ಬಂಟ್ವಾಳ ತಾಲ್ಲೂಕು ನೂತನ ಸಿಪಿಐ(ಎಂ) ಕಛೇರಿ ಉದ್ಘಾಟನೆ

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಬಿ ಸಿ ರಸ್ತೆಯಲ್ಲಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ನೂತನ ಕಛೇರಿ ಉದ್ಘಾಟನೆಗೊಂಡಿದೆ. ಕಾರ್ಯಕ್ರಮವನ್ನು ಉದ್ದೇಶಿಸಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ ಮಾತನಾಡಿ, ಸ್ವಾತಂತ್ರ್ಯ ಚಳುವಳಿಯಲ್ಲಿ ರೈತ-ಕಾರ್ಮಿಕರ ಹೋರಾಟಕ್ಕೆ ದೊಡ್ಡ ಇತಿಹಾಸವೇ ಇದೆ. ಬ್ರಿಟಿಷ್‌ ವಸಾಹತುಶಾಹಿಗಳ ವಿರುದ್ಧ ಕಮ್ಯೂನಿಸ್ಟ್‌ ಪಕ್ಷ ಕೈಗೊಂಡ ಹೋರಾಟ ಇಡೀ ರೈತ ಕಾರ್ಮಿಕ ವರ್ಗದ ಮೇಲಿನ ದೌರ್ಜನ್ಯ, ದಬ್ಬಾಳಿಕೆಗಳಿಂದ ಸಂಪೂರ್ಣ ವಿಮೋಚನೆಗಾಗಿ ಶ್ರಮಿಸಿದೆ ಎಂದು ಹೇಳಿದರು.

ಬಂಟ್ವಾಳದಲ್ಲಿಯೂ ಕಮ್ಯೂನಿಸ್ಟ್‌ ಚಳುವಳಿ ಪ್ರಭಾವಶಾಲಿಯಾಗಿದ್ದು ದುಡಿಯುವ ವರ್ಗದ ಆಶಾಕಿರಣವಾಗಿ ಮೂಡಿಬಂದಿತು. ಬಳಿಕ ಭೂ ಸುಧಾರಣೆ ಕಾನೂನಿನ ಜಾರಿಗಾಗಿ ನಡೆದ ಸಮರಶೀಲ ಹೋರಾಟ ಬಂಟ್ವಾಳದಲ್ಲಿ ತನ್ನದೇ ಛಾಪನ್ನು ಮೂಡಿಸಿತು ಎಂದು ಆಶಯ ವ್ಯಕ್ತಪಡಿಸಿದರು.

ವಿವಿಧ ವಿಭಾಗದ ಕಾರ್ಮಿಕರಿಗೆ ನ್ಯಾಯ ಒದಗಿಸುವಲ್ಲಿ ಕಮ್ಯುನಿಸ್ಟರ ಪಾತ್ರ ಬಹಳ ದೊಡ್ಡದಿದೆ. ಸಮಾಜದ  ಅಭಿವೃದ್ಧಿಯಲ್ಲಿ ಕೆಂಬಾವುಟದ ಪಾತ್ರವಿದ್ದು, ಅಂತಹ ಕಮ್ಯುನಿಸ್ಟ್ ಚಳುವಳಿಯ ಪರಂಪರೆಯನ್ನು ಮತ್ತೆ ಮರುಕಳಿಸುವಂತಾಗಲು ದುಡಿಯುವ ವರ್ಗದ ಚಟುವಟಿಕೆಗಳು ಬಂಟ್ವಾಳ ತಾಲೂಕಿನಾದ್ಯಂತ ವಿಸ್ತರಿಸಬೇಕು. ಚಳುವಳಿಯ ಚಟುವಟಿಕೆಗಳ ಕೇಂದ್ರ ಸ್ಥಳವಾಗಿ ಸಿಪಿಐ(ಎಂ) ಕಚೇರಿ ಕಾರ್ಯನಿರ್ವಹಿಸಲಿದೆ ಎಂದರು.

CPIM Bantvala office 14 02 2023D

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಜನಸಾಮಾನ್ಯರ ಬದುಕಿನ ಬಗ್ಗೆ ಸದಾ ಚಿಂತಿಸಿ ಜನಪರ ಹೋರಾಟಗಳನ್ನು ಸಂಘಟಿಸಬೇಕೆಂದು ಹೇಳಿದರು.

ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್ ಮಾತನಾಡಿ, ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಲು, ದೇಶದ ಸೌಹಾರ್ದತಾ ಪರಂಪರೆಯನ್ನು ಉಳಿಸುವುದು ಸಿಪಿಐ(ಎಂ) ಪಕ್ಷದಿಂದ ಮಾತ್ರ. ಆ ಮೂಲಕ ದುಡಿಯುವ ಜನಗಳ ಉತ್ತಮ ಭವಿಷ್ಯ ರೂಪುಗೊಳ್ಳಲಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ಸಮಸ್ತ ಮಾನವ ಕುಲದ ಏಳಿಗೆಗಾಗಿ ಶ್ರಮಿಸುವ ಕಮ್ಯೂನಿಸ್ಟ್ ಸಿದ್ಧಾಂತದಿಂದ ಮಾತ್ರವೇ ಶೋಷಿತ ಸಮುದಾಯದ ದೀನ ದಲಿತರ ಉದ್ದಾರ ಮಾಡಲು ಸಾಧ್ಯ. ದೇಶದ ಆಳುವ ವರ್ಗ ಕೋಮುವಾದ ಕಾರ್ಪೊರೇಟ್ ಮಿಶ್ರಣದಿಂದ ದೇಶದ ಸಂಪತ್ತನ್ನು ದೋಚುತ್ತಿದೆ. ಅಂತಹ ವಂಚಕರಿಂದ ದೇಶವನ್ನು ಉಳಿಸಬೇಕಾದರೆ ಕಮ್ಯೂನಿಸ್ಟ್ ಚಳುವಳಿಯನ್ನು ವಿಸ್ತಾರವಾಗಿ ಬೆಳೆಸುವುದು ಒಂದೇ ದಾರಿ ಎಂದು ಪ್ರತಿಪಾದಿಸಿದರು.

CPIM Bantvala office 14 02 2023C

ಪ್ರಾಸ್ತಾವಿಕ ಮಾತುಗಳನ್ನಾಡಿದ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕಾರ್ಮಿಕ ವರ್ಗದ ಧ್ವನಿಯಾದ ಸಿಪಿಐ(ಎಂ) ಬಂಟ್ವಾಳದಲ್ಲಿ ನಡೆಸಿದ ಹೋರಾಟಗಳನ್ನು ಮೆಲುಕು ಹಾಕುತ್ತಾ ಭವಿಷ್ಯದ ದಿನಗಳಲ್ಲಿ ಚಳುವಳಿ ಮುನ್ನಡೆಸಲು ಇರುವ ವಿಪುಲ ಅವಕಾಶಗಳ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ಸಿಪಿಐ(ಎಂ) ಹಿರಿಯ ನಾಯಕರಾದ ಬಿ ವಾಸು ಗಟ್ಟಿ, ಸಂಜೀವ ಬಂಗೇರ, ಮೋನಪ್ಪ ಸಪಲ್ಯ, ನಾರಾಯಣ ಬಡಕಬೈಲ್ ಉಪಸ್ಥಿತರಿದ್ದರು. ಜಿಲ್ಲೆಯ ಕಾರ್ಮಿಕ ಮುಖಂಡ ಬಿ ಎಂ ಭಟ್ ಶುಭಕೋರಿ ಮಾತನಾಡಿದರು.

ಸಮಾರಂಭದಲ್ಲಿ ಸಿಪಿಐ(ಎಂ) ನಾಯಕರಾದ ಸುಂದರ ಶೆಟ್ಟಿ ಮೂಡಬಿದ್ರಿ, ತಾಲೂಕು ನಾಯಕರಾದ ಉದಯ ಕುಮಾರ್, ಜನಾರ್ಧನ, ಲೋಲಾಕ್ಷಿ, ಚಂದ್ರ ಪೂಜಾರಿ, ಯುವಜನ ನಾಯಕರಾದ ಅಮೀರ್, ಅಮನ್, ಕಾರ್ಮಿಕ ನಾಯಕರಾದ ವಿಮಲ, ನಾರಾಯಣ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *