್ಮಿಕರಲ್ಲಿ ಶೇಕಡಾ 90ರಷ್ಟು ಕಾರ್ಮಿಕರು ಅಸಂಘಟಿತ ಕಾರ್ಮಿಕರಾಗಿದ್ದಾರೆ. ಅಸಂಘಟಿತ ಕಾರ್ಮಿಕರಾದ ಮನೆಕೆಲಸಗಾರರು, ಕಟ್ಟಡ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಟೆಂಪೋ ಮತ್ತು ಲಾರಿ ಚಾಲಕರು, ಹಮಾಲಿಗಳು, ದೋಬಿಗಳು, ದರ್ಜಿಗಳು, ಬೀಡಿ ಸುತ್ತುವ ಕಾರ್ಮಿಕರು, ಅಗರಬತ್ತಿ ಕಾರ್ಮಿಕರು, ಮೀನುಗಾರರು, ಕ್ಷೌರಿಕರು, ಆಶಾ, ಬಿಸಿಊಟ ನೌಕಕರು, ಗ್ರಾಮಪಂಚಾಯಿತಿ ಮತ್ತು ಪುರಸಭೆ, ನಗರಸಭೆಯ ಪೌರ ಕಾರ್ಮಿಕರು, ಸಣ್ಣಪುಟ್ಟ ವಾಹನ ರಿಪೇರಿ, ಅಂಗಡಿ ಕಾರ್ಮಿಕರು, ಕೃಷಿ ಕೂಲಿಕಾರರು ಸೇರಿದಂತೆ ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ ಗುರುತಿಸಿರುವ 379 ವೃತ್ತಿಯ ಅಸಂಘಟಿತ ಕಾರ್ಮಿಕರು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದು, ಯಾವುದೇ ಜೀವನ ಭದ್ರತೆ ಇಲ್ಲದೆ ಬದುಕುತ್ತಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗದ ಲಾಕ್‌ಡೌನ್‌ ನಿಂದ ಅಸಂಘಟಿತ ಕಾರ್ಮಿಕರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕೃಷಿಯಿಂದ ಹೊರದೂಡಲ್ಪಟ್ಟ ಗ್ರಾಮೀಣ ಭೂರಹಿತರು, ಕೃಷಿ ಕೂಲಿಕಾರರು ಮತ್ತು ಬಡ ರೈತರು, ರಾಜ್ಯದ ನಗರ ಪ್ರದೇಶಗಳ ಕಡೆ ಮುಖ ಮಾಡುತ್ತಿದ್ದಾರೆ. ಆಟೋ, ಟ್ಯಾಕ್ಸಿ, ಸೆಕ್ಯೂರಿಟಿಗಳು, ಬೀದಿ ಬದಿ ವ್ಯಾಪಾರ, ಮನೆಗೆಲಸ, ಕಟ್ಟಡ ಕೆಲಸ ಮುಂತಾದ ಅಸಂಘಟಿತ ಕಾರ್ಮಿಕರ ಸಾಲಿಗೆ ಸೇರುತ್ತಿದ್ದಾರೆ. ಕರ್ನಾಟಕದ ಗ್ರಾಮೀಣ ನಿರುದ್ಯೋಗಿ ಯುವಕರು ಮತ್ತು ನಗರದ ಅರೆ-ಉದ್ಯೋಗಿ ಮತ್ತು ನಿರುದ್ಯೋಗಿ ಯುವಕರು ಬೆಂಗಳೂರು ಸೇರಿದಂತೆ ರಾಜ್ಯದ ಇತರ ವಾಣಿಜ್ಯ ನಗರಗಳಲ್ಲಿ ಆಪ್ ಆಧಾರಿತ ಕೆಲಸಗಳಲ್ಲಿ ತೊಡಗುತ್ತಿದ್ದಾರೆ. ಇಂತಹ ಅಸಂಘಟಿತ ಕಾರ್ಮಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಹೊರ ರಾಜ್ಯಗಳ ಮುಖ್ಯವಾಗಿ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒರಿಸ್ಸಾ ರಾಜ್ಯಗಳ ಬಡ ಜನರು ಬೆಂಗಳೂರಿನ ಕಟ್ಟಡ ಕಾರ್ಮಿಕರಲ್ಲಿ ಗಣನೀಯವಾಗಿದ್ದಾರೆ. ಈಶಾನ್ಯ ರಾಜ್ಯಗಳ ಯುವಜನರು ಹೋಟೆಲ್ ಮತ್ತಿತರ ಕೆಲಸಗಳಲ್ಲಿ ಗಣನೀಯವಾಗಿದ್ದಾರೆ. ಅವರು ಅಸಂಘಟಿತ ಕಾರ್ಮಿಕರಾಗಿ ಕಡಿಮೆ ಕೂಲಿಗೆ, ಸರಿಯಾದ ವಸತಿಯಿಲ್ಲದೆ ಶೆಡ್ಡುಗಳಲ್ಲಿ ವಾಸಿಸುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆ ಜಾರಿಗೆ ಶಾಸನ ರೂಪಿಸಲು ಕಾರ್ಮಿಕ ಇಲಾಖೆ ಕರಡು ತಯಾರಿಸಿ ಈ ಹಿಂದೆ ಸರ್ಕಾರಕ್ಕೆ ಸಲ್ಲಿಸಿದ್ದರೂ ರಾಜ್ಯದ ಬಿ.ಜೆ.ಪಿ. ಸರ್ಕಾರ ಶಾಸನ ರೂಪಿಸಿ ಜಾರಿ ಮಾಡಲು ಕ್ರಮವಹಿಸುತ್ತಿಲ್ಲ. ರಾಜ್ಯದಲ್ಲಿ ಹೆಸರಿಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಇದೆಯಾದರೂ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಯೋಜನೆಗಳನ್ನು ರಾಜ್ಯ ಸರ್ಕಾರ ರೂಪಿಸಿಲ್ಲ. ಬಜೆಟ್ ನಲ್ಲಿ ಅಗತ್ಯ ಹಣವನ್ನು ಮೀಸಲಿಡುತ್ತಿಲ್ಲ.

ಕೋವಿಡ್ ಲಾಕ್‌ಡೌನ್ ವೇಳೆ ಬದುಕು ಕಳೆದುಕೊಂಡು ಹಲವಾರು ಅಸಂಘಟಿತ ಕಾರ್ಮಿಕರು ಪರಿಹಾರಕ್ಕಾಗಿ ಸಿಪಿಐ(ಎಂ) ಪಕ್ಷದ ನೇತೃತ್ವದಲ್ಲಿ ಹೋರಾಟಗಳನ್ನು ರಾಜ್ಯದಲ್ಲಿ ಹಲವು ಕಡೆ ನಡೆಸಿದ್ದಾರೆ. ಎರಡನೇ ಅಲೆ ಲಾಕ್‌ಡೌನ್ ವೇಳೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಡಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಕಾರ್ಡ್ ಪಡೆದಿರುವ 18 ಲಕ್ಷ ಕಾರ್ಮಿಕರಲ್ಲಿ ಸುಮಾರು 2 ಲಕ್ಷ 14 ಸಾವಿರ ಕಾರ್ಮಿಕರಿಗೆ ಪರಿಹಾರ ಮೊತ್ತವು ಅವರ ಖಾತೆಗಳಿಗೆ ಜಮೆ ಆಗಿರುವ ವರದಿ ಇದೆ. ಉಳಿದ 16 ಲಕ್ಷ ಕಾರ್ಮಿಕರಲ್ಲಿ 4 ಲಕ್ಷ ಕಾರ್ಮಿಕರ ಅರ್ಜಿಗಳನ್ನು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಪರಿಹಾರ ಎಂಬ ಸರ್ಕಾರದ ಷರತ್ತಿನ ಕಾರಣ ಹಾಗೂ ಸರ್ಕಾರದ ನಿಬಂಧನೆಗಳಿಗೆ ಅನುಕ್ರಮವಾಗಿರದ ಕಾರಣ ತಿರಸ್ಕರಿಸಲಾಗಿದೆ. ಒಟ್ಟಾರೆ ಸುಮಾರು 12 ಲಕ್ಷ ಕಾರ್ಮಿಕರಿಗೆ ಇದುವರೆಗೂ ಪರಿಹಾರ ಹಣ ದೊರೆತಿಲ್ಲ. ಈ ನಿಟ್ಟಿನಲ್ಲಿ ಅವರೆಲ್ಲರಿಗೂ ಪರಿಹಾರ ಹಣವನ್ನು ನೀಡಲು ಅಗತ್ಯವಿರುವ ಸುಮಾರು 250 ಕೋಟಿ ರೂಗಳನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಅಗತ್ಯ ಕ್ರಮವಹಿಸಬೇಕೆಂದು ಸಿಪಿಐ(ಎಂ) ಪಕ್ಷದಿಂದ ಸೆಪ್ಟೆಂಬರ್ 23 ರಂದು ವಿಧಾನಸೌಧ ಚಲೋ ನಡೆಸಿದ ನಂತರದಲ್ಲಿ ರಾಜ್ಯ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗೆ ಯಾವುದೇ ಪರಿಹಾರವನ್ನು ಪ್ರಕಟಿಸದ ಹಿನ್ನಲೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ಅಸಂಘಟಿತ ಕಾರ್ಮಿಕರ ದತ್ತಾಂಶ ಸಂಗ್ರಹಿಸಿ ಸಲ್ಲಿಸಲು ಆದೇಶಿಸಿತು. ಇದರಿಂದಾಗಿ ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ 379 ರೀತಿಯ ವೃತ್ತಿ ಮಾಡುವ ಕಾರ್ಮಿಕರಿಗೆ ಇ-ಶ್ರಮ ಕಾರ್ಡುಗಳನ್ನು ನೀಡುತ್ತಿದೆ. ಡಿಸೆಂಬರ್ 31ಕ್ಕೆ ನೊಂದಣಿಗೆ ಕೊನೆ ದಿನಾಂಕ ನೀಡಿದೆ. ಇ-ಶ್ರಮ್ ಕಾರ್ಡ್ ನೊಂದಣಿ ಮಾಡಲು ಕಾಲಾವಕಾಶ ವಿಸ್ತರಿಸಬೇಕೆಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕಿದೆ. ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ನೀಡುತ್ತಿರುವ ಪ್ರಧಾನ ಮಂತ್ರಿ ಸ್ವಾಸ್ಥ್ಯ ಭೀಮಾ ಯೋಜನೆಯಿಂದ ಅಸಂಘಟಿತ ಕಾರ್ಮಿಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ.

ಹಾಗಾಗಿ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ಸೌಲಭ್ಯಗಳ ಮಾದರಿಯಲ್ಲಿ ಕಲ್ಯಾಣ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿ ಬಜೆಟ್‌ನಲ್ಲಿ ಅಗತ್ಯ ಅನುದಾನ ನೀಡಬೇಕೆಂದು ಹಾಗೂ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆ ಜಾರಿಗೆ ಶಾಸನ ರೂಪಿಸಿ ಜಾರಿಮಾಡಬೇಕೆಂದು ಸಿಪಿಐ(ಎಂ) ರಾಜ್ಯ ಸಮ್ಮೇಳನವು ಒತ್ತಾಯಿಸುತ್ತದೆ.

Leave a Reply

Your email address will not be published. Required fields are marked *