ಉಳಿವಿಗಾಗಿನ ಸಂಘರ್ಷ: ವಿಷಮಯ ತ್ರಿವಳಿ ಕಾನೂನುಗಳನ್ನು ಸೋಲಿಸೋಣ

ಮಹಾರಾಷ್ಟ್ರದ ಚಾರೋಟಿಯಿಂದ 55 ಕಿಮೀ ದೂರವಿರುವ ಪಾಲ್ಘಾರ್ ಜಿಲ್ಲಾಧಿಕಾರಿ ಕಚೇರಿವರೆಗೆ 50,000 ಕ್ಕೂ ಹೆಚ್ಚು ದುಡಿಯುವ ಜನರು, ಹಗಲು ರಾತ್ರಿಯೆನ್ನದೆ 48 ಗಂಟೆ ಕಾಲ್ನಡಿಗೆಯಲ್ಲಿ ಬಂದರು. ಈ ಕೆಂಬಾವುಟದ ಸಾಗರವು ಭೂಮಿ ಮತ್ತು ಒಕ್ಕಲೆಬ್ಬಿಸುವಿಕೆ ಪ್ರಶ್ನೆಗಳನ್ನು ಎತ್ತಿತು. ಅರಣ್ಯ ಕಾನೂನಿನ ಅನುಷ್ಠಾನದ ದುರುಪಯೋಗದಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ದನಿಯೆತ್ತಿದರು. ಗ್ರಾಮೀಣ ಪ್ರದೇಶಗಳಲ್ಲಿ 100 ದಿನಗಳ ಖಾತರಿ ಉದ್ಯೋಗವನ್ನು ತೆಗೆದು ಹಾಕುವ ಹೊಸ ಕಾನೂನಿನ ಹಿನ್ನೆಲೆಯಲ್ಲಿ ಉದ್ಭವಿಸಿರುವ ನಿರುದ್ಯೋಗದ ಪ್ರಶ್ನೆಯನ್ನು ಕೆಂಬಾವುಟ ಹಿಡಿದವರು ಪ್ರಸ್ತಾಪಿಸಿದರು. ವಿದ್ಯುತ್ ವಿತರಣೆ ಜಾಲಗಳನ್ನು ಖಾಸಗೀಕರಿಸುವುದನ್ನು ಖಾತರಿಪಡಿಸುವ ಮತ್ತು ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವುದಕ್ಕೆ ಅವಕಾಶ ಕಲ್ಪಿಸುವ ವಿದ್ಯುಚ್ಛಕ್ತಿ ಕಾಯ್ದೆ ಪರಿಚಯಿಸುವುದನ್ನು ಅವರು ಪ್ರಬಲವಾಗಿ ವಿರೋಧಿಸಿದರು.

