ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಏರಿಕೆಗಳನ್ನು ಹಿಂತೆಗೆದುಕೊಳ್ಳಬೇಕು

ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯಲ್ಲಿ ಮತ್ತೊಂದು ಹೆಚ್ಚಳವನ್ನು ಮಾಡಿರುವುದನ್ನು  ಸಿಪಿಐ(ಎಂ)  ಪೊಲಿಟ್ ಬ್ಯೂರೋ ತೀವ್ರವಾಗಿ ಖಂಡಿಸಿದೆ. ಈ ಹೆಚ್ಚಳಗಳು ಅಂತರರಾಷ್ಟ್ರೀಯ ತೈಲ ಬೆಲೆಗಳು ಇಳಿದಿರುವ ಸಮಯದಲ್ಲಿ ಬಂದಿದೆ. 2014 ರಲ್ಲಿ ಪೆಟ್ರೋಲ್‌ನ ಮೂಲ ಬೆಲೆ ರೂ. 47.12 ಇತ್ತು. ಅದೀಗ  2021 ರಲ್ಲಿ ರೂ. 29.34, ಅಂದರೆ, ಸುಮಾರು 50 ಶೇಕಡಾ ದಷ್ಟು.

ಈ ಹೆಚ್ಚುತ್ತಿರುವ ಬೆಲೆಗಳಿಗೆ ಮುಖ್ಯ ಕಾರಣ ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಲಂಗುಲಗಾಮಿಲ್ಲದೆ ಏರಿಸಿದ್ದು, ಇದು ಇಂದು ಪೆಟ್ರೋಲ್ ವೆಚ್ಚದ ಶೇಕಡಾ 38 ರಷ್ಟಿದೆ. ಈ ಮೋದಿ ಸರ್ಕಾರ 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಕೇಂದ್ರವು ವಿಧಿಸುವ ತೆರಿಗೆ ಶೇಕಡಾ 217 ರಷ್ಟು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.

ಅಬಕಾರಿ ಸುಂಕಗಳಲ್ಲಿನ ಈ ಹೆಚ್ಚಳವು ಕಾರ್ಪೊರೇಟ್‌ಗಳು ಮತ್ತು ಆದಾಯ ತೆರಿಗೆ ಪಾವತಿದಾರರಿಗೆ ಒದಗಿಸಿರುವ ತೆರಿಗೆ ರಿಯಾಯಿತಿಗಳಿಂದಾಗಿ ಸರ್ಕಾರದ ಆದಾಯಕ್ಕೆ ಆಗುತ್ತಿರುವ ನಷ್ಟವನ್ನು ಭರ್ತಿ ಮಾಡಿಕೊಳ್ಳಲಿಕ್ಕಾಗಿ ಎಂಬುದು ಸ್ಪಷ್ಟ.  ಕಾರ್ಪೊರೇಟ್ ಮತ್ತು ಆದಾಯ ತೆರಿಗೆ ಆದಾಯದಲ್ಲಿ ಕಳೆದ ವರ್ಷದ ಅನುಕ್ರಮವಾಗಿ 6.81 ಮತ್ತು 6.38 ಲಕ್ಷ ಕೋಟಿಗಳಿಂದ ಗಮನಾರ್ಹ ಇಳಿಕೆ ಕಂಡುಬಂದಿದೆ. ಅವು 2020-21ರ ಬಜೆಟ್‌ನಲ್ಲಿ ತೋರಿಸಿರುವಂತೆ ಅನುಕ್ರಮವಾಗಿ 5.47 ಮತ್ತು 5.61 ಲಕ್ಷ ಕೋಟಿ ರೂ.ಗಳಿಗೆ ಇಳಿದಿವೆ.

ಮೋದಿ ಸರ್ಕಾರ ಶ್ರೀಮಂತರು ಮತ್ತು ತಮ್ಮ ಬಂಟರಿಗೆ ಬಕ್ಷೀಸು ಕೊಡಲು  ಈ ಅಬಕಾರಿ ಸುಂಕಗಳನ್ನು ಹೆಚ್ಚಿಸುವ ಮೂಲಕ ಪ್ರಯತ್ನಿಸುತ್ತಿದೆ. ಇದು ಕೊರೊನ ಮಹಾಸೋಂಕು ಮತ್ತು ಆರ್ಥಿಕ ಹಿಂಜರಿತದಿಂದ ತಮ್ಮ ಜೀವನೋಪಾಯದ ಮೇಲೆ ಈಗಾಗಲೇ ಇಬ್ಬಗೆಗಳ  ದಾಳಿಯಿಂದ ನರಳುತ್ತಿರುವ ಜನರ ಮೇಲೆ ಮತ್ತಷ್ಟು ಹೊರೆಗಳನ್ನು ಹೇರುತ್ತಿದೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಹೆಚ್ಚಳವು ಸಾರಿಗೆ ವೆಚ್ಚಗಳು ಹೆಚ್ಚಲು ಕಾರಣವಾಗುತ್ತದೆ ಮತ್ತು ಇದು ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸುತ್ತದೆ. ಇದರಿಂದ ಸರಣಿ-ಸರಣಿಯಾಗಿ ಏರುವ  ಹಣದುಬ್ಬರದ ಪರಿಣಾಮವಾಗಿ ಆರ್ಥಿಕ ಹಿಂಜರಿತ ಇನ್ನಷ್ಟು ಹದಗೆಡುತ್ತದೆ.

ಆದ್ದರಿಂದ ಈ ಅಬಕಾರಿ ಸುಂಕಗಳನ್ನು ಕೇಂದ್ರ ಸರಕಾರ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ದೇಶಾದ್ಯಂತ ಪ್ರತಿಭಟನಾ ಕಾರ್ಯಾಚರಣೆಗಳನ್ನು ಆಯೋಜಿಸಬೇಕು ಎಂದು  ಸಿಪಿಐ (ಎಂ) ಪೊಲಿಟ್‍ ಬ್ಯುರೊ ತನ್ನ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.

Leave a Reply

Your email address will not be published. Required fields are marked *