ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ದಾಳಿಯನ್ನು ಎಡ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಇರಾನ್ ದೇಶದ ಸಾರ್ವಭೌಮ ಜನತೆಯ ಮೇಲೆ ದಾಳಿ ನಡೆಸುತ್ತಿರುವುದು, ಭಯೋತ್ಪಾದನೆಗೂ ಮಿಗಿಲಾಗಿ ಜನರನ್ನು ಹತ್ಯೆ ಮಾಡುತ್ತಿರುವುದು, ಧಾಳಿ ನಡೆಸಿ ಅಯತುಲ್ಲಾ ಖೊಮೈನಿಯ ಹತ್ಯೆ ಮಾಡಿರುವುದು, ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿರುವುದು, ಶಾಲೆಗಳ ಮೇಲೆ ಬಾಂಬುಗಳನ್ನು ಹಾಕಿ ಮಕ್ಕಳನ್ನು ಕೊಲ್ಲುತ್ತಿರುವುದು ಯುಎಸ್ಎ ಸಾಮ್ರಾಜ್ಯಶಾಹಿ ದುರಹಂಕಾರದ ಪರಾಕಾಷ್ಠೆಯಾಗಿದೆ.
ಈ ದಾಳಿಗಳು ಇರಾನ್ ದೇಶದ ಸಾರ್ವಭೌಮತ್ವವನ್ನು, ವಿಶ್ವಸಂಸ್ಥೆಯ ನಿಯಮಾವಳಿಯನ್ನು ಮತ್ತು ಎಲ್ಲಾ ಅಂತರರಾಷ್ಟ್ರೀಯ ಒಪ್ಪಂದಗಳನ್ನು ಘೋರವಾಗಿ ಉಲ್ಲಂಘಿಸುತ್ತವೆ. ಅಮೇರಿಕದ ಈ ಭಯೋತ್ಪಾದಕ ದಾಳಿಗಳನ್ನು ಖಂಡಿಸಬೇಕೆಂದು ಪ್ರಜಾಪ್ರಭುತ್ವವಾದಿ ಶಕ್ತಿಗಳಿಗೆ ಮತ್ತು ಜನತೆಗೆ ಎಡಪಕ್ಷಗಳು ಮನವಿ ಮಾಡಿವೆ.
ಇತ್ತೀಚೆಗೆ ವೆನೆಜುವೆಲಾದ ಅಧ್ಯಕ್ಷ ಮದುರೋ ಮತ್ತು ಅವರ ಪತ್ನಿಯನ್ನು ಅವರ ಸ್ವಂತ ನಿವಾಸದಿಂದಲೇ ಅಪಹರಿಸಿ ಅಮೆರಿಕದಲ್ಲಿ ಸೆರೆಯಲ್ಲಿಡಲಾಗಿದೆ. ವೆನಿಜುವೆಲಾ ದೇಶದ ತೈಲ ಸಂಪನ್ಮೂಲಗಳ ಮೇಲೆ ಅಮೆರಿಕ ಪೂರ್ಣ ಆಧಿಪತ್ಯ ಸಾಧಿಸಿದೆ. ಇದರಿಂದ ಅಮೇರಿಕ ಸಾಮ್ರಾಜ್ಯಶಾಹಿಯ ನಿಜ ಬಣ್ಣ ಬಯಲಾಗಿದೆ. ಕ್ಯೂಬಾ ಮೇಲೂ ಹಲವು ಬೆದರಿಕೆಗಳನ್ನು ಹಾಕಲಾಗಿದೆ. ಕ್ಯೂಬಾದಲ್ಲಿ ಆಂತರಿಕ ಗಲಭೆಗಳನ್ನು ಸೃಷ್ಟಿಸಲು ಭಯೋತ್ಪಾದಕ ಗುಂಪುಗಳನ್ನು ಅಮೆರಿಕ ಕಳಿಸುತ್ತಿದೆ. ಗಾಜಾದಲ್ಲಿ ನರಮೇಧ ನಡೆಸಿದ ಇಸ್ರೇಲ್, ಶಾಂತಿ ಒಪ್ಪಂದ ಮಾಡಿಕೊಂಡ ನಂತರವೂ ಗಾಜಾ ಮೇಲಿನ ದಾಳಿಯನ್ನು ನಿಲ್ಲಿಸದೆ ಹತ್ಯೆಗಳನ್ನು ನಡೆಸುತ್ತಿದೆ.
