
ಸಿಪಿಐ(ಎಂ) ಪಕ್ಷದ ಕರ್ನಾಟಕ ರಾಜ್ಯ ಸಮಿತಿ ಮಾಜಿ ಕಾರ್ಯದರ್ಶಿ ಮಂಡಳಿ ಸದಸ್ಯರೂ, ಕೃಷಿಕೂಲಿಕಾರ ಸಂಘದ ಮಾಜಿ ರಾಜ್ಯ ಅಧ್ಯಕ್ಷರೂ ಆಗಿದ್ದ ಕಾಮ್ರೇಡ್ ನಿತ್ಯಾನಂದ ಸ್ವಾಮಿ (77) ಅವರು ಇಂದು ಬೆಳಿಗ್ಗೆ (ಮಾರ್ಚ್ 02, 2026) ಬೆಂಗಳೂರಿನ ತೆರೆಸಾ ಆಸ್ಪತ್ರೆಯಲ್ಲಿ ದೀರ್ಘಕಾಲೀನ ಅನಾರೋಗ್ಯದ ಬಳಿಕ ನಿಧನರಾದರು.
ಸಂಕ್ಷಿಪ್ತ ಪರಿಚಯ;
ಉಡುಪಿಯ ಕಲ್ಯಾಣಪುರದಲ್ಲಿ ಓರ್ವ ಕಟ್ಟಾ ಕ್ರಿಶ್ಚಿಯನ್ ಕುಟುಂಬದಲ್ಲಿ ಆಗಸ್ಟ್ 25, 1949 ರಂದು ಜನಿಸಿದ ಅವರು, ಆ ಕ್ರಿಶ್ಚಿಯನ್ ಪಂಥದ ಅನುಸಾರವಾಗಿಯೇ ಆರಂಭಿಕ ಮತ್ತು ಉನ್ನತ ಶಿಕ್ಷಣ ಪಡೆದು, ಅದರ ಧರ್ಮಪ್ರಚಾರಕ್ಕಾಗಿ `ಹಿಂದೂ ಕ್ರಿಶ್ಚಿಯನ್’ ಪಂಥದ ಸ್ವಾಮಿಯಾಗಿ ನೇಮಕಗೊಂಡು ಕರ್ನಾಟಕದ ಬೆಳಗಾವಿ ಜಿಲ್ಲೆಯ ಸೌದತ್ತಿಗೆ ಕಳಿಸ್ಪಟ್ಟಿದ್ದರು.
1980 ರ ಕಾಲಘಟ್ಟದಲ್ಲಿ ಸರ್ಕಾರದ ತೆರಿಗೆ ಹೇರಿಕೆ ವಿರುದ್ದ ಮಲಪ್ರಭಾ ಬಳಕೆದಾರ ರೈತರು ನಡೆಸಿದ ಐತಿಹಾಸಿಕ ನರಗುಂದ, ನವಲಗುಂದದ ರೈತ ಚಳವಳಿ ಪ್ರಭಾವಕ್ಕೆ ಒಳಗಾದ ಅವರು ಅಂತಿಮವಾಗಿ ತನ್ನ ಧರ್ಮಪ್ರಚಾರಕ ಹುದ್ದೆಯನ್ನು ತೊರೆದು ರೈತ ಕಾರ್ಮಿಕ ಚಳವಳಿಗೆ ಧುಮುಕಿದರು.
ಸೌದತ್ತಿಯಲ್ಲಿ ತಮ್ಮ ಉಪ ಜೀವನ ನಿರ್ವಹಣೆಗಾಗಿ ಆರಂಭಿಸಿದ್ದ “ಜ್ಞಾನಕಿರಣ” ಟ್ಯೂಷನ್ ಕೇಂದ್ರವೂ ಆ ಪ್ರದೇಶದ ವಿದ್ಯಾರ್ಥಿ, ರೈತ-ಕಾರ್ಮಿಕ ಚಳವಳಿಯ ಕೇಂದ್ರವಾಗಿಯೂ ಕೆಲಸ ಮಾಡಿತು. ಅದರ ಮೂಲಕ ಹೊರಹೊಮ್ಮಿದ ನೂರಾರು ವಿದ್ಯಾರ್ಥಿಗಳನ್ನು ಪ್ರಗತಿಪರ ಚಳುವಳಿಗೆ ಆಕರ್ಷಿಸುವಲ್ಲಿ ಕೆಲಸಮಾಡಿತ್ತು.