ಮುಖ್ಯವಾಹಿನಿ ಮಾಧ್ಯಮದ ಘೋರ ಮೌನದ ಹೊರತಾಗಿಯೂ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಾದ್ಯಂತದ 50,000ಕ್ಕೂ ಅಧಿಕ ದುಡಿಯುವ ಜನರು, ಅದರಲ್ಲೂ ಬಹುತೇಕವಾಗಿ ಬುಡಕಟ್ಟು ಜನರು ಕೆಂಬಾವುಟ ಹಿಡಿದುಕೊಂಡು ಸಾಗುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾದವು. ಇದು ದಂತಕಥೆಯಾಗಿರುವ ವಾರ್ಲಿ ಬಂಡಾಯದ ಸಮರಾಂಗಣದ ಹೃದಯಭಾಗವಾಗಿದೆ. ಚಾರೋಟಿಯಿಂದ 55 ಕಿಮೀ ದೂರವಿರುವ ಪಾಲ್ಘಾರ್ ಜಿಲ್ಲಾಧಿಕಾರಿ ಕಚೇರಿವರೆಗೆ ಹಗಲು ರಾತ್ರಿಯೆನ್ನದೆ 48 ಗಂಟೆ ಕಾಲ್ನಡಿಗೆಯಲ್ಲಿ ಬಂದ ಕೆಂಬಾವುಟದ ಸಾಗರವು ಭೂಮಿ ಮತ್ತು ಒಕ್ಕಲೆಬ್ಬಿಸುವಿಕೆ ಪ್ರಶ್ನೆಗಳನ್ನು ಎತ್ತಿತು. ಅರಣ್ಯ ಕಾನೂನಿನ ಅನುಷ್ಠಾನದ ದುರುಪಯೋಗದಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ದನಿಯೆತ್ತಿದರು. ಗ್ರಾಮೀಣ ಪ್ರದೇಶಗಳಲ್ಲಿ 100 ದಿನಗಳ ಖಾತರಿ ಉದ್ಯೋಗವನ್ನು ತೆಗೆದು ಹಾಕುವ ಹೊಸ ಕಾನೂನಿನ ಹಿನ್ನೆಲೆಯಲ್ಲಿ ಉದ್ಭವಿಸಿರುವ ನಿರುದ್ಯೋಗದ ಪ್ರಶ್ನೆಯನ್ನು ಕೆಂಬಾವುಟ ಹಿಡಿದವರು ಪ್ರಸ್ತಾಪಿಸಿದರು. ದುಡಿಯುವ ಜನರ ಪ್ರತಿಭಟನೆ ಮತ್ತು ಮುಷ್ಕರದ ಹಕ್ಕನ್ನು ಕಸಿಯುವ ಬೆದರಿಕೆ ಸೃಷ್ಟಿಸಿರುವ ಹೊಸ ಕಾರ್ಮಿಕ ಸಂಹಿತೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ವಿದ್ಯುತ್ ವಿತರಣೆ ಜಾಲಗಳನ್ನು ಖಾಸಗೀಕರಿಸುವುದನ್ನು ಖಾತರಿಪಡಿಸುವ ಮತ್ತು ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವುದಕ್ಕೆ ಅವಕಾಶ ಕಲ್ಪಿಸುವ ವಿದ್ಯುಚ್ಛಕ್ತಿ ಕಾನೂನು ಪರಿಚಯಿಸುವುದನ್ನು ಅವರು ಪ್ರಬಲವಾಗಿ ವಿರೋಧಿಸಿದರು. ಸ್ಮಾರ್ಟ್ ಮೀಟರ್‌ನಿಂದಾಗಿ ವೈಯಕ್ತಿಕ ಬಳಕೆದಾರರ ಬಳಕೆ ವೆಚ್ಚ ಹೆಚ್ಚುವುದಷ್ಟೇ ಅಲ್ಲದೆ ಕೃಷಿ ವೆಚ್ಚಗಳು ಹಲವು ಪಟ್ಟು ಏರಿಕೆಯಾಗುತ್ತದೆ.

ಅನೇಕ ದೃಷ್ಟಿಯಿಂದ, ಈ ಸುದೀರ್ಘ ಜಾಥಾವು (ಲಾಂಗ್ ಮಾರ್ಚ್) ರೈತರ ಐತಿಹಾಸಿಕ ನಾಸಿಕ್-ಮುಂಬೈ ಜಾಥಾದ ಮರುಸೃಷ್ಟಿಯಂತಿತ್ತು. ಆ ಲಾಂಗ್ ಮಾರ್ಚ್, ಮೂರು ಕರಾಳ ಕೃಷಿ ಕಾನೂನುಗಳ ವಿರುದ್ಧ ಎದ್ದ ತೀಕ್ಷ್ಣ ಪ್ರತಿಭಟನೆಗೆ ಹಿನ್ನೆಲೆಯಾಗಿತ್ತು. ಲಾಂಗ್ ಮಾರ್ಚ್‌ ಗಿಂತ ಈ ಬಾರಿಯ ಜಾಥಾದಲ್ಲಿದ್ದವರ ಸಂಖ್ಯೆ ದುಪ್ಪಟ್ಟಾಗಿತ್ತು ಎನ್ನುವುದೇ ಈ ಸಲದ ವ್ಯತ್ಯಾಸವಾಗಿತ್ತು. ಅಲ್ಲದೆ, ಈ ಬಾರಿ ಒಂದು ಜಿಲ್ಲೆಯ ದುಡಿಯುವ ಜನರು ಮಾತ್ರವೇ ಭಾಗವಹಿಸಿದ್ದರು. ಸಂಸತ್ತಿನ ಚಳಿಗಾಲದ ಅಂತಿಮ ಹಂತಗಳಲ್ಲಿ, ಇನ್ನೂ ಅಪಾಯಕಾರಿ ಕಾನೂನುಗಳನ್ನು ತರಲು ಮೋದಿ ಸರಕಾರ ಪ್ರಯತ್ನಿಸಿತು. ಆದರೆ ವಿಶೇಷವಾಗಿ ಮೂರು ಕಾನೂನುಗಳು ದುಡಿಯುವ ಜನರ ಜೀವಸೆಲೆಯನ್ನು ಕಿತ್ತುಕೊಳ್ಳುವಂಥದ್ದಾಗಿದೆ: ಜಿರಾಮ್‌ಜಿ, ಅಧಿಸೂಚಿತ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳು ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಕಾನೂನು. ಈ ವಿಚಾರದಲ್ಲಿ ಮೋದಿ ಸರಕಾರದ ಅತ್ಯವಸರವು ಆಕಸ್ಮಿಕವೇನೂ ಅಲ್ಲ. ಅದು ನವ-ಫ್ಯಾಸಿಸ್ಟ್ ಲಕ್ಷಣಗಳಿಂದ ಕಡಿಮೆಯೇನೂ ಅಲ್ಲ. ಈ ಮೂಲಕ, ಸಂಸತ್ತಿನ ಕಾರ್ಯನಿರ್ವಹಣೆಯನ್ನು ವಸ್ತುಶಃ ಹಾಸ್ಯಾಸ್ಪದಗೊಳಿಸುತ್ತದೆ. ಈ ಕಾನೂನುಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ದುಡಿಯುವ ಜನರ ವ್ಯಾಪಕ ವಿಭಾಗಗಳಿಗೆ ಮರಣ ಮೃದಂಗದ ಸೂಚನೆಯಾಗಿದೆ. ಜಿರಾಮ್‌ಜಿ ಯಾವ ರೀತಿಯಲ್ಲಿ ಗ್ರಾಮೀಣ ಬಡವರಿಗೆ ಸಿಗುತ್ತಿದ್ದ ಬೇಡಿಕೆ ಆಧಾರಿತ ಉದ್ಯೋಗ ಖಾತರಿಯ ಲಕ್ಷಣವನ್ನು ತೆಗೆದು ಹಾಕುತ್ತದೆ ಎನ್ನುವುದನ್ನು ಹಿಂದೆಯೇ ನಮ್ಮ ಲೇಖನಗಳಲ್ಲಿ ವಿಷದಪಡಿಸಲಾಗಿದೆ.

ಬೆಳೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ಹೊರೆ ದುಡಿಯುವ ಜನರ ಹೆಗಲಿಗೆ

ಜಾಗತಿಕ ಮತ್ತು ಭಾರತೀಯ ಆರ್ಥಿಕತೆಯ ಬೆಳೆಯುತ್ತಿರುವ ಬಿಕ್ಕಟ್ಟಿನ ಹೊರೆಯನ್ನು ದುಡಿಯುವ ಜನರ ಹೆಗಲಿಗೆ ವರ್ಗಾಯಿಸಲು ಕಾರ್ಪೊರೇಟ್ ಕೋಮುವಾದಿ ಸರಕಾರ ಪ್ರಯತ್ನಿಸುತ್ತಿದೆ. ಅದು ಕಾರ್ಮಿಕ ಸಂಹಿತೆಗಳ ಅಧಿಸೂಚನೆಯಲ್ಲಿ ಪ್ರತಿಬಿಂಬಿತವಾಗಿದೆ. ದುಡಿಯುವ ಜನರ ಹೋರಾಟಗಳು ಬೆಳೆಯುತ್ತವೆ ಎನ್ನುವುದು ಚೆನ್ನಾಗಿ ಗೊತ್ತಿರುವುದರಿಂದಲೇ ಪ್ರತಿಭಟಿಸುವ, ಸಂಧಾನದ ಮತ್ತು ಮುಷ್ಕರ ನಡೆಸುವ ಹಕ್ಕುಗಳನ್ನು ಕಸಿಯುವ ದಿಸೆಯಲ್ಲಿ ಸರಕಾರವು ಕಾರ್ಪೊರೇಟ್ ಕಂಪನಿಗಳಿಗೆ ಇನ್ನಿಲ್ಲದ ಬೆಂಬಲ ನೀಡುತ್ತಿದೆ.

ಇನ್ನೊಂದೆಡೆ, ವಿದ್ಯುಚ್ಛಕ್ತಿಯ ಅದರಲ್ಲೂ ವಿಶೇಷವಾಗಿ ವಿತರಣೆ ಜಾಲಗಳ ಖಾಸಗೀಕರಣವು, ದೈನಂದಿನ ಜೀವನದ ಆಧಾರವಾಗಿರುವ ವಿದ್ಯುಚ್ಛಕ್ತಿಯನ್ನು ಪಡೆಯುವ ನಾಗರಿಕರ ಹಕ್ಕನ್ನು ವ್ಯಾಪಕವಾಗಿ ಮೊಟಕುಗೊಳಿಸುತ್ತದೆ. ಇಂಥ ಹಕ್ಕುಗಳ ಮೊಟಕುಗೊಳಿಸುವಿಕೆಯೊಂದಿಗೆ ದೈನಂದಿನ ವೆಚ್ಚದಲ್ಲಿನ ಏರಿಕೆಯು ಪ್ರಮುಖವಾಗಿ ಕೃಷಿ ವೆಚ್ಚವನ್ನು ಏರಿಸುತ್ತದೆ. ಮೋದಿ ಸರಕಾರದ ಈಗಿನ ದಿಕ್ಕು ಮತ್ತು ನೀತಿಗಳನ್ನು ನೋಡಿದರೆ ಹೊರೆಯನ್ನು ವರ್ಗಾಯಿಸುವುದು ಅನಿವಾರ್ಯವಾಗಿದೆ. ಆರ್ಥಿಕ ನೀತಿಯ ನವ ಉದಾರವಾದಿ ನೀತಿಯಲ್ಲಿ ಒಂದಂಕಿಯ ಜಿಡಿಪಿಯ ಸಂಕಥನವನ್ನು ತೋರಿಸುವುದು ಮಾಮೂಲಿಯಾಗಿ ಬಿಟ್ಟಿದೆ. ಆದರೆ ಹೆಚ್ಚುತ್ತಿರುವ ಅಸಮಾನತೆ, ನಿರುದ್ಯೋಗ ಮತ್ತು ಬಡತನದಿಂದಾಗಿ ಶ್ರಮಜೀವಿಗಳು ಎದುರಿಸುತ್ತಿರುವ ಸಂಕಟದ ಮಟ್ಟವನ್ನು ಮುಚ್ಚಿ ಹಾಕಲು ಅದಕ್ಕೆ ಆಗದು.

