ಬಿಬಿಎಂಪಿ ವಿಭಜನೆಗೆ ಸಿಪಿಐ(ಎಂ) ಒತ್ತಾಯ

22ನೇ ಬೆಂಗಳೂರು ದಕ್ಷಿಣ ಸಿಪಿಐ(ಎಂ) ಸಮ್ಮೇಳನ : 1.25 ಕೋಟಿಗೂ ಅಧಿಕ ಜನಸಂಖ್ಯೆ, 741 ಚದರ ಕಿಮೀ ವಿಸ್ತೀರ್ಣ, 198 ವಾರ್ಡುಗಳು ಇರುವ ಬೆಂಗಳೂರು ನಗರವನ್ನು ಒಬ್ಬ ಮೇಯರ್, ಒಂದು ಪಾಲಿಕೆ ನಿರ್ವಹಣೆ ಮಾಡುವುದು ಅವೈಜ್ಞಾನಿಕವಾಗಿದ್ದು, ಆಡಳಿತ ವಿಕೇಂದ್ರೀಕರಣದ ದೃಷ್ಟಿಯಿಂದ ಬಿಬಿಎಂಪಿಯನ್ನು ವಿಭಜಿಸುವುದು ಸೂಕ್ತವಾಗಿದ್ದು, ಸರ್ಕಾರ ಬಿಬಿಎಂಪಿಯನ್ನು ವಿಭಜಿಸಬೇಕೆಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮ್ಮೇಳನವು ಒತ್ತಾಯಿಸಿದೆ.

ಡಿಸೆಂಬರ್ 15 ರಿಂದ 17ರವರೆಗೆ ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ನಡೆದ ಬೆಂಗಳೂರು ದಕ್ಷಿಣ ಜಿಲ್ಲಾ ಸಮ್ಮೇಳನದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕಾಗಿ ಸಾರ್ವಜನಿಕ ಅಭಿಪ್ರಾಯ ಪಡೆಯಬೇಕೆಂದು ಅದು ಸಲಹೆ ಮಾಡಿದೆ. ಜತೆಗೆ ಚಂದಾಪುರವನ್ನು ಕೇಂದ್ರವಾಗಿರಿಸಿಕೊಂಡು ಜಿಗಣಿ, ಬೊಮ್ಮಸಂದ್ರ, ಅತ್ತಿಬೆಲೆ ಪ್ರದೇಶಗಳನ್ನು ಒಳಗೊಂಡು ನಗರ ಪಾಲಿಕೆಯನ್ನು ರಚಿಸಬೇಕೆಂದೂ ಅದು ಒತ್ತಾಯಿಸಿದೆ. ಇದಕ್ಕಾಗಿ ಆನೇಕಲ್‍ನಲ್ಲಿ ಬೃಹತ್ ಹೋರಾಟ ಸಂಘಟಿಸಲು ನಿರ್ಣಯಕ್ಕೆ ಬರಲಾಗಿದೆ.

ಕಾರ್ಮಿಕರು, ಬಡವರು, ದಲಿತರು ಹಾಗು ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ವಾರ್ಡುಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಪ್ರತಿಷ್ಠಿತ ಜನ ವಾಸಿಸುವ ವಾರ್ಡ್‍ಗಳಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುವ ಬಿಬಿಎಂಪಿ, ಕಾರ್ಮಿಕರು ಬಡಜನ ವಾಸಿಸುವ ಜನವಸತಿ ಪ್ರದೇಶಗಳಿಗೆ ಅನುದಾನ ನೀಡದೆ, ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಬಿಬಿಎಂಪಿ ಭ್ರಷ್ಟಾಚಾರದ ವಿರುದ್ಧ ಹೋರಾಟಗಳನ್ನು ತೀವ್ರಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಮೆಟ್ರೋ ರೈಲು ಯೋಜನೆ ವಿಸ್ತರಣೆಯಲ್ಲೂ ಈ ತಾರತಮ್ಯ ಮುಂದುವರಿದಿದ್ದು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಮೆಟ್ರೋ ರೈಲು ಯೋಜನೆ ರೂಪಿಸಿದೆ. ಆದರೆ ಕೈಗಾರಿಕಾ ಕಾರ್ಮಿಕರು ವಾಸಿಸುವ ಮತ್ತು ಕೈಗಾರಿಕಾ ಪ್ರದೇಶಗಳಿಗೆ ಮೆಟ್ರೋ ಯೋಜನೆ ವಿಸ್ತರಣೆ ಮಾಡದೆ ಇಲ್ಲಿಯೂ ದುಡಿಯುವ ಸಾಮಾನ್ಯ ಜನರನ್ನು ನಿರ್ಲಕ್ಷಿಸಲಾಗಿದೆ. ಸದ್ಯ ಬೊಮ್ಮಸಂದ್ರದವರೆಗೆ ಯೋಜಿಸಲಾದ ವಿಸ್ತರಣೆಯನ್ನು ಪರಿಷ್ಕರಿಸಿ, ಅತ್ತಿಬೆಲೆವರೆಗೆ ಹಾಗು ನಾಗವಾರದಿಂದ ಗೊಟ್ಟಿಗೆರೆವರೆಗೆ ಇರುವ ಯೋಜನೆಯನ್ನು ಜಿಗಣಿವರೆಗೆ ವಿಸ್ತರಣೆ ಮಾಡಬೇಕೆಂದು ಒತ್ತಾಯಿಸಿದೆ. ಇದಕ್ಕಾಗಿ ಜನವರಿ 18 ರಂದು ಮೆಟ್ರೋ ಪ್ರಧಾನ ಕಛೇರಿ ಎದುರು ಪ್ರತಿಭಟನೆ ನಡೆಸಲು ಅದು ತೀರ್ಮಾನಿಸಿದೆ.

