ಫೆಬ್ರವರಿ 12 ರ ಸಾರ್ವತ್ರಿಕ ಮುಷ್ಕರಕ್ಕೆ ಸಿಪಿಐ(ಎಂ) ಬೆಂಬಲ

ದೇಶದ ದುಡಿಯುವ ಜನರ ಬದುಕನ್ನು ಅಸಹನೀಯಗೊಳಿಸುತ್ತಿರುವ ಕೇಂದ್ರ ಸರಕಾರದ ನೀತಿಗಳ ವಿರುದ್ಧ ಕಾರ್ಮಿಕ, ರೈತ, ಕೂಲಿಕಾರ ಮತ್ತು ಸಮಾಜದ ಇತರ ಎಲ್ಲ ವಿಭಾಗಗಳನ್ನು ಪ್ರತಿನಿಧಿಸುವ ಸಂಘಟನೆಗಳು ಸೇರಿ ಕರೆ ನೀಡಿದ ಫೆಬ್ರವರಿ 12ರ ಸಾರ್ವತ್ರಿಕ ಮುಷ್ಕರಕ್ಕೆ ಸಿಪಿಐ(ಎಂ) ಸಂಪೂರ್ಣ ಬೆಂಬಲವನ್ನು ಸೂಚಿಸಿದೆ. ಹಲವು ದಶಕಗಳ ಕಾಲ ಹೋರಾಟ ನಡೆಸಿ ಪಡೆದ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಂಡು, ಬಂಡವಾಳಿಗರಿಗೆ ಲೂಟಿ ಮಾಡಲು ಸಂಪೂರ್ಣ ಅವಕಾಶ ನೀಡುವ ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ, ಜನವರಿ 9, 2026 ರಂದು ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಮಾವೇಶದ ತೀರ್ಮಾನವನ್ನು ಬೆಂಬಲಿಸುವುದಾಗಿ ಸಿಪಿಐ(ಎಂ) ಹೇಳಿದೆ.

ಕಾರ್ಮಿಕರು ಹೋರಾಟಗಳಿಂದ ಪಡೆದ ಹಕ್ಕು ಮತ್ತು ಸವಲತ್ತುಗಳನ್ನು ಕಿತ್ತುಕೊಳ್ಳುವ ಪ್ರಯತ್ನದಲ್ಲಿರುವ ಕೇಂದ್ರ ಸರಕಾರ, ಮತ್ತೊಂದು ಕಡೆ ಇಡೀ ದೇಶವನ್ನು ಸಾಮ್ರಾಜ್ಯಶಾಹಿಗಳ ಕೈಗೆ ಬೇಷರತ್ತಾಗಿ ಒಪ್ಪಿಸುತ್ತಿದೆ. ಸಾಮ್ರಾಜ್ಯಶಾಹಿ ಯುದ್ಧ ದಾಹಿ ಅಮೆರಿಕಾದ ಎದುರು ಮಂಡಿಯೂರಿರುವ ಕೇಂದ್ರ ಸರಕಾರ ದೇಶದೊಳಗೆ ಮತನಿರಪೇಕ್ಷ ತತ್ವಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಕೋಮುದ್ವೇಷದ ತಾಣವಾಗಿಸುತ್ತಿದೆ. ದೊಡ್ಡ ಬಂಡವಾಳಿಗರ ಮತ್ತು ವಿದೇಶೀ ಕಾರ್ಪೊರೆಟ್ ಕಂಪನಿಗಳ ಲಾಭಕ್ಕಾಗಿ ದೇಶದ ದುಡಿಯುವ ವರ್ಗದ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಬಲಿಕೊಡುತ್ತಿದೆ. ಕಾರ್ಮಿಕರ ಮೂಲಭೂತ ಹಕ್ಕಾಗಿರುವ ಸಂಘ ಕಟ್ಟಿಕೊಳ್ಳುವ ಹಕ್ಕನ್ನು ಮೊಟಕುಗೊಳಿಸುವ, ಮುಷ್ಕರದ ಹಕ್ಕನ್ನು ಕಿತ್ತುಕೊಳ್ಳುವ ಮತ್ತು ಕೆಲಸದ ಭದ್ರತೆಯನ್ನು ನಾಮಾವಶೇಷ ಮಾಡುವ ಸಂಹಿತೆಗಳು ದೇಶದ ದುಡಿಯುವ ಜನರ ಹಕ್ಕುಗಳನ್ನು ಕಿತ್ತುಕೊಳ್ಳುವ ಜೊತೆಗೇ, ಅವರ ಮೇಲೆ ಅವಲಂಬಿತರಾಗಿರುವ ಎಲ್ಲರನ್ನೂ ನಿರ್ದಯವಾಗಿ ಬೀದಿಗೆ ತಳ್ಳುವ ಪ್ರಯತ್ನವಾಗಿದೆ. ಇದು ಕೇವಲ ಕಾರ್ಮಿಕರ ಹಕ್ಕಿನ ಮೇಲಿನ ಧಾಳಿ ಮಾತ್ರವಾಗಿರದೇ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಛಿದ್ರಗೊಳಿಸುವ ಪ್ರಯತ್ನವಾಗಿದ್ದು, ಇದನ್ನು ಹಿಮ್ಮೆಟ್ಟಿಸದಿದ್ದಲ್ಲಿ ಇಡೀ ದೇಶದ ಜನರ ಬದುಕು ದುರ್ಭರವಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ವತಂತ್ರ, ಸಾರ್ವಭೌಮ, ಮತನಿರಪೇಕ್ಷ ಭಾರತದ ದುಡಿಯುವ ಜನರ ಮತ್ತು ಆ ಮೂಲಕ ಇಡೀ ದೇಶದ ಜನರ ಬದುಕುವ ಹಕ್ಕುಗಳ ರಕ್ಷಣೆಗಾಗಿ ಫೆಬ್ರುವರಿ 12ರ ರಾಷ್ಟ್ರೀಯ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಲು ರಾಜ್ಯದ ಎಲ್ಲ ವಿಭಾಗದ ಜನರು ಸ್ವಯಂ ಪ್ರೇರಿತರಾಗಿ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು. ಜನರಿಂದ ಚುನಾಯಿತರಾಗಿ ಅಧಿಕಾರಕ್ಕೆ ಬಂದು ಜನಹಿತವನ್ನೇ ಮರೆತು ಜನರಿಗೆ ದ್ರೋಹವೆಸಗುತ್ತಿರುವ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ಜನದ್ರೋಹಿ ನಡೆಯನ್ನು ಹಿಮ್ಮೆಟ್ಟಿಸಬೇಕೆಂದು ಸಿಪಿಐ(ಎಂ) ಕರೆ ನೀಡಿದೆ.

Leave a Reply

Your email address will not be published. Required fields are marked *