ಫೆಬ್ರವರಿ 12 ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ಅತ್ಯಂತ ಯಶಸ್ವಿಯಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದ ಬಿಜೆಪಿ-ಎನ್ ಡಿ ಎ ಮೈತ್ರಿಕೂಟದ ಭಾರತ ಸರ್ಕಾರ ತರುತ್ತಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ಹಾಗೂ ಇತರೆ ಪ್ರಶ್ನೆಗಳ ವಿರುದ್ದ ಶ್ರಮಜೀವಿಗಳು ತೀವ್ರ ಆಕ್ರೋಶದ ಪ್ರತಿಭಟನೆಯನ್ಮು ದಾಖಲಿಸಿದ್ದಾರೆ. ಕರ್ನಾಟಕದಲ್ಲಿಯೂ ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರು, ರೈತ-ಕೂಲಿಕಾರರು, ಸಾಮಾಜಿಕ ದಮನಕ್ಕೆ ಒಳಗಾದ ದಲಿತ-ಆದಿವಾಸಿ, ಮಹಿಳಾ, ಹೀಗೆ ವಿವಿಧ ವಿಭಾಗಗಳ ಜನ ಸಮುದಾಯಗಳೂ ಬೆಂಬಲಿಸಿ ರಸ್ತೆಗಿಳಿದು ಮುಷ್ಕರದ ಯಶಸ್ವಿಗೆ ಶ್ರಮಿಸಿದ್ದಾರೆ. ದುಡಿಯುವ ವರ್ಗದ ಈ ಐತಿಹಾಸಿಕ ಪ್ರತಿರೋಧ ಅಭಿನಂದನೀಯ.
ಚಾರಿತ್ರಿಕವಾಗಿಯೂ ನಿರ್ಣಾಯಕವಾಗಿರುವ ಈ ಹೋರಾಟದ ಪ್ರಭಾವ ವಿಸ್ತೃತವಾಗಿತ್ತು ಎಂಬುದು ಗಮನಾರ್ಹ. ಹಿಂದೆ ಕಳೆದ ಹಲವು ದಶಕಗಳಿಂದಲೂ ಹಲವಾರು ಬಾರಿ ಇಂತಹ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಗಳು ನಡೆದಿವೆ. ಅವುಗಳ ರಾಜಕೀಯ, ಸಾಮಾಜಿಕ, ಆರ್ಥಿಕ ಪರಿಣಾಮಗಳು ವ್ಯಾಪಕ ಸ್ವರೂಪದವು ಎನ್ನುವುದನ್ನು ಗಮನಿಸಬೇಕು. ಈ ಮುಷ್ಕರದಲ್ಲಿ ವಿಶಾಲ ನೆಲೆಯಲ್ಲಿ ವಿವಿಧ ಸಂಘಟನೆಗಳು ಒಳಗೊಂಡಿದ್ದು ಒಂದು ಮಹತ್ವದ ಅಂಶ. ಹಾಗೇ ಈ ಸಂಘಟನೆಗಳ ಕರೆಯೂ ಒಂದು ಮಹತ್ವದ ರಾಜಕೀಯ ಪರಿಣಾಮವನ್ನು ಉಂಟುಮಾಡಿದೆ. ಈ ಮುಷ್ಕರಕ್ಕೆ ಎಡ ಪಕ್ಷಗಳಲ್ಲದೇ ಕಾಂಗ್ರೆಸ್ ನಂತಹ ಪಕ್ಷಗಳೂ ಬೆಂಬಲ ನೀಡಿವೆ. ಸಂಸತ್ತಿನಲ್ಲಿಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿದ್ದಾರೆ.
ಆದರೆ ವಿಪರ್ಯಾಸದ ಒಂದು ಸಂಗತಿ ಎಂದರೆ, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವುದು. ಮುಷ್ಕರದ ದಿನವೇ ಬೆಂಗಳೂರು ನಗರದ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕಿನತ್ತ ಮೆರವಣಿಗೆ ಹೊರಟ ಕಾರ್ಮಿಕರನ್ನು ಮುಂದಡಿ ಇಡದಂತೆ ಬಂದಿಸಿದ್ದು, ಕಾರ್ಮಿಕರನ್ನು ಚದುರಿಸಿದ್ದು. ನಗರದ ರಸ್ತೆಯಲ್ಲಿ ಮೆರವಣಿಗೆ ನಡೆಸಲು ಹೈಕೋರ್ಟಿನ ಆದೇಶವಿಲ್ಲ ಎಂಬುದನ್ನೇ ಒಂದು ನೆಪವಾಗಿ ಸಿದ್ಧರಾಮಯ್ಯನವರ ಸರ್ಕಾರ ಬಳಸುತ್ತಲೇ ಬರುತ್ತಿದೆ. ಈ ಆದೇಶ ಪ್ರತಿಭಟಿಸುವ, ಅಹವಾಲು ಕೇಳುವ ಜನತೆಯ ಪ್ರಜಾಸತ್ತಾತ್ಮಕ ಹಕ್ಕನ್ನು ಮೊಟಕುಗೊಳಿಸುತ್ತದೆ ಎಂದಾದಾಗ, ಅದನ್ನು ತೆರವುಗೊಳಿಸುವ ಕ್ರಮಗಳನ್ನು ಕೈಗೊಳ್ಳಬಹುದಿತ್ತು. ಪೊಲೀಸ್ ಕಮಿಷನರ್ ಗೆ ಇರುವ ಅವಕಾಶಗಳನ್ನು ಬಳಸಬಹುದಿತ್ತು. ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆಗಳನ್ನು ರಾಹುಲ್ ಗಾಂಧಿ ಟೀಕಿಸಿ ವಿರೋಧಿಸುತ್ತಿದ್ದರೆ, ಇಲ್ಲಿ ಅವರದ್ದೇ ಪಕ್ಷದ ಪೂರ್ಣ ಬಹುಮತದ ಸರ್ಕಾರ ಅದಕ್ಕೂ ಮಿಗಿಲಾಗಿ, ಇನ್ನೂ ಒಂದಿಷ್ಟು ಸೇರಿಸಿ ಜಾರಿಗೆ ತರಲು ಹೊರಟಿದೆ. ಈ ಸಂಹಿತೆಗಳ ಅಪಾಯಗಳ ಬಗ್ಗೆ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ತುಟಿ ಬಿಚ್ಚಿ ಒಂದೇ ಒಂದು ಮಾತನ್ನೂ ಆಡಿಲ್ಲ. 2026 ಎಪ್ರಿಲ್ 1 ರಿಂದ ಸಂಹಿತೆಗಳನ್ನು ಜಾರಿ ಮಾಡಲು ಉದ್ದೇಶಿಸಿರುವುದಾಗಿ ತಿಳಿದಿದೆ. ಅಧಿಕೃತವಾಗಿ ಸರ್ಕಾರ ಸಂಹಿತೆಗಳ ಜಾರಿ ಬಗ್ಗೆ ಏನೂ ಹೇಳದಿದ್ದರೂ ನಿಯಮಗಳನ್ನು ರೂಪಿಸುವ ಸಿದ್ಧತೆ ನಡೆಸಿದೆ. ಇದು ಕಾಂಗ್ರೆಸ್ ಪಕ್ಷದ ಎಡಬಿಡಂಗಿತನ ಮಾತ್ರವಲ್ಲ ಕಾರ್ಮಿಕರಿಗೆ ಬಗೆಯುವ ದ್ರೋಹ. ಕಾಂಗ್ರೆಸ್ ನಾಯಕರು ಏನೇ ಮಾತನಾಡಿದರೂ ಕೃತಿಯಲ್ಲಿ ಅವರು ಬಂಡವಾಳದಾರರ ಹಿತ ರಕ್ಷಕರು, ಉದಾರೀಕರಣ, ಖಾಸಗೀಕರಣದ ಆರಾಧಕರು ಎನ್ನುವುದನ್ನು ಪುನಃ ತೋರಿಸುತಿದ್ದಾರೆ.
ಇದೇ ಸಂಹಿತೆಗಳ ಬಗ್ಗೆ ಕೇರಳದ ಎಡ ಪ್ರಜಾಸತ್ತಾತ್ಮಕ ರಂಗದ ಸರ್ಕಾರ ಜಾರಿಗೊಳಿಸದಿರುವ ಖಚಿತ ನಿರ್ಧಾರ ಪ್ರಕಟಿಸಿದೆ. ಮತ್ತು ಅವುಗಳ ಪರಿಣಾಮಗಳ ಕೂಲಂಕುಶ ಅಧ್ಯಯನ ನಡೆಸಲು, ಕಾರ್ಮಿಕ ಸ್ನೇಹಿ ಕಾಯ್ದೆ ರೂಪಿಸಲು ಸುಪ್ರಿಂಕೋರ್ಟಿನ ಗೌ.ನ್ಯಾಯಮೂರ್ತಿ ವಿ.ಗೋಪಾಲಗೌಡ ರವರ ನೇತೃತ್ವದಲ್ಲಿ ಸಮಿತಿಯನ್ನೂ ಮಾಡಿದೆ. ಇದು ನಿಜಕ್ಕೂ ಶ್ಲಾಘನೀಯ, ಅನುಕರಣೀಯ.
ಕಾಂಗ್ರೆಸ್ ಪಕ್ಷದ ಅಖಿಲ ಭಾರತ ನಾಯಕರು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ, ಕೆಲವು ಸಚಿವರು ಕೋಮುವಾದಿ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ದ ಭಾರಿ ಟೀಕೆ, ಹೋರಾಟ ನಡೆಸುವವರಂತೆ ನಡೆದುಕೊಳ್ಳುತ್ತಾರೆ. ಇದು ಸ್ವಾಗತಾರ್ಹ. ಇರಲಿ. ಆದರೆ ತಮ್ಮ ನೀತಿಗಳು ಬಿಜೆಪಿ-ಸಂಘಪರಿವಾರ ಬೆಳೆಯಲು ಹುಲುಸಾದ ಗೊಬ್ಬರ ಹಾಕುತ್ತಿವೆ ಎನ್ನುವ ಮೂಲಭೂತ ಅಂಶವನ್ನು ನಿರ್ಲಕ್ಷಿಸುತ್ತಾರೆ, ಮರೆಸಬಯಸುತ್ತಾರೆ, ರಾಜಕೀಯವಾಗಿ ಮತದ ಫಸಲು ಪಡೆಯಲು ಮಾತ್ರ ಯತ್ನಿಸುತ್ತಾರೆ. ಅಂದರೆ ಶ್ರಮಜೀವಿಗಳ ಶೋಷಣೆಗೆ ಅನುವು ಮಾಡುವ, ಬಂಡವಾಳದಾರರ ಸುಲಿಗೆಗೆ ಸಂರಕ್ಷಣೆಗೆ ನೀಡುವ ಕೋಮುವಾದವನ್ನು ಬಾಯಿ ಮಾತಿನಲ್ಲಿ ವಿರೋಧಿಸುವುದು ಅದರ ತೀವ್ರತೆ ಹಾಗೂ ಅಪಾಯಕಾರಿ ಶಕ್ತಿಯನ್ನು ಕಡಿಮೆ ಮಾಡುವುದಿಲ್ಲ, ಬದಲಿಗೆ ಬೆಳೆಸುತ್ತದೆ, ಬಲಗೊಳಿಸುತ್ತದೆ. ಮೂಲಭೂತ ಬದಲಾವಣೆ ತರಲು ನಡೆಸದ ಯಾವ ಪ್ರಯತ್ನಗಳೂ ಒಂದು ತೋರಿಕೆಯ ಪ್ರದರ್ಶನವಷ್ಟೇ. ಆದ್ದರಿಂದ ಈ ವರ್ಗಗುಣವನ್ನು ಅರ್ಥ ಮಾಡಿಕೊಂಡು ಮುಂದೆ ಸಾಗುವುದು ಪರ್ಯಾಯ ರಾಜಕಾರಣ ರೂಢಿಸಿಕೊಳ್ಳುವುದು ಅತ್ಯಗತ್ಯ ಹಾಗೂ ಅನಿವಾರ್ಯ.
ಸಂಚಿಕೆ 08-2026