ಕಾಮ್ರೇಡ್ ನಿತ್ಯಾನಂದಸ್ವಾಮಿ ಅವರಿಂದ ಉಚಿತ ಶಿಕ್ಷಣ ಪಡೆದ ಮತ್ತು ಶಿಷ್ಯರಾಗಿದ್ದ ನೂರಾರು ಜನರು ಇಂದೂ ಕೂಡ ರಾಜ್ಯ ಹಾಗೂ ದೇಶದ ಹಲವಡೆ ಆರೋಗ್ಯ, ವಿಶ್ವವಿದ್ಯಾಲಯ, ಶಿಕ್ಷಣ-ಕಾನೂನು, ಮುಂತಾದ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ ಮತ್ತು ಈಗಲೂ ಇದ್ದು ಸೇವೆ ಸಲ್ಲಿಸುತ್ತಿದ್ದಾರೆ.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ ಪೂರ್ಣಾವಧಿ ಕಾರ್ಯಕರ್ತರಾದ ಅವರು, ಅವಿಭಜಿತ ಧಾರವಾಡ ಜಿಲ್ಲೆಯ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ಹಲವು ದಶಕಗಳ ಕಾಲ ಹುಬ್ಬಳ್ಳಿ, ಹರಿಹರ, ಹಾನಗಲ್, ದಾಂಡೇಲಿ ಇವುಗಳನ್ನು ಕೇಂದ್ರವಾಗಿಸಿಕೊಂಡು ಕೆಲಸ ಮಾಡಿದರು.
ಶಿಕ್ಷಣದಿಂದ, ಸಮಾಜದಿಂದ ವಂಚಿತರಾದ ಹತ್ತಾರು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ, ವಿದ್ಯಾರ್ಥಿ ಚಳವಳಿಯ ಸಕ್ರಿಯ ಕಾರ್ಯಕರ್ತರನ್ನಾಗಿ ಬೆಳೆಸುವಲ್ಲಿ ಮಾತ್ರವಲ್ಲ, ಹಲವು ಯುವಜನರಿಗೆ ಸಮಸಮಾಜ ಕಟ್ಟುವ ಕನಸಿನೊಂದಿಗೆ ಅಂತರ್ಜಾತಿ ಮದುವೆಗಳನ್ನು ಮಾಡಿಸಿ, ಅವರ ಬದುಕಿಗೆ ಆಸರೆಯಾಗಿ ನಿಲ್ಲುವಲ್ಲಿ, ಅನಿಷ್ಟ ದೇವದಾಸಿ ಪದ್ಧತಿ ವಿರುದ್ಧದ ಚಳುವಳಿಯಲ್ಲೂ ಅವರು ಅನುಕರಣೀಯ ಪಾತ್ರವಹಿಸಿದ್ದರು. ಸಕ್ರಿಯವಾಗಿದ್ದರು.
ಸಿಐಟಿಯು ರಾಜ್ಯ ಮುಖಂಡರಾಗಿ ರಾಜ್ಯದಲ್ಲಿ ನೇಕಾರರೂ ಸೇರಿದಂತೆ ಇತರೆ ಕಾರ್ಮಿಕರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು, ಕರ್ನಾಟಕ ರಾಜ್ಯ ನೇಕಾರರ ಸಮನ್ವಯ ಸಮಿತಿ ಅಧ್ಯಕ್ಷರಾಗಿ ನೇಕಾರರ ಬದುಕನ್ನು ಉತ್ತಮಪಡಿಸಲು ಹಲವು ಹೋರಾಟಗಳನ್ನು ಮುನ್ನಡೆಸಿದ್ದರು.
ಇದಲ್ಲದೆ ಬೀಡಿ, ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರನ್ನು ಸಂಘಟಿಸಿ ಅವರಿಗೆ ಘನತೆಯ ಬದುಕಿಗಾಗಿ ಶ್ರಮಿಸಿದ್ದರು. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೃಷಿಕೂಲಿಕಾರರನ್ನು ಸಂಘಟಿಸಿ, ಭೂಮಿಯ ಹಕ್ಕಿಗಾಗಿ ಹಲವು ವರ್ಷಗಳ ಕಾಲ ಸಂಘರ್ಷತ್ಮಾಕ ಹೋರಾಟ ನಡೆಸಿದ್ದರು ಮತ್ತು ಆ ಕಾರಣದಿಂದ ನೂರಾರು ಬಡವರೊಂದಿಗೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಒಂದು ತಿಂಗಳ ಸೆರೆವಾಸ ಅನುಭವಿಸಿದ್ದರು.