ಬಗರ್‍ಹುಕುಂ ಜಮೀನನ್ನು ಅಕ್ರಮವಾಗಿ ಶ್ರೀಮಂತರಿಗೆ, ರೈತರಲ್ಲದವರಿಗೆ ಮಂಜೂರು ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು, ಗೌರಿ ಲಂಕೇಶ್ ಹತ್ಯೆ ಶೀಘ್ರ ತನಿಖೆ ಆಗಬೇಕು ಇತ್ಯಾದಿ 14 ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

knumesh-cpim-bengaluru-district-secratoryಸಮ್ಮೇಳನದಲ್ಲಿ 17 ಜನರ ನೂತನ ಜಿಲ್ಲಾ ಸಮಿತಿ ಆಯ್ಕೆಯಾಗಿದ್ದು, ಕೆ.ಎನ್.ಉಮೇಶ್ ಕಾರ್ಯದರ್ಶಿಯಾಗಿ ಪುನರಾಯ್ಕೆ ಆಗಿದ್ದಾರೆ.

ಸಮ್ಮೇಳನಕ್ಕೂ ಪೂರ್ವದಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಜಿಗಣಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಸಮ್ಮೇಳನದ ಅಂಗವಾಗಿ ಬೃಹತ್ ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಮುಖಂಡರಾದ ಜಿ.ಎನ್.ನಾಗರಾಜ್, ಮೀನಾಕ್ಷಿ ಸುಂದರಂ, ಕೆ.ಪ್ರಕಾಶ್ ಹಾಗು ಪತ್ರಕರ್ತ ಶೂದ್ರ ಶ್ರೀನಿವಾಸ್ ಮಾತನಾಡಿದರು.

ಗೌರವಾರ್ಪಣೆ: ಇದೇ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು. ಗೌರವ ಸ್ವೀಕರಿಸಿದವರು: ಪತ್ರಕರ್ತ ಹಾಗೂ ಸಾಹಿತಿ ಶೂದ್ರ ಶ್ರೀನಿವಾಸ್, ವಿಜ್ಞಾನಿ ವೈ.ಸಿ.ಸುಬ್ರಮಣ್ಯ, ಹಿರಿಯ ಕಾರ್ಮಿಕ ಮುಖಂಡ ಕೆ.ಎಸ್.ಸುಬ್ರಮಣ್ಯ, ನಿವೃತ್ತ ಟೆಲಿಕಾಂ ಅಧಿಕಾರಿ ಸಬ್ರಮಣ್ಯಗುಪ್ತ.

ವಿಶೇಷ ಗೋಷ್ಠಿ: ಸೌಹಾರ್ದ ಕರ್ನಾಟಕಕ್ಕಾಗಿ ಪ್ರಗತಿಪರರು ಜನವರಿ 30 ರಂದು ಸಂಘಟಿಸಿರುವ ಚಾರಿತ್ರಿಕ `ಮಾನವ ಸರಪಳಿ’ ಯಶಸ್ವಿಗೊಳಿಸುವ ವಿಶೇಷ ಗೋಷ್ಠಿ ನಡೆಯಿತು. ಗೋಷ್ಠಿ ಉದ್ದೇಶಿಸಿ ಜಿ.ಎನ್. ನಾಗರಾಜ್ ಮಾತನಾಡಿದರು. ಈ ಸಂಬಂಧ ಕೈಗೊಳ್ಳಲಾದ ನಿರ್ಣಯವನ್ನು ಬೆಂಬಲಿಸಿ ಪ್ರತಿನಿಧಿಗಳು ಮಾತನಾಡಿದರು.

ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಮತ್ತು ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಎದುರಿಸುವ ಬಗೆ, ಪಕ್ಷದ ಸ್ಪರ್ಧೆ, ಪೂರ್ವ ತಯಾರಿ ಸಂಬಂಧ ವಿಶೇಷ ಚರ್ಚೆ ನಡೆಸಲಾಯಿತು.

cpim-bengaluru-south-district-conference‘ಗೌರಿ ಕಾರ್ನರ್’ : ಸಮ್ಮೇಳನದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಸ್ಮರಣಾರ್ಥ ಗೌರಿ ಕಾರ್ನರ್ ಎಂಬ ಛಾಯಾಚಿತ್ರ ಪ್ರದರ್ಶನದ ಜತೆ  ಕೋಮುವಾದಿ ದಾಳಿಗಳ ಕುರಿತ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಪತ್ರಕರ್ತ ಶೂದ್ರ ಶ್ರೀನಿವಾಸ್ ಇದನ್ನು ಉದ್ಘಾಟಿಸಿದರು.

ಪುಸ್ತಕ ಲೋಕಾರ್ಪಣೆ : ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್ ಬರೆದಿರುವ “ರಾಷ್ಟ್ರೀಯವಾದ-ಹಿಂದುತ್ವ ಮತ್ತು ಪ್ರಜಾಪ್ರಭುತ್ವ”,  “ನೋಟು ರದ್ದತಿ, ಜಿಎಸ್‍ಟಿ, ಸುಧೀಶ್ ಮಿನ್ನಿ ಬರೆದಿರುವ ನರಕದ ಗರ್ಭಗುಡಿಯೊಳಗೆ ಈ ಮೂರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.
ಪುಸ್ತಕ ಮಾಲಾ ಮತ್ತು ಕ್ರಿಯಾ ಮಾಧ್ಯಮ ದಿಂದ ಪುಸ್ತಕ ಪ್ರದರ್ಶನ-ಮಾರಾಟ ಏರ್ಪಾಡಾಗಿದ್ದು, 20 ಸಾವಿರ ರೂಪಾಯಿ ಮೌಲ್ಯದ ಪುಸ್ತಕ ಮಾರಾಟವಾಯಿತು.

ಜನಶಕ್ತಿ ಪ್ರಸಾರಕ್ಕೊಂದು ಹೊಸ ಮಾದರಿ

ಜನಶಕ್ತಿ ಪ್ರಸಾರಕ್ಕೊಂದು ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಿಗೆ ಮಾದರಿಯಾಗಬಹುದಾದ ವಿಧಾನವನ್ನು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ರೂಪಿಸಿದೆ. ಜನಶಕ್ತಿ ಪ್ರಸಾರ ಮತ್ತು ಸಾಮಾಜಿಕ ಮಾಧ್ಯಮ ಕುರಿತು ಚರ್ಚೆಗೆ ವಿಶೇಷ ಅಧಿವೇಶನ ಸಂಘಟಿಸಲಾಯಿತು. ಈ ಅಧಿವೇಶನದಲ್ಲಿ ಡಿಸೆಂಬರ್ 31ರೊಳಗೆ (ಅಂದರೆ ರಾಜ್ಯ ಸಮ್ಮೇಳನದ ಒಳಗೆ) ಪಕ್ಷದ ಸದಸ್ಯತ್ವದ ಎರಡು ಪಟ್ಟು ಜನಶಕ್ತಿ ಚಂದಾ ಮಾಡಿಸುವ ನಿರ್ಣಯ ಮಾಡಲಾಯಿತು. ಬರಿಯ ನಿರ್ಣಯಕ್ಕೆ ನಿಲ್ಲದೆ, ಪ್ರತಿ ವಲಯ/ತಾಲೂಕು ಸಮಿತಿಗಳ ನಾಯಕತ್ವಕ್ಕೆ ಅದರ ಸದಸ್ಯತ್ವದ ಎರಡು ಪಟ್ಟು ಜನಶಕ್ತಿ ಸಂಚಿಕೆಗಳನ್ನು ವೇದಿಕೆಯ ಮೇಲಿದ್ದ ನಾಯಕರಿಂದ ಕೊಡಿಸಲಾಯಿತು.

ಜನಶಕ್ತಿಯ ಕಾರ್ಯನಿರತ ಸಂಪಾದಕ ವಸಂತರಾಜ್ ಎನ್.ಕೆ. “ಜನಶಕ್ತಿ ಪ್ರಸಾರ ಮತ್ತು ಸಾಮಾಜಿಕ ಮಾಧ್ಯಮ”ಗಳ ಮಹತ್ವ, ಸಾಧಿಸಿರುವ ಪ್ರಗತಿ ಹಾಗೂ ಮುಂದಿನ ಯೋಜನೆಗಳ ಕುರಿತು ಮಾತನಾಡಿದರು. ಜನಶಕ್ತಿ ಪ್ರಸಾರ ವಿಭಾಗದ ಮುಖ್ಯಸ್ಥ ಜಿ.ಚಂದ್ರಶೇಖರ್ ಉಪಸ್ಥಿತರಿದ್ದರು.

ವರದಿ : ಲಿಂಗರಾಜು

Leave a Reply

Your email address will not be published. Required fields are marked *