ಭಾರತ ಶೇ. 8.2ರ ವೇಗದಲ್ಲಿ ಬೆಳೆಯುತ್ತಿದೆ ಎಂದು ಸರಕಾರ ಹೇಳಿಕೊಳ್ಳುತ್ತಲೇ ಬಂದಿದೆ. ನವ ಉದಾರವಾದಿ ಪರಿವರ್ತನೆಯ ಪ್ರಬಲ ಪ್ರತಿಪಾದಕರಾದ ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಕೂಡ ಭಾರತದ ಅಂದಾಜು ಬೆಳವಣಿಗೆ ದರವನ್ನು 2025-26ನೇ ಸಾಲಿಗೆ ಅನುಕ್ರಮವಾಗಿ ಶೇ. 6.6 ಮತ್ತು ಶೇ. 6.5ಕ್ಕೆ ಇಳಿಮುಖವಾಗಿ ಪರಿಷ್ಕರಿಸಿದೆ. ಈ ಇಳಿಮುಖ ಪರಿಷ್ಕರಣೆ ಜತೆಯಲ್ಲಿ ಅಧಿಕೃತ ಅಂಕಿಅಂಶದ ಬಗ್ಗೆ ಅನುಮಾನಗಳು, ಅದರ ವಿಶ್ವಾಸಾರ್ಹತೆಯ ದೌರ್ಬಲ್ಯದ ಕುರಿತ ಅನುಮಾನ ಮತ್ತು ಆತ್ಮವಿಶ್ವಾಸದ ಕೊರತೆಯೂ ಕಾಡುತ್ತಿದೆ. ಬಿಕ್ಕಟ್ಟಿನಿಂದ ನಲಗುತ್ತಿರುವ ಆರ್ಥಿಕತೆಯ ಬೆಳವಣಿಗೆ ಕುರಿತು ಬೆಳವಣಿಗೆಯ ಮುಖವಾಡವನ್ನು ಉತ್ಪಾದಿಸಲು ಅಂಕಿಸಂಖ್ಯೆಗಳನ್ನು ವಂಚಿಸುವ ಸಾಧ್ಯತೆಯನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ.

ಬೇಡಿಕೆಯಲ್ಲಿನ ಕುಸಿತ

ಸರಕಾರಿ ವೆಚ್ಚದ ಏರಿಕೆ ಕುರಿತ ಕಾರ್ಪೊರೇಟ್ ಭಾರತದ ಹಳಹಳಿಕೆ ಕೂಡ ಆರ್ಥಿಕತೆಯ ದೌರ್ಬಲ್ಯಕ್ಕೆ ಮೋಸ ಮಾಡುವಂಥದ್ದೇ ಆಗಿದೆ. ಭಾರತ ಇನ್‌ಕಾರ್ಪೊರೇಶನ್‌ನ ದಾಖಲೆ ಮೀಸಲು ನಗದಿನ ಹೊರತಾಗಿಯೂ 2019ರ ಅಂಕಿಸಂಖ್ಯೆಗಿಂತ ದುಪ್ಪಟ್ಟು ಆಗಿದ್ದರೂ, ಇಂಥ ಕಂಪನಿಗಳು ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿವೆ. ಬೇಡಿಕೆಯಲ್ಲಿನ ಕುಸಿತವೇ ಇದಕ್ಕೆ ಕಾರಣವಾಗಿದೆ. ಬೇಡಿಕೆಯಲ್ಲಿನ ತೊಂದರೆಯಲ್ಲದೆ ದೇಶೀಯ ಬಳಕೆಯ ದೌರ್ಬಲ್ಯ, ಸತತ ಹಣದುಬ್ಬರ ಮತ್ತು ಜಾಗತಿಕ ವಾಣಿಜ್ಯದ ಅನಿಶ್ಚಯತೆಯು ಇದರ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ ಮೂಲಸೌಕರ್ಯದಲ್ಲಿ ಹೆಚ್ಚಿನ ಹೂಡಿಕೆ, ತೆರಿಗೆ ಉತ್ತೇಜನಗಳನ್ನು ಒದಗಿಸುವುದು ಮತ್ತು ಬೇಡಿಕೆಗೆ ಪ್ರೋತ್ಸಾಹಕ್ಕಾಗಿ ವಾಣಿಜ್ಯೋದ್ಯಮ ಸುಧಾರಣೆಗಳನ್ನು ತರುವಂತೆ ಸರಕಾರವನ್ನು ಪುಸಲಾಯಿಸಲಾಗುತ್ತಿದೆ.