ಕೃಷಿಕೂಲಿಕಾರರ ಸಂಘದ ರಾಜ್ಯ ಅಧ್ಯಕ್ಷರಾಗಿ ಗಂಗಾವತಿ ಸೇರಿ ರಾಜ್ಯದ ಹಲವಡೆ ಕೂಲಿಗಾಗಿ,ಉದ್ಯೋಗಖಾತ್ರಿ ಯೋಜನೆ ಜಾರಿಗಾಗಿ ಹೋರಾಟದ ನೇತೃತ್ವ ವಹಿಸಿದ್ದರು. ಇದೇ ಅವಧಿಯಲ್ಲಿ ಗಂಗಾವತಿಯ “ಮರಕುಂಬಿ” ಗ್ರಾಮದ ದಲಿತರ ಮೇಲೆ ನಡೆದ ದೌರ್ಜನ್ಯಗಳ ವಿರುದ್ದ ನಿರಂತರವಾದ ಹೋರಾಟ ನಡೆಸಿ, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ ಅತ್ಯುತ್ತಮ ಕಾರ್ಯಕರ್ತರಾಗಿ, ಆದರ್ಶ ನಾಯಕರಾಗಿ, ಮಾರ್ಕ್ಸ್ವಾದದಲ್ಲಿ ಅತ್ಯಂತ ದೃಢತೆ ಮತ್ತು ಬದ್ದತೆ ಹಾಗೂ ಅಚಲವಾದ ನಂಬಿಕೆಯೊಂದಿಗೆ ಸುಮಾರು ನಾಲ್ಕುವರೆ ದಶಕಗಳಿಂದ ಪಕ್ಷ ಮತ್ತು ಜನಚಳವಳಿಯನ್ನೇ ತಮ್ಮ ಕುಟುಂಬವೆಂದು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ, ಸರಳ ಜೀವನ ನಡೆಸಿದ ಅವರು ಓರ್ವ ಅತ್ಯುತ್ತಮ ಮಾರ್ಕ್ಸ್ವಾದಿ ಶಿಕ್ಷಣ ತಜ್ಞರಾಗಿದ್ದರು.
ಪಕ್ಷದ ಶಿಕ್ಷಣ ಉಪಸಮಿತಿ ಸಂಚಾಲಕರಾಗಿಯೂ ಕೆಲಸ ಮಾಡಿದ್ದರು. ಜನಶಕ್ತಿ ಕನ್ನಡ ವಾರ ಪತ್ರಿಕೆಯ ಸಂಪಾದಕರಾಗಿಯೂ ಅವರು ಕೆಲಸ ಮಾಡಿದ್ದರು.
ಕಾಮ್ರೇಡ್ ನಿತ್ಯಾನಂದ ಸ್ವಾಮಿ ಅವರ ಆದರ್ಶ ಮತ್ತು ಬದ್ದತೆಯ ಬದುಕು ನಮ್ಮ ಚಳವಳಿಗೊಂದು ಮಾದರಿಯಾಗಿದೆ. ಅವರ ನಿಧನ ರಾಜ್ಯದ ಕಮ್ಯೂನಿಸ್ಟ್ ಚಳವಳಿಗೆ ತುಂಬಲಾರದ ನಷ್ಟ ಉಂಟುಮಾಡಿದೆ.
ಮೃತರ ಗೌರವಾರ್ಥ ರಾಜ್ಯದಾದ್ಯಂತ ಸಿಪಿಐ(ಎಂ) ಪಕ್ಷದ ಕಚೇರಿಯಲ್ಲಿ ಬಾವುಟವನ್ನು ಅರ್ಧ ಮಟ್ಟಕ್ಕೆ ಇಳಿಸಿ ಗೌರವ ಸಲ್ಲಿಸಲಾಗಿದೆ. ಮಾರ್ಚ್ 3, 2026 (ಮಂಗಳವಾರ) ಬೆಳ್ಳಿಗೆ 10.00 ಗಂಟೆಯಿಂದ 2.00 ಗಂಟೆವರೆಗೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಪಕ್ಷದ ರಾಜ್ಯ ಸಮಿತಿ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಅವರಿಗೆ ಪಕ್ಷದ ವತಿಯಿಂದ ಗೌರವ ಸಲ್ಲಿಸಿ ವಿದಾಯ ಹೇಳಲು ನಿರ್ಧರಿಸಲಾಗಿದೆ.