ಇರಾನ್ ಮೇಲಿನ ದಾಳಿಯ ನಿಜವಾದ ಗುರಿ ಅಲ್ಲಿನ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ಸ್ವಾಧೀನಪಡಿಸಿಕೊಳ್ಳುವುದಾಗಿದೆ. 2003 ರಲ್ಲಿ ಇರಾಕ್ ಬಳಿ ಸಮೂಹ ನಾಶಕ ಶಸ್ತ್ರಾಸ್ತ್ರಗಳಿವೆ ಎಂದು ಸುಳ್ಳು ಪ್ರಚಾರಗಳನ್ನು ಮಾಡಿ, ಇರಾಕ್ ಮೇಲೆ ಬಾಂಬುಗಳ ಸುರಿಮಳೆಗೈದು, ಸದ್ದಾಂ ಹುಸೇನ್‌ನನ್ನು ಮತ್ತು ಲಕ್ಷಾಂತರ ಇರಾಕಿ ಜನರನ್ನು ಕೊಂದ ಅಮೆರಿಕ, ಈಗ ಇರಾನ್ ವಿರುದ್ಧ ಅದೇ ರೀತಿಯ ದಾಳಿಗೆ ಮುಂದಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ನೂರಾರು ಸೈನಿಕ ನೆಲೆಗಳನ್ನು ಸ್ಥಾಪಿಸಿದೆ. ಇದರಿಂದ ತನಗೆ ನಿರಂತರ ಅಪಾಯವನ್ನು ಸೃಷ್ಟಿಸುವುದನ್ನು ಇರಾನ್ ವಿರೋಧಿಸುತ್ತಿದೆ. ಅನೇಕ ದಶಕಗಳಿಂದ ಇರಾನ್‌ನಲ್ಲಿ ತಮ್ಮ ಅನುಕೂಲಕರ, ಗುಲಾಮ ಸರ್ಕಾರವನ್ನು ಸ್ಥಾಪಿಸಿಕೊಳ್ಳಲು ಅಮೆರಿಕ ಪ್ರಯತ್ನಿಸುತ್ತಿದೆ. ತಮಗೆ ಸೋಲದ ಕಾರಣದಿಂದಲೇ ಇರಾನ್ ಮೇಲೆ ಪ್ರಸ್ತುತ ಈ ಮಾನವ ಹತ್ಯೆಗಳ ದಾಳಿಗಳಿಗೆ ಅಮರಿಕ ಮುಂದಾಗಿದೆ.
ಇತ್ತೀಚೆಗೆ ಇಸ್ರೇಲ್ ಪ್ರವಾಸ ಮಾಡಿದ ಭಾರತದ ಪ್ರಧಾನಿ ಮೋದಿ ಅವರು, ಮಾನವ ಹತ್ಯಾಕಾಂಡ ನಡೆಸುತ್ತಿರುವ ಇಸ್ರೇಲ್‌ಗೆ ಬೆಂಬಲ ಘೋಷಿಸಿದ್ದಾರೆ. ಈ ಮೂಲಕ, ಹಿಂದೆ ನಮ್ಮ ಸರ್ಕಾರಗಳು ಪ್ಯಾಲೆಸ್ತೀನ್‌ಗೆ ಬೆಂಬಲವಾಗಿ ನಿಂತ ನಿಲುವಿನಿಂದ ಸಂಪೂರ್ಣವಾಗಿ ವಿರುದ್ಧ ನಿಲುವನ್ನು ಪ್ರದರ್ಶಿಸಿದ್ದಾರೆ. ಈ ಪ್ರವಾಸ ಮುಗಿದ 2 ದಿನಗಳಲ್ಲೇ ಈ ದಾಳಿ ನಡೆದಿದೆ. ಇರಾನ್ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಬೇಕು ಮತ್ತು ಇಸ್ರೇಲ್ ಮತ್ತು ಅಮೆರಿಕ ಕುರಿತು ತನ್ನ ನಿಲುವನ್ನು ಬದಲಾಯಿಸಿಕೊಳ್ಳಬೇಕು ಎಂದು ಐದು ಕಮ್ಯೂನಿಸ್ಟ್ ಪಕ್ಷಗಳ ಕರ್ನಾಟಕ ರಾಜ್ಯ ಘಟಕಗಳು ಒತ್ತಾಯಿಸಿವೆ.
ಹಾಗೆಯೇ ಅಮೆರಿಕನ್ ಸಾಮ್ರಾಜ್ಯಶಾಹಿ ಮತ್ತು ಅದರ ಗುಲಾಮ ಇಸ್ರೇಲ್‌ನ್ನು ಸೋಲಿಸುವಲ್ಲಿ ವಿಶ್ವದ ಜನತೆ ಮತ್ತು ಭಾರತದ ಪ್ರಜಾಪ್ರಭುತ್ವ ಜನತೆ ಒಗ್ಗಟ್ಟಿನ ಬೆಂಬಲವನ್ನು ಇರಾನ್ ಜನತೆಗೆ ನೀಡಬೇಕೆಂದು ಕಮ್ಯೂನಿಸ್ಟ್ ಪಕ್ಷಗಳು ಮನವಿ ಮಾಡಿವೆ.
ಸಿಪಿಐ(ಎಂ) ನ ರಾಜ್ಯ ಕಾರ್ಯದರ್ಶಿ ಡಾ. ಪ್ರಕಾಶ್ ಕೆ., ಸಿಪಿಐ ನ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಐ(ಎಂ-ಎಲ್) ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ರೊಜಾರಿಯೋ, ಎಸ್ ಯುಸಿಐ(ಸಿ) ರಾಜ್ಯ ಕಾರ್ಯದರ್ಶಿ ಉಮಾ ಕೆ. ಮತ್ತು ಎಐಎಫ್ ಬಿ ಲಿಬರೇಷನ್ ನ ರಾಜ್ಯ ಕಾರ್ಯದರ್ಶಿ ಜಿ.ಆರ್.ಶಿವಶಂಕರ್ ಅವರು ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