ನಿರಾಶಾದಾಯಕವಾದ ಸರಾಸರಿ ವಾಸ್ತವ ಕೂಲಿ ಬೆಳವಣಿಗೆ

ಇದಕ್ಕೆ ಸರಕಾರದ ಪ್ರತಿಕ್ರಿಯೆ ಸಹಜವೇ ಆಗಿದ್ದು ಮೂರು ಕರಾಳ ಕಾನೂನುಗಳು ಅದಕ್ಕೆ ಸಾಕ್ಷಿಯಾಗಿವೆ. ಆದರೆ ವ್ಯಾಧಿಯು ಎಲ್ಲೆಡೆ ಇದೆ ಎನ್ನುವುದನ್ನು ಕಾರ್ಪೊರೇಟ್ ಕೋಮುವಾದಿ ಮೈತ್ರಿಯ ಸರಕಾರಕ್ಕೆ ಮನವರಿಕೆ ಮಾಡಲು ಯಾರಿಗೆ ಸಾಧ್ಯ? ಭಾರತೀಯ ರೂಪಾಯಿ ಪ್ರಪಾತಕ್ಕೆ ಕುಸಿಯುತ್ತಿದೆ. ಇದು ಇಡೀ ಏಷ್ಯಾದಲ್ಲಿನ ಅತ್ಯಂತ ಕಳಪೆ ನಿರ್ವಹಣೆಯ ಕರೆನ್ಸಿ ಎಂದು ಈಗಾಗಲೇ ರುಜುವಾತಾಗಿದೆ. ಇದು ದುಡಿಯುವ ವರ್ಗಕ್ಕೆ, ರೈತ ಸಮುದಾಯಕ್ಕೆ ಮತ್ತು ಎಂಎಸ್‌ಎಂಇಗಳಿಗೆ ಅಪಾಯಕಾರಿಯಾಗಿದೆ. ಅದೇ ವೇಳೆ ಭಾರತದಿಂದ ಎಫ್‌ಡಿಐ ಕೂಡ ಭಾರಿ ಪ್ರಮಾಣದಲ್ಲಿ ಹೊರಗೆ ಹರಿದು ಹೋಗುತ್ತಿದೆ. ಉತ್ಪಾದನಾ ವಲಯದಲ್ಲಿನ ಉದ್ಯೋಗಿಗಳ ಸಂಖ್ಯೆ ನಿರಾಶಾದಾಯಕವಾಗಿದೆ ಎಂದು ಸ್ವತಃ ಲೇಬರ್ ಬ್ಯೂರೋದ ಅಂಕಿಅಂಶ ತಿಳಿಸುತ್ತದೆ. ಅಲ್ಲದೆ, ಸರಾಸರಿ ವಾಸ್ತವ ಕೂಲಿ ಬೆಳವಣಿಗೆ ಕೂಡ ನಿರಾಶಾದಾಯಕವಾಗಿದೆ.

ಸಂಪತ್ತಿನ ಶೇ. 40ರಷ್ಟು ಪಾಲು ಶೇ. 1ರಷ್ಟು ಜನರ ಬಳಿ

ಶೇ. 10 ಅಗ್ರರು ಭಾರತದ ರಾಷ್ಟ್ರೀಯ ವರಮಾನದ ಶೇ. 58ರಷ್ಟನ್ನು ಗಳಿಸುತ್ತಿದ್ದಾರೆ ಎಂಬ ಆಘಾತಕಾರಿ ವಾಸ್ತವತೆಯನ್ನು ವಿಶ್ವ ಅಸಮಾನತೆ ವರದಿ ತೋರಿಸಿದೆ. ಇದು 2022ರದ್ದಕ್ಕಿಂತಲೂ ಜಾಸ್ತಿಯಾಗಿದೆ. ಆದರೆ, ಕೆಳಸ್ತರದಲ್ಲಿರುವ ಶೇ. 50ರಷ್ಟು ಮಂದಿ ಕೇವಲ ಶೇ. 15 ಆದಾಯವನ್ನು ಗಳಿಸುತ್ತಿದ್ದಾರೆ. ಇದೇ ರೀತಿಯಲ್ಲಿ, ಕೇವಲ ಶೇ. 1ರಷ್ಟು ಜನರು ಆರ್ಥಿಕತೆಯ ಒಟ್ಟು ಸಂಪತ್ತಿನಲ್ಲಿ ಶೇ. 40ನ್ನು ಹೊಂದಿದ್ದು ಶೇ. 10ರಷ್ಟು ಮಂದಿ ಶೇ. 65 ಸಂಪತ್ತನ್ನು ಅನುಭವಿಸುತ್ತಿದ್ದಾರೆ. ಈ ಮಂಕು ಕವಿದ ವಾತಾವರಣದ ನಡುವೆ, ಕಾರ್ಪೊರೇಟ್‌ಗಳು ಹೂಡಿದ ಬಂಡವಾಳಕ್ಕೆ ಹೋಲಿಸಿದರೆ ಅವರು ಗಳಿಸಿದ ಲಾಭವು 14 ವರ್ಷಗಳಲ್ಲೇ ಅತಿ ಹೆಚ್ಚಿನದಾಗಿದೆ. 2025ರ ಸೆಪ್ಟೆಂಬರ್‌ನಲ್ಲಿ ಲಾಭವು ಶೇ. 10.47 ಆಗಿತ್ತು. ಇದು ಸೂಪರ್ ಶೋಷಣೆಯಿಂದ ಗಳಿಸುವ ಸೂಪರ್ ಲಾಭಕ್ಕೆ ಹಿಡಿದ ಕನ್ನಡಿಯಾಗಿದೆ. ತ್ರಿವಳಿ ಮಸೂದೆಗಳೇ ಇದಕ್ಕೆ ಸರಕಾರದ ಪ್ರತಿಕ್ರಿಯೆಯಾಗಿದೆ.

ಜನರ ಸಂಕಷ್ಟಗಳನ್ನು ತಗ್ಗಿಸಲು ಮುಂದಾಗುವ ಬದಲು ಹೊರೆಯನ್ನು ಇನ್ನಷ್ಟು ಹೆಚ್ಚಿಸುವುದು ಹಾಗೂ ಪ್ರತಿಭಟನೆ ಮತ್ತು ಬಂಡಾಯದ ಸೊಲ್ಲನ್ನು ದಮನಿಸುವುದು ಸರಕಾರದ ಬಯಕೆಯಾಗಿದೆ. ಆದ್ದರಿಂದ ಅಸ್ತಿತ್ವ ಮತ್ತು ಜೀವನೋಪಾಯಕ್ಕಾಗಿ ನಡೆಸುವ ಹೋರಾಟವು ದುಡಿಯುವ ಜನತೆಯ ಹೋರಾಟದ ಕೇಂದ್ರ ಬಿಂದುವಾಗಬೇಕು. ಈ ಕಾನೂನುಗಳ ನಿಜವಾದ ಪರಿಣಾಮ ಏನೆಂಬುದನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳ ಪ್ರತಿ ಮನೆಗೂ ತಲುಪಿಸಬೇಕು. ಪ್ರಯತ್ನವು ನ್ಯಾಯಸಮ್ಮತ, ಪ್ರಾಮಾಣಿಕ ಮತ್ತು ದಣಿವರಿಯದ್ದಾಗಿದ್ದರೆ ಪಾಲ್ಘಾರ್‌ನಲ್ಲಿ ನಡೆದಿದ್ದನ್ನು ನಾವು ಇಡೀ ದೇಶದಾದ್ಯಂತ ಪುನರಾವರ್ತಿಸಬಹುದಾಗಿದೆ. ರೈತರ ಬೆಂಬಲ ದೊಂದಿಗೆ ಕಾರ್ಮಿಕರು 2026ರ ಫೆಬ್ರವರಿ 12ರಂದು ನಡೆಸುವ ಮುಷ್ಕರವು ಅದ್ಭುತ ಯಶಸ್ಸು ಪಡೆಯಲಿದೆ. ಜಾತಿ ಮತ್ತು ಕೋಮು ವಿಭಜನೆಯಯನ್ನು ಮೆಟ್ಟಿನಿಂತು ಸಾಮೂಹಿಕ ಪ್ರತಿರೋಧದ ಸಂದೇಶವನ್ನು ಸಾರಲಿದೆ.

(22-01-2026)

ಅನುವಾದ: ವಿಶ್ವ

Leave a Reply

Your email address will not be published. Required fields are marked